narendra pai writes on- ಸಾವಿಗೆ ಸಿದ್ಧರಾದವರ ಆತ್ಮವೃತ್ತಾಂತ!

ಪತ್ರಕರ್ತರಾಗಿ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಅರುಣ್ ಶೌರಿಯವರ ರಾಜಕೀಯ ಬದುಕಿನ ಕತೆ ಏನೇ ಇರಲಿ, ಎಪ್ಪತ್ತೆಂಟರ ಹರಯದಲ್ಲಿ ಪತ್ನಿ ಅನಿತಾ ಮತ್ತು ಮಗ ಆದಿತ್ಯನ ಜೊತೆ ಬದುಕುತ್ತಿರುವ ಅವರ ಆತ್ಮಕಥಾನಕ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಅದರ ಹೆಸರು “ಪ್ರಿಪೇರಿಂಗ್ ಫರ್ ದ ಡೆತ್”.

ಅದರ ಭಾಗಶಃ ಅಧ್ಯಾಯಗಳ ಒಂದು ಆವೃತ್ತಿ ಈ ವಾರದ ಓಪನ್ ಪತ್ರಿಕೆಯಲ್ಲಿದೆ. ಅದರ ಹೆಸರು ದ ಸೆನ್ಸ್ ಆಫ್ ಎನ್ ಎಂಡಿಂಗ್. ಇದು ಜ್ಯೂಲಿಯಾನ ಬಾರ್ನೆಸ್‌ನ ಕಾದಂಬರಿಯೊಂದರ ಹೆಸರು ಕೂಡ. ಇಲ್ಲಿರುವುದೆಲ್ಲ ವಿಲ್ ಬರೆಯುವುದರ ಹಿಂದು ಮುಂದಿನ ಧರ್ಮಸಂಕಟಗಳು.ಕೊರೊನಾದ ಕರಿನೆರಳಿನಡಿ ಇಡೀ ಜಗತ್ತಿನ ಅಮಾಯಕರ ಆತಂಕ, ದುಗುಡ ಮತ್ತು ಮಾತಿಗೆ ಮೀರಿದ ಸಂಕಟವನ್ನು ಎದೆಯಲ್ಲಿಟ್ಟುಕೊಂಡು ಬದುಕುತ್ತಿರುವ ಪ್ರತಿಯೊಬ್ಬನಿಗೂ ಧಸಕ್ ಎನಿಸುವಂಥ ಹೆಸರುಗಳಿವು, ಪ್ರಿಪೇರಿಂಗ್ ಫರ್ ದ ಡೆತ್, ಸೆನ್ಸ್ ಆಫ್ ಎನ್ ಎಂಡಿಂಗ್… ಆದರೆ ಸಾವು ನಿಶ್ಚಿತ, ಅನಿರೀಕ್ಷಿತ ಮತ್ತು ಅನಿವಾರ್ಯ ಸತ್ಯ.

ಮಾಡಬೇಕಿದ್ದೂ ಮಾಡದೇ ಉಳಿಸಿರುವುದು, ಮಾಡಬಹುದಾಗಿದ್ದೂ ಮಾಡದೇ ಬಿಟ್ಟಿದ್ದು, ಮಾಡದಿದ್ದರೇ ಒಳಿತಿತ್ತೆಂದು ಈಗ ಅನಿಸಿದರೂ ಆಗ ಮಾಡಿಯೇ ಬಿಟ್ಟಿದ್ದು, ಎಲ್ಲವಕ್ಕೂ ಈಗ ತೀರ ತಡವಾಗಿದೆ. ಇನ್ನೇನೂ ಮಾಡಲಾಗದು. ಆದರೆ ಇಲ್ಲಿ ಯಕಃಶ್ಚಿತ್ ಮನುಷ್ಯನ ಕ್ರಿಯೆ ಅಥವಾ ನಿಷ್ಕ್ರಿಯೆಗೆ ಅಂಥ ಮಹತ್ವವಾದರೂ ಏನಿದೆ ಈ ನಿರರ್ಥಕ, ವ್ಯರ್ಥ, ಅರ್ಥಹೀನ ಬದುಕಲ್ಲಿ ಎಂದು ಅನಿಸುತ್ತಿರುವ – ಸಾವಿನ ಹೊಸ್ತಿಲಲ್ಲಿ ನಿಂತಂತಿರುವ ಹೊತ್ತಲ್ಲಿ, ಹೀಗೆಲ್ಲ ಅನಿಸಿಯೂ, ಹೀಗೆಲ್ಲ ಅನಿಸುತ್ತಿರುವುದು ನನಗೊಬ್ಬನಿಗೇ ಅಲ್ಲ ಮತ್ತೆ ಎನ್ನುವುದು ನಿಜವಿದ್ದರೂ ಇಲ್ಲಿ ಈಗ ಇದೊಂದು ಅನಪೇಕ್ಷಿತವೆನಿಸುವ ಅನ್ಯಾಯ ಘಟಿಸುತ್ತಿದೆ ಎಂಬ ಭಾವದಿಂದ ಮುಕ್ತಿ ಸಾಧ್ಯವೇ? ಹೋಗೀ ಹೋಗಿ ನನಗೇ ಯಾಕೆ, ಇವತ್ತೇ ಯಾಕೆ, ಈಗಲೇ ಯಾಕೆ ಎನ್ನುವ ಪ್ರಶ್ನೆಯ ನೆರಳಾದರೂ ಮನಸ್ಸಿನಾಳದಲ್ಲಿ ಸುಳಿಯದಿದ್ದೀತೆ…

ಇವಾನ್ ಇಲಿಚ್ಯ ಕೂಡ ಇನ್ನೇನು ಸಾವು ತಯಾರಾಗಿ ನಿಂತಾಗ ಇಡೀ ಬದುಕನ್ನು ಬೇರೆಯೇ ತರ ಬದುಕುವುದು ಸಾಧ್ಯವಿತ್ತು ಎನ್ನುವ ಅರಿವಿನಲ್ಲಿ ಬೇಯುತ್ತಾನಲ್ಲವೆ!ಅರುಣ್ ಶೌರಿಯವರ ವಾಕ್ಯಬಂಧ ಅಚ್ಚರಿ ಹುಟ್ಟಿಸುತ್ತದೆ. ಅದರಲ್ಲಿರುವ ಸತ್ಯ ಮತ್ತು ದಟ್ಟ ಭಾವತೀವ್ರತೆಯ ಕಡು ವ್ಯಾಮೋಹ ಕೂಡ.

ಕಳೆದೆರಡು ತಿಂಗಳಿನಲ್ಲೇ ನನ್ನ ಪರಿಚಯದ ಅನೇಕರು ತೀರಿಕೊಂಡಿದ್ದಾರೆ. ನನ್ನ ಆಫೀಸಿನಲ್ಲಿಯೇ ನಾಲ್ಕೈದು ಮಂದಿ ತಮ್ಮ ತಂದೆಯನ್ನೋ ತಾಯಿಯನ್ನೊ ಕಳೆದುಕೊಂಡಿದ್ದಾರೆ. ಗಂಡ ತೀರಿಕೊಂಡ ಹತ್ತೇ ದಿನದಲ್ಲಿ ಹೆಂಡತಿ ತೀರಿಕೊಂಡಿದ್ದು ನಡೆದಿದೆ. ಇಡೀ ಊರಿಗೆ ಇನ್ನಿಲ್ಲದಂತೆ ಸಹಾಯ ಹಸ್ತ ಚಾಚುತ್ತಿದ್ದ ಒಬ್ಬ ವ್ಯಕ್ತಿಯ ಶವ ಕೂಡ ಸಂಸ್ಕಾರಕ್ಕೆ ವಾಪಸ್ಸು ಬರಲಿಲ್ಲ. ನನ್ನದೇ ಸಾವು ಪ್ರತಿದಿನ ಜೊತೆಗೇ ಹೆಜ್ಜೆಯಿಕ್ಕುತ್ತ ಗೆಳೆಯನಂತೆ ಹೆಗಲ ಮೇಲೆ ಕೈಯಿಕ್ಕಲು ಬಯಸುತ್ತಿರುವುದರ ಅನುಭವವಾಗುತ್ತಿದೆ, ಪ್ರತಿದಿನ, ಪ್ರತಿಕ್ಷಣ. ಹಾಗಿದ್ದೂ ಎಲ್ಲ ನಾರ್ಮಲ್ ಆಗಿದೆ ಎನ್ನುವ ರೀತಿ ಏನೇನೋ ಮಾಡುವುದು ನಮಗೆಲ್ಲ ಇಷ್ಟ, ಅದು ಬಹುಶಃ ಈಗಿನ ಅನಿವಾರ್ಯವೋ ಎಂಬಂತೆ. ಆದರೆ ಕೈಲಾಗುತ್ತಿಲ್ಲ, ಸುಸ್ತು ಈ ನಾಟಕಕ್ಕೆ. ಗೊತ್ತಿದ್ದರೆ ಖಂಡಿತಾ ಓದಲು ಕೈಗೆತ್ತಿಕೊಳ್ಳುತ್ತಿರಲಿಲ್ಲ ಎನಿಸುವ, ಜೊಸೆ ಸಾರಾಮೊಗೊನ ಕಾದಂಬರಿ “ಬ್ಲೈಂಡ್‌ನೆಸ್” ಮುಗಿಸಿ ಕೂತಿದ್ದೇನೆ. ಅದರ ಎದುರು ಕೊರೊನಾ ಅಂಥಾ ವಿಪತ್ತೇನಲ್ಲ ಅನಿಸತೊಡಗಿದ ಹೊತ್ತಿನಲ್ಲೇ ಎದುರುಗಡೆ ಪುಸ್ತಕಗಳಿವೆ, ಓದಲಾಗುತ್ತಿಲ್ಲ. ಸಮಯ ಮೈಚೆಲ್ಲಿ ಬಿದ್ದುಕೊಂಡಿದ್ದಾಗಲೂ ಓದಲಾಗಲಿಲ್ಲ. ಏನೋ ಸ್ತಬ್ಧತೆಯಿದೆ ಇಲ್ಲಿ. ಅಷ್ಟೊತ್ತಿನಿಂದ ಬರೀ ಮೌನವನ್ನೇ ಕೇಳುತ್ತ, ಶ್ಶ್ ಎನ್ನುವಂತೆ ಕೂರುತ್ತೇವೆ, ಇನ್ನೊಂದೇ ಕ್ಷಣದಲ್ಲಿ ಮುಗಿಯುತ್ತದೆ ಎನ್ನುವಂತೆ. ಇದು ಬರೀ ಭಯವಲ್ಲ. ಇದು ಆತಂಕ. ನನ್ನಷ್ಟೂ ಅನುಕೂಲವಿಲ್ಲದ ಮಂದಿಯನ್ನು ನೆನೆಯುತ್ತೇನೆ.

ಮಾರ್ಚ್ ಕೊನೆಯವಾರದಿಂದ ಮಂಗಳೂರಿನಲ್ಲೇ ಸುಮಾರು ಏಳುನೂರು ಬಸ್ಸುಗಳು ಮೂರು ನಾಲ್ಕು ತಿಂಗಳು ಸ್ತಬ್ಧ ನಿಂತಿದ್ದವು. ಅದರ ಡ್ರೈವರ್, ಕಂಡೆಕ್ಟರ್, ಕ್ಲೀನರ್ ಯಾರಿಗೂ ದಿನದ ಸಂಬಳ ಇಲ್ಲ. ರಿಕ್ಷಾಗಳಿರಲಿಲ್ಲ. ಅಂಗಡಿಗಳಿರಲಿಲ್ಲ. ಮದುವೆಯಿಲ್ಲ ಅಂದರೆ ಕ್ಯಾಟರಿಂಗ್ ಇಲ್ಲ, ವಾದ್ಯದವರಿಗೆ ಕೆಲಸವಿಲ್ಲ, ಸೌಂಡ್ ಸಿಸ್ಟಮ್‍ಗಳಿಗೆ, ಲೈಟಿಂಗಿನವರಿಗೆ ಕೆಲಸವಿರಲಿಲ್ಲ. ಹಾಲ್ ಗುಡಿಸಿ, ಒರೆಸಿ ಅಷ್ಟಿಷ್ಟು ಸಂಪಾದಿಸುತ್ತಿದ್ದ ಹೆಣ್ಣುಮಕ್ಕಳ ನಗು ಕೇಳಿಸಲಿಲ್ಲ. ಕರೆಂಟು, ಪ್ಲಂಬಿಂಗು, ಕಾರ್ಪೆಂಟರಿ ರಿಪೇರಿ ಕೆಲಸದವರು ಕಂಗಾಲಾದರು. ಕಟ್ಟಡಗಳು ಅರ್ಧಕ್ಕೆ ನಿಂತವು. ಮೈಯೆಲ್ಲ ಮಣ್ಣು-ಸಿಮೆಂಟು ಮೆತ್ತಿಕೊಂಡು ಬೇಸಿಕ್ ಸೆಟ್ಟಿನಲ್ಲಿ ಯಾರಿಗೋ ಕರೆ ಮಾಡಿ ಬಾಯಿಲ್ಲೆ, ಕುಂಡ್ರು ಎನ್ನುತ್ತಿದ್ದ ಕೂಲಿಗಳು ಕಾಣುತ್ತಿಲ್ಲ. ಬೀದಿ ಬದಿ ವ್ಯಾಪಾರಿಗಳು ಕಣ್ಮರೆಯಾದರು. ನೂರಾರು ಮೈಲಿ ನಡೆದೇ ಮನೆಸೇರುವ ಅನಿವಾರ್ಯಕ್ಕೆ ಸಿಕ್ಕವರು ಬೀದಿ ತುಂಬ ನಡೆಯುತ್ತ ಹೊರಟ ಚಿತ್ರಗಳು ಮನಸ್ಸಿನಲ್ಲಿ ಸ್ಥಿರಚಿತ್ರಗಳಾಗಿ ನಿಂತವು. ಮೈಮಾರಿಕೊಂಡೇ ಬದುಕುತ್ತಿದ್ದ ಅಕ್ಕತಂಗಿಯರು ಒಮ್ಮೆಗೇ ಚಲಾವಣೆಯಲ್ಲಿಲ್ಲದ ನೋಟುಗಳಂತೆ ಮೂಲೆಯಲ್ಲಿ ಕಸವಾಗಿ ನಿಂತರು. ವೈರುಸ್ಸು-ಬ್ಯಾಕ್ಟೀರಿಯಾ ಬಗ್ಗೆ ವಿವರವಾಗಿ ಕೇಳುತ್ತ, ಸ್ಯಾನಿಟೈಸರು, ಸೋಪು, ಮಾಸ್ಕು ಎಂದೆಲ್ಲ ಸಂಗ್ರಹಿಸುತ್ತ, ಪರಿಚಿತರಿಗೂ ಅಪರಿಚಿತರ ತರ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತ, ಏನು ಮಾಡುತ್ತಿದ್ದೇವೆ, ಯಾಕೆ ಮಾಡುತ್ತಿದ್ದೇವೆ, ಮಾಡುತ್ತಿರುವುದು ಸರಿಯೇ ತಪ್ಪೇ, ನಾವು ಇಲ್ಲಿ ಪರರಿಗೆ ಉಪಕಾರಿಗಳೋ, ಪರರಿಂದ ಉಪಕೃತರಾಗುವ ಹವಣಿಕೆಯಲ್ಲಿರುವೆವೋ ಅರಿಯದೆ ಎಲ್ಲದಕ್ಕೂ ಮುಖಮುಚ್ಚಿಕೊಂಡೆವು.

ಜಗದ ಆತಂಕ ನಿಮ್ಮ ನಮ್ಮ ಎದೆಗೂಡು ಸೇರಿ, ಭಾಷೆ ಕಳೆದುಕೊಂಡು ಉಸಿರುಗಟ್ಟುವಂತೆ ಉಬ್ಬುತ್ತ ಹೋಯಿತು. ಟ್ರಾಫಿಕ್ ಲೈಟು ಕೆಂಪು ಬಣ್ಣಕ್ಕೆ ತಿರುಗಿದಾಗ ಕಾರು ನಿಲ್ಲಿಸಿದ ಅವನಿಗೆ ದೀಪದ ಬಣ್ಣ ಹಸಿರಿಗೆ ಹೊರಳಿದ್ದು ತಿಳಿಯಲೇ ಇಲ್ಲ. ಅವನು ಕುಳಿತಲ್ಲೇ ದೃಷ್ಟಿ ಕಳೆದುಕೊಂಡಿದ್ದ. ಹಿಂದಿನವರ ಹಾರನ್ನು, ಬೈಗುಳ, ಅಸಮಾಧಾನ ಎಲ್ಲ ತಣ್ಣಗಾಗಿದ್ದು ಅವನು ಇದ್ದಕ್ಕಿದ್ದಂತೆ ಕುರುಡನಾಗಿದ್ದಾನೆ ಎಂಬ ವಿಪರೀತದ ಅರಿವಾದಾಗಲೇ. ಯಾರೋ ಒಬ್ಬ ತಾನೇ ಅವನನ್ನು ಅವನ ಕಾರಿನಲ್ಲೇ ಅವನ ಮನೆ ಸೇರಿಸಲು ಒಪ್ಪಿಕೊಂಡಾಗ ಇವನಿಗೆ ದೇವರನ್ನೇ ಕಂಡಷ್ಟು ಸಮಾಧಾನ. ನಿನ್ನ ಹೆಂಡತಿ ಬರುವವರೆಗೂ ಜೊತೆಯಲ್ಲೇ ಇರಲೇ ಎಂದವನ ಪರೋಪಕಾರೀ ಬುದ್ಧಿ ನೋಡಿ ಕುರುಡು ಕಣ್ಣು ಹನಿಗೂಡುತ್ತದೆ. ಆದರೆ ಸಂಜೆ ಹೆಂಡತಿ ಬಂದಾಗಲೇ ಅರಿವಾಗಿದ್ದು, ಕಾರಿನಲ್ಲಿ ಮನೆತನಕ ಬಂದವನು ಮರಳಿ ಹೋಗುವಾಗ ಕಾರನ್ನೂ ಒಯ್ದಿದ್ದಾನೆಂಬ ಸತ್ಯ. ಕಣ್ಣಿನ ಡಾಕ್ಟರಲ್ಲಿಗೆ ತಾನೇ ಇನ್ನೊಬ್ಬನ ಟ್ಯಾಕ್ಸಿ ಮಾಡಿಕೊಂಡು ಪತ್ನಿಯ ಜೊತೆ ಹೋದ ಟ್ಯಾಕ್ಸಿ ಡ್ರೈವರ್ ಅದೇ ಕ್ಲಿನಿಕ್ಕಿಗೆ ಬಂದ ಇನ್ನೂ ಹಲವರು ಕೆಲವೇ ಗಂಟೆಗಳಲ್ಲಿ ಕುರುಡರಾಗಲು ಕಾರಣನಾಗುತ್ತಾನೆ. ಕುರುಡನ ಕಾರು ಕದ್ದ ಕಳ್ಳನೂ ಕುರುಡನಾಗಲು ಹೆಚ್ಚು ಕಾಲ ತಗಲುವುದಿಲ್ಲ. ಆ ಕಾರು ಕಳ್ಳನನ್ನು ಮನೆ ಸೇರಿಸಲು ಮುಂದಾದ ಪೋಲೀಸಿನವನೂ ಕುರುಡನಾಗುತ್ತಾನೆ. ಸರ್ಕಾರಕ್ಕೆ ವಿಚಿತ್ರ ಸೋಂಕು ರೋಗ ಹಬ್ಬುತ್ತಿರುವುದರ ಅರಿವಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಮುಂದೆ ಯಥಾಪ್ರಕಾರ ಕ್ವಾರಂಟೈನ್.

ಅಲ್ಲಿ ಕುರುಡರಿಂದ ಕುರುಡರ ಶೋಷಣೆ. ಆಹಾರ ಹಂಚಿಕೊಳ್ಳುವುದರಲ್ಲಿ, ಲೈಂಗಿಕ ದೌರ್ಜನ್ಯದಲ್ಲಿ, ಹಿಂಸೆಯಲ್ಲಿ…ನಾನೇನು ಮಾಡುತ್ತಿದ್ದೇನೆಂಬುದನ್ನು ಯಾರೂ ಗಮನಿಸಲಾರರು ಎಂಬ ಭರವಸೆಯೊಂದು ಸಿಕ್ಕಿದ್ದೇ ಆದರೆ ನರಾಧಮ ಹೇಗೆ ವರ್ತಿಸಬಲ್ಲ ಎನ್ನುವಲ್ಲಿಯೇ ಅದೇ ಮನುಷ್ಯನ ಔದಾರ್ಯವು ಕೂಡ ವಿಜೃಂಭಿಸುವುದು ಸಾಧ್ಯ ಎಂಬುದರ ಸೂಕ್ಷ್ಮ ಚಿತ್ರವೊಂದಿದೆ ಇಲ್ಲಿ. ಜೋಸೆ ಇಡೀ ಕಾದಂಬರಿಯ ನಿರೂಪಣೆಗೆ ಬೇಕಾದ ಕಣ್ಣಾಗಿ ಒಬ್ಬಾಕೆಯನ್ನು ಮಾತ್ರ ಈ ಸೋಂಕಿನಿಂದ ಬಚಾವು ಮಾಡುತ್ತಾನೆ. ಆದರೆ ನಿರೂಪಣೆಯ ಪೂರ್ತಿ ಹಕ್ಕನ್ನು ಅವಳಿಗೆ ಬಿಟ್ಟುಕೊಡದೆ ತಾನೇ ಉಳಿಸಿಕೊಳ್ಳುತ್ತಾನೆ. ಅವಳಿಗೆ ಕಂಡಷ್ಟನ್ನೇ ಹೇಳಿದರೆ ಕಾದಂಬರಿ ಪೂರ್ತಿಯಾಗದು ಎಂಬ ಅರಿವಿನಲ್ಲೇ ನಮ್ಮ ಒಂದು ಕಣ್ಣು ಅವಳಲ್ಲೂ ಇನ್ನೊಂದನ್ನು ತನ್ನಲ್ಲೂ ಇಟ್ಟುಕೊಂಡು ನಾವು ಕುರುಡರಾಗುವುದನ್ನು ತಪ್ಪಿಸುತ್ತಾನೆ. ಆದರೆ, ಕುರುಡರು ಹೆಚ್ಚು ಕಾಣಬಲ್ಲರು, ಕಣ್ಣಿದ್ದವರ ದೃಷ್ಟಿ ಮಂದ ಎಂಬ ಸತ್ಯವನ್ನು ಮನಗಾಣಿಸಿ ನಮ್ಮದೇ ಕಣ್ಣುಗಳ ಬಗ್ಗೆ ಅನುಮಾನ ಹುಟ್ಟಿಸಿ ಕೈಬಿಡುತ್ತಾನೆ. ನಾವು ಕುರುಡರೇ, ಕಣ್ಣುಳ್ಳವರೇ ಎಂಬ ಅನುಮಾನ ಹುಟ್ಟಿಸುವಲ್ಲಿಯೇ ಈ ಕಾದಂಬರಿಯ ಯಶಸ್ಸಿನ ಬೀಜಗಳಿವೆ.

ಬೇಂದ್ರೆ ಮತ್ತು ಗೌರೀಶರು ಹೊಲಗಳ ನಡುವೆ ದಾರಿ ಹಿಡಿದು ಎಲ್ಲಿಗೋ ಹೊರಟಿದ್ದರಂತೆ. ನಡುವೆ ಹೊಲದಲ್ಲಿ ದುಡಿಮೆ ಮಾಡುತ್ತಿದ್ದ ಅಪ್ಪ ಮಗನ ಬಳಿ ಹಾದಿ ವಿಚಾರಿಸಿದ್ದಾರೆ. ಮಗ ತನಗೆ ತಿಳಿದಷ್ಟು ಚೆನ್ನಾಗಿಯೇ ದಾರಿ ತೋರಿಸಿದ. ಸಾಹಿತಿಗಳಿಬ್ಬರೂ ಹೊರಳ ಬೇಕಾದರೆ ರೈತ ಮಗನಿಗೆ ಹೇಳಿದನಂತೆ,

“ಮಗಾ, ಅವರು ಕಲಿತವರು; ಕಲಿತವರು ಹಾದಿ ತಪ್ಪುತ್ತಾರೆ. ನೀನು ಅವರ ಜೊತೆಗೇ ಹೋಗಿ ಅವರು ತಲುಪಬೇಕಾದಲ್ಲಿಗೆ ಅವರನ್ನು ಬಿಟ್ಟು ಬಾ”

ಜಯಂತ್ ಕಾಯ್ಕಿಣಿಯವರು ಇದನ್ನು ಆಗಾಗ ಹೇಳುತ್ತಿರುತ್ತಾರೆ. ಕಲಿತವರು ಹಾದಿ ತಪ್ಪುತ್ತಾರೆ ಎಂಬ ಬಗ್ಗೆ. ಜೋಸೆ ಸಾರಾಮೊಗೊ ಕುರುಡರಿಗೆ ಹೆಚ್ಚು ಕಾಣಿಸುತ್ತದೆ ಎನ್ನುತ್ತಾನೆ. ಕಾರಂತರು ಕಣ್ಣಿದ್ದೂ ಕುರುಡರು ಎಂದಿದ್ದರಲ್ಲ.ಕಣ್ಣೆದುರಿಗಿರುವುದನ್ನು ಕಾಣುವುದಕ್ಕೂ ಕಣ್ಣು ಬೇಕು ಎಂದಿದ್ದಾರೆ, ಬಹುಶಃ ಬೇಂದ್ರೆಯೇ ಇರಬೇಕು. -ನರೇಂದ್ರ ಪೈ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Pak ಸೇನಾಧಿಕಾರಿಗಳು ಸೇರಿ 40 ಸೈನಿಕರು, 100ಕ್ಕೂ ಹೆಚ್ಚು ಉಗ್ರರ ಹತ್ಯೆ: Operation Sindoor ಬಗ್ಗೆ ಭಾರತದ DGMO ಕ್ಷಣ ಕ್ಷಣದ ಮಾಹಿತಿ!

ಹತ್ಯೆಯಾದ ಭಯೋತ್ಪಾದಕರಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್ ನಂತಹ ಕುಖ್ಯಾತ ಭಯೋತ್ಪಾದಕರು ಸೇರಿದ್ದಾರೆ ಎಂದು ಡಿಜಿಎಂಒ ತಿಳಿಸಿದ್ದಾರೆ. ನವದೆಹಲಿ:...

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ ಅಂಥದ್ದೇ ಸಂಭವನೀಯ ದುರಂತದಿಂದ ಸಿದ್ಧಾಪುರ ಬಚಾವಾಗಿದೆ. ಸಿದ್ಧಾಪುರದಿಂದ ಸಾಗರ ಗ್ರಾಮೀಣ ಭಾಗದ ಮೂಲಕ ಹೊನ್ನಾಳಿಗೆ ತೆರಳುವ ಖಾಸಗಿ ಬಸ್‌ ಎಂದಿನಂತೆ ಇಂದು ಕೂಡಾ ಮಧ್ಯಾನ್ಹ ೨.೩೦ ರ ಸುಮಾರಿಗೆ...

Recommended For You

About the Author: Kanneshwar Naik

Leave a Reply

Your email address will not be published. Required fields are marked *