
ನಿಂತಿದ್ದ ಲಾರಿಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಂಕೋಲಾ ತಾಲ್ಲೂಕಿನ ಮಾಸ್ತಿಕಟ್ಟಾ ಬಳಿ ಶನಿವಾರ ನಸುಕಿನಲ್ಲಿ ಸಂಭವಿಸಿದೆ.

ಕಾರವಾರ: ನಿಂತಿದ್ದ ಲಾರಿಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಂಕೋಲಾ ತಾಲ್ಲೂಕಿನ ಮಾಸ್ತಿಕಟ್ಟಾ ಬಳಿ ಶನಿವಾರ ನಸುಕಿನಲ್ಲಿ ಸಂಭವಿಸಿದೆ.
ಸದ್ಯ ಮೃತ ಪ್ರಯಾಣಿಕನ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಆನಂದ್ ಟ್ರಾವೆಲ್ಸ್ ಸಂಸ್ಥೆಯ ಬಸ್ಸೊಂದು ಬೆಂಗಳೂರಿನಿಂದ ಗೋವಾಕ್ಕೆ ಸಂಚರಿಸುತ್ತಿದ್ದಾಗ ಮುಂದಿನ ಟಯರ್ ಸಮಸ್ಯೆಯಿಂದ ದುರಸ್ತಿಗಾಗಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಯ ಹಿಂಭಾಗಕ್ಕೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಗಾಯಾಳುಗಳಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಓರ್ವರ ಸ್ಥಿತಿ ಚಿಂತಾಜನಕವಾಗಿದ್ದು, ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್ಐ ಈ.ಸಿ.ಸಂಪತ್, ಎಎಸ್ಐ ಅಶೋಕ್ ತಳಗಪ್ಪನವರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. (kpc)
