

ಹುಬ್ಬಳ್ಳಿ ಕೇಶವಾಪುರದ ಕಾರ್ ವಾಶ್ ಕೇಂದ್ರದಲ್ಲಿ ಕೆಲಸಮಾಡುತಿದ್ದ ನಿಶ್ಚಲ ಹಿರೇಮಠ ಬುಧವಾರ ಸಿದ್ಧಾಪುರ ತಾಲೂಕಿನ ಉಂಚಳ್ಳಿಗೆ ತನ್ನ ಮಾಲಿಕರ ಕಾರ್ ಪಡೆದು ತನ್ನ ಸ್ನೇಹಿತ ಮತ್ತು ಇಬ್ಬರು ಹುಡುಗಿಯರೊಂದಿಗೆ ಪ್ರವಾಸಕ್ಕೆಂದು ಬರುತ್ತಾರೆ. ಪ್ರವಾಸ ಮುಗಿಸಿ ಹುಬ್ಬಳ್ಳಿ ಸೇರಿಕೊಂಡಿದ್ದರೆ ಇಂದು ಅವರು ಸುದ್ದಿಯಾಗುತ್ತಿರಲಿಲ್ಲ. ಆದರೆ ಪ್ರವಾಸಕ್ಕೆ ಬಂದಿದ್ದ ಈ ಎರಡು ಯುವಜೋಡಿ ಸಿದ್ಧಾಪುರ ತಾಲೂಕಿನ ಕೊಡ್ನಮನೆ ಎನ್ನುವ ಶಿರಸಿಗೆ ಸಮೀಪದ ಗ್ರಾಮದ ಅಘನಾಶಿನಿಗೆ ಕಾರಿನೊಂದಿಗೆ ಬೀಳುವಂಥ ಅವಗಢ ನಡೆದು ಹೋಗುತ್ತದೆ. ಬುಧವಾರ ರಾತ್ರಿ ನಡೆದ ಈ ದುರ್ಘಟನೆ ಸುದ್ದಿಯಾದದ್ದು ಗುರುವಾರದ ಇಂದಿನ ಮಧ್ಯಾಹ್ನ.
ಈ ಸುದ್ದಿ ತಿಳಿದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ತುಂಬಿ ಹರಿಯುತ್ತಿರುವ ಅಘನಾಶಿನಿ ನದಿಗೆ ಬಿದ್ದಿದ್ದ ಕಾರನ್ನು ಪತ್ತೆ ಹಚ್ಚಿ ಅದರಲ್ಲಿದ್ದ ಮೂರು ಶವಗಳನ್ನು ಹೊರತೆಗೆದಿದ್ದಾರೆ. ಒಟ್ಟೂ ನಾಲ್ಕು ಜನರಲ್ಲಿ ಒಂದು ಶವ ನದಿಯಲ್ಲಿ ಕೊಚ್ಚಿಹೋಗಿದೆ ಎನ್ನಲಾಗುತ್ತಿದೆ.
ಅಕ್ಷತಾ,ಸುಷ್ಮಿತಾ ಹುಬ್ಬಳ್ಳಿಯವರಾಗಿದ್ದು ಹುಬ್ಬಳ್ಳಿಯ ನಿಶ್ಚಲ ಹಿರೇಮಠರೊಂದಿಗೆ ಬೆಂಗಳೂರಿನ ಮೂಲದ ಹುಬ್ಬಳ್ಳಿ ವಿದ್ಯಾರ್ಥಿ ರೋನಿತ ಸೇರಿ ಈ ನಾಲ್ವರು ಉಂಚಳ್ಳಿಯಿಂದ ಹುಬ್ಬಳ್ಳಿಗೆ ಮರಳುವ ಮಾರ್ಗಮಧ್ಯೆ ಈ ದುರ್ಘಟನೆ ನಡೆದಿದೆ. ಇವರಲ್ಲಿ ಮೂವರ ಶವಗಳು ದೊರೆತಿದ್ದು ಒಬ್ಬ ಹುಡುಗಿಯ ಶವ ನೀರಿನಲ್ಲಿ ಕೊಚ್ಚಿಹೋಗಿರಬಹುದೆಂದು ಊಹಿಸಲಾಗಿದೆ. ಈ ಜೋಡಿಗಳಿಗೆ ಪ್ರವಾಸಕ್ಕೆ ತನ್ನ ಕಾರು ಕೊಟ್ಟಿದ್ದ ಹುಬ್ಬಳ್ಳಿ ಕೇಶವಾಪುರದ ಕಾರ್ ವಾಶ್ ಕೇಂದ್ರದ ಮಾಲಿಕ ಮಹಾವೀರ್ ದೇವಕ್ಕಿ. ಈ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

