

ರಾಜ್ಯ ಕಂಡ ಶ್ರೇಷ್ಠ ರಾಜನೀತಿಜ್ಞ ರಾಮಕೃಷ್ಣ ಹೆಗಡೆ ತಮ್ಮ ಹುಟ್ಟೂರು ಸಿದ್ಧಾಪುರ,ಉತ್ತರ ಕನ್ನಡ ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇದೇ ಹೆಸರಿನ ಸರಳಾತಿಸರಳ ವ್ಯಕ್ತಿಯೊಬ್ಬರು ಸದ್ದಿಲ್ಲದೆ ಕೃಷಿ-ಉದ್ಯಮ, ಸಹಕಾರಿ ಕ್ಷೇತ್ರಗಳ ದೃವತಾರೆಯಾಗಿದ್ದಾರೆ. ಸಿದ್ಧಾಪುರ ಅಳಗೋಡಿನ ರಾಮಕೃಷ್ಣ ಹೆಗಡೆ ಕಲಿತದ್ದು ಅರ್ಥಶಾಸ್ತ್ರದ ಸ್ನಾತಕೋತ್ತರ ಪದವಿ. ನಂತರ ನೇರ ಅಡಿಕೆತೋಟಕ್ಕೆ ಬಂದವರು ಕೃಷಿ ಮಾಡುತ್ತಾ ಸ್ಥಳಿಯ ಗ್ರಾ.ಪಂ. ಸದಸ್ಯರಾಗುತ್ತಾರೆ. ಈ ನಡುವೆ ಅವರನ್ನು ವೆನಿಲ್ಲಾ ಕೈ ಬೀಸಿ ಕರೆಯುತ್ತದೆ. ವೆನಿಲ್ಲಾದ ಅನಿವಾರ್ಯತೆಯಲ್ಲಿ ರಾಮಕೃಷ್ಣ ಹೆಗಡೆ,ರಾಘವೇಂದ್ರ ಶಾಸ್ತ್ರಿ ಸ್ನೇಹಿತರ ತಂಡ ಹುಟ್ಟುಹಾಕಿದ ಸಂಘ ಸಂಸ್ಥೆಗಳು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ.
ಗ್ರಾಮದಿಂದ ವಿಶ್ವಮಟ್ಟದವರೆಗೆ ಯೋಚಿಸುತ್ತಾ,ಯೋಜಿಸುತ್ತಾ ಸುದ್ದಿಯಾಗದೆ ಕೆಲಸ ಮಾಡುತಿದ್ದ ಈ ತಂಡದ ಪ್ರಮುಖ ರಾಮಕೃಷ್ಣ ಹೆಗಡೆ ಈ ವರ್ಷ ಜಿಲ್ಲೆಯ ಪ್ರತಿಷ್ಠಿತ ಟಿ.ಎಸ್.ಎಸ್. ನ ನಿರ್ಧೇಶಕರೂ ಆಗುತ್ತಾರೆ. ಹೀಗೆ ಗ್ರಾಮೀಣ ಭಾರತದ ಸುಶಿಕ್ಷಿತ ರಾಮಕೃಷ್ಣ ಹೆಗಡೆ ರೈತರಾಗಿ, ರೈತರ ಸಹಕಾರಿ, ಖಾಸಗಿ ಸಂಸ್ಥೆಗಳ ಒಡೆಯರೂ, ಆಡಳಿತ ಮಂಡಳಿ ಸದಸ್ಯರೂ ಆಗಿ ಈಗಲೂ ಸರಳವಾಗೇ ಬದುಕುತಿದ್ದಾರೆ. ಇವರ ಸಹಜತೆ, ಸರಳತೆ, ಸಾಧನೆಗಳ ಪಕ್ಷಿನೋಟ ಇಲ್ಲಿದೆ.

