ಎಂ ಡಿ ನಂಜುಂಡಸ್ವಾಮಿ ಸಂದರ್ಶನದ ಒಂದು ಭಾಗ

ಕನ್ನಡದಲ್ಲಿ ಚಿಂತನ ಪರಂಪರೆ ಕುವೆಂಪು ಕಾರಂತ ಡಿವಿಜಿ ಶಂಬಾ ಅವರಿಂದ ಹಿಡಿದು ಈಚಿನ ಚಿಂತಕರವರೆಗೆ ನಿಡಿದಾಗಿ ಹರಹಿಕೊಂಡಿದೆ. ಹೆಚ್ಚಿನ ಚಿಂತಕರು ಸಾಹಿತ್ಯ ಸಂಸ್ಕೃ ತಿ ನೆಲೆಯಿಂದ ಚಿಂತನೆ ಮಾಡುವವರು. ಕರ್ನಾಟಕದ ರಾಜಕಾರಣ ಆರ್ಥಿಕತೆಯ ನೆಲೆಯಿಂದ ಚಿಂತನೆ ಮಾಡುವವರು ಕಡಿಮೆ. ಸಮಾಜವಿಜ್ಞಾನದ ವೃತ್ತಿಪರ ಪ್ರಾಧ್ಯಾಪಕರು ಕನ್ನಡದಲ್ಲಿ ಬರೆಯುವುದು ಕಡಿಮೆ. ಬರೆದರೆ ಅದರಲ್ಲಿ ಸಮುದಾಯ ಬದುಕಿನ ರಾಜಕಾರಣ ಇರುವುದಿಲ್ಲ. ರಾಜಕೀಯ ಅರ್ಥಶಾಸ್ತ್ರಗಳನ್ನು ತರಗತಿಯ ಗಿಳಿಪಾಠವನ್ನಾಗಿ ಮಾಡಿರುವ, ಬೌದ್ಧಿಕತೆಯನ್ನು ಪ್ರಭುತ್ವ ಪರವಾದ ಸೇವೆಯನ್ನಾಗಿ ಮಾಡಿರುವ ಅಕೆಡೆಮಿಕ್ ವಿದ್ವತ್ತಿಗೆ ಒಂದು ಬಗೆಯಮಂಕು ಬಡಿದಿರುತ್ತದೆ. ಈ ಹಿನ್ನೆಲೆಯಲ್ಲಿ ರೈತನಾಯಕ ಎಂ.ಡಿ. ನಂಜುಂಡಸ್ವಾಮಿ ಅವರ ರಾಜಕೀಯ ಚಿಂತನೆಗಳನ್ನು ಇಟ್ಟು ನೋಡಿದರೆ, ಆಕ್ಟಿವಿಸಮಿನಿಂದ ಚಿಂತನೆಗೆ ಬರುವ ಮೊನಚು ಮತ್ತು ಸ್ಪಷ್ಟತೆ ತಿಳಿಯುತ್ತದೆ. ಅಧ್ಯಯನದಿಂದ ಚಿಂತನೆಗೆ ಸೈದ್ಧಾಂತಿಕ ಪಾಂಡಿತ್ಯ ಒದಗುತ್ತದೆ. ಚಳವಳಿಗಳ ನಡುವಿಂದ ಹುಟ್ಟುವ ಚಿಂತನೆಗೆ ಸೈದ್ಧಾಂತಿಕ ಸ್ಪಷ್ಟತೆಯ ಜತೆಗೆ ಆನ್ವಯಿಕ ಗುಣವಿರುತ್ತದೆ. ನಂಜುಂಡಸ್ವಾಮಿ ಅವರ ಚಿಂತನೆಯಲ್ಲಿ ಅತ್ಯಂತ ಸ್ಥಳೀಯವಾದುದನ್ನು ಅಂತಾರಾಷ್ಟ್ರೀಯ ರಾಜಕೀಯ ತಿಳಿವಳಿಕೆಯಲ್ಲಿಟ್ಟು ವಿಶ್ಲೇಷಿಸುವ ಕುಶಲತೆಯಿದೆ. ಅದು ರೈತ ಸಮುದಾಯ, ಅಂತರಾಷ್ಟ್ರೀಯ ರಾಜಕಾರಣ ಹಾಗೂ ಸಾಹಿತ್ಯ ಸಂಸ್ಕೃ ತಿಗಳ ಮಿಲನವ. ನಂಜುಂಡಸ್ವಾಮಿ ಚಳುವಳಿಗಾರರೂ ರಾಜಕೀಯ ಚಿಂತಕರೂ, ಸಕ್ರಿಯ ರಾಜಕಾರಣಿಯೂ ಆಗಿದ್ದವರು. ಚಳುವಳಿಗಳು ಹಾಗೂ ಪ್ರಭುತ್ವ, ಜಾಗತೀಕರಣ ಹಾಗೂ ಭಾರತದಂತಹ ದೇಶಗಳ ಆರ್ಥಿಕತೆ ವಿಶ್ಲೇಷಣೆ, ಎನ್‍ಜಿಓ ಹಾಗೂ ಸಾಮ್ರಾಜ್ಯಶಾಹಿ ಸಂಬಂಧಗಳು, ಬೆಳೆಪದ್ಧತಿ, ಆಹಾರ ಸಂಸ್ಕೃ ತಿ ಹಾಗೂ ಬೀಜೋತ್ಪಾದನೆ ಮಾಡುವ ಬಹುರಾಷ್ಟ್ರೀಯ ಕಂಪನಿಗಳ ಅಂತರ್‍ಸಂಬಂಧ, ಪ್ರಭುತ್ವಪೋಷಕ ಅರ್ಥಶಾಸ್ತ್ರಜ್ಞರ ಸ್ವಭಾವ, ಇತ್ಯಾದಿ ಕುರಿತಂತೆ ಅವರ ತಿಳಿವಳಿಕೆ ವಿಶಿಷ್ಟವಾಗಿದೆ. ಅವರು ತೀರಿಕೊಳ್ಳುವ ಕೆಲವು ತಿಂಗಳುಗಳ ಮುನ್ನ, ಹೊಸಪೇಟೆಯ ರೈತಸಮಾವೇಶಕ್ಕೆ ಬಂದಿದ್ದಾಗ ಮಾಡಲಾದ ಸುದೀರ್ಘ ಸಂದರ್ಶನದ ಒಂದು ಸಣ್ಣಭಾಗವನ್ನು ಇಲ್ಲಿ ಕೊಡಲಾಗಿದೆ.

ನೀವು ರೈತಾಪಿ ಚಿಂತನೆಗೆ ಹೊರಳಲು ಏನು ಕಾರಣ?

ನನಗೂ ತೇಜಸ್ವಿಗೂ ಪರಿಚಯ ಸುಮಾರು 1960ನೇ ಇಸ್ವಿಯಿಂದ. ಅಷ್ಟೊತ್ತಿಗಾಗಲೇ ನಾನು ಎಲ್‍ಎಲ್‍ಎಂ ಮುಗಿಸಿದ್ದೆ, ಕರ್ನಾಟಕ ಯೂನಿವರ್ಸಿಟಿಯಿಂದ. ಮುಗಿಸಿ ಜರ್ಮನಿ ಹೋಗಿಬಿಟ್ಟೆ 4 ವರ್ಷ. ಅಲ್ಲಿಂದ ವಾಪಸು ಬರೋವಾಗಲೇನೆ ರೈತ ಸಂಘಟನೆ ಮಾಡಬೇಕು ವ್ಯವಸಾಯನೇ ಮಾಡಬೇಕು ಅಂತಲೇ ತೀರ್ಮಾನ ಮಾಡಿಕೊಂಡು ಬಂದಿದ್ದು. ಅಷ್ಟರಲ್ಲಿ ತೇಜಸ್ವಿಯವರು ವ್ಯವಸಾಯ ಶುರು ಮಾಡಿದ್ದರು. ಮತ್ತೆ ಸುಂದರೇಶ್, ನಮ್ಮ ರೈತಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರಲ್ಲ ಅವರೂ ವ್ಯವಸಾಯ ಶುರುಮಾಡಿದ್ದರು. 1965ರಲ್ಲಿ ನಾನೂ ವ್ಯವಸಾಯ ಶುರುಮಾಡಿದೆ.ನೀವು ಮೂಲತಃ ಕಾನೂನಿನ ವಿದ್ಯಾರ್ಥಿ. ರೈತಪರ ಚಿಂತನೆಗೆ ಜರ್ಮನಿಯಲ್ಲಿ ಹೇಗೆ ಪ್ರೇರಣೆ ಸಿಕ್ತು?ಕಾನೂನಲ್ಲಿ ನಾನು ಇಂಟರ್ ನ್ಯಾಶನಲ್ ಲಾ ಅಂಡ್ ಇಂಟರ್ ನ್ಯಾಶನಲ್ ರಿಲೇಶನ್ಸ್ ಅಧ್ಯಯನ ಮಾಡದೋನು. ಅದರಲ್ಲಿ ಸಾಮ್ರಾಜ್ಯಶಾಹಿ ಮಾಡ್ತಾ ಇರೊ ಜಾಗತಿಕ ಶೋಷಣೆ, ಇವೆಲ್ಲ ಸ್ಪಷ್ಟವಾಗಿ ಗೊತ್ತಾಗಲಿಕ್ಕೆ ಶುರುವಾಯಿತು. ಆಮೇಲೆ ಸ್ವಾತಂತ್ರ್ಯ ಬಂದ ಮೇಲೂ ಯಾವ ರೀತಿ ಕಲೋನಿಯಲಿಜಂ ಮುಂದುವರಿಸೋದರಲ್ಲಿ ಬಿಳೀ ರಾಷ್ಟ್ರಗಳೂ ಯಶಸ್ವಿಯಾಗಿದಾವೆ ಅನ್ನೋದು ಗೊತ್ತಾಯಿತು.ಜರ್ಮನಿ ಕೂಡ ಒಂದು ಬಿಳೀರಾಷ್ಟ್ರವೆ. ಅಲ್ಲಿನ ಪಠ್ಯಕ್ರಮದಲ್ಲಿ ಇವೆಲ್ಲ ಇದ್ದವಾ?ಯುಸೀ, ಇಂಟರ್ ನ್ಯಾಶನಲ್ ಲಾದಲ್ಲಿ ಜರ್ಮನಿ ಪಠ್ಯಕ್ರಮ ಅಂತ ಏನಿರಲ್ಲ. ಎಲ್ಲಾ ದೇಶದಲ್ಲೂ ಒಂದೇ ಪಠ್ಯಕ್ರಮ ಇರಬೇಕಾಗುತ್ತೆ. ಜತೆಗೆ ನನ್ನ ಸುತ್ತ ಇದ್ದ ವಾತಾವರಣ ಕೂಡ ಇದಕ್ಕೆ ಕಾರಣವಾಯಿತು. ನಾನು ಬ್ರಾಹ್ಮಣೇತರ ಚಳುವಳಿ ನಡೀತಿದ್ದಂತಹ ವಾತಾವರಣದಲ್ಲಿ ಹುಟ್ಟಿದೆ. ಆನಂತರ ಸ್ವಾತಂತ್ರ್ಯ ಬಂದ ಮೇಲೆ, ಕಿಸಾನ್ ಮಜದೂರ್ ಪ್ರಜಾಪಾರ್ಟಿ ಸದಸ್ಯರು ನಮ್ಮ ತಂದೆ. ಅನಂತರ ಪ್ರಜಾ ಸೋಶಲಿಸ್ಟ್ ಪಾರ್ಟಿ ಆಯಿತು. ಆಗಲೂ ನಮ್ಮ ತಂದೆ ಆ ಪಾರ್ಟಿ ಸದಸ್ಯರು. ಹಾಗಾಗಿ ಸಮಾಜವಾದಿ ವಾತಾವರಣದಲ್ಲೆ ಬೆಳೆದೆ.

ಕನ್ನಡದ ಲೇಖಕರು ಬುದ್ಧಿಜೀವಿಗಳು ಸಮಾಜ ಹಾಗೂ ವ್ಯವಸ್ಥೆಯ ಜತೆ ಇರಿಸಿಕೊಂಡಿರೋ ಸಂಬಂಧವನ್ನು ಹ್ಯಾಗೆ ವಿಶ್ಲೇಷಣೆ ಮಾಡತೀರಿ?ಕರ್ನಾಟಕ ಲೇಖಕರುಗಳಲ್ಲಿ ಒಂದು ಅನ್‍ಡಿಸೈರಬಲ್ ಆದಂಥ ಒಂದು ನಡತೆ ಕಾಣಿಸಿಕೊಳ್ಳೋದಿಕ್ಕೆ ಶುರುವಾಗಿದೆ. ಚಳುವಳಿಗಳಿಗೂ ಅವರಿಗೂ ನಡುವೆ ಕಂದರ ಪ್ರಾರಂಭವಾಗಿದೆ. ಇದು ಕೆಲವು ಚಳುವಳಿಗಳು ಕ್ಷೀಣ ಆಗಲಿಕ್ಕೂ ಕಾರಣ ಆಗಿದೆ. ಇದಕ್ಕೆ ಮುಖ್ಯ ಕಾರಣ, ವ್ಯವಸ್ಥೆ ಜೊತೆ ಹೊಂದಾಣಿಕೆ. ದಲಿತ ಚಳುವಳಿ ನಾಶವಾಗೋದಕ್ಕೆ ಕಾರಣ ವ್ಯವಸ್ಥೆ ಜೊತೆ ಹೊಂದಾಣಿಕೆ. ಪವರ್ ಪಾಲಿಟಿಕ್ಸ್ ಬಗ್ಗೆ, ರಾಜಕೀಯ ಪಕ್ಷಗಳ ಬಗ್ಗೆ, ಸ್ಪಷ್ಟವಾದಂಥ ಒಂದು ನಿಲುವು ತಾಳದೇ ಇರೋದು ನಮ್ಮ ಬುದ್ಧಿಜೀವಿಗಳು ಮಾಡ್ತಾ ಇರೋ ತಪು. ಬೇರೆ ದೇಶದ ಬುದ್ಧಿಜೀವಿಗಳಿಗೆ ಹೋಲಿಸಿದರೆ, ಜನಾಂದೋಳನಗಳಲ್ಲಿ ಭಾಗವಹಿಸದೇ ಇರೋದು ಕಾಣ್ತಿದೆ. ಒಂದು ಸಾರಿ ಎಚ್. ನರಸಿಂಹಯ್ಯನವರು ಬಹಳ ದೊಡ್ಡ ಭಾಷಣ ಮಾಡಿದರು ಜಾಗತೀಕರಣದ ವಿರುದ್ಧ. ನರಸಿಂಹಯ್ಯ ಗಾಂಧಿವಾದಿ ಅಂತಲೇ ಬರೀತಾರೆ ಇವತ್ತಿಗೂ. ಆನಂತರ ನಾನು ಮಾತಾಡೋ ದಿತ್ತು. ಅವರ ಎದುರಿಗೇನೇ ಹೇಳಿದೆ : ‘ಯಾಕೆ ನಮ್ಮ ದೇಶದ ಬುದ್ಧಿಜೀವಿಗಳಿಗೂ, ಬೇರೆ ದೇಶದ ಬುದ್ಧಿಜೀವಿಗಳಿಗೂ ವ್ಯತ್ಯಾಸ ಬರುತ್ತೆ? ಬರ್ಟಂಡ್ ರಸೆಲ್ ಸಾಯೋಕೆ ಮುಂಚೆ ಇಂಗ್ಲೆಂಡಿನ ರಸ್ತೆಗಳಲ್ಲಿ ಚಳುವಳಿ ಮಾಡಿದರು, ವಿಯಟ್ನಾಂ ವಾರ್ ವಿರುದ್ಧ. ನಮ್ಮ ದೇಶದ ಬುದ್ಧಿಜೀವಿಗಳಿಗೆ ಏನಾಗಿದೆ?’ ನರಸಿಂಹಯ್ಯನವರು ಇಷ್ಟೊಂದು ಮಾತಾಡುತ್ತಾರೆ. ಅವರು ಜಾಗತೀಕರಣದ ವಿರುದ್ಧ ನಡೀತಾ ಇರೋ ಚಳುವಳಿಗಳಲ್ಲಿ ಭಾಗವಹಿಸಬೇಕು; ಅದಾದ ಮೇಲೆ ಅವರು ಮತ್ತೆ ಮಾತಾಡಿದರು. ‘ಇಲ್ಲ ನನ್ನಿಂದ ಭಾಗವಹಿಸೋಕೆ ಆಗಲ್ಲ.’ ಸೀ, ಈ ಧೋರಣೆಯಿದ್ದಾಗ ಕಂದರ ತನ್ನಿಂದ ತಾನೇ ಸೃಷ್ಟಿಯಾಗುತ್ತೆ. ಕರ್ನಾಟಕದಲ್ಲಿ 80ರ ದಶಕದಲ್ಲಿ ಹುಟ್ಟಿದ, ಅನೇಕ ಚಳುವಳಿಗಳು ಒಡೆದುಹೋಗಿವೆ. ಇದಕ್ಕೆ ಕಾರಣ ಈ ಚಳುವಳಿಯ ತಾತ್ವಿಕ ಸ್ವರೂಪದಲ್ಲಿ ಇದೆಯೋ ಅಥವಾ ದೇಶದ ರಾಜಕೀಯ ಪರಿಸರದಲ್ಲಿದೆಯೊ?ನೀವು ಹೇಳಿದ ಕೆಲವು ಚಳುವಳಿ ಡಿಸಿಂಟಿಗ್ರೇಟ್ ಆಗಿರಬಹುದು. ರೈತ ಚಳುವಳಿ ಮಾತ್ರ ಆಗಿಲ್ಲ. ನಾಲ್ಕು ಸಾರಿ ಅದಕ್ಕೆ ಸ್ವಲ್ಪ ತಲೆನೋವುಗಳು ಬಂದರೂನೂ ಡಿಸಿಂಟಿಗ್ರೇಟಂತೂ ಆಗಿಲ್ಲ. ಸಣ್ಣ ಸಣ್ಣ ಗುಂಪುಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಆಚೆ ಹೋಗಿವೆ. ಇದು ಪ್ರತಿ ವರ್ಷಕ್ಕೊಮ್ಮೆ ಅದೂ ಚುನಾವಣೆಗೆ ಪೂರ್ವಭಾವಿಯಾಗಿ ಇದಾಗುತ್ತೆ. ಇನ್ನೂ ಎರಡು ವರ್ಷಕ್ಕೆ ಮುಂದಿನ ಚುನಾವಣೆ ವೇಳೆಗೆ, ಐದನೇ ಗುಂಪು ಆಚೆ ಹೋಗಬಹುದು. ಕೆಲವು ವ್ಯಕ್ತಿಗಳು ಆಚೆ ಹೋಗಬಹುದು. ಆದರೆ ರೈತ ಚಳುವಳೀನ ಗಟ್ಟಿಯಾಗಿ ಇಟ್ಟಿರೋದು ಒಳಗೆ ಇರೋವಂಥ ಕಾರ್ಯಕರ್ತರು. ಅವರಿಗೆ ಇರೋವಂಥ ವೈಚಾರಿಕ ಸ್ಪಷ್ಟತೆ, ಸಂಘಟನಾತ್ಮಕ ನಿಲುವು, ನಮ್ಮ ಇವತ್ತಿನ ರಾಜಕೀಯ ಪಕ್ಷಗಳ ಬಗ್ಗೆ ಇರೋವಂಥ ಸ್ಪಷ್ಟ ನಿಲುವು, ಬೇರೆ ನೀವ್ಹೇಳಿದಂಥ ಚಳುವಳಿಗಳಿಗೆ ಇಲ್ಲ. ಬಂಡಾಯ ಸಾಹಿತಿಗಳಿಗೆ ರಾಜಕೀಯ ಪಕ್ಷಗಳ ಬಗ್ಗೆ ಸ್ಪಷ್ಟವಾದ ನಿಲುವು ಇದೆಯಾ? ಒಂದು ಸಂಘಟನೆಯಾಗಿ ದಲಿತ ಚಳುವಳಿಯಲ್ಲಿ ರಾಜಕೀಯ ಪಕ್ಷಗಳ ಬಗ್ಗೆ ಸ್ಪಷ್ಟ ನಿಲುವು ಇದೆಯಾ?ಪವರ್ ಪಾಲಿಟಿಕ್ಸಿನ ಬಗ್ಗೆ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳೋದು ಬೇರೆ. ಪವರ್ ಪಾಲಿಟಿಕ್ಸಿನಲ್ಲಿ ನೇರವಾಗಿ ದುಮುಕುವುದು ಬೇರೆ. ನೀವು ಚುನಾವಣೆಗೆ ನಿಂತಿದ್ದಿರಿ. ಗೆದ್ದಿರಿ, ಸೋತಿರಿ. ಚಳುವಳಿಗಳು ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಮಾಡ್ತಾ ಒತ್ತಡದ ಗುಂಪುಗಳಾಗಿ ಪ್ರಭುತ್ವಗಳನ್ನು ನಿಯಂತ್ರಿಸಬಲ್ಲ ಜನಾಂದೋಲನಗಳಾಗಿ ಇರುವುದು ಈ ಹೊತ್ತಲ್ಲಿ ಹೆಚ್ಚು ಅಗತ್ಯ ಅನಿಸೋದಿಲ್ಲವಾ?ನೋ. ನಾಟ್ ನೆಸೆಸರೀಲಿ. ಯಾವುದೇ ಒಂದು ಆಂದೋಲನ ಆದರೂನೂ ಜನಾಭಿಪ್ರಾಯ ರೂಪಿಸೋವಂಥ ಒಂದು ಚಳುವಳಿ ನಡೀತಾನೆ ಇರಬೇಕು. ಅದರ ಜೊತೆಗೆ ಅಧಿ ಕಾರ ಗ್ರಹಣಾನೂ ಒಂದು ಮುಖ್ಯ ಭಾಗ. ಅಧಿಕಾರ ಗ್ರಹಣ ಇಲ್ಲದೆ ಯಾವುದೇ ಚಳುವಳಿ ತನ್ನ ಆಶೋತ್ತರಗಳನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳೋದು ಅಸಾಧ್ಯ. ಆದರೆ ಅಧಿಕಾರ ಗ್ರಹಣ ಯಾವ ರೀತಿ ಮಾಡಬೇಕು ಇದು ಮುಖ್ಯ ಪ್ರಶ್ನೆ. ಕನ್ನಡ ಚಳುವಳಿಯವರಿಗೆ ನಾನು ಇದೇ ಮಾತು ಹೇಳಿದ್ದೆ: ‘ಕಾಲಕಾಲಕ್ಕೆ ನೀವು ಯಾವುದೇ ಪಕ್ಷದ ಸರಕಾರ ಇದ್ದರೂನೂ ಹೊಂದಾಣಿಕೆ ಮಾಡಿಕೊಳ್ಳೋದು, ಆ ಸರಕಾರದಲ್ಲಿ ಕೆಲವು ಹುದ್ದೆಗಳಿಗೆ ಪ್ರಯತ್ನ ಮಾಡೋದು, ಇದನ್ನು ಎಷ್ಟು ಕಾಲ ಮಾಡ್ತೀರಿ? ಇದನ್ನ ಬಿಟ್ಟು ನೀವೇ ಒಂದು ರಾಜಕೀಯ ಶಕ್ತಿಯಾಗಿ ಉಳಿದಿದ್ದರೆ ಕನ್ನಡದ ಸ್ಥಿತಿ ಬೇರೇನೆ ಆಗ್ತಿತ್ತು.ಜನಪರ ಚಳುವಳಿಗಳು ಒಂದು ರಾಜಕೀಯ ಪರ್ಯಾಯದತ್ತ ಹೋಗಬೇಕಾದರೆ ಮಾಡಬೇಕಾದ ಮೊದಲ ಕೆಲಸ ಯಾವುದು?ಮೊದಲು ವೈಚಾರಿಕ ಸ್ಪಷ್ಟತೆ, ವೈಚಾರಿಕ ಹೊಂದಾಣಿಕೆ ಆಗಬೇಕು. ಅನಂತರ ಅದರ ಆಧಾರದ ಮೇಲೆ ಕಾರ್ಯಕ್ರಮಗಳನ್ನ ರೂಪಿಸಬೇಕು. ಎರಡು ಮೂರು ವರ್ಷ ಸತತ ಕೆಲಸ ಮಾಡಿದರೆ, ನಾವು ಕರ್ನಾಟಕದ ಪ್ರಜಾಪ್ರಭುತ್ವಾನ ಗುಣಾತ್ಮಕವಾಗಿ ಬದಲಾವಣೆ ಮಾಡಬಹುದು. ಅಷ್ಟು ಪ್ರಭಾವ ಬೀರಬಲ್ಲಂತಹ ಬುದ್ಧಿಜೀವಿಗಳ ಒಂದು ದೊಡ್ಡ ಸಂಖ್ಯೆ ಕರ್ನಾಟಕದಲ್ಲಿದೆ. ಆದರೆ ಈ ಕೆಲಸಾನ ಅವರು ಕೈಗೆ ತಗೊಂಡಿಲ್ಲ. ಇವತ್ತಿಗೂ ಎಲ್ಲರೂ ಈ ಒಂದು ವೈಚಾರಿಕ ಸ್ಪಷ್ಟತೆಯಿಂದ ಕೈಜೋಡಿಸಿದರೆ, ಆರೋಗ್ಯಕರ ವಾದಂತಹ ಪರ್ಯಾಯ ವ್ಯವಸ್ಥೆಯನ್ನ ನಾವು ಕರ್ನಾಟಕ್ಕೆ ಕೊಡಬಹುದು. ಆ ವಿಶ್ವಾಸ ನನಗಿದೆ.ಸಮಾನ ಮನಸ್ಕರು ಒಂದು ಕಡೆ ಸೇರೋಕೆ ಸಾಮಾನ್ಯ ಕಾರ್ಯಕ್ರಮ ಇರುವಂತೆ ಸಾಮಾನ್ಯ ಶತ್ರು ಕೂಡ ಇರಬೇಕಾಗುತ್ತೆ. ಅಂತಹ ಸಮಾನ ಶತ್ರು ಯಾರು?ಈಗಿರೋವಂಥ ರಾಜಕೀಯ ಪಕ್ಷಗಳು. ಅವನ್ನು ಸಾಕ್ತಾ ಇರೋವಂತಹ ಹಿತಾಸಕ್ತಿಗಳು. ಕೆಲವು ವೆಸ್ಟೆಡ್ ಇಂಟರೆಸ್ಟ್‍ಗಳು ಎಲ್ಲ ರಾಜಕೀಯ ಪಕ್ಷಗಳನ್ನು ಸಾಕ್ತಾಯಿವೆ. ಯಾವುದೇ ರಾಜಕೀಯ ಪಕ್ಷಗಳೂ ತಮ್ಮ ಸ್ವತಂತ್ರ ಅಸ್ತಿತ್ವ ಉಳಿಸಿಕೊಂಡಿಲ್ಲ ಇವತ್ತಿಗೂ. ಅವೆಲ್ಲ ಯಾರದೋ ಏಜೆಂಟ್ ಆಗಿ ಕೆಲಸ ಮಾಡೋವಂಥ ಗುಂಪುಗಳಾಗಿವೆ ಹೊರತು, ಒಂದು ರಾಜಕೀಯ ಪಕ್ಷಕ್ಕೆ ಬೇಕಾದಂತಹ ಚೌಕಟ್ಟಿನಲ್ಲಿ ಕೆಲಸ ಮಾಡೋವಂತಹ ಗುಂಪುಗಳಾಗಿ ಉಳಿದಿಲ್ಲ. ಆ ಕಾರಣ ನಮ್ಮ ಶತ್ರುಗಳು ಯಾರು ಅನ್ನೋದು ಸ್ಪಷ್ಟ. ಆದರೆ ಚಳುವಳಿಗಳ ಶಕ್ತಿ ಮುಂದೆ ಆ ಶತ್ರುಗಳು ನಿಲ್ಲಕ್ಕೆ ಸಾಧ್ಯ ಇಲ್ಲ. ಆ ಶಕ್ತಿಗಳ ವಿರುದ್ಧ ಜನಾಭಿಪ್ರಾಯ ಈಗಾಗಲೇ ಸಿದ್ಧ ಆಗಿದೆ. ಆದರೆ ಈ ಜನಾಭಿಪ್ರಾಯಕ್ಕೆ ಒಂದು ದಾರಿ ತೋರಿಸೋವಂಥ ಒಂದು ವೇದಿಕೆ ಸೃಷ್ಟಿಯಾಗಿಲ್ಲ ಅಷ್ಟೆ.ರೈತ ಸಂಘವು ರಾಜಕಾರಣದಲ್ಲಿ ಇರಿಸಿಕೊಂಡಿರುವ ಎಚ್ಚರ, ತೋರಿಸುವ ಪ್ರಜ್ಞೆ ಜನಪರ ವಾಗಿದೆ. ಪ್ರಖರವಾಗಿದೆ. ಆದರೆ ನಮ್ಮ ಹಳ್ಳಿಗಾಡಿನ ಜಾತಿ ಸಮಾಜದಲ್ಲಿ, ಭೂರಹಿತ ಕೂಲಿಕಾರ್ಮಿಕರು ಇರೋ ಸಮಾಜದಲ್ಲಿ, ಅವರ ಪಾತ್ರದ ಬಗ್ಗೆ ಈ ಜನಪರತೆ ಅನ್ನೋದು ಕಾಣತಾ ಇಲ್ಲ. ರೈತಸಂಘ ಊಳಿಗಮಾನ್ಯ ಪದ್ಧತಿಯನ್ನು ಒಪ್ಪಿಕೊಂಡಿರೊ ಭೂಮಾಲೀಕರಿಂದ ತುಂಬಿದೆ ಅಲ್ಲವಾ?ಹಾಗೇನಿಲ್ಲ. ತಾವು ಗಮನಿಸಿಲ್ಲ ಅಂತ ಕಾಣುತ್ತೆ. ನಮ್ಮ ಸಂಘಟನೆ ಯಾವ್ಯಾವ ಗ್ರಾಮದಲ್ಲಿದೆ, ಅಲ್ಲೆಲ್ಲೂ ಕೋಮುಗಲಭೆ ಆಗಿಲ್ಲ. ಕಾರಣ, ಸಣ್ಣಪುಟ್ಟ ಸಮಸ್ಯೆಗಳು ಹಿಂದಿನಿಂದ ಏನು ಉಳಿದುಕೊಂಡು ಬಂದಿವೆ, ಊಳಿಗಮಾನ್ಯ ಪದ್ಧತಿ ಅಂದರಲ್ಲ, ಅದಕ್ಕಿಂತ ದೊಡ್ಡ ದೊಡ್ಡ ಸಮಸ್ಯೆಗಳ ಕಡೆ ಅವರ ಗಮನ ಬಿದ್ದಿದ್ದರಿಂದ ಈ ಸಾಂಪ್ರದಾಯಿಕ ವೈಷಮ್ಯಗಳು ಅಸಮಾನತೆ ತಾರತಮ್ಯ ಇತ್ಯಾದಿ ಹಳ್ಳಿಗಳಲ್ಲಿ ಕಾಣಿಸ್ತವೆ. ಅವು ಕ್ರಮೇಣ ಅದೃಶ್ಯ ಆಗ್ತಾಯಿವೆ. ಹಾಗಾಗಿ ನಮ್ಮ ಸಂಘ ಎಲ್ಲೆಲ್ಲಿದೆಯೊ ಅಲ್ಲಿ ಕೋಮು ಗಲಭೆ ಮಾತ್ರವಲ್ಲ, ಜಾತಿಗಲಭೆಗಳೂ ಆಗಿಲ್ಲ. ಚಳುವಳಿನಲ್ಲಿ ಕಂಡುಬರುವಂಥ ಈ ನಿಲುವು ನಿಧಾನಗತಿಯಲ್ಲೇ ಆಗಬಹುದು. ಅಂತೂ ಆಗ್ತಾ ಇದೆ.ನೀವು ಈ ಮೀಟರ್ ಅಳವಡಿಕೆಯಂತಹ ರೈತರ ಸಮಸ್ಯೆ ಬಗ್ಗೆ ಚಳುವಳಿ ಮಾಡತೀರಿ. ಅದೇ ಕಾಲಕ್ಕೆ ಈ ಬಗೆಯ ಅಂತಾರಾಷ್ಟ್ರೀಯ ರಾಜಕೀಯವನ್ನು ಕೂಡ ವಿಶ್ಲೇಷಣೆ ಮಾಡತೀರಿ. ಇವೆರಡಕ್ಕೂ ಇರೋ ಸಂಬಂಧವನ್ನ ರೈತರಿಗೆ ಒಂದು ರಾಜಕೀಯ ಪ್ರಜ್ಞೆಯಾಗಿ ಕೊಡೋ ವಿಷಯದಲ್ಲಿ ನಿಮ್ಮ ಅನುಭವ ಏನು?ಕರ್ನಾಟಕದಲ್ಲಿ ಈ ಕೆಲಸ ಮಾಡ್ತಾ ಇರೋದು ರೈತ ಚಳುವಳಿ ಒಂದೇ. ಇದರ ಬಗ್ಗೆ ಅಧ್ಯಯನ ಶಿಬಿರಗಳನ್ನ ಇಟ್ಕೋತಾ ಇರೋದು ರೈತ ಚಳುವಳಿ ಒಂದೇ. ಮಿಕ್ಕ ಯಾವ ಸಂಘಟನೇನೂ ಈ ಕೆಲಸ ಮಾಡ್ತಾ ಇಲ್ಲ.ಅಲ್ಲ. ರೈತರಿಗೆ ಇದನ್ನು ಕೊಡೋ ವಿಷಯದಲ್ಲಿರೊ ತೊಡಕುಗಳ ಬಗ್ಗೆ ಕೇಳಿದೆ….ಜಾಗತೀಕರಣದ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಇರೋವಂಥವರು ಇವತ್ತಿಗೂ ಕರ್ನಾಟಕದ ರೈತರು ಅಂತ ಹೇಳಬಹುದು ತಾವು. ಪ್ರತಿಯೊಬ್ಬನಿಗೂ ಗೊತ್ತು ಏನಾಗ್ತಿದೆ? ಎಲ್ಲಿಂದ ಸಮಸ್ಯೆ ಬರ್ತಿದೆ? ಎಲ್ಲಿಂದ ಏನು ಬಂತು? ನನ್ನ ಮುಸುಕಿನ ಜೋಳ ಬೆಲೆ ಕಡಿಮೆ ಆಗಕೆ ಏನ್ ಕಾರಣ? ಯಾವ ದೇಶದಿಂದ ಎಷ್ಟು ಮುಸುಕಿನ ಜೋಳ ಬಂತು? ಯಾವ ರೇಟಿಗೆ ಬಂತು? ತಾಳೆ ಎಣ್ಣೆ ಯಾವ ರೇಟಿಗೆ ಬಂತು? ಇದು ನಮ್ಮ ದೇಶದ ಬುದ್ಧಿಜೀವಿಗಳಿಗಿಂತ ಹೆಚ್ಚಾಗಿ ರೈತ ಕಾರ್ಯಕರ್ತರಿಗೆ ಹೆಚ್ಚು ಮಾಹಿತಿ ಇದೆ.ಬೇವಿನ ಮೇಲೆ, ಅರಿಶಿನದ ಮೇಲೆ, ಅಮೆರಿಕಾದ ಕಂಪನಿಗಳು ಪೇಟೆಂಟ್ ಮಾಡಿಸಿದವು ಅನ್ನೋ ಮಾತನ್ನ ಕೇಳತೀವಿ. ಜನ ನಮ್ಮದೇನನ್ನೊ ಯಾರೋ ಕದೀತಾ ಇದಾರೆ ಅನ್ನೋ ಆತಂಕ ವ್ಯಕ್ತಪಡಿಸೋದನ್ನ ಕಾಣತೀವಿ. ವಾಸ್ತವವಾಗಿ ಪೇಟೆಂಟ್ ವಿಷಯದಲ್ಲಿ ನಮ್ಮ ರೈತರಿಗೆ ಯಾವ ತರಹ ಅನ್ಯಾಯವಾಗ್ತಾ ಇದೆ?ನಮ್ಮಲ್ಲಿರೋವಂಥ ನೈಸರ್ಗಿಕ ಸಂಪತ್ತನ್ನು ನಾವೇ ಬಳಸಲಿಕ್ಕೆ ಆಗದಂಥ ವ್ಯವಸ್ಥೆ ತರೋದು ಪೇಟೆಂಟಿನ ಉದ್ದೇಶ. ಉದಾ : ಬೇವು. ಅಮೇರಿಕಾದಲ್ಲಿ ಒಂದು ಕಂಪನಿ ನೀಮ್ ಪೇಟೆಂಟ್ ಯಾವ ರೀತಿ ಮಾಡಿದೆ ಅಂದರೆ, ಆ ಬೇವಿನ ಬೀಜದಿಂದ ಯಾವ್ಯಾವ ಪ್ರಾಸೆಸ್‍ನಿಂದ ಏನೇನು ಮಾಡಬಹುದು, ಬೇರೆಬೇರೆ ಡಿಗ್ರೀಸ್‍ನಲ್ಲಿ ಏನು ಮಾಡಬಹುದು ಇತ್ಯಾದಿ ಎಲ್ಲಾ ಪ್ರಾಸೆಸನ್ನೂ ಪೇಟೆಂಟ್ ಮಾಡಿ ಬಿಟ್ಟಿದೆ. ಒರಿಜಿನಲ್ ಡಾಕ್ಯುಮೆಂಟ್ ನನ್ನ ಕಡೆ ಇದೆ. ಆ ಪೇಟೆಂಟ್ ಚೌಕಟ್ಟಿಗೆ ನೀವು ಒಪ್ಪಿಗೆ ಕೊಟ್ಟರೆ, ನಿಮ್ಮಲ್ಲಿ ಎಷ್ಟೇ ಬೇವಿನ ಬೀಜ ಇರಲಿ, ಅದನ್ನ ತಗೊಂಡು ನೀವು ಪ್ರಾಸೆಸ್ ಮಾಡಕ್ಕೇ ಆಗಲ್ಲ. ಟ್ರೇಡ್ ರಿಲೇಟೆಡ್ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಅಗ್ರಿಮೆಂಟ್ ರುಜು ಹಾಕೋಕೆ ನಮ್ಮ ಸರಕಾರದವರು, ಇನ್ನೂ ಚರ್ಚೆ ಮಾಡ್ತಾ ಇದಾರೆ. ರುಜು ಹಾಕ್ತು ಅಂತಂದ್ರೆ, ರುಜು ಹಾಕಿದ ದೇಶದಲ್ಲಿ ಏನಾದರೂ ರಿಪಿಟೇಶನ್ಸ್ ಆಫ್ ದಿ ಸೇಮ್ ಪ್ರಾಸೆಸ್ ನಡೆದರೆ, ದಂಡ ಕೊಡಬೇಕು. ದಂಡ ಬಹಳ ದೊಡ್ಡ ಪ್ರಮಾಣದ್ದಾದ್ದರಿಂದ, ನಿಮ್ಮ ಸಂಪನ್ಮೂಲವನ್ನ ನೀವೇ ಬಳಸೋಕೆ ಆಗದೇ ಇರೋ ಸ್ಥಿತಿಗೆ ತಲುಪುತ್ತೀರಿ. ಈಗ ಬಿತ್ತನೆ ಬೀಜಗಳೂ ಪೇಟೆಂಟ್ ಆಗಿವೆ. ಜೆನಿಟಿಕಲಿ ಮಾಡಿಫೈಯ್ಡ್ ಅಂತ ಏನು ಹೇಳ್ತೀವಿ, ಈ ಕುಲಾಂತರಿಗಳಿಂದ ಬೇರೆ ತಳಿಗಳಿಗೂ ಪರಾಗ ಮಾಲಿನ್ಯದಿಂದ ಸೋಂಕು ತಗಲುತ್ತೆ. ಮೊನ್ನೆ ಒಂದು ಕೇಸಾಯಿತು ಕೆನಡಾ ದೇಶದಲ್ಲಿ. ಒಬ್ಬ ಆಗ್ರ್ಯಾನಿಕ್ ಫಾರ್ಮರ್. ಮಾನ್ಸಂಟೊ ಕಂಪನಿಯ ಬೀಜ ಉಪಯೋಗಿಸಿಲ್ಲ. ಆದರೆ ಪಕ್ಕದ ಜಮೀನಿನವನು ಆ ಬೀಜ ಉಪಯೋಗಿಸಿದಾನೆ. ಅದು ಪರಾಗ ಮಾಲಿನ್ಯ ಆಗಿ ಇಲ್ಲಿರೋ ಗುಣಗಳು ಅವನ ಬೆಳೆಗೆ ಬಂದ್ ಬಿಟ್ಟಿವೆ. ಕಂಪನಿ ಅವನ ಮೇಲೆ ಕೇಸ್ ಹಾಕ್ತು. ನೀನು ಕದ್ದಿದೀಯಾ ನಮ್ಮ ಬೀಜ ಅಂತ. ಕೋರ್ಟಲ್ಲಿ ಮಾನ್ಸಾಂಟೊ ಕಂಪನಿ ಪರ ತೀರ್ಮಾನ ಆಯಿತು. ಆ ರೈತ ಜುಲ್ಮಾನೆ ಕಟ್ಟಬೇಕಾಯಿತು. ಈಚೆಗೆ ನಡೆದಿದ್ದು ಇದು. ಸೋ, ಅಲ್ಲಿಗೆ ನಾಗುತ್ತೆ? ನಾವು ನಮ್ಮ ಸ್ವಂತ ತಳಿಗಳನ್ನೇ ಉಪಯೋಗಿಸೋಕೆ ಆಗದೇ ಇರೋ ಸ್ಥಿತಿಗೆ ಬಂದ್ ಬಿಡ್ತೀವಿ. ನಿಮ್ಮ ಸಂಪನ್ಮೂಲಗಳನ್ನ ನೀವೇ ಉಪಯೋಗಿಸೋಕಾಗದೇ ಇರೋದು, ನಿಮ್ಮ ಸ್ವಂತ ತಳೀನ ನೀವೇ ಉಪಯೋಗಿಸೋಕಾಗದೇ ಇರೋದಕ್ಕಿಂತ ಅಪಾಯ ಬೇಕೆ? ಇನ್ನೊಂದು ಅಪಾಯ ಇದೆ. ಯು ಸೀ, ಬಿತ್ತನೆಬೀಜ ಮಾರೋವಾಗ ಟೆಕ್ನಾಲಜಿ ಫೀ ಅಂತ ಚಾರ್ಜ್ ಮಾಡ್ತಾರೆ. ರಾಯಲ್ಟಿ ಅಂತ ಚಾರ್ಜ್ ಮಾಡೋಲ್ಲ. ಈಗ ಮಾನ್ಸಾಂಟೊ ಕಂಪನಿ ಬಿಟಿ ಹತ್ತಿ. 450 ಗ್ರಾಂಗೆ 1600 ರೂಪಾಯಿ. ಯಾಕೆ 1600 ಅಂದರೆ, ಟೆಕ್ನಾಲಜಿ ಫೀಅಂತಾರೆ. ಇಟ್ಸ್ ಆಲ್‍ಮೋಸ್ಟ್ ರಾಯಲ್ಟಿ ಟು ದ ಪೇಟೆಂಟ್. ಹಂಗಾಗಿ ಕೃಷಿ ದುಬಾರಿಯಾಗೋದು ಒಂದು. ಇನ್ನೊಂದು ಕಡೆ ನಿಮ್ಮ ಬಿತ್ತನೆ ಬೀಜ ಬಳಸೋಕಾಗದೇ ಇರೋದು ಮತ್ತೊಂದು.ರೈತ ಸಂಘವು ಕರ್ನಾಟಕದಲ್ಲಿರೊ ಅನೇಕ ಬಹುರಾಷ್ಟ್ರೀಯ ಬೀಜಕಂಪನಿಗಳ ಮೇಲೆ ಆಕ್ರಮಣ ಮಾಡಿದೆ. ಈ ಕಂಪನಿಗಳನ್ನ ಸಂಘ ತನ್ನ ಮುಖ್ಯ ಎದುರಾಳಿಯನ್ನಾಗಿ ಮಾಡಿಕೊಳ್ಳೋಕೆ ತರ್ಕ ಏನು?ಒಂದು ದೇಶದ ಬಿತ್ತನೆ ಬೀಜದ ಮೇಲೆ ಮತ್ತೊಂದು ದೇಶದ ಕಂಪನಿ ಸಂಪೂರ್ಣ ಹತೋಟಿ ಸಾಧಿಸಿದರೆ, ಆ ದೇಶದ ಸ್ವಾತಂತ್ರ್ಯ ಉಳೀತು ಅಂತೀರಿ? ಅಂಡ್ ಸೀಡ್ ಈಸ್ ದ ಫಸ್ಟ್ ಲಿಂಕ್ ಇನ್ ದಿ ಫುಡ್ ಚೈನ್. ಒಂದು ದೇಶದ ಆಹಾರ ವ್ಯವಸ್ಥೇನ ನಿಯಂತ್ರಣ ಮಾಡೋವಂಥ ಒಂದು ಸ್ಥಾನಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಬಂದು ಕೂತರೆ, ಫುಡ್ ಸಾವರನ್‍ಟಿ ಅಂತ ಏನಂತೀವಿ, ಆಹಾರ ಸಾರ್ವಭೌಮತ್ವ, ಅದು ಹೋಯಿತು. ಅದು ಹೋಯಿತು ಅಂದರೆ ದೇಶದ ಸಾವರನ್‍ಟಿ ಹೋಯಿತು ಅಂತ. ‌(ಲೋಕ ವಿರೋಧಿಗಳ ಜತೆಯಲ್ಲಿ ಕೃತಿಯಿಂದ) (-ರಹಮತ್ ತರಿಕೆರೆ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *