

ಉಳ್ಳವರನ್ನು ಉಳ್ಳವರನ್ನಾಗಿ ಮಾಡುವ, ಇಲ್ಲದವರನ್ನು ಇನ್ನಷ್ಟು ಇಲ್ಲದವರನ್ನಾಗಿಸುವ ಈಗಿನ ಸರ್ಕಾರಗಳ ಗುರಿ ಕೋಮುವಾದದ ಮೂಲಕ ನಿರಂತರ ಅಧಿಕಾರದಲ್ಲಿರುವ ಹುನ್ನಾರ ಎಂದು ಆರೋಪಿಸಿರುವ ಪತ್ರಕರ್ತ ಕನ್ನೇಶ್ ದುಡಿಯುವ ವರ್ಗದ ಜನರ ಐಕ್ಯತೆ ಮಾತ್ರ ಈ ಅರಾಜಕತೆಗೆ ಉತ್ತರ ಎಂದಿದ್ದಾರೆ.
ಕಾರ್ಮಿಕ ಸಂಘಟನೆಗಳ ಜಂಟೀ ಕ್ರೀಯಾ ಸಮಿತಿ ಕರೆಕೊಟ್ಟಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಸಿದ್ಧಾಪುರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಮನವಿ ಅರ್ಪಣೆ ಕಾರ್ಯಕ್ರಮದಲ್ಲಿ ವಕ್ತಾರರಾಗಿ ಮಾತನಾಡಿದ ಅವರು ಬಲಪಂಥೀಯ ಸಂಘಟನೆಗಳು, ಸರ್ಕಾರಗಳ ಧ್ಯೇಯವೇ ಉಳ್ಳವರ ಪೋಷಣೆ ಇದರಿಂದಾಗಿ ಬಡವರು, ರೈತರು, ಕಾರ್ಮಿಕರು, ಯೋಜನಾ ಕಾರ್ಯಕರ್ತರಿಗೆ ಅನ್ಯಾಯ, ಶೋಷಣೆಗಳಾಗುತ್ತಿವೆ. ಈ ಅವ್ಯವಸ್ಥೆ ಅರಾಜಕತೆ ವಿರುದ್ಧ ಸಂಘಟಿತ ಹೋರಾಟಮಾಡಿ ಶ್ರಮಿಕರು ತಮ್ಮ ಪರವಾದ ಮಸೂದೆ, ಕಾನೂನುಗಳ ರಚನೆಗೆ ಮುಂದಾಗಬೇಕು ಎಂದರು.
ಈ ಮುಷ್ಕರ, ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಿದ್ಧಾಪುರ ತಹಸಿಲ್ಧಾರರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಲಾಯಿತು. ಈ ಮನವಿಯನ್ನು ಸುಧಾ ಕೊಂಡ್ಲಿ, ರೇವತಿ ನಾಯ್ಕ,ಯಮುನಾ ನಾಯ್ಕ ತಹಸಿಲ್ಧಾರ ಮಂಜುಳಾ ಭಜಂತ್ರಿಯವರಿಗೆ ನೀಡಿದರು. ಈ ಸಂದರ್ಭದಲ್ಲಿ ಗೀತಾ ಕೊಂಡ್ಲಿ,ಸಾವಿತ್ರಿ ಗೌಡ, ಕವಿತಾ ನಾಯ್ಕ, ಸುಮಿತ್ರಾ ನಾಯ್ಕ, ಗಾಯತ್ರಿ ಮಡಿವಾಳ, ಚೇತನಾ ಹೆಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಯೋಜನಾ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ ನಗರದ ತಿಮ್ಮಪ್ಪ ನಾಯ್ಕ ವೃತ್ತದಿಂದ ಹೊರಟು, ರಾಜಮಾರ್ಗದ ಮೂಲಕ ಸಾಗಿ ತಹಸಿಲ್ದಾರ ಕಛೇರಿಯಲ್ಲಿ ಸಮಾಪ್ತಿಯಾಯಿತು.


