

ಮಲೆನಾಡಿನ ಜೀವವೈವಿಧ್ಯಗಳಲ್ಲಿ ಬಾನಾಡಿಗಳ ಲೋಕವೂ ಒಂದು. ಮಂಡಗದ್ದೆ, ಅತ್ತೀವೇರಿ, ಮುಂಡ್ಗೆಕೆರೆ, ಗುಡುವಿ ಸೇರಿದಂತೆ ಅನೇಕ ಕಡೆ ಪಕ್ಷಿಧಾಮಗಳು ಆಸಕ್ತರ ಕಣ್ ಮನ ತಣಿಸುತ್ತಿವೆ. ಈ ಪಕ್ಷಿ ಮತ್ತು ಪಕ್ಷಿಧಾಮಗಳ ವೈಶಿಷ್ಟ್ಯವೆಂದರೆ…..
ಪಕ್ಷಿಗಳು ಬಿಸಿಲಿನ ಸಮಯ ವಲಸೆ ಹೋಗುತ್ತವೆ. ಮಳೆ, ಬೆಳೆ, ಹಸಿರು, ತಂಪು ಅರಸುತ್ತಾ ಸಾಗುವ ಪಕ್ಷಿಗಳು ದೇಶಾಂತರ, ಖಂಡಾಂತರ ಮಾಡುವ ವಲಸೆ ಹಕ್ಕಿಗಳು. ಇಂಥ ಹಕ್ಕಿಗಳು ಸೊರಬಾದ ಗುಡವಿಯಲ್ಲಿ ಜೂನ್ ನಿಂದ ಡಿಸೆಂಬರ್ ವರೆಗೆ ಬಂದು ಸೇರುವುದು ಗುಡವಿಯ ವೈಶಿಷ್ಟ್ಯ. ಶಿವಮೊಗ್ಗ ಚಂದ್ರಗುತ್ತಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬನವಾಸಿ ಗಳ ನಡುವೆ ಭತ್ತದ ನಾಡಿನಲ್ಲಿ ನೆಲೆನಿಂತ ಗುಡುವಿ ಹಕ್ಕಿಗಳ ತೌರೂರಾಗಿರುವುದು ಅನೇಕ ದಶಕಗಳಿಂದ.
1985 ರಿಂದ ಸರ್ಕಾರ ಅರಣ್ಯ ಇಲಾಖೆಯ ಮುತುವರ್ಜಿಯಲ್ಲಿ ಪ್ರಾರಂಭಿಸಿರುವ ಅಭಿವೃದ್ಧಿ ಈವರಗೂ ಪೂರ್ಣವಾಗದಿರುವುದು ಅದರ ಪರಿಪೂರ್ಣತೆಯ ಅಸ್ಮಿತೆ. ಸೊ ರಬಾ ದಿಂದ 16 ಕಿ.ಮೀ. ಸಿದ್ಧಾಪುರ, ಶಿರಸಿಗಳಿಂದ ಸರಿಸುಮಾರು 35 ಕಿ.ಮೀ. ದೂರದ ಈ ಗುಡವಿ ಪಕ್ಷಿಧಾಮ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಲಕ್ಷಾಂತರ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ. ಹವಾಮಾನದ ಅನುಕೂಲ, ವಂಶಾಭಿವೃದ್ಧಿಯ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಬಂದು ಗುಡುವಿಯಲ್ಲಿ ಸೇರುವ ಪಕ್ಷಿಗಳು ಅಲ್ಲಿಯ ಕಾಡು, ಪರಿಸರದ ಮೇಲೆ ಬೆಳ್ಳಿಯ ರುಜು ಹಾಕಿದಂತೆ ರಾರಾಜಿಸುತ್ತವೆ.
ಈ ಅಂದ ನೋಡಲು ಬರುವ ಪರಿಸರಾಸಕ್ತರು, ಪಕ್ಷಿಪ್ರೇಮಿಗಳು ಇಲ್ಲಿ ದಿನವಿಡೀ ವಿಹರಿಸುತ್ತಾರೆ. ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವೆರೆ ವೀಕ್ಷಣೆಗೆ ಮುಕ್ತವಾಗಿರುವ ಈ ಪಕ್ಷಿಧಾಮ ಉತ್ತರ ಕನ್ನಡ, ಶಿವಮೊಗ್ಗ ಸೇರಿದ ಹೊರ ಊರುಗಳ ಪ್ರೇಮಪಕ್ಷಿಗಳಿಗೂ ನೆಚ್ಚಿನ ತಾಣವೆ!. ಕಾಡು, ಹಸಿರು, ಭತ್ತ, ತೆಂಗು-ಕಂಗುಗಳ ಈ ಸುಂದರ ತಾಣ ಪಕ್ಷಿಧಾಮವಾಗಿ ಎಲ್ಲರನ್ನೂ ಆಕರ್ಷಿಸುತ್ತದೆ.





