

ಇಂದು ಸಿದ್ಧಾಪುರ ಕಿಲಾರದಲ್ಲಿ ಯಕ್ಷಗಾನ ತರಬೇತಿ ಕಾರ್ಯಾಗಾರ ಉದ್ಘಾಟನೆ ಮತ್ತು ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಶ್ರೀ ಮಹಾಗಣಪತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಕಿಲಾರ ಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಜಿ.ಭಟ್ ಕಶಿಗೆ ವಹಿಸಲಿದ್ದು, ಕಾರ್ಯಕ್ರಮವನ್ನು ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಪತ್ರಕರ್ತ ಕನ್ನೇಶ್ ಕೋಲಶಿರ್ಸಿ, ಮೋಹನ ನಾಯ್ಕ ಪಾಲ್ಗೊಳ್ಳಲಿದ್ದಾರೆ. ನಂತರ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಎಲ್ಲರನ್ನೂ ಬೆಳೆಸುವ ಶಕ್ತಿಯುತವಾದ ಕಲೆ ಯಕ್ಷಗಾನ”-ಶ್ರೀಮತಿ ನಿರ್ಮಲಾ ಹೆಗಡೆ ಗೋಳಿಕೊಪ್ಪ
“”ಅಚ್ಚ ಕನ್ನಡವನ್ನು ಪ್ರತಿನಿಧಿಸುವ ಅಪ್ರತಿಮ ಕಲೆ ಯಕ್ಷಗಾನ” – ಟಿ.ಜಿ ಹೆಗಡೆ ಹಿತ್ಲಕೈ
ಸಾಮಾನ್ಯ ಗೃಹಿಣಿಯಾಗಿದ್ದ ನಾನು ಈ ದಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯೆಯಾಗಿ, ಹಲವು ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಮೂಲ ಕಾರಣ ಈ ಯಕ್ಷಗಾನ ಕಲೆ. ನಾನು ಯಕ್ಷಗಾನವನ್ನು ಕಲಿತು ಅದರಲ್ಲಿ ತೊಡಗಿಸಿಕೊಂಡಿದ್ದರಿಂದ ಈ ಅವಕಾಶ ಪ್ರಾಪ್ತಿಯಾಗಿದೆ. ಹಾಗಾಗಿ ಒಟ್ಟಾರೆ ನಮ್ಮ ಸಮಾಜವನ್ನು ಸಂಸ್ಕಾರಗೊಳಿಸುವ ಈ ಕಲೆಯನ್ನು ನಾವು ಆರಾಧನಾ ದೃಷ್ಟಿಯಿಂದಲೇ ನೋಡುತ್ತೇವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀಮತಿ ನಿರ್ಮಲಾ ಹೆಗಡೆ ಗೋಳಿಕೊಪ್ಪ ಇವರು ಅಭಿಪ್ರಾಯಪಟ್ಟರು.
ಅವರು ಕವಲಕೊಪ್ಪದಲ್ಲಿ ಕಲಾಭಾಸ್ಕರ ಸಂಸ್ಥೆ ಇಟಗಿಯವರು ಭಾರತ ಸರಕಾರದ ಸಂಸ್ಕೃ ತಿ ಸಚಿವಾಲಯದ ನೆರವಿನೊಂದಿಗೆ ಪ್ರಸ್ತುತ ಪಡಿಸುತ್ತಿರುವ ನೂತನ ಯಕ್ಷಗಾನ ” ದ್ರೋಣಾವಸಾನ” ದ ಉಧ್ಘಾಟನೆ ನೆರವೇರಿಸಿ ಮಾತನ್ನಾಡಿದರು. ಅಭ್ಯಾಗತರಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ಟಿ.ಜಿ. ಹೆಗಡೆ ಹಿತ್ತಲಕೈ ಮಾತನಾಡಿ ವ್ಯಾವಹಾರಿಕವಾಗಿ ವಿಭಿನ್ನ ಭಾಷೆಯಲ್ಲಿ ಮಾತನಾಡುವ ಜನರು ಯಕ್ಷಗಾನ ರಂಗದಲ್ಲಿ ಅನ್ಯ ಭಾಷೆಯ ಛಾಯೆಯೂ ಕಾಣಿಸದಂತೆ ಶುದ್ಧ ಕನ್ನಡದಲ್ಲಿಯೇ ಮಾತುಗಾರಿಕೆ ನಡೆಸುತ್ತಾರೆ. ಆದ್ದರಿಂದ ಇದು ಅಚ್ಚ ಕನ್ನಡವನ್ನು ಪ್ರತಿನಿಧಿಸುವ ನಮ್ಮ ಕನ್ನಡ ನಾಡಿನ ಪ್ರಾತಿನಿಧಿಕ ಕಲೆಯಾಗಿದೆ ಎಂದು ತಿಳಿಸಿದರು. ಎಮ್. ಎಸ್. ಹೆಗಡೆ ಕವಲಕೊಪ್ಪ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಳೆದ ಕೆಲದಿನಗಳಲ್ಲಿ ನಮ್ಮನ್ನಗಲಿದ ಹಲವು ಯಕ್ಷ ಸಾಧಕರಿಗೆ ಸತೀಶ ಹೆಗಡೆ ದಂಟಕಲ್ ನುಡಿ ನಮನ ಸಲ್ಲಿಸಿದರು. ಕಲಾಭಾಸ್ಕರದ ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಸ್ಕರ ಹೆಗಡೆ ಮುತ್ತಿಗೆ ನಿರ್ವಹಿಸಿ ವಂದಿಸಿದರು.
ನಂತರ ಉಡುಪಿ ರಾಜಗೋಪಾಲಾಚಾರ್ಯ, ಹೊಸ್ತೋಟ ಮಂಜುನಾಥ ಭಾಗವತರ ಕೃತಿಗಳನ್ನಾಧರಿಸಿ, ಇಟಗಿ ಮಹಾಭಲೇಶ್ವರ ಭಟ್ಟರ ರಂಗ ಸಂಯೋಜನೆಯೊಂದಿಗೆ ಸತೀಶ ಹೆಗಡೆ ದಂಟಕಲ್ ರವರು ನಿರ್ದೇಶಿಸಿದ ನೂತನ ಯಕ್ಷಗಾನ ಪ್ರಸಂಗ “ದ್ರೋಣಾವಸಾನ”ದ ಪ್ರಥಮ ಪ್ರಯೋಗ ಸಂಪನ್ನಗೊಂಡಿತು. ಭಾಗವತರಾಗಿ ಸತೀಶ ಹೆಗಡೆ ದಂಟಕಲ್ ಹಾಗೂ ನಂದನ ಹೆಗಡೆ ಪಾಲ್ಗೊಂಡಿದ್ದರು. ಶರತ್ ಜಾನಕೈ ಹಾಗೂ ನಾಗಭೂಷಣ ಕೇಡಲೆಸರ ಮದ್ದಲೆ ಹಾಗೂ ಚಂಡೆ ವಾದನದಲ್ಲಿ ಸಮರ್ಥವಾಗಿ ಸಹಕಾರ ನೀಡಿದರು. ಮುಮ್ಮೇಳದಲ್ಲಿ ಅಶೋಕ ಭಟ್ ಸಿದ್ದಾಪುರ-ದ್ರೋಣನಾಗಿ, ಅಂಸಳ್ಳಿ ಈಶ್ವರ ಭಟ್-ಕೌರವನಾಗಿ, ಮಂಜುನಾಥ ಕಾಳೆನಳ್ಳಿ- ಅರ್ಜುನನಾಗಿ, ಇಟಗಿ ಮಹಾಬಲೇಶ್ವರ ಭಟ್- ಕೃಷ್ಣನಾಗಿ ಪ್ರಬುದ್ಧ ನಿರ್ವಹಣೆ ತೋರಿದರು. ಬಡಗುತಿಟ್ಟು ಯಕ್ಷಗಾನದಲ್ಲಿ ಅಪರೂಪವಾದ ಬಣ್ಣದ ವೇಷವನ್ನು ಸಂಜಯ ಬೆಳೆಯೂರುರವರು ಅಲಾಯುಧನ ಪಾತ್ರದ ಮೂಲಕ ಮನೋಜ್ಞವಾಗಿ ಅಭಿನಯಿಸಿದರು. ಉಳಿದಂತೆ ವೆಂಕಟೇಶ ಬೊಗರಿಮಕ್ಕಿ-ಕರ್ಣನಾಗಿ, ನಾಗಪತಿ ಹೆಗಡೆ ಕೊಪ್ಪ-ಧರ್ಮರಾಜನಾಗಿ, ನಾಗೇಂದ್ರ ಮುರೂರು-ದುಷ್ಯಾಸನನಾಗಿ, ನಿತಿನ್ ದಂಟ್ಕಲ್-ಸಾತ್ಯಕಿ ಮತ್ತು ದೃಷ್ಟದ್ಯುಮ್ನನಾಗಿ ಹಾಗೂ ಕಾರ್ತಿಕ್ ಹೆಗಡೆ ದಂಟ್ಕಲ್ ರವರು ಅಶ್ವತ್ಥಾಮನಾಗಿ ಉತ್ತಮ ಪಾತ್ರ ನಿರ್ವಹಣೆ ತೋರಿದರು. ಒಟ್ಟಾರೆಯಾಗಿ ಬಳಕೆಯಲ್ಲಿಲ್ಲದ ಈ ಪ್ರಸಂಗದ ಪ್ರಥಮ ಪ್ರಯೋಗ ಯಶಸ್ವಿಯಾಗಿ ಮೂಡಿಬಂದಿತು.
ದೊಡ್ಮನೆ ಶಿಬಿರದ ವರದಿ-
ಮಹಾಗಣಪತಿ ಯಕ್ಷಗಾನ ಕಲಾ ಬಳಗ ದೊಡ್ಮನೆ ಯಿಂ ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಹಕಾರದೊಂದಿಗೆ ದಿನಾಂಕ 28-11-2020ರ ಮಧ್ಯಾಹ್ನ 3-30ಗಂಟೆಗೆ ಸಿದ್ದಾಪುರ ತಾಲೂಕಿನ ಕಲ್ಲೆಮಕ್ಕಿ ಕಾಲೇಶ್ವರ ದೇವಾಲಯದ ಆವರದಲ್ಲಿ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನೆಯನ್ನು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ನಿರ್ಮಲಾ ಹೆಗಡೆ ಗೊಳಿಕೊಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಕ್ಷಗಾನ ಕಲೆಯನ್ನು ಪುರುಷರಷ್ಟೇ ಸಮಾನವಾಗಿ ಮಹಿಳೆಯರು ಸಹ ಈ ರಂಗದಲ್ಲಿ ತೊಡಗಿಕೊಂಡಿರುವುದು ತುಂಬಾ ಸಂತಸದ ವಿಷಯವಾಗಿದ್ದು ಯಕ್ಷಗಾನ ಅಕಾಡೆಮಿಯಿಂದ ಅನೇಕ ಯೋಜನೆಗಳು ತಮ್ಮ ಅವಧಿಯಲ್ಲಿ ಕಲಾವಿದರಿಗೆ ತಲುಪಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಿವೃತ್ತ ಶಿಕ್ಷಕರಾದ ಮಂಜುನಾಥ ಭಟ್ಟ ಕಲ್ಲೆಮಕ್ಕಿ ಮಾತನಾಡಿ ಮಕ್ಕಳಿಗೆ ಇಂಥಹ ಶಿಬಿರಗಳು ಉತ್ತೇಜನ ಕಾರಿಯಾಗಿ ಅನೇಕ ಹೊಸ ಕಲಾವಿದರು ರೂಪುಗೊಳ್ಳಲೆಂದು ಹಾರೈಸಿದರು. ಕಲಾಪೋಷಕರಾದ ಜಿ.ಜಿ.ಹೆಗಡೆ ಹಳ್ಳಿಬೈಲ್, ಯಕ್ಷಗಾನ ವೃತ್ತಿ ಕಲಾವಿದರಾದ ಷಣ್ಮುಖ ಗೌಡ ಬಿಳೇಗೋಡು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕನ್ನ ಗೌಡ ಇವರು ಉಪಸ್ಥಿತರಿದ್ದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಲಾವಿದೆಯಾದ ವರ್ಷಿಣಿ ಹೆಗಡೆ ಮಕ್ಕಳಿಗೆ ಶಿಬಿರದ ತರಬೇತಿಯನ್ನು ಪ್ರಾರಂಭಿಸಿದರು. ನಮೃತಾ ಹೆಗಡೆ ಹಳ್ಳಿಬೈಲ್ ಕಾರ್ಯಕ್ರಮವನ್ನು ನಿರೂಪಣೆಗೈದರು. ಸಂಘಟಕರಾದ ಕೇಶವ ಹೆಗಡೆ ಕಿಬ್ಳೆ ಸ್ವಾಗತ ಮತ್ತು ವಂದನಾರ್ಪಣೆಗೈದರು, ವಸಂತ ಹೆಗಡೆ ಹಳ್ಳಿಬೈಲ್, ಎಂ.ಆರ್. ಉಡಳ್ಳಿ, ಮಾಲತಿ ಹೆಗಡೆ ಸಹಕರಿಸಿದರು.




