



ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಫಲವಾಗಿದ್ದು ಇದರ ಹೊಣೆಯನ್ನು ತಾಲೂಕು, ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳೇ ಹೊರಬೇಕಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಉದ್ಯೋಗಖಾತ್ರಿ ಯೋಜನೆಯ ಒಂಬುಡ್ಸಮನ್ ಆರ್.ಜಿ. ನಾಯಕ ಹೇಳಿದ್ದಾರೆ.
ಸಿದ್ಧಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಉದ್ಯೋಗ ಖಾತ್ರಿ ಯೋಜನೆ ದೇಶದ ಪ್ರಮುಖ ಯೋಜನೆ ಈ ಯೋಜನೆಯ ಮೂಲಕ ಗ್ರಾಮೀಣ ಜನರ ಬದುಕು, ಭವಿಷ್ಯ ಬದಲಿಸಬಹುದು. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆ ವಿಫಲವಾಗಿದ್ದು ಇದರ ಹೊಣೆಯನ್ನು ಅಧಿಕಾರಿಗಳು ಹೊರಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಮುಂಡಗೋಡು ತಾಲೂಕು ಅತಿಹೆಚ್ಚು ಪ್ರಗತಿ ಸಾಧಿಸಿದೆ. ಜೊತೆಗೆ ಅಲ್ಲಿ ಕೆಲವು ದೋಷಗಳೂ ನುಸುಳಿವೆ. ಸಿದ್ಧಾಪುರ ತಾಲೂಕು ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಅತಿ ಕಡಿಮೆ ಪ್ರಗತಿ ಸಾಧಿಸಿದ್ದು ಇದಕ್ಕೆ ಅಧಿಕಾರಿಗಳ ಅದಕ್ಷತೆ, ನಿರ್ಲಕ್ಷ, ಬೇಜವಾಬ್ಧಾರಿ ಕಾರಣ ಎಂದರು.
ಹಿರಿಯ ಅಧಿಕಾರಿಗಳು, ಕೆಳಹಂತದ ಅಧಿಕಾರಿಗಳಿಗೆ ಈ ಯೋಜನೆಯ ಮಾಹಿತಿ ಇಲ್ಲ. ಜವಾಬ್ಧಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಹುದ್ದೆಯಲ್ಲಿದ್ದಾರೆ ಬಿಟ್ಟರೆ ಜವಾಬ್ಧಾರಿ,ಸಮರ್ಪಕ ಕರ್ತವ್ಯ ನಿರ್ವಹಿಸುತ್ತಿಲ್ಲ. 50, 60 ಕೋಟಿ ಅಂದಾಜು ಯೋಜನೆ ತಯಾರಿಸಿ 2-3 ಕೋಟಿ ಅನುಷ್ಠಾನದ ಪ್ರಗತಿ ತೋರಿಸುತಿದ್ದಾರೆಂದರೆ….. ಇವರೆಲ್ಲಾ ಯಾವ ಕೆಲಸ ಮಾಡುತಿದ್ದಾರೆ ಎಂದು ನಂಬಬೇಕು? ಎಂದು ಪ್ರಶ್ನಿಸಿದ ಆರ್.ಜಿ. ನಾಯಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಬೇಡಿಕೆಗಳ ಅರ್ಜಿ ಪಡೆಯಬೇಕು. ಕಾಟಾಚಾರಕ್ಕೆ ಕೆಲಸ ಮಾಡಿದರೆ ಸರ್ಕಾರ, ಜನರಿಗೆ ಅನ್ಯಾಯ ಮಾಡಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಮಟ್ಟದಿಂದ ಕೆಳಹಂತದವರೆಗೆ ಉದ್ಯೋಗಖಾತ್ರಿ ಯೋಜನೆಯ ಅನುಷ್ಠಾನಾಧಿಕಾರಿಗಳು ಕೆಲಸ ಮಾಡದೆ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದರು.
