

ಪತ್ರಕರ್ತ ರವಿಬೆಳಗೆರೆ ನಿಧನಕ್ಕೆ ಸಿಎಂ ಯಡಿಯೂರಪ್ಪ ಸೇರಿ ಹಲವು ಗಣ್ಯರ ಸಂತಾಪ

ಹೌದು,ಒಂದು ಮರ ಬಿದ್ದ ಸಂಚಲನ ಉಂಟಾಯಿತು. ರವಿ ಬೆಳಗೆರೆ ಎನ್ನುವ ಒಂದು ಸಸ್ಯ ಅವತರಿಸಿದಾಗ ಆ ಸಸಿಯ ಪೂರ್ವಾಪರ, ಇತಿಹಾಸ, ಚರಿತ್ರೆ, ಚಾರಿತ್ರ್ಯಗಳೆಲ್ಲಾ ಚರ್ಚೆಯ ನಿಕಶಕ್ಕೆ ಸಿಕ್ಕಿದ್ದು ಸತ್ಯ. ಅದಕ್ಕಿಂತ
ಕಠೋರ ಸತ್ಯವೆಂದರೆ….. ರವಿ ಬೆಳಗೆರೆ ಏನಿದ್ದರು ಎಂದು ಜನ ಅದೆಷ್ಟು ಪುಕ್ಕಟ್ಟೆ ರಸಗವಳ ಜಗಿದಿದ್ದರೋ? ಅದಕ್ಕಿಂತ ಹೆಚ್ಚು ರವಿ ಪ್ರಕಾಶಿಸಿದರು. ಕೆಲಸವಿಲ್ಲದ ಜನ ಇವನೆಷ್ಟು ಬೆಳೆಯಬಲ್ಲ ಎಂದು ಕೊಂಕಿನ ನುಡಿಗಳನ್ನು ಆಡಿ, ನಿರೀಕ್ಷಿಸಿದ್ದರೋ ಅದಕ್ಕಿಂತ ನೂರಾರು ಪಟ್ಟು ಬೆಳೆದ. ಆ ಮರದ ಹೆಸರು ರವಿಬೆಳೆಗೆರೆ. ಇಂದು ಮುಂಜಾನೆಗೆ ಅಸ್ತಂಗತನಾದ ಈ ಸೂರ್ಯ ಕನ್ನಡ ಸಾಹಿತ್ಯ, ಪತ್ರಿಕೋದ್ಯಮ,ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಬಿಟ್ಟು ಹೋದ ಕೊಡುಗೆ ಅನುಪಮ.
ರವಿ ಬೆಳೆಗೆರೆಯ ಮಾಂಡೋವಿ ಓದುವ ಕಾಲದಲ್ಲಿ ಅವರ ಅಕ್ಷರ ಮ್ಯಾಜಿಕ್ ಗೆ ಮನಸೋತಿದ್ದ ನನಗೆ ಅವರ ಕೊನೆಕೊನೆಯ ಓ.. ಮನಸೆ, ಇತ್ತೀಚಿನ ಕೆಲವು ಪುಸ್ತಕಗಳು ಒಂಥರಾ ಸವಿ, ಸಿಹಿ ಕಳೆದುಕೊಂಡ ಚೀಪುವ ಐಸ್ ಕ್ಯಾಂಡಿಗಳ ಅನುಭವ ನೀಡತೊಡಗಿದ್ದವು. ಬೆಳೆಗೆರೆಯ ಬಗ್ಗೆ, ಲಂಕೇಶ್ ರ ಬಗ್ಗೆ ವಿಜಯಹೂಗಾರ್, ಪ್ರತಾಪಸಿಂಹ ನಂಥ ನಮ್ಮ ಸಮಕಾಲೀನ ಪತ್ರಕರ್ತ ಮಿತ್ರರ ಜೊತೆ ಚರ್ಚೆಗಿಳಿದಾಗಲೆಲ್ಲಾ ನಾನು ಸಮರ್ಥಿಸುತಿದ್ದುದು, ಆರಾಧಿಸುತಿದ್ದುದು ಲಂಕೇಶ್ ರನ್ನೇ ಆದರೆ ರವಿಬೆಳೆಗೆರೆಯವರನ್ನು ನಿರ್ಲಕ್ಷಿಸುವಂತಿರಲಿಲ್ಲ. ಲಂಕೇಶ್ ಅವ್ವ ಬರೆದರೆ, ರವಿ ಅಮ್ಮನ ಬಗ್ಗೆ ಬರೆದರು. ಲಂಕೇಶ್ ಜಾಗತಿಕ ಸಾಹಿತ್ಯದ ಬಗ್ಗೆ ಬರೆದರೆ ರವಿ ಬೆಳೆಗೆರೆ ಬೇಂದ್ರೆ, ಪು.ತಿ.ನ. ಕಣವಿಗಳ ಬಗ್ಗೆ ಬರೆದು ಯಾರಿಗೂ ತೋರಿಸಿಕೊಳ್ಳದಂತೆ ಬ್ರಾಹ್ಮಣ ಪ್ರೇಮ ಮರೆದು ಬಿಡುತಿದ್ದರು!.
ಪಿ.ಲಂಕೇಶ್ ರಿಗೆ ಸೆಡ್ಡು ಹೊಡೆಯುವ ಪೌರುಷ ತೋರಿ ಬದ್ಧತೆ, ಪ್ರಾಮಾಣಿಕತೆ ಕಳೆದುಕೊಂಡ ರವಿ ಲಂಕೇಶ್ ಎತ್ತರಕ್ಕೆ ಹೋಗದೆ ಪೇಜಾಡಿದರು. ಆದರೆ ರವಿ ಬೆಳೆಗೆರೆ ಯುವಕರನ್ನು ಸೆಳೆದರು. ರಂಜನೀಯವಾಗಿ ಬರೆದು, ಹೇಳಿ ಪ್ರೇಮ-ಕಾಮ- ಹಿಂಸೆ ಅಪರಾಧಗಳನ್ನು ವೈಭವೀಕರಿಸಿದರು. ಈ ರಂಜನೀಯತೆ ಕಾಲದ ಅನಿವಾರ್ಯತೆಯೋ? ತೀರಾ ರವಿಬೆಳೆಗೆರೆಯವರ ಅನಿವಾರ್ಯ ಕರ್ಮವೋ ಎಂದು ಜನ ಮಾತನಾಡಿಕೊಳ್ಳುತಿದ್ದಾಗ ಟಿ.ವಿ., ಸಿನೆಮಾ,ಧಾರವಾಹಿ ಹೀಗೆ ಹೊಸತನದ ಅಭಿವ್ಯಕ್ತಿಗೆ ಒಡ್ಡಿಕೊಂಡ ರವಿ ತಾವು ನಡೆದಲ್ಲೆಲ್ಲಾ ಛಾಪು ಮೂಡಿಸಿದರು.
ಪತ್ರಕರ್ತ ವ್ಯಕ್ತಿ, ಜೀವವಾಗಿ ಸಾಯುವುದಕ್ಕೂ, ಪತ್ರಕರ್ತನಾಗಿ ಸಾಯುವುದಕ್ಕೂ ವ್ಯತ್ಯಾಸವಿದೆ. ದುರಂತವೆಂದರೆ….. ಲಂಕೇಶ್ ಹೊಸ ಪಥಿಕನಾಗಿ ಹೊರಟ ರವಿ ಸಂಜೆಯಾಗಿ ತನ್ನ ಕೆಲಸ ಮುಗಿಸುವ ಮೊದಲೇ ಪತ್ರಕರ್ತನಾಗಿ ಕಳೆದುಹೋದರು. ಸಿದ್ದಾಂತ,ವೇದಾಂತ, ಶಿಸ್ತು, ರುಚಿಕಟ್ಟಾದ ಬರವಣಿಗೆ ಇವೆಲ್ಲವುಗಳನ್ನೂ ತನ್ನ ಜೀವಿತಾವಧಿಯಲ್ಲೇ ನಿಸ್ತೇಜ ಮಾಡಿಕೊಂಡಿದ್ದ ರವಿ ಬೆಳೆಗೆರೆ ಶ್ರೀಮಂತನಾಗಿ ಮೆರೆಯುವ ಅಮಲಿನಲ್ಲಿ ಬರಹಗಾರನ ಜೀವಂತಿಕೆ, ಸೂಕ್ಷ್ಮಜ್ಞತೆ ಕಳೆದುಕೊಂಡಿದ್ದರೆ? ಎಂದರೆ ಅದು ಹೌದು. ಮಾಂಡೋವಿ, ಒಮರ್ಟಾ, ಹೇಳಿಹೋಗು ಕಾರಣ ಗಳ ಬರವಣಿಗೆಯ 30
ವರ್ಷಗಳ ಹಿಂದಿನ ಸವಾಲು, ರೋಚಕತೆ, ಬರವಣಿಗೆ ಇತ್ತೀಚಿನ ಲೀಲಾವಿನೋದದ ನಂತರದ ಪುಸ್ತಕ, ಪತ್ರಿಕೆ ಬರವಣಿಗೆ ರವಿಬೆಳೆರೆ ದಾಟಿದ ಬರವಣಿಗೆಯ ನಿಷ್ಪ್ರಯೋಜಕತೆಯನ್ನು ಬಿಂಬಿಸುವಂತಿದ್ದವು.
ಆದರೆ ಅಜಮಾಸು 40 ವರ್ಷಗಳ ಅವರ ಸಾಹಿತ್ಯಿಕ, ಪತ್ರಿಕೋದ್ಯಮದ ಜೀವಂತಿಕೆಯಲ್ಲಿ ಮೆಚ್ಚಿದವರು, ಅನುಮಾನಿಸಿದವರು, ವಿರೋಧಿಸಿದವರು ಎಲ್ಲರೂ ಸಿಕ್ಕಾರು ಆದರೆ ನಿರ್ಲಕ್ಷ ಮಾಡುವಂಥ ಹೆಸರು ರವಿಬೆಳೆರೆಯವರಲ್ಲ, ಅವರಾಗಿರಲಿಲ್ಲ ಎನ್ನುವುದು ಅವರ ಕೊಡುಗೆಯ ಹಿರಿಮೆ. ಅವಶ್ಯ ಸ್ಥಿತಿಯಲ್ಲಿ ಅಪ್ರಸ್ತುತರಾಗಿ ಜೀವಹಿಡಿದುಕೊಂಡಿದ್ದ ರವಿಬೆಳೆಗೆರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಜೀವಂತವಾಗಿ ಜನಪರವಾಗಿದ್ದ ಲಂಕೇಶ್ ಬಿಟ್ಟರೆ ಮತ್ತೊಂದು ಹೆಸರು ತುಲನೆ, ಚರ್ಚೆಯ ನಿಕಶಕ್ಕೆ ಒಳಗಾಗದ ಇಂದಿನ ಸಂದರ್ಭ ಅವರ ಪ್ರಸ್ತುತತೆಗೆ ಸಾಕ್ಷಿ. ಲಂಕೇಶ್ ರಂಥ ಅವ್ವನೊಂದಿಗೆ ಹಿಮವಂತನಂಥ ಅಮ್ಮನ ಮಗ ರವಿ ಮತ್ತೆ ಹುಟ್ಟಿ ಬರಲಿ.
-ಕನ್ನೇಶ್.
ಬೆಂಗ ಳೂರು: ಹಿರಿಯ ಪತ್ರಕರ್ತ ಹಾಗೂ ಹಾಯ್ ಬೆಂಗಳೂರು ಟ್ಯಾಬ್ಲಾಯ್ಡ್ ಸ್ಥಾಪಕ ರವಿ ಬೆಳೆಗೆರೆ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ. ಪತ್ರಕರ್ತರಾಗಿ, ಲೇಖಕರಾಗಿ, ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದ ಅವರು, ಶಿಕ್ಷಣ ಸಂಸ್ಥೆಯನ್ನೂ ನಡೆಸುತ್ತಿದ್ದರು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಕುಟುಂಬದವರಿಗೆ, ಅಭಿಮಾನಿಗಳಿಗೆ, ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ಟೀಟ್ ಮಾಡಿದ್ದಾರೆ.
·
ರವಿ ಬೆಳಗೆರೆ ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದ ಕೇಳಿಬಂದ ದೊಡ್ಡ ಹೆಸರು. ಅತ್ಯಂತ ಮೇಧಾವಿ ಬರಹಗಾರ. ಬರೆಯಲಿಕ್ಕೆ ಕೂತರೆ ಅವರದು ದೈತ್ಯ ಶಕ್ತಿ. “ಹಾಯ್ ಬೆಂಗಳೂರು” ಎಂಬ ಹೆಸರಿನ ಪತ್ರಿಕೆಯ ಮೂಲಕ ಬಹಳ ಒಳ್ಳೆಯ ಹೆಸರು ಮತ್ತು ಸ್ವಲ್ಪ ನಕಾರಾತ್ಮಕ ಹೆಸರನ್ನೂ ಸಹ ಗಳಿಸಿದ ಓರ್ವ ಪತ್ರಕರ್ತ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. (kpc)
