

ಕನ್ನಡ ನಾಡಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ -ವಸಂತ ನಾಯ್ಕ
ಸಿದ್ದಾಪುರ-
ನಮ್ಮ ಕನ್ನಡ ನಾಡು ಸಂಪತ್ಭರಿತವಾಗಿದೆ. ಈ ಕರುನಾಡಲ್ಲಿ ನಾವು ಹುಟ್ಟಿದ್ದು ನಮ್ಮ ಪುಣ್ಯ ನಾಡು-ನುಡಿ ನೆಲಜಲದ ಸಮಸ್ಯೆಯುಂಟಾದಾಗ ನಾವು ಕನ್ನಡಿಗರೆಲ್ಲ ಒಗ್ಗಟ್ಟಾಗಿ ಹೋರಾಡೋಣ ಹಾಗೂ ಸದಾ ಎಚ್ಚರವಹಿಸೋಣ.ಕನ್ನಡದ ಮೇರು ಗಾಯಕ ಡಾ.ಎಸ್ಪಿಬಿ.ಕವಿ ನಿಸಾರ್ ಅಹಮ್ಮದ್,ಖ್ಯಾತ ಸಂಗೀತ ನಿರ್ದೇಶಕ ರಾಜನ್ ಕನ್ನಡ ನಾಡಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿ ಅಮರರಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿಯ ತಾಲೂಕಾಧ್ಯಕ್ಷರಾದ ವಸಂತ ಎಲ್.ನಾಯ್ಕ ಮನಮನೆ ಹೇಳಿದರು.
ಅವರು ಸ್ಥಳೀಯ ಯಶಸ್ವೀ ಸುಮಧುರ ಸಂಗೀತ ತಂಡ ಹಾಳದಕಟ್ಟಾದ ಜಗದ್ಗುರು ಶ್ರೀ ಮುರುಘರಾಜೇಂದ್ರ ಅಂಧರ ಶಾಲೆಯ ದಿ.ಡಾ.ಮಧುಸೂದನ ಶಾಮೈನ್ ವೇದಿಕೆಯಲ್ಲಿ ಕರುನಾಡ ತಾಯಿ ಸದಾ ಚಿನ್ಮಯಿ ಕನ್ನಡ ರಾಜ್ಯೋತ್ಸವ ಹಾಗೂ ನಮ್ಮನ್ನಗಲಿದ ಡಾ. ಎಸ್ಪಿಬಿ ಡಾ. ಕೆ.ಎಸ್. ನಿಸಾರ್ ಅಹಮ್ಮದ್ ದಿ.ರಾಜನ್‍ರಿಗೆ ಗೀತನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ತಾಲೂಕ ಪಂಚಾಯತ ಸದಸ್ಯ ನಾಸೀರ್ ಖಾನ್ ನೆಜ್ಜೂರು ಮಕ್ಕಳನ್ನು ಅವರ ಪೋಷಕರು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸದೇ ಇಂಗ್ಲೀಷ್ ಮಾಧ್ಯಮ ಶಾಲೆಗೆ ಕಳಿಸುತ್ತಿದ್ದಾರೆ. ಕನ್ನಡವೇ ಉಸಿರಾಗಿರುವ ನಮಗೆ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡೋಣ ಕನ್ನಡ ಉಳಿವಿಗಾಗಿ ಶ್ರಮಿಸೋಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಣಧೀರಪಡೆಯ ಉ.ಕ. ಜಿಲ್ಲಾಧ್ಯಕ್ಷ ಹೇಮಂತ ನಾಯ್ಕ ಕನ್ನಡ ನಾಡು-ನುಡಿ ನೆಲಜಲಕ್ಕಾಗಿ ನಮ್ಮ ಹೋರಾಟ ಅವಿರತವಾಗಿರಲಿ. ಮುಂದಿನ ಯುವಪೀಳಿಗೆ ಕನ್ನಡ ನಾಡು ನುಡಿಗಾಗಿ ತಮ್ಮ ಅತ್ಯಮೂಲ್ಯ ಕೊಡುಗೆ ನೀಡುವಂತಾಗಲಿ ಎಂದರು.
ಪ್ರಾರಂಭದಲ್ಲಿ ನಮನ್ನಗಲಿದ ಮಹಾನ್ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿತ್ಯೋತ್ಸವ ಕವಿ ನಾಡೋಜ ಡಾ.ಕೆ.ಎಸ್.ನಿಸಾರ್ ಅಹಮ್ಮದ್ ಖ್ಯಾತ ಸಂಗೀತ ನಿರ್ದೇಶಕ ರಾಜನ್ ಇವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ವೆಂಕಟೇಶ ಕೊಂಡ್ಲಿ ಪ್ರಾರ್ಥಿಸಿದರು. ಅಸ್ಲಂ ಶೇಖ್ ಸ್ವಾಗತಿಸಿದರು, ಟಿ.ಕೆ.ಎಂ.ಆಜಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶುೃತಿ ನಾಯ್ಕ ನಿರ್ವಹಿಸಿದರು. ರಾಘವೇಂದ್ರ ನಾಯ್ಕ ವಂದಿಸಿದರು. ಗಾಯಕಿ ಆಶಾಲಕ್ಷ್ಮೀ ಕೊಂಡ್ಲಿ, ಗಾಯಕರಾದ ನಾಸೀರ್ ಖಾನ್,ಮೊಹಮ್ಮದ್ ಅಜೀಮ್ ಶೇಖ್, ರಮೇಶ ಹೊಸಳ್ಳಿ, ವಾಸು ನಾಯ್ಕ ಗೋಳಗೋಡ, ಪ್ರಶಾಂತ ಬಳಗಾರ, ಡಾ. ಎಸ್.ಪಿ.ಬಿ. ಅವರ ಜನಪ್ರಿಯ ಗೀತೆಗಳನ್ನು ಹಾಡಿ ಜನಮನ ರಂಜಿಸುವಲ್ಲಿ ಯಶಸ್ವಿಯಾದರು.
ಸಾಧಕ ವಿದ್ಯಾರ್ಥಿಗೆ ಸನ್ಮಾನ- ಸ್ಥಳೀಯ ಪ್ರಶಾಂತಿ ಪ್ರೌಢಶಾಲೆಯ ವಿದ್ಯಾರ್ಥಿ, ಹಾಳದಕಟ್ಟಾ ವಾಜಪೇಯಿ ನಗರ ನಿವಾಸಿಯಾಗಿರುವ ಹಿಂದುಳಿದ ವರ್ಗದ ಕು. ಸುದೀಪ್ ಧರ್ಮಪ್ಪ ಭಂಡಾರಿ ಈ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ 97.16 ರಷ್ಟು ಅಂಕಗಳಿಸಿ ಸಾಧನೆ ಮಾಡಿ ಶಾಲೆಗೆ ಹಾಗೂ ತಾಲೂಕಿಗೆ ಹೆಮ್ಮೆಯ ತಂದಿರುವುದಕ್ಕೆ ಕನ್ನಡ ರಾಜ್ಯೋತ್ಸವದ ಶುಭದಿನದಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಇಲಿಯಾಸ್ ಇಬ್ರಾಹಿಂ ಸಾಬ ಹಾಗೂ ನಾಡದೇವಿ ಜೈ ಭುವನೇಶ್ವರಿ ಅಭಿಮಾನಿ ಬಳಗದ ಪರವಾಗಿ ಕು.ಸುದೀಪ್ ಸ್ವಗೃಹಕ್ಕೆ ತೆರಳಿ ಶಾಲುಹೊದಿಸಿ ಫಲತಾಂಬೂಲದೊಂದಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಳಗದ ಸದಸ್ಯರಾದ ಮೊಹಮ್ಮದ್ ಅಜೀಮ ಶೇಖ್, ಅಸ್ಲಂ ಶೇಖ್, ಟಿ.ಕೆ.ಎಂ. ಆಜಾದ್, ಧರ್ಮಪ್ಪ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಹಾರ್ಸಿಕಟ್ಟಾ ಸುದ್ದಿ- ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಇಲ್ಲಿಯ ಯಕ್ಷತರಂಗಿಣಿ ಮತ್ತು ರಾಜ್ಯ ಯಕ್ಷಗಾನ ಅಕಾಡೆಮಿಯಿಂದ ಯಕ್ಷಗಾನ ತರಬೇತಿ ಕಾರ್ಯಾಗಾರ ಪ್ರಾರಂಭವಾಯಿತು. ಈ ಕಾರ್ಯಾಗಾರದಲ್ಲಿ ಯಕ್ಷಗಾನ ಅಕಾಡೆಮಿಯ ನಿರ್ಮಲಾ ಹೆಗಡೆ, ರವೀಂದ್ರ ಹೆಗಡೆ ಹಿರೇಕೈ, ಜಯಕುಮಾರ ಮೆಣಸಿ, ಎಸ್.ಆರ್. ಹೆಗಡೆ, ಲಕ್ಷ್ಮಣ ಜಿ. ನಾಯ್ಕ ಬೇಡ್ಕಣಿ ಪಾಲ್ಗೊಂಡಿದ್ದರು.




