

ಉತ್ತರ ಕನ್ನಡದ ಸಿದ್ಧಾಪುರ ತಾಲೂಕಿನ ಅರಣ್ಯ ತಪಾಸಣಾ ನಾಕಾ ಬಳಿಯ ಒಂದು ಮನೆ ಸಕಾರಣದಿಂದ ಕೆಲವು ದಿನ ಮುಚ್ಚಿರುತ್ತದೆ. ಆ ಮುಚ್ಚಿದ ಬಾಗಿಲ ಮನೆಯ ಕಿಡಕಿ ಒಡೆಯುವ ಪ್ರತಿಷ್ಠಿತ ಕಾಲೇಜಿನ ಹುಡುಗಿಯರು ಏನನ್ನೋ ಹುಡುಕಿದರು ಎನ್ನುವುದು ಗುಮಾನಿ. ಆ ಪ್ರಕರಣ ಪೊಲೀಸರಿಗೆ ತಿಳಿದರೂ ಪ್ರಕರಣ ದಾಖಲಾಗದಂತೆ ಕಾಣದ ಕೈ ಕೆಲಸಮಾಡುತ್ತದೆ.
ಇದೇ ಪ್ರದೇಶದ ಒಬ್ಬ ಚಿರ ಯುವಕ ಬೆಂಗಳೂರು ಶಿವಾಜಿನಗರದಲ್ಲಿ ಡ್ರಗ್ಸ್ ದಂಧೆಯ ವಿಚಾರದಲ್ಲಿ ಬಂಧನಕ್ಕೊಳಗಾಗುತ್ತಾನೆ. ಈ ಬಂಧಿತನ ತಮ್ಮ ಹುಡುಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ, ಈತನೇ ಇಲ್ಲಿಗೆ ಸಮೀಪದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಡ್ರಗ್ಸ್ ಪೂರೈಸುತ್ತಾನೆ ಎನ್ನುವ ಆರೋಪ,ಅನುಮಾನದ ಮೇಲೆ ಈ ಯುವಕನ ಮೇಲೆ ಸ್ಥಳಿಯರಿಂದ ಹಲ್ಲೆ ನಡೆಯುತ್ತದೆ. ಈ ಘಟನೆಯಾಗಿ ಕೆಲವು ದಿವಸಗಳಲ್ಲಿ ಮಳವತ್ತಿ ಗೇಟ್ ಬಳಿಯ ಒಂದು ಅಂಗಡಿಯನ್ನು ಖಾಲಿಮಾಡಿಸಲಾಗುತ್ತದೆ.
ಹೀಗೆ ಒಂದೊಂದೆ ಎಳೆಯಿಂದ ಬಿಚ್ಚಿಕೊಳ್ಳುವ ಸಿದ್ಧಾಪುರದ ಡ್ರಗ್ಸ್ ವ್ಯವಹಾರದ ವರ್ತುಲ ಈಗ ಒಬ್ಬ ಪ್ರಭಾವಿ ವ್ಯಕ್ತಿ ಮತ್ತೊಬ್ಬ ವಲಸೆ ಬಹುಕೃತ ವೇಷಧಾರಿಯ ಸುತ್ತ ಸುತ್ತುತ್ತಿದೆ. ಇಂಥ ಪ್ರಕರಣಗಳ ವ್ಯವಹಾರಗಳ ಶ್ರೀಶೈಲ ಪರ್ವತವಾಗಿರುವ ಒಬ್ಬ ವ್ಯಕ್ತಿ ಮಳವತ್ತಿ ಗೇಟ್ ನ ಬೆಂಗಳೂರು ಶಿವಾಜಿನಗರದಲ್ಲಿ ಬಂಧಿತನಾಗಿದ್ದ ವ್ಯಕ್ತಿಯನ್ನು ಜೈಲಿನಿಂದ ಹೊರತರಲು ಪ್ರಯತ್ನಿಸುತ್ತಾನೆ, ಈತ ಸ್ವಯಂಘೋಷಿತ ವಕೀಲ ಎನ್ನುವುದು ಬಹಿರಂಗ ಗುಟ್ಟು!
ಇದೇ ಪ್ರಕರಣದ ಸಂಡೆ ವಕೀಲ ಸಿದ್ಧಾಪುರದ 3-4 ಬ್ಯಾಂಕ್ ಗಳಲ್ಲಿ ಮಧ್ಯವರ್ತಿಯಾಗಿ ಕೆಲವರಿಗೆ ಸಾಲ ಕೊಡಿಸುತ್ತಾನೆ! ಈತನ ಹೆಂಡತಿ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕಿಯಂತೆ!
ಹೀಗೆ ವಕೀಲ, ಮಧ್ಯವರ್ತಿ, ಸರ್ಕಾರಿ ಅಧಿಕಾರಿ, ಇತ್ಯಾದಿ ವೇಷಗಳ ಈ ವ್ಯಕ್ತಿ ಮಾಡಿರುವ ಒಂದು ಡಜನ್ ವ್ಯವಹಾರಗಳ ದೆಸೆಯಿಂದಾಗಿ ಈ ವ್ಯಕ್ತಿಯ ಚಲನ ವಲನ ಗಮನಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ.
ಇದೇ ವ್ಯಕ್ತಿ ತಾನು ವಕೀಲ ಎಂದು ಜನರನ್ನು ದಾರಿ ತಪ್ಪಿಸುತ್ತಿರುವ ಬಗ್ಗೆ ಸ್ಥಳೀಯ ವಕೀಲರ ಸಂಘಕ್ಕೆ ದೂರು ರವಾನೆಯಾಗುತ್ತದೆ. ಬ್ಯಾಂಕ್, ಸರ್ಕಾರಿ ಕಛೇರಿ, ಕೆಲವು ಪ್ರತಿಷ್ಠಿತ ವ್ಯಕ್ತಿಗಳಿಗೆ ಈತ ತೊಂದರೆಕೊಡುತ್ತಾನೆ ಎಂದು ದೂರುಗಳು ಸಲ್ಲಿಕೆಯಾಗಿವೆ. ಆದರೆ ಈತ ರಾಜಾರೋಷವಾಗಿ ದಿನಕ್ಕೊಂದು ವಾಹನದಲ್ಲಿ ಸುತ್ತು ಹಾಕುತಿದ್ದಾನೆ!
ಈ ವ್ಯಕ್ತಿ ಮತ್ತು ಈತನನ್ನು ರಕ್ಷಿಸುವ ಕೆಲವು ಪ್ರತಿಷ್ಠಿತರು ಗಾಂಜಾ ಮತ್ತು ಡ್ರಗ್ಸ್ ವ್ಯವಹಾರದಲ್ಲಿ ಶಾಮೀಲಾಗಿರುವ ಬಗ್ಗೆ ಸ್ಥಳಿಯರ ಆರೋಪ, ದೂರುಗಳಿವೆ. ಈ ವ್ಯಕ್ತಿ ಯಾರು? ಈತನಿಗೂ ಕೆಲವು ಪ್ರತಿಷ್ಠಿತರಿಗೂ, ಪೊಲೀಸರೊಂದಿಗೆ ನಿಕಟ ಸಂಪರ್ಕದಲ್ಲಿರುವ ಕೆಲವರಿಗೂ ಇರುವ ಸಂಬಂಧ ಎಂಥದ್ದು? ರಾಜ್ಯ, ಜಿಲ್ಲೆಯಾದ್ಯಂತ ಗಾಂಜಾ-ಡ್ರಗ್ಸ್ ವ್ಯವಹಾರ ನಿರ್ಬಂಧಿಸುವ ಪ್ರಯತ್ನದಲ್ಲಿರುವ ಉತ್ತರ ಕನ್ನಡ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿರುವ ಈ ವ್ಯಕ್ತಿಯ ಬಗ್ಗೆ ಈ ವರೆಗೆ ಪೊಲೀಸ್ ದೂರು ದಾಖಲಾಗದಿರಲು ಕಾರಣವೇನು?
ನಿಜಕ್ಕೂ ಈ ವ್ಯಕ್ತಿ ಯಾರು? ದೂರದೂರಿನಿಂದ ಬಂದು ನಾನಾ ವೇಷ, ರೂಪದಲ್ಲಿ ಸಿದ್ಧಾಪುರದಲ್ಲಿ ಜನರನ್ನು ಕಾಡುತ್ತಿರುವ ಈ ವ್ಯಕ್ತಿಯ ಹಿನ್ನೆಲೆ ಏನು? ಈತನನ್ನು ಇಲ್ಲಿ ಕರೆತಂದವರು, ಅವನ ಕೆಲವು ಅಪರಾತಪರಾಗಳಿಗೆ ಸ್ಫಂದಿಸುತ್ತಿರುವವರು ಯಾರು? ಈ ವ್ಯಕ್ತಿಯ ಸುತ್ತಾ ಸುತ್ತುತ್ತಿರುವ ಗಾಂಜಾ-ಡ್ರಗ್ಸ್ ವ್ಯವಹಾರದ ಚಕ್ರದ ಹಿಂದಿನ ವ್ಯಕ್ತಿಗಳ್ಯಾರು? ಇಂಥ ಸ್ಥಳಿಯರ ಅನುಮಾನ, ಆರೋಪಗಳಿಗೆ ಪೊಲೀಸರು ಉತ್ತರದಾಯಿಗಳಾಗಬೇಕಾಗುತ್ತದೆ.
