

ಲಂಕೇಶ್ ಅವರು ತಮ್ಮ ಪತ್ರಿಕೆ ಮೂಲಕ ಒಂದು ಪ್ರಜ್ಞಾವಂತ ಯುವಜನತೆಯ ಜಾಣಜಾಣೆಯರನ್ನು ರೂಪಿಸಿದ್ದರು. ಈ ರೂಪಿಸುವಿಕೆಯಲ್ಲಿ ಓದುಗರೂ ಸಹ ಪ್ರಜ್ಞಾವಂತಿಕೆಯಿಂದ ಸ್ವತಃ ಬರಹ ಮಾಡುವ ಸ್ವಂತ ಆಲೋಚಿಸುವ, ತನ್ನ ಸುತ್ತಮುತ್ತಣ ಸಂಗತಿಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ, ಪ್ರಭುತ್ವವನ್ನು ಪ್ರಶ್ನಿಸುವ, ಸ್ವವಿಮರ್ಶೆ ಮಾಡಿಕೊಂಡು ಮುನ್ನಡೆಯುವ ಮಾದರಿಯನ್ನು ಕಟ್ಟಿಕೊಟ್ಟರು. ರವಿ ಬೆಳಗೆರೆಯವರು ‘ಹಾಯ್ ಬೆಂಗಳೂರು’ ಮೂಲಕ ಮನುಷ್ಯರಲ್ಲಿ ಸದಾ ಕುತೂಹಲ ತಾಳುವ ದೌರ್ಬಲ್ಯಗಳಾದ ಸೆಕ್ಸ್ ಮತ್ತು ಕ್ರೈಂ ವಿಜೃಂಬಣೆಯ ಮೂಲಕ ದುಡಿವ ವರ್ಗದ ಯುವಜನತೆಯಲ್ಲಿ ಒಂದು ಬಗೆಯ ರುಚಿಕಟ್ಟಾದ ಮಸಾಲೆಯಂತಹ ಲಘು ಬರಹವನ್ನು ಪರಿಚಯಿಸಿದರು. ಹಾಗಾಗಿ ಈ ಬರಹಕ್ಕೆ ಡ್ರಗ್ಸ್ ತರಹ ಅಡಿಕ್ಟ್ ಆಗುವ ಗುಣವಿತ್ತು. ಹೀಗಾಗಿ ಒಂದು ಕಾಲಕ್ಕೆ ಆಟೋ ಚಾಲಕರಿಂದಿಡಿದು ದುಡಿವ ವರ್ಗದ ಯುವಜನತೆ ಹುಚ್ಚೆದ್ದು ರವಿ ಬೆಳಗೆರೆ ಅವರ ಅಭಿಮಾನಿಗಳಾದರು. ಇವರಾರೂ ಸ್ವತಂ ಆಲೋಚಿಸುವ ಪ್ರಜ್ಞಾವಂತರಾಗದೆ ಎಲ್ಲದರ ಬಗ್ಗೆ ರವಿ ಅವರು ಬರೆಯುತ್ತಾರೆ ನಾವು ಓದಬೇಕಷ್ಟೆ ಎನ್ನುವ ಆಲೋಚನೆಯಲ್ಲಿ ಪರಾವಲಂಬಿಗಳಾದರು. ಎಲ್ಲದರ ಬಗ್ಗೆ ಸೂಕ್ಷ್ಮರಾಗದರೆ ಅಸೂಕ್ಷ್ಮವಾದ ಹೀರೋಯಿಸಮ್ ಬೆಳೆಸಿಕೊಂಡದ್ದೆ ಹೆಚ್ಚು. ಮಹಿಳೆಯನ್ನು ನೋಡುವ ಗಂಡಾಳ್ವಿಕೆಯ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸಿದರು.ರವಿ ಬೆಳೆಗೆರೆಯ ಹಾಯ್ ಬೆಂಗಳೂರ್ ಮಾದರಿಯು ಎಲ್ಲಾ ಜಿಲ್ಲೆ ತಾಲೂಕು ಮಟ್ಟದಲ್ಲಿ ಬ್ಲಾಕ್ ಟ್ಯಾಬ್ಲೆಡ್ ನ ದೊಡ್ಡ ಪ್ರಭಾವ ಬೀರಿತು. ಈ ಲೋಕಲ್ ಬ್ಲಾಕ್ ಟ್ಯಾಬ್ಲೆಡ್ ಆರಂಭಿಸಿದ ಯುವ ಜನತೆ ಸೆಕ್ಸ್ ಕ್ರೈಮ್ ಮತ್ತು ಬ್ಲಾಕ್ ಮೇಲನ್ನೆ ತಮ್ಮ ವೃತ್ತಿಯನ್ನಾಗಿಸಿಕೊಂಡರು. ಎಷ್ಟೋ ಮಹಿಳೆಯರ ಮಾನ ಹರಾಜುಮಾಡಿದರು. ಅದಕ್ಕೆ ರವಿ ಬೆಳೆಗೆರೆ ಅವರನ್ನು ಮಾದರಿಯನ್ನಾಗಿಸಿಕೊಂಡರು.
ಅವುಗಳೆಲ್ಲಾ ಬಹಳ ದಿನ ನಡೆಯಲಿಲ್ಲ ಎನ್ನುವುದು ಬೇರೆಯ ಮಾತು. ನಾನು ಡಿಗ್ರಿಯಲ್ಲಿ ರವಿ ಬೆಳಗೆರೆಯ ಬರಹ ಚೂರುಪಾರು ಓದಿದ್ದೆ. ಹಾಯ್ ಮತ್ತು ಓ ಮನಸೆಯಲ್ಲಿ ನನ್ನ ಒಂದೆರಡು ಪದ್ಯಗಳು ಪ್ರಕಟವಾಗಿದ್ದವು. ಡಿಗ್ರಿ ನಂತರ ಎಂ.ಎ ಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಗೆ ಬಂದ ಕಾರಣ ನಿಧಾನಕ್ಕೆ ಶುರುವಾದ ಓದು ಚಿಂತನೆ ರವಿ ಬೆಳೆಗೆರೆ ಅವರ ಬರಹದ ಮಿತಿಗಳನ್ನು ಸ್ಪಷ್ಟವಾಗಿ ಕಾಣಿಸಿತು. ಹಾಗಾಗಿ ಅಲ್ಲಿಂದ ರವಿ ಬೆಳೆಗೆರೆ ಬರಹವನ್ನು ಓದುವುದನ್ನು ಪೂರ್ತಿ ಕೈಬಿಟ್ಟೆ. ಅವರೊಂದಿಗೆ ನೇರ ಮಾತಾಡಿದ್ದು ಒಂದೇ ಸಲ..ಸಂಡೂರು ಭೂ ಹೋರಾಟ ಪುಸ್ತಕ ಬರೆವ ಸಂದರ್ಭದಲ್ಲಿ ಸಂಡೂರಿಗೆ ಸಂಬಂಧಪಟ್ಟ ವಿಷಯವೊಂದನ್ನು ತಿಳಿಯಲು ಅವರಿಗೆ ಕಾಲ್ ಮಾಡಿ ವಿಚಾರಿಸಿದ್ದೆ. ಒಂದಷ್ಟು ಮಾಹಿತಿ ಕೊಟ್ಟಿದ್ದರು. ನೀನು ಗೊತ್ತು ನನಗೆ ಅಂತ ಅಚ್ಚರಿ ಮೂಡಿಸಿದ್ದರು. ಮತ್ತಷ್ಟು ಪರಿಶೀಲಿಸಿದಾಗ ಅವರು ಕೊಟ್ಟ ಮಾಹಿತಿ ತಪ್ಪಿತ್ತು. ಹಾಗಾಗಿ ಸುಮ್ಮನಾದೆ. ಅದು ಬಿಟ್ಟರೆ ಬೇರೆ ಯಾವ ತರಹದ ಒಡನಾಟವೂ ಇರಲಿಲ್ಲ.ರವಿ ಬೆಳಗೆರೆ ಅವರುಒಬ್ಬ ಪತ್ರಕರ್ತ ಹೇಗಿರಬಾರದು, ಒಂದು ಪತ್ರಿಕೆಯನ್ನು ಹೇಗೆ ನಡೆಸಬಾರದು, ಯುವಜನತೆಯ ತಲೆಗೆ ಸೆಕ್ಸ್ ಕ್ರೈಂ ನಂತಹ ರೋಚಕ ಸಂಗತಿಗಳನ್ನೆ ತುರುಕಿದರೆ ಹೇಗೆ ಒಂದು ತಲೆಮಾರು ಅಂಧಾಭಿಮಾನಿಗಳಾಗುತ್ತಾರೆ ಎನ್ನುವುದಕ್ಕೂ ಒಂದು ಮಾದರಿಯನ್ನು ಸೃಷ್ಟಿಸಿದ್ದಾರೆ. ಕನ್ನಡದ ಸಂದರ್ಭದಲ್ಲಿ ಒಬ್ಬ ವರ್ಣರಂಜಿತ ವ್ಯಕ್ತಿಯಾಗಿ ಬಾಳಿ ಹೊರಟಿದ್ದಾರೆ..ಹೋಗಿ ಬನ್ನಿ, ನಮಸ್ಕಾರ.
-ಅರುಣ್ ಜೋಳದಕೂಡ್ಲಗಿ

