

ಕನೆಟಿಕಟ್ ಕುರಿತ ಬಹಗಳಲ್ಲಿ ಇದನ್ನ ಎರಡನೇಯದಾಗಿ ಪೋಸ್ಟ್ ಮಾಡುವ ಯೋಚನೆ ಮಾಡಿದ್ದೆ. ಆದರೆ ಇಂದು ರಾಜ್ಯೋತ್ಸವವಾದ ಕಾರಣ ಇದನ್ನೇ ಮೊದಲು ಹಾಕುತ್ತಾ ಇದ್ದೇನೆ.
ಕರ್ನಾಟಕದ ಹೊರಗೆ ಇದುವರೆಗೂ ನಾನು ಸುಮಾರು ಆರು ವರ್ಷಗಳನ್ನ ಕಳೆದಿದ್ದೇನೆ. ನಾವು ಊರ ಹೊರಗಾಗಲೀ ಅಥವಾ ನಾಡ ಹೊರಗಾಗಲೀ ಇದ್ದಾಗ ಅತೀ ಹೆಚ್ಚು ನಮ್ಮನ್ನ ಕಾಡುವುದು ನಮ್ಮ ಭಾಷೆ. ಅದರಲ್ಲೂ ಹೊಸದಾಗಿ ಹೋದಾಗ ಒಂದು ರೀತಿಯ ಅನಾಥ ಪ್ರಜ್ಞೆ ನಮ್ಮನ್ನ ಕಾಡುತ್ತದೆ. ಹೀಗಿರುವಾಗ ನಮ್ಮ ನುಡಿ ಕೇಳಿದಾಗ ಆಗುವ ಸಂತೋಷವೇ ಬೇರೆ. ಕನ್ನಡವನ್ನು, ಅದರಲ್ಲೂ ಹವಿಗನ್ನಡವನ್ನೋ ಅಥವಾ ಸಿದ್ದಾಪುರದ ಸ್ಥಳೀಯ ಕನ್ನಡವನ್ನೋ ಕೇಳಿದಾಗ ನನಗೆ ಸ್ವರ್ಗ ಸಿಕ್ಕಷ್ಟೇ ಖುಷಿಯಾಗುತ್ತದೆ.
ಮುಂಬೈಯಲ್ಲಿ ದಕ್ಷಿಣ ಕನ್ನಡಿಗರನ್ನ ಬಿಟ್ಟಿರೆ, ಉಳಿದೆಡೆ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ತಮ್ಮ ಛಾಪನ್ನ ಮೂಡಿಸಿದ್ದು. ತಮ್ಮ ಅಸ್ಮಿತೆಯನ್ನ ಉಳಿಸಿಕೊಂಡು ಒಂದು ಸಮುದಾಯವಾಗಿ ರೂಪುಗೊಂಡಿದ್ದು ಕಡಿಮೆ. ಹೊರದೇಶಗಳಲ್ಲೂ ಮಲಯಾಳಿಗಳಿಗೆ, ತೆಲುಗರಿಗೆ, ಗುಜರಾತಿ ತಮಿಳು ಪಂಜಾಬಿಗಳಿಗೆ ಹೋಲಿಸಿದರೆ ಸಂಖ್ಯಾತ್ಮಕವಾಗಿ ನಾವಲ್ಲಿ ಬಹಳ ಚಿಕ್ಕವರು (ಸ್ವಲ್ಪ ಮಟ್ಟಿಗೆ ಕೊಲ್ಲಿ ದೇಶಗಳು ಇದಕ್ಕೆ ಅಪವಾದ). ಆದರೂ ಅನೇಕ ಕನ್ನಡ ಕನ್ನಡಿಗರ ಸಂಘಟನೆಗಳು ಉತ್ತಮ ಕಾರ್ಯ ಮಾಡುತ್ತಿವೆ.
ನಾಡಿನ ಹೊರಗಿದ್ದಾಗ ಕಾರಣಾಂತರಗಳಿಂದ ಅಲ್ಲಿನ ಸ್ಥಳೀಯ ಕನ್ನಡ ಕೂಟಗಳಲ್ಲಿ ಕೆಲಸ ಮಾಡೋ ಕಿಂಚಿತ್ ಅವಕಾಶವೂ ಸಿಕ್ಕಿರಲಿಲ್ಲ. ಆ ಬೇಸರವನ್ನು ನೀಗಿಸಿದ್ದು ಕನೆಟಿಕಟ್. ಅಲ್ಲಿನ ‘ಹೊಯ್ಸಳ ಕನ್ನಡ ಕೂಟ’ವು ಬಹಳ ಆಪ್ತವಾಗಿತ್ತು, ಕನಿಷ್ಟ ಒಂದು ದಿನವಾದರೂ ಚೂರು ಕೆಲಸ ಮಾಡೋ ಅವಕಾಶ ಸಿಕ್ಕಿತ್ತು.
ಇದು ಚಿಕ್ಕ ರಾಜ್ಯವಾದ ಕಾರಣ ಇಡೀ ರಾಜ್ಯಕ್ಕೆ ಇಲ್ಲಿರುವುದು ಒಂದೇ ಕನ್ನಡ ಕೂಟ. ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವ ಕೂಟಗಳಲ್ಲಿ ಒಂದು. ಈ ರಾಜ್ಯದಲ್ಲಿ ನೆಲೆಸಿರುವ ನಮ್ಮೂರ ಅಕ್ಕನ ಮೂಲಕ ಮೊದಲ ಬಾರಿಗೆ ಕೂಟದ ಸಂಪರ್ಕವಾಯಿತು. ಯುಗಾದಿಯ ಸಂಭ್ರಮಕ್ಕೆ ಅತಿಥಿಯಾಗಿ ಬಂದವರು ಪ್ರವೀಣ್ ಗೋಡ್ಕಿಂಡಿ. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿತ್ತು. ಸುಮಾರು ೫೦೦ ರ ಮೇಲೆ ಜನರಾಗಿದ್ದರೂ ಹೊಸಬರನ್ನ ಥಟ್ಟನೆ ಗುರುತಿಸಿ ಪರಿಚಯ ಮಾಡಿಕೊಂಡ ಕೂಟದ ನಾಯಕತ್ವದ ನಡೆ ಬಹಳ ಇಷ್ಟವಾಗಿತ್ತು. ಒಂಥರಾ ಮನೆಗೆ ಹೊಸದಾಗಿ ಬಂದ ಅತಿಥಿಗಳ ಸ್ವಾಗತಿಸುವ ಹಾಗೇ. ಅಲ್ಲಿದ್ದಷ್ಟು ಕಾಲವು ಒಂದೂ ಕಾರ್ಯಕ್ರಮ ತಪ್ಪದಂತೆ ಹೋಗಲು ಕಾರಣವೂ ಕನ್ನಡ ಕೂಟದ ಪದಾಧಿಕಾರಿಗಳೇ.
ಕನ್ನಡಿಗರನ್ನ ಸಾಂಸ್ಕೃತಿಕವಾಗಿ ಒಂದಾಗಿಡಲು ಮತ್ತು ಪರಸ್ಪರ ಬೆರೆಯಲು ಯುಗಾದಿ, ದಸರಾ/ದೀಪಾವಳಿ, ಹೇಮಂತಗಾನ, ಪಿಕ್‌ನಿಕ್ ಮುಂತಾದ ಕಾರ್ಯಕ್ರಮಗಳನ್ನ ಆಯೋಜಿಸುತ್ತಾರೆ. ಕರ್ನಾಟಕದ ವಿವಿಧ ಪ್ರದೇಶ, ಸಮುದಾಯ, ಉಪಭಾಷೆಗಳಿಂದ ಬಂದ ಜನರು ಕೇವಲ ಕನ್ನಡದ ಹೆಸರಿನಲ್ಲಿ ಒಂದುಗೂಡುತ್ತಾರೆ. ಅಲ್ಲೇ ನೆಲೆ ನಿಲ್ಲುವ ಮುಂದಿನ ಪೀಳಿಗೆ ಕನ್ನಡತನದಿಂದ ದೂರ ಸರಿಯದಿರಲು ವಾರಾಂತ್ಯದ ಕನ್ನಡ ತರಗತಿಗಳ ನಡೆಸುತ್ತಾರೆ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ನಾಳೆ ನೀವು ಕನೆಟಿಕಟ್ಟಿಗೆ ಹೋದರೆ ನೀವಾಗೆ ಅವರ ಸಂಪರ್ಕಿಸಲು ಕಾಯೋಲ್ಲ. ಅವರೇ ನಿಮ್ಮನ್ನ ಹುಡುಕಿ ಕರೆಮಾಡಿ ಏನಾದರೂ ಸಹಾಯ ಬೇಕೇ ಎಂದು ಕೇಳುತ್ತಾರೆ. ನಾವು ನಮ್ಮ ನಾಡ ಹೊರಗಿದ್ದಾಗ ಇರಬೇಕಾಗಿದ್ದು ಕೂಡಾ ಹೀಗೆಯೇ. ಕನ್ನಡಿಗರೆಲ್ಲ ಒಂದು ಕುಟುಂಬವಾಗಿ.
- ಪಟದಲ್ಲಿರುವುದು ಇಲ್ಲಿನ ಕನ್ನಡ ಕೂಟದ ಸಾಂಸ್ಕೃತಿಕ ಕಾರ್ಯಕ್ರಮದ ಒಂದು ದೃಷ್ಯ.
ನಾನುನೋಡಿದಸ್ಟೇಟುಗಳು #ಕನೆಟಿಕಟ್

