

ಶಿರಸಿಯ ಎರಡು ಮೇರು ಪರ್ವತಗಳಂತಿದ್ದ ಸಹಕಾರಿ ರತ್ನ ಡಾ.ವಿ.ಎಸ್.ಸೋಂದೆ ಮತ್ತು ಬನವಾಸಿಯ ರಸ ಋಷಿ, ಕೃಷಿತಜ್ಞ ಡಾ. ಅಬ್ದುಲ್ ರವೂಪ್ ಸಾಬ್ ಸಾವು ಶಿರಸಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ತುಂಬಲಾರದ ಹಾನಿ. ಇಂದು ನಿಧನರಾದ ಡಾ. ಅಬ್ದುಲ್ ರವೂಫ್ ಬನವಾಸಿಯ ಮಣ್ಣಿನ ಮಗ, ಬಡಕುಟುಂಬದ ನಿರ್ವಹಣೆಗೆ ಸಂಪಿಗೆ ಹೂವು ಕೊಯ್ದು ಮಾರುತ್ತಾ ಬೆಳೆದು ನಂತರ ಕೃಷಿಯಲ್ಲಿ ಸಾಧನೆ ಮಾಡಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೆ ಪಾತ್ರರಾದವರು. ಬನವಾಸಿಯಿಂದ ಪ್ರಾರಂಭಿಸಿ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೃಷಿ ಮಾಡುತ್ತಾ ನೇರವಾಗಿ ನೂರಾರು, ಪರೋಕ್ಷವಾಗಿ ಸಾವಿರಾರು ಜನರಿಗೆ ಅನ್ನದಾತರೆನಿಸಿಕೊಂಡಿದ್ದರು. ನೂರಾರು ಎಕರೆಯಲ್ಲಿ ಶುಂಠಿ, ಭತ್ತ, ತೆಂಗು,ಕಾಫಿ,ಅನಾನಸ್, ಪಪ್ಪಾಯಿ ಬೆಳೆದು ಅವುಗಳ ಸಂಸ್ಕರಣ ಘಟಕ ಸ್ಥಾಪಿಸಿದವರು.
ನೂರಾರು ಎಕರೆ ಜಮೀನಿನ್ನು ಮಕ್ಕಳಿಗಾಗಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯಾಗಿಸಬೇಕು. ಎನ್ನುವ ಅಂತಿಮ ಸತ್ಯ ಅರಿತವರಂತೆ ಕಳೆದೆರಡು ವರ್ಷಗಳ ಕೆಳಗೆ ನನ್ನೊಂದಿಗೆ ತಮ್ಮ ಅನುಭವದ ಕಾಣ್ಕೆ ಹಂಚಿಕೊಂಡಿದ್ದ ರವೂಫ್ ‘ಎಷ್ಟ್ ವರ್ಷ ಆತ ತಮ ಈ ಕೆಲಸ ಮಾಡ್ತಾ ‘ಎಂದು ಕಿರಿಯರಿಗೆ ತಮ್ಮ ಅನುಭವದ ಸತ್ಯ,ವಾಸ್ತವ ಹೇಳುತಿದ್ದ ರವೂಫ್ ಕೃಷಿ,ಕೃಷಿ ಉತ್ಫನ್ನಗಳ ವ್ಯಾಪಾರ,ಸಂಸ್ಕರಣೆ ಸೇರಿದಂತೆ ಕೃಷಿಯ ಆಳ-ಅಗಲಗಳನ್ನು ಅರಿತಿದ್ದ ಅವರಿಗೆ ಹಿತಮಿತದ ಕೃಷಿ-ಸಹಜ,ಸರಳತೆಯ ಕೃಷಿ ಬದುಕು ನೆಮ್ಮದಿಯ ಮೂಲ ಎನ್ನುವ ಕಾಣ್ಕೆಯೂ ದಕ್ಕಿತ್ತು.
ನಾಯಕನಾಗುವುದಕ್ಕಿಂತ ಕಿಂಗ್ ಮೇಕರ್ ಆಗು ಎನ್ನುತ್ತಿದ್ದ ಸಾಬ್ ತಮ್ಮ ಬದುಕಿನಲ್ಲಿ ಸದಾ ಕಿಂಗ್ ಮೇಕರ್ ಆಗಿ ಮಿಂಚಿದವರು. ಜಾತಿ-ಧರ್ಮಶ್ರೇಷ್ಠತೆಯ ಕುಷ್ಠಗಳಿಂದ ದೂರವಿದ್ದು ಆರೋಗ್ಯಕರ ಅಂತರ ಕಾಪಾಡಿಕೊಂಡಿದ್ದ ರವೂಫ್ ರನ್ನು ಧರ್ಮಾಂಧತೆ ಕಾಡಿಸಿದ್ದೂ ಉಂಟು ಆದರೆ ಕೃಷಿಗೆ ತಮ್ಮ ಬದುಕು ಅರ್ಪಿಸಿಕೊಂಡಿದ್ದ ಅವರು ಧರ್ಮಕುಷ್ಠಗಳ ಬಗ್ಗೆ ನಿರ್ಲಿಪ್ತತೆ ತೋರಿದ್ದರು. ಕನ್ನಡ ಶಾಲೆಯ ಪ್ರಾಥಮಿಕ ತರಗತಿಗಳನ್ನೂ ಪೂರೈಸದ ಅಬ್ದುಲ್ ಕೃಷಿ ವಿಜ್ಞಾನಿಗಳು, ಸಂಶೋಧಕರು, ಸಾಧಕರ ಪಾಲಿಗೆ ಮಾಹಿತಿಯ ಕಣಜವಾಗಿದ್ದರು. ಸಾಧನೆ,ಯಶಸ್ಸಿನ ಜೀವಂತ ದಂತಕತೆಯಾಗಿದ್ದ ರವೂಪ್ ಇಂದಿನಿಂದ ಕೇವಲ ನೆನಪು.
ಡಾ. ಸೋಂದೆ-
ಸರಿಸುಮಾರು ಡಾ.ಅಬ್ದುಲ್ ರವೂಫ್ ರ ಸಮಕಾಲೀನರಾಗಿದ್ದ ಡಾ.ವಿ.ಎಸ್.ಸೋಂದೆ ಅಬ್ದುಲ್ ರವೂಫರಿಗೆ ವ್ಯತಿರಕ್ತವಾದ ಹಾದಿ ಸವೆಸಿದವರು. ಶಿರಸಿ ನಗರದ ಅಗರ್ಭಶ್ರೀಮಂತ ಸೋಂದೆ ಮನೆತನದ ಕುಡಿಯಾಗಿದ್ದ ಡಾ.ವಿ.ಎಸ್. ಸೋಂದೆ ಸ್ವಾತಂತ್ರ್ಯಪೂರ್ವಕಾಲದ ಶಿಕ್ಷಣ ಪಡೆದವರು. ಬಿ.ಎಸ್.ಸಿ. ಎಗ್ರಿ ಪದವಿಧರರಾಗಿದ್ದ ಸೋಂದೆ ಕೃಷಿ, ಸಹಕಾರಿ, ಶಿಕ್ಷಣ, ಸಾಮಾಜಿಕ ಹೀಗೆ ಸೋಂದೆ ಅರಿಯದ ವಿಷಯವಿಲ್ಲ ಎನ್ನುವ ಮಟ್ಟಿಗೆ ಸಾಧಕರು, ಜ್ಞಾನಿಗಳು. ಎಂ.ಇ.ಎಸ್. ಶಿಕ್ಷಣ ಸಂಸ್ಥೆ, ಶಿರಸಿ ಅರ್ಬನ್ ಬ್ಯಾಂಕ್ ಸೋಂದೆ ಸಾಧನೆಯ ಅಂಗಳ. ಓದು, ತಲಸ್ಫರ್ಶಿಜ್ಞಾನ, ಅಗಾಧ ಅನುಭವಗಳ ಗಣಿ ಯಾಗಿದ್ದ ಡಾ. ವಿ.ಎಸ್.ಸೋಂದೆಯವರನ್ನು ನಾಲ್ಕೈದು ಬಾರಿ ಸಂದಿಸಿ, ಒಂದೆರಡು ಸಂದರ್ಶನಗಳನ್ನೂ ಮಾಡಿದ್ದೆ. ಭಾಷಣ,ಸಭೆ, ಉಪನ್ಯಾಸ ಎಲ್ಲಾ ಕಡೆ ನಿಗದಿತ ಅಂಕಿಸಂಖ್ಯೆಗಳು, ಅವಶ್ಯ ಮಾಹಿತಿಗಳೊಂದಿಗೆ ಮಾತನಾಡುತಿದ್ದ ಸೋಂದೆ ಬಾಯಿ ತೆರೆದರೆಂದರೆ..ಅದು ಸನ್ 1800….. ಹತ್ತೊಂಬತ್ತು ನೂರಾ…. ಎಂದೇ ಪ್ರಾರಂಭವಾಗುತಿದ್ದ ಸೋಂದೆ ಜ್ಞಾನ, ಮಾಹಿತಿ ಕೇಳುಗರನ್ನು ಅಚ್ಚರಿಗೆ ನೂಕುತಿತ್ತು. ಇಂಥ ಸೋಂದೆ ಮತ್ತು ಡಾ.ಅಬ್ದುಲ್ ರವೂಫ್ ಒಂದೇ ವಾರದಲ್ಲಿ ಇಹಲೋಕ ತ್ಯಜಿಸಿದ್ದು ಶಿರಸಿ, ಉತ್ತರ ಕನ್ನಡ, ರಾಜ್ಯಕ್ಕೆ ಆದ ಗಣನೀಯ ಹಾನಿ. ಈ ಸಾಧಕರಿಗೆ ಸಮಾಜಮುಖಿಯ ಅಂತಿಮ ನಮನ.


