

ಸದಾಶಿವಗಡ ಕೋಟೆಯ ನಿರ್ಮಾತೃ ” ಸೋದೆಸದಾಶಿವರಾಯ”
———————————ಕಾರವಾರದ ಸದಾಶಿವಗಡ ಐತಿಹಾಸಿಕ ಪ್ರದೇಶ,ಕಾರವಾರಕ್ಕೆ ಸಾವಿರಾರು ವರ್ಷದ ಸ್ಪಷ್ಟ ಚಾರಿತ್ರಿಕ ಹಿನ್ನೆಲೆ ಇದ್ದರೂ,೧೬ ನೇ ಶತಮಾನದಿಂದ ಈ ಪ್ರದೇಶಕ್ಕೆ ಹೆಚ್ಚಿನ ಮಹತ್ವ ಬಂದಿತ್ತು,ಕಾರಣ ಐರೋಪ್ಯರ ಆಗಮನ,ಬ್ರಿಟಿಷರು,ಪೋರ್ಚುಗೀಸರು ಈ ಪ್ರದೇಶವನ್ನು ತಮ್ಮ ಅನುಕೂಲತೆಗೆ ತಕ್ಕ ಹಾಗೆ ಬಳಸಿ ಇದನ್ನು ತಮ್ಮ ವ್ಯಾಪಾರಿ ಕೇಂದ್ರವನ್ನಾಗಿಸಿಕೊಂಡಿದ್ದರು,ಆ ಸಂದರ್ಭದಲ್ಲಿ ಉತ್ತರ ಕನ್ನಡಜಿಲ್ಲೆಯ ಪ್ರಮುಖ ಆಳರಸರಾಗಿದ್ದವರು ಸೋದೆಯ ಅರಸರು,ಕಾರವಾರ ಕೂಡಾ ಇವರ ಹಿಡಿತದಲ್ಲೇ ಇತ್ತು,೧೭ ನೇ ಶತಮಾನದ ಮಧ್ಯಭಾಗದಲ್ಲಿ ಸೋದೆಯ ಅರಸನಾಗಿದ್ದ ಸದಾಶಿವರಾಯನು ಬ್ರಿಟಿಷರನ್ನು ಹೇಗಾದರೂ ಮಾಡಿ ಮಟ್ಟ ಹಾಕಲೇಬೇಕೆಂದು ಕಾರವಾರದಿಂದ ಅವರನ್ನು ಓಡಿಸಲೇಬೇಕೆಂದು ತೀರ್ಮಾನಿಸಿ ಅಲ್ಲಿ ಒಂದು ಕೋಟೆಯನ್ನು ಕಟ್ಟಿಸುತ್ತಾನೆ,(ನಂತರ ಅದನ್ನು ಸೋದೆಯ ಬಸವಲಿಂಗರಾಯ ಬಲಿಷ್ಠಪಡಿಸಿದ) ಅದುವೇ ಸದಾಶಿವಗಡ ಕೋಟೆ,ಸಾಮಾನ್ಯವಾಗಿ ಗಡ ಎಂದರೆ ಕೋಟೆ ಅಂತಲೇ ಅರ್ಥ,ಸದಾಶಿವಗಡ ಎಂದರೆ ಸದಾಶಿವರಾಯನ ಕೋಟೆ ಎಂದೇ ಅರ್ಥ,
ಈ ವಿಷಯಕ್ಕೆ ಸಾಕಷ್ಟು ಆಧಾರಗಳಿವೆ,ಅಲ್ಲದೆ ಬ್ರಿಟಿಷರನ್ನು ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಸೋಲಿಸಿದ್ದೂ ಇದೇ ಸೋದೆ ಸದಾಶಿವರಾಯ! ಆದರೆ ಈ ಕೀರ್ತಿ ಒಲಿದದ್ದು ಮಾತ್ರ ಹೈದರಲಿಗೆ!!! ಕಾರವಾರದಲ್ಲಿ ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರನ್ನು ಸೋಲಿಸಿ ವಿಜಯದಾಖಲಿಸಿದ್ದು ನಮ್ಮ ಹೆಮ್ಮೆಯ ಸೋದೆ ಸದಾಶಿವರಾಯ,ಆ ಹಿನ್ನೆಲೆಯಲ್ಲಿಯೇ ಪ್ರತಿವರ್ಷ ಸದಾಶಿವಗಡದಲ್ಲಿ ” ವಿಜಯದಿವಸ” ವನ್ನೂ ಆಚರಿಸುತ್ತಿದ್ದಾರೆ,ಇಷ್ಟೆಲ್ಲ ಇರುವಾಗ ಈಗ ಸದಾಶಿವರಾಯನ ಕೋಟೆ ಶಿವಾಜಿಯ ಕೋಟೆ ಎಂದು ಸುಮ್ಮಸುಮ್ಮನೆ ಬಿಂಬಿಸುತ್ತಾ ಅಲ್ಲಿ ಶಿವಾಜಿಯವರ ಪುತ್ಥಳಿಯನ್ನು ನಿರ್ಮಿಸಲು ಮುಂದಾಗಿರುವುದು ತುಂಬಾ ಬೇಸರದ ಸಂಗತಿ,ಇತಿಹಾಸದ ತಿಳಿವಳಿಕೆ ಯಾಕೆ ಬೇಕೆಂದರೆ ಅಭಿಮಾನಕ್ಕೋಸ್ಕರ,ತನ್ಮೂಲಕ ಅಭಿವೃದ್ಧಿಯ ಆಶಯಕ್ಕೋಸ್ಕರ,ಅದೇ ಅಭಿಮಾನ ಅವಾಂತರಕ್ಕೆ ಕಾರಣವಾಗಬಾರದು,ಒಂದು ವೇಳೆ ಸದಾಶಿವಗಡದ ಕೋಟೆಯಲ್ಲಿ ಶಿವಾಜಿಯ ಪ್ರತಿಮೆ ಸ್ಥಾಪನೆಯಾದರೆ ಮುಂದಿನ ತಲೆಮಾರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ,ನಮಗೆ ಶಿವಾಜಿಯ ಮೇಲೂ ಆತ ಹಿಂದೂ ಧರ್ಮದ ರಕ್ಷಣೆಗೆ ಮಾಡಿದ ಕಾರ್ಯದ ಮೇಲೂ ಅಪಾರ ಅಭಿಮಾನವಿದೆ,ಹಾಗಂತ ನಮ್ಮನೆಲದ ಹೆಮ್ಮೆಯ ಅರಸರ ಸಾಧನೆಯನ್ನು ಅಲ್ಲಗಳೆಯಲಾದೀತೇ? ಅದು ಸಮಂಜಸವಲ್ಲ,ಶಿವಾಜಿಯ ಮೂರ್ತಿಯನ್ನು ಈ ಸ್ಥಳದ ಬದಲಿಗೆ ಬೇರೆ ಸ್ಥಳದಲ್ಲಿ ಸ್ಥಾಪಿಸಿ,ಈ ಸ್ಥಳದಲ್ಲಿ ಸೋದೆ ಸದಾಶಿವರಾಯನ ಮೂರ್ತಿಯನ್ನು ಸ್ಥಾಪಿಸಿ, ಆಗ ಅವರ ಪರಿಶ್ರಮಕ್ಕೊಂದು ಬೆಲೆ ಪ್ರಾಪ್ತಿಯಾಗುತ್ತದೆ, ಕಳೆದ ೪ ವರ್ಷದಿಂದ ನಾವು ಮನವಿಕೊಡುತ್ತಿದ್ದೇವೆ,ಕೇಳಿಕೊಳ್ಳುತ್ತಿದ್ದೇವೆ,ಶಿರಸಿಯ ಸ್ಥಾಪಕ ಸೋದೆ ರಾಮಚಂದ್ರ ನಾಯಕ,ಹೀಗಾಗಿ ಈ ಸಂಗತಿ ಮುಂದಿನ ಯುವ ತಲೆಮಾರಿಗೆ ತಿಳಿದಿರಬೇಕೆಂದರೆ ದಯವಿಟ್ಟು ಶಿರಸಿಯಲ್ಲಿ ಆತನದೊಂದು ಪುತ್ಥಳಿ ಸ್ಥಾಪಿಸಿ ಅಥವಾ ಯಾವುದಾದರೂ ಸರ್ಕಲ್ ಗಾದರೂ ಆತನ ಹೆಸರಿಡಿ ಎಂದು….ಯಾರಿಗೂ ಕಿವಿಯೇ ಕೇಳುತ್ತಿಲ್ಲ ನಾನೇನುಮಾಡಲಿ….ಎಲ್ಲವನ್ನೂ ರಾಜಕೀಯ ಲಾಭದ ನೆಲೆಯಲ್ಲೇ ದಯವಿಟ್ಟು ನೋಡಬೇಡಿ,ಸಾಂಸ್ಕೃತಿಕವಾಗಿ ಚಿಂತಿಸಿ,ಚರಿತ್ರೆಯ ಅದ್ಭುತ ಸಂಗತಿಗಳನ್ನು ಚಿರಂತನಗೊಳಿಸಿ
-ಲಕ್ಷ್ಮೀಶ್ ಹೆಗಡೆ, ಸೋಂದಾ

