ಅವತ್ತು ಬೆಂಗಳೂರಿನ ಹೈಗ್ರೌಂಡ್ಸ್‌ನಲ್ಲಿರುವ ಕಾವೇರಿ ಬಂಗಲೆಯಲ್ಲಿ ಕುಳಿತ ಮುಖ್ಯಮಂತ್ರಿ ಬಂಗಾರಪ್ಪ ಕೋಪದಿಂದ ಕುದಿಯುತ್ತಿದ್ದರು.ಅಷ್ಟೇ ಅಲ್ಲ,ಅದೇ ಕೋಪದ ಭರದಲ್ಲಿ ತಮ್ಮೆದುರು ಸಂದರ್ಶನಕ್ಕೆ ಕುಳಿತಿದ್ದ ಪಿಟಿಐ ಸುದ್ದಿಸಂಸ್ಥೆಯ ಪತ್ರಕರ್ತ ಎಂ.ಸಿದ್ಧರಾಜು ಅವರ ಬಳಿ:ರೀ ಆ ಪ್ರಧಾನಿ ಪಿ.ವಿ.ನರಸಿಂಹರಾವ್ ಇದ್ದಾರಲ್ಲ?ಅವರು ಚೇಳಿದ್ದಂತೆ.ನನ್ನನ್ನು ಅಧಿಕಾರದಿಂದ ತೆಗೀತಾರಂತೆ,ತಾಖತ್ತಿದ್ದರೆ ಅವರು ನನ್ನನ್ನು ಮುಟ್ಟಲಿ ನೋಡೋಣ.ತಕ್ಕ ಪಾಠ ಕಲಿಸುತ್ತೇನೆ ಎಂದು ಬಿಟ್ಟರು.
ಅವರ ಮಾತು ಕೇಳಿದ ಪಿಟಿಐ ಸುದ್ದಿಸಂಸ್ಥೆಯ ಸಿದ್ಧರಾಜು ತಣ್ಣಗೆ ಬಂಗಾರಪ್ಪ ಅವರ ಮುಖ ನೋಡಿದರು.ಆದರೆ ಆವೇಶದಿಂದ ಅಬ್ಬರಿಸುತ್ತಿದ್ದ ಬಂಗಾರಪ್ಪ ಒಂದೇ ಸಮನೆ ನರಸಿಂಹರಾವ್ ಅವರ ವಿರುದ್ಧ ವಾಗ್ಧಾಳಿ ನಡೆಸುತ್ತಾ ಹೋದರು.ಸರಿ,ಸಂದರ್ಶನ ಮುಗಿಯಿತು.ಬಂಗಾರಪ್ಪ ಅವರ ಎದುರು ಕುಳಿತಿದ್ದ ಸಿದ್ಧರಾಜು:ಸಾರ್,ಈ ಸಂದರ್ಶನ ನಾಳೆ ಬೆಳಗ್ಗೆ ಪ್ರಕಟವಾಗುತ್ತದೆ.ಅಷ್ಟರಲ್ಲಿ ನಿಮ್ಮ ಮನಸ್ಸಿಗೆ ಇದರ ರೂಪ ಹೀಗಿರಬೇಕಿತ್ತು ಅಂತ ಅನ್ನಿಸಿದರೆ ಹೇಳಿ,ಬದಲಿಸಿ ಪ್ರಕಟಿಸುತ್ತೇನೆ ಎಂದರು.ನೋ,ನೋ,ನಿಮಗೆ ತಾಖತ್ತಿದ್ದರೆ ಅದನ್ನು ಹಾಗೇ ಪ್ರಕಟಿಸಿ ಎಂದು ಸವಾಲಿನ ಧ್ವನಿಯಲ್ಲಿ ಹೇಳಿದರು ಬಂಗಾರಪ್ಪ.
ಅವರ ಮಾತು ಕೇಳಿದ ಸಿದ್ಧರಾಜು ಅರೆಕ್ಷಣ ಮೌನವಾದರು.ಹೀಗೆ ಅವರು ಮೌನವಾಗಿದ್ದನ್ನು ಕಂಡ ಬಂಗಾರಪ್ಪ ಅವರೇ ಮತ್ತೆ ಸವಾಲಿನ ಧಾಟಿಯಲ್ಲಿ ಹೇಳಿದರು.ಮಿಸ್ಟರ್ ಸಿದ್ಧರಾಜು,ಈ ಸಂದರ್ಶನವನ್ನು ನೀವು ಯಥಾವತ್ತಾಗಿ ಪ್ರಕಟಿಸದಿದ್ದರೆ ನನಗೇನೂ ಚಿಂತೆಯಿಲ್ಲ.ಯಾಕೆಂದರೆ ಇವತ್ತು ನನ್ನನ್ನು ಸಂದರ್ಶನ ಮಾಡಲು ಬಂದ ಹತ್ತಕ್ಕೂ ಹೆಚ್ಚು ಮಂದಿ ಜರ್ನಲಿಸ್ಟುಗಳಿಗೆ ನಾನು ಇದನ್ನೇ ಹೇಳಿದ್ದೇನೆ.ನೀವಲ್ಲದಿದ್ದರೆ ಅವರು ಇದನ್ನು ಬರೆಯುತ್ತಾರೆ ಎಂದರು.ಯಾವಾಗ ಬಂಗಾರಪ್ಪ ಅವರು ಈ ಮಾತು ಹೇಳಿದರೋ?ಆಗ ಸಿದ್ಧರಾಜು ಮೇಲೆದ್ದು ಸೀದಾ ತಮ್ಮ ಕಛೇರಿಗೆ ಹೋದರು.ಸಂದರ್ಶನಕ್ಕೆ ಅಂತ ಬಂದ ಎಲ್ಲರಿಗೆ ಬಂಗಾರಪ್ಪ ಅವರು ಇದನ್ನುಹೇಳಿದ್ದಾರೆಂದ ಮೇಲೆ ನಾನೇಕೆ ಇದರ ಬಗ್ಗೆ ಯೋಚಿಸಲಿ.ಯಾಕೆಂದರೆ ಇಂತಹ ಎಕ್ಸ್‌ಕ್ಲೂಸಿವ್ ಇಂಟರ್‌ವ್ಯೂವ್ ಅನ್ನು ನಾನಲ್ಲದಿದ್ದರೆ ಬೇರೆಯವರು ಪ್ರಕಟಿಸುತ್ತಾರೆ.ಹೀಗಾಗಿ ನಾನು ಬರೆದು ಬಿಡುವುದೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದರು.ಬಂದವರು ಬಂಗಾರಪ್ಪ ಅವರ ಸಂದರ್ಶನವನ್ನು ಸಿದ್ಧಪಡಿಸಿದರು.
ಅವರು ಸಿದ್ಧಪಡಿಸಿದ ಸಂದರ್ಶನ ಪಿಟಿಐ ಸುದ್ದಿಸಂಸ್ಥೆಯಲ್ಲಿ ಪ್ರಕಟವಾಗಿದ್ದೇ ತಡ,ರಾಜ್ಯ ಮತ್ತು ದೇಶದ ವಿವಿಧ ಪತ್ರಿಕೆಗಳು ಯಥಾವತ್ತಾಗಿ ಪ್ರಕಟಿಸಿದವು.ಪ್ರಧಾನಿ ನರಸಿಂಹರಾವ್ ಚೇಳಿದ್ದಂತೆ,ನನ್ನನ್ನವರು ಮುಟ್ಟಿ ನೋಡಲಿ,ತಕ್ಕ ಪಾಠ ಕಲಿಸುತ್ತೇನೆ ಎಂಬ ತಲೆಬರಹದ ಆ ಸಂದರ್ಶನ ಪ್ರಕಟವಾಗಿದ್ದೇ ತಡ,ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಆರಂಭವಾಯಿತು.ಯಾವಾಗ ಬಂಗಾರಪ್ಪ ಅವರ ಈ ಸಂದರ್ಶನ ಪ್ರಕಟವಾಯಿತೋ?ಆಗ ಕೇರಳದ ಹಿರಿಯ ನಾಯಕ ಕೆ.ಕರುಣಾಕರನ್ ಅವರು ಪ್ರಧಾನಿ ನರಸಿಂಹರಾಯರಿಗೆ ಮೆಸೇಜು ಕಳಿಸಿ:ಇನ್ನೆಷ್ಟು ದಿನ ಅಂತ ಬಂಗಾರಪ್ಪ ಅವರನ್ನು ಸಹಿಸಿಕೊಳ್ಳುತ್ತೀರಿ?ಅವರನ್ನು ನೀವು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸದೆ ಹೋದರೆ ನಿಮ್ಮ ಶಕ್ತಿಯ ಬಗ್ಗೆ ಎಲ್ಲರಿಗೂ ಅನುಮಾನ ಶುರುವಾಗುತ್ತದೆ ಎಂದರು.ಅಂದ ಹಾಗೆ ಪ್ರಧಾನಿ ನರಸಿಂಹರಾಯರಿಗೆ ಅತ್ಯಾಪ್ತರಾಗಿದ್ದ ಕೆ.ಕರುಣಾಕರನ್ ಒಂದಲ್ಲ,ಹಲವು ಬಾರಿ ನರಸಿಂಹರಾಯರಿಗೆ ಹೇಳಿದ್ದರು.ಎಷ್ಟೇ ಆದರೂ ಬಂಗಾರಪ್ಪ ಅವರು ರಾಜೀವ್ ಗಾಂಧಿ ಅವರ ಕಾಲದಲ್ಲಿ ಸಿಎಂ ಆದವರು.ಹೀಗಾಗಿ ನಿಮಗೆ ಅವರು ಲಾಯಲ್ ಅಲ್ಲ,ನಿಮಗೇ ಗೊತ್ತಲ್ಲ,ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ತಮ್ಮ ಆಪ್ತರನ್ನು ಹಾಕಿಕೊಂಡಿಲ್ಲ ಅಂತ ತಿರುಪತಿಯಲ್ಲಿ ನಡೆದ ಪಕ್ಷದ ಅಧಿವೇಶನವನ್ನೇ ಬಹಿಷ್ಕರಿಸುವ ಮಾತನಾಡಿದ್ದರು ಬಂಗಾರಪ್ಪ,ಅವತ್ತು ಧರ್ಮಸಿಂಗ್,ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ಸಮಾಧಾನಿಸದಿದ್ದರೆ ಬಂಗಾರಪ್ಪ ಅವರು ತಿರುಪತಿಯ ಅಧಿವೇಶನಕ್ಕೆ ಬರುತ್ತಲೇ ಇರಲಿಲ್ಲ.ಬಂಗಾರಪ್ಪ ಅವರ ಇಂತಹ ಧೋರಣೆ ಹಲವು ಬಾರಿ ವ್ಯಕ್ತವಾಗಿದೆ.ಆದರೆ ನೀವು ಮಾತ್ರ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳದೆ ಮೃದು ಧೋರಣೆ ತಾಳಿದ್ದೀರಿ.ಅದೇ ರೀತಿ ಬಂಗಾರಪ್ಪ ಅವರು ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಸಿಲುಕಿ ಬಿದ್ದು ಸರ್ಕಾರದ ವರ್ಚಸ್ಸು ಕುಸಿಯುವಂತೆ ಮಾಡಿದ್ದಾರೆ.ಇದೇ ಸ್ಥಿತಿ ಮುಂದುವರಿದರೆ ಕರ್ನಾಟಕದಲ್ಲಿ ಪಕ್ಷ ನಿರ್ನಾಮವಾಗುತ್ತದೆ ಅಂತ ಪದೇ ಪದೇ ಹೇಳಿದ್ದರು ಕರುಣಾಕರನ್.
ಅಂದ ಹಾಗೆ ಪ್ರಧಾನಿ ನರಸಿಂಹರಾವ್ ದುರ್ಬಲರೇನೂ ಆಗಿರಲಿಲ್ಲ.ತಮ್ಮ ವಿರೋಧಿಗಳನ್ನು ಅವರು ಯಾವ ಕಾರಣಕ್ಕೂ ಸಹಿಸಿಕೊಳ್ಳುತ್ತಿರಲಿಲ್ಲ.ಮಧ್ಯಪ್ರದೇಶದ ಅರ್ಜುನ್‌ಸಿಂಗ್,ಮಹಾರಾಷ್ಟ್ರದ ಶರದ್‌ಪವಾರ್,ಉತ್ತರ ಪ್ರದೇಶದ ಎನ್.ಡಿ.ತಿವಾರಿ,ತಮಿಳುನಾಡಿನ ಜಿ.ಕೆ.ಮೂಪನಾರ್ ಅವರಂತಹ ಪ್ರಬಲ ನಾಯಕರನ್ನು ಸೈಡ್‌ಲೈನಿಗೆ ಸರಿಸಿದ್ದವರು ನರಸಿಂಹರಾವ್.ಆದರೆ ಬಂಗಾರಪ್ಪ ಅವರ ವಿಷಯದಲ್ಲಿ ನರಸಿಂಹರಾವ್ ತುಂಬ ತಾಳ್ಮೆ ವಹಿಸಿದ್ದರು.ಒಂದು ಸಲ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಭಾಗವಹಿಸಲು ಬಂಗಾರಪ್ಪ ಅವರು ದೆಹಲಿಗೆ ಹೋದಾಗ ಒಂದು ವಿಷಯದಲ್ಲಿ ನರಸಿಂಹರಾಯರು ತೋರಿಸಿದ ಆಸ್ಥೆ ದಿಲ್ಲಿಯ ಘಟಾನುಘಟಿ ರಾಜಕಾರಣಿಗಳನ್ನು ಅಚ್ಚರಿಗೆ ನೂಕಿತ್ತು.ಅಂದ ಹಾಗೆ ಪ್ರಧಾನಿ ಅಧ್ಯಕ್ಷತೆಯ ಎನ್‌ಡಿಸಿ ಸಭೆಯಲ್ಲಿ ಭಾಗವಹಿಸಲು ಬಂಗಾರಪ್ಪ ಅವತ್ತು ದಿಲ್ಲಿಗೆ ಬಂದಾಗ ವಿವಿಧ ರಾಜ್ಯಗಳ ಇಪ್ಪತ್ತೈದು ಮುಖ್ಯಮಂತ್ರಿಗಳು ಬಂದಿದ್ದರು.ಸರಿ,ಸಭೆ ಮುಗಿಯಿತು.ಆದರೆ ಅವತ್ತು ಸಂಜೆ ದಿಲ್ಲಿಯಿಂದ ಬೆಂಗಳೂರಿಗೆ ಮರಳಲು ಇದ್ದ ಐಸಿ-೪೦೩ ವಿಮಾನ ಹೊರಟು ಹೋಗಿತ್ತು.ಪ್ರಧಾನಿ ನರಸಿಂಹರಾಯರಿಗೆ ಈ ವಿಷಯ ತಿಳಿಯಿತು.ಹಾಗಂತಲೇ ಬಂಗಾರಪ್ಪ ಅವರ ಜತೆ ಮಾತನಾಡಿ:ಮಿಸ್ಟರ್ ಬಂಗಾರಪ್ಪ,ಬೆಂಗಳೂರಿಗೆ ಹೋಗುವ ವಿಮಾನ ಸಿಗದಿದ್ದರೇನು?ನಾನೇ ಬಳಸುವ ವಿಶೇಷ ವಿಮಾನ ರಾಜ್‌ದೂತ್ ಇದೆಯಲ್ಲ?ಅದನ್ನೇ ಕಳಿಸಿಕೊಡುತ್ತೇನೆ ಎಂದು ಕಕ್ಕುಲತೆ ತೋರಿಸಿದ್ದರು.ಒಬ್ಬ ಪ್ರಧಾನಿ ತಾವು ಬಳಸುವ ವಿಮಾನವನ್ನು ಇನ್ನೊಬ್ಬರ ಬಳಕೆಗೆ ಬಿಟ್ಟುಕೊಡುವುದು ಅತ್ಯಪರೂಪದ ವಿಷಯ.ಬಂಗಾರಪ್ಪ ಅವರ ವಿಷಯದಲ್ಲಿ ನರಸಿಂಹರಾವ್ ತೋರಿಸಿದ ಈ ಕಾಳಜಿ ರಾಜಕೀಯ ವಲಯಗಳಲ್ಲಿ ದೊಡ್ಡ ಸುದ್ದಿ ಮಾಡಿತ್ತು.ಇದೇ ರೀತಿ ಬಂಗಾರಪ್ಪ ಅವರು ಗುಡಿ ಕೈಗಾರಿಕೆಗಳಿಗೆ ಮಹತ್ವ ನೀಡುವ ವಿಶ್ವ ಯೋಜನೆಯನ್ನು ಜಾರಿಗೊಳಿಸಲು ಮುಂದಾದಾಗ ಉದ್ಘಾಟನಾ ಕಾರ್ಯಕ್ರಮಕ್ಕೆ ದಿಲ್ಲಿಯಿಂದ ಹಾರಿ ಬಂದಿದ್ದರು ನರಸಿಂಹರಾವ್,ಅಷ್ಟೇ ಅಲ್ಲ,ಇದು ದೇಶದ ಹೆಮ್ಮೆಯ ಕಾರ್ಯಕ್ರಮ ಎಂದು ಹೊಗಳಿ ಹೋಗಿದ್ದರು.ಆದರೆ ಇಲ್ಲಿ,ಕರ್ನಾಟಕದಲ್ಲಿ ಬಂಗಾರಪ್ಪ ಅವರ ವಿರುದ್ಧ ಪಕ್ಷದಲ್ಲೇ ಬಂಡಾಯ ಎದ್ದಿತ್ತಲ್ಲ?ಅದರಲ್ಲಿ ಎಸ್.ಎಂ.ಕೃಷ್ಣ,ರಾಜಶೇಖರ ಮೂರ್ತಿ,ವೀರಪ್ಪ ಮೊಯ್ಲಿ,ಹಾರನಹಳ್ಳಿ ರಾಮಸ್ವಾಮಿ ಸೇರಿದಂತೆ ಹಲವರು ಸಕ್ರಿಯರಾಗಿದ್ದರು.ಈ ಗುಂಪು ತಮ್ಮ ವಿರುದ್ಧ ಭಿನ್ನಮತೀಯ ಚಟುವಟಿಕೆ ನಡೆಸುತ್ತಿದ್ದರೆ,ಕೇರಳದ ಕರುಣಾಕರನ್ ಅವರು ಕುಮ್ಮಕ್ಕು ನೀಡುತ್ತಿದ್ದಾರೆ.ನರಸಿಂಹರಾಯರ ಕಿವಿ ಕಚ್ಚಿ ತಮ್ಮ ಪದಚ್ಯುತಿಗೆ ಯತ್ನಿಸುತ್ತಿದ್ದಾರೆ ಎಂಬ ಸಿಟ್ಟು ಬಂಗಾರಪ್ಪ ಅವರಿಗಿತ್ತು.
ಅಂದ ಹಾಗೆ ನರಸಿಂಹರಾಯರ ಆಶೀರ್ವಾದ ಇಲ್ಲದೆ ಇವೆಲ್ಲ ಹೇಗೆ ನಡೆಯುತ್ತವೆ?ಎಂಬ ತೀರ್ಮಾನಕ್ಕೆ ಬಂದಿದ್ದ ಬಂಗಾರಪ್ಪ ಇದೇ ಕಾರಣಕ್ಕಾಗಿ ನರಸಿಂಹರಾಯರ ವಿರುದ್ದ ಕುದಿಯುತ್ತಿದ್ದರು.ಪಿಟಿಐ ಸುದ್ದಿಸಂಸ್ಥೆಯ ಎಂ.ಸಿದ್ಧರಾಜು ಅವರಿಗೆ ಸಂದರ್ಶನ ನೀಡುವಾಗ ನರಸಿಂಹರಾಯರು ಚೇಳಿದ್ದಂತೆ ಅಂತಅವರು ಗುಡುಗಿದ್ದೂಇದೇ ಕಾರಣಕ್ಕಾಗಿ.ಅಂದ ಹಾಗೆ ಈ ಸಂದರ್ಶನ ಪ್ರಕಟವಾಗುವವರೆಗೆ ಬಂಗಾರಪ್ಪ ಅವರ ವಿರುದ್ಧದ ದೂರುಗಳನ್ನುನರಸಿಂಹರಾವ್ ಶಾಂತಚಿತ್ತರಾಗಿ ಸ್ವೀಕರಿಸುತ್ತಿದ್ದರು.ಕ್ಲಾಸಿಕ್ ಕಂಪ್ಯೂಟರ್ ಹಗರಣವನ್ನು ನಾನು ಗಮನಿಸಿದ್ದೇನೆ.ಅವರ ನಡವಳಿಕೆಗಳನ್ನೂ ಗಮನಿಸುತ್ತಿದ್ದೇನೆ.ಆದರೂ ಸ್ವಲ್ಪ ಕಾಲ ಕಾಯೋಣ ಎನ್ನುತ್ತಿದ್ದರು.ಆದರೆ ಯಾವಾಗ ಬಂಗಾರಪ್ಪ ತಮ್ಮನ್ನು ಚೇಳು ಎಂದು ಕುಟುಕಿದರೋ?ಆಗ ನರಸಿಂಹರಾವ್ ಕೆಂಡಾಮಂಡಲವಾದರು.ಅಷ್ಟೇ ಅಲ್ಲ,ತಕ್ಷಣ ದೆಹಲಿಗೆ ಬರುವಂತೆ ಬಂಗಾರಪ್ಪ ಅವರಿಗೆ ಬುಲಾವ್ ನೀಡಿದರು.ಹೈಕಮಾಂಡ್‌ನಿಂದ ಬುಲಾವ್ ಬಂದ ತಕ್ಷಣ ದಿಲ್ಲಿಗೆ ಧಾವಿಸಿದ ಬಂಗಾರಪ್ಪ ಅವರಿಗೆ ನರಸಿಂಹರಾಯರ ಸ್ಪಷ್ಟ ಸಂದೇಶ ಕಾದಿತ್ತು.ವಾಪಸ್ಸು ಬೆಂಗಳೂರಿಗೆ ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿ,ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಿ ಅನ್ನುವುದು ಆ ಸಂದೇಶ.ಯೋಚಿಸಿ ಮಿಸ್ಟರ್ ಪ್ರೈಮ್ ಮಿನಿಸ್ಟರ್,ಒಂದು ವೇಳೆ ನಾನು ಅಧಿಕಾರದಿಂದ ಕೆಳಗಿಳಿದರೆ ನಿಶ್ಚಿತವಾಗಿ ಪಕ್ಷ ತೊರೆಯುತ್ತೇನೆ.ಪಕ್ಷ ಮುಂದಿನ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುತ್ತದೆ ಎಂದು ಬಂಗಾರಪ್ಪ ಎಚ್ಚರಿಸಿದರೂ ನರಸಿಂಹರಾವ್ ಅಲುಗಲಿಲ್ಲ.ಹಾಗಂತಲೇ:ನೀವು ಹೊರಗೆ ಹೋಗಿ ಪಕ್ಷ ಅಧಿಕಾರ ಕಳೆದುಕೊಳ್ಳುತ್ತದೆ ಎಂದುಕೊಳ್ಳೋಣ.ಆಗ ನಾವು ಅಧಿಕಾರದಿಂದ ಐದು ವರ್ಷ ದೂರವಾಗಿರಬೇಕಾಗುತ್ತದಾ?ಆಗಲಿ,ಐದಲ್ಲ,ಹತ್ತು ವರ್ಷ ಅಧಿಕಾರದಿಂದ ದೂರವಿದ್ದರೂಪರವಾಗಿಲ್ಲ.ಆದರೆ ನೀವು ರಾಜ್ಯಕ್ಕೆ ವಾಪಸ್ಸಾಗಿ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದುಬಿಟ್ಟರು.
ಅಷ್ಟರಲ್ಲಿ ಬಂಗಾರಪ್ಪ ಅವರನ್ನು ಸಿಎಂ ಹುದ್ದೆಯಲ್ಲಿ ಉಳಿಸಲು ಹೈಕಮಾಂಡ್‌ನ ಹಲ ನಾಯಕರು ಯತ್ನಿಸಿದರು.ನರಸಿಂಹರಾಯರನ್ನು ಟೀಕಿಸಿ ಅಂತಹ ಸಂದರ್ಶನವನ್ನೇ ನಾನು ಕೊಟ್ಟಿಲ್ಲ ಎಂದು ಬಂಗಾರಪ್ಪ ಅವರಿಂದಲೇ ಹೇಳಿಸುವ ಯತ್ನ ಮಾಡಿದರು.ಶುರುವಿನಲ್ಲಿ ಅವರು ಹೇಳಿದಂತೆ ಬಂಗಾರಪ್ಪ ಕೇಳಿದರೂ ಕೆಲವೇ ಕ್ಷಣಗಳಲ್ಲಿ ಖಡಕ್ ಆಗಿ ನಿಂತರು.ಯಸ್,ಆ ಸಂದರ್ಶನ ನಿಜ.ಆದರೆ ಹೆಡ್ಡಿಂಗಿನಲ್ಲಿ ಪ್ರಕಟವಾದ ಪದಗಳು ನನ್ನವಲ್ಲ ಎಂದರು.ಆದರೆ ಅಷ್ಟರಲ್ಲೇ ಸಂದರ್ಶನದ ಎಫೆಕ್ಟು ಆಗಿ ಹೋಗಿತ್ತು.ಹೀಗಾಗಿ ಯಾರೇನೇ ಹೇಳಿದರೂ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವ ತಮ್ಮ ನಿರ್ಧಾರದಿಂದ ನರಸಿಂಹರಾಯರು ಹಿಂದೆ ಸರಿಯಲೇ ಇಲ್ಲ.ಪರಿಣಾಮ?
ವೀರೇಂದ್ರಪಾಟೀಲರ ಪದಚ್ಯುತಿಯ ನಂತರ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಒಂದು ಸಂದರ್ಶನದ ಕಾರಣಕ್ಕಾಗಿ ತರಾತುರಿಯಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.ಅಂದ ಹಾಗೆ ಮುಖ್ಯಮಂತ್ರಿ ಹುದ್ದೆ ಯಾರಿಗೂ ಪರ್ಮನೆಂಟು ಅಲ್ಲ,ಆದರೆ ಆ ಸಂದರ್ಶನ ನೀಡದೆ ಇದ್ದಿದ್ದರೆ ಬಂಗಾರಪ್ಪ ಇನ್ನೂ ಕೆಲ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು ಎಂಬುದು ಮಾತ್ರ ನಿಜ.ಕುತೂಹಲದ ಸಂಗತಿ ಎಂದರೆ ಪಿಟಿಐನ ಸಿದ್ದರಾಜು ಅವರಿಗೆ ನೀಡಿದ ಸಂದರ್ಶನದಲ್ಲಿ ನರಸಿಂಹರಾಯರನ್ನು ಚೇಳು ಎಂದು ಜರಿದಿದ್ದ ಬಂಗಾರಪ್ಪ ಅದೇ ದಿನ ಸಂದರ್ಶನ ಮಾಡಿದ ಯಾವ ಪತ್ರಕರ್ತರ ಎದುರೂ ನರಸಿಂಹರಾಯರನ್ನು ಜರಿದಿರಲಿಲ್ಲ.ಕಾರಣ?ಪತ್ರಿಕೆಗಳಿಗೆ ಸಂದರ್ಶನ ನೀಡಿದರೆ ಅದು ಆಯಾ ಪತ್ರಿಕೆಯಲ್ಲಿ ಮಾತ್ರ ಪ್ರಕಟವಾಗುತ್ತದೆ.ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದರೆ ದೇಶಾದ್ಯಂತ ಇರುವ ಪತ್ರಿಕೆಗಳಲ್ಲಿ ಪ್ರಕಟವಾಗಿ ದಿಲ್ಲಿ ಗದ್ದುಗೆಯನ್ನು ಅಲುಗಾಡಿಸುತ್ತದೆ ಎಂಬುದು ಬಂಗಾರಪ್ಪ ಅವರ ಲೆಕ್ಕಾಚಾರ.
ಅವರ ಈ ಲೆಕ್ಕಾಚಾರವೇನೋ ಸರಿಯಾಗಿಯೇ ಇತ್ತು. ವ್ಯತ್ಯಾಸವೆಂದರೆ ದಿಲ್ಲಿ ಗದ್ದುಗೆ ಅಲುಗಾಡಿದ ರಭಸಕ್ಕೆ ಬಂಗಾರಪ್ಪ ಅವರ ಖುರ್ಚಿಯೇ ಉರುಳಿ ಬಿತ್ತು.
-ಆರ್.ಟಿ.ವಿಠ್ಠಲಮೂರ್ತಿ (gts ವಾಲ್ ನಿಂದ)