

ಯಕ್ಷಗಾನ ಶಾಸ್ತ್ರೀಯ ಕಲೆ ಎನ್ನುವ ಮಿಥ್ ಹರಡಲಾಗುತ್ತಿದೆ, ಆದರೆ ಯಕ್ಷಗಾನ ಶುದ್ಧ ಜಾನಪದ ಕಲೆ. ಯಕ್ಷಗಾನ ಜಾನಪದ ಕಲೆ ಎನ್ನುವ ವಾದಕ್ಕೆ ಹಲವು ಪುರಾವೆಗಳಿವೆ ಎಂದು ಹಿರಿಯ ಪತ್ರಕರ್ತ ಜಿ.ಕೆ. ಭಟ್ ಕಶಿಗೆ ಪ್ರತಿಪಾದಿಸಿದರು. ಅವರು ಕಿಲಾರದಲ್ಲಿ ನಡೆದ ಯಕ್ಷಗಾನ ಕಾರ್ಯಾಗಾರದ ಉದ್ಘಾಟನೆ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನ ಜಾನಪದ ಕಲೆ ಅನಕ್ಷರಸ್ಥರು,ಶಿಕ್ಷಿತರು ಅವರಿವರೆನ್ನುವ ಭೇದವಿಲ್ಲದೆ ಎಲ್ಲರೂ ಯಕ್ಷಗಾನವನ್ನು ಕಲಿಯುತ್ತಾರೆ. ಯಕ್ಷಗಾನ ಕಲಿತಷ್ಟು ಸುಲಭವಾಗಿ ಶಾಸ್ತ್ರೀಯ ಕಲೆಗಳನ್ನು ಕಲಿಯಲು ಸಾಧ್ಯವಿಲ್ಲ, ಹಳತರೊಂದಿಗೆ ಹೊಸತನವನ್ನು ಜೋಡಿಸಿಕೊಳ್ಳುವ ಜಂಗಮಸ್ವರೂಪಿ ಸ್ವಾಭಾವ, ಗುಣಲಕ್ಷಣಗಳೇ ಯಕ್ಷಗಾನ ಜಾನಪದ ಕಲೆ ಎನ್ನುವುದಕ್ಕೆ ಸಾಕ್ಷಿ ಎಂದರು.
ರಾಜ್ಯ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಹಿತ್ತಲಗದ್ದೆ ಶ್ರೀ ಮಹಾಗಣಪತಿ ಕೃಪಾಪೋಷಿತ ಯಕ್ಷಗಾನ
ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷಗಾನ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಯ.ಅ.ಸದಸ್ಯೆ ನಿರ್ಮಲಾ ಹೆಗಡೆ ಮಾತನಾಡಿ ಯಕ್ಷಗಾನ ವ್ಯಕ್ತಿ-ವ್ಯಕ್ತಿತ್ವಗಳನ್ನು ಬೆಳೆಸುತ್ತದೆ ಎಂದರು.
ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ಧೇಶಕ ಸುರೇಶ್ಚಂದ್ರ ಹೆಗಡೆ, ಪತ್ರಕರ್ತ ಸಮಾಜಮುಖಿ ಕನ್ನೆಶ್ ಕೋಲಶಿರ್ಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಮತ್ತು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿತ್ತಲಗದ್ದೆ ಮ.ಕೃ ಯ.ಮಂಡಳಿ ಮುಖ್ಯಸ್ಥ ವಾಸು ನಾಯ್ಕ ಪ್ರಾಸ್ಥಾವಿಕವಾಗಿ ಮಾತನಾಡಿದರು. ಶ್ರೀಕಾಂತ್ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಜೈಕುಮಾರ ನಾಯ್ಕ ನಿರೂಪಿಸಿದರು.



