

ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಗಾಳಿಸುದ್ದಿಗಳಿಗೆ ಕನಿಷ್ಟ ಒಂದೆರಡು ವರ್ಷಗಳ ಆಯುಷ್ಯ. ಆದರೆ ಈಗ ಅವರ ಆಪ್ತವಲಯ ಎನ್ನಲಾಗುತಿದ್ದ ಶಿಷ್ಯರು ಇಂದು ಬಿ.ಜೆ.ಪಿ. ಸೇರುವ ಮೂಲಕ ಜನರ ಅನುಮಾನಗಳಿಗೆ ಪುಷ್ಠಿ ನೀಡಿದ್ದಾರೆ.
ಇಂದು ಸಿದ್ಧಾಪುರದಲ್ಲಿ ನಡೆದ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರ ಸಭೆ ಮತ್ತು ಅನ್ಯಪಕ್ಷಗಳ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಸೇರಿರುವವರಲ್ಲಿ ಪ್ರಮುಖರು ಹಲಗೇರಿ ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯ ಈಶ್ವರ್ ನಾಯ್ಕ, ತಾಲೂಕಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಎನ್.ಎಂ, ನಾಯ್ಕ,ರಾಘವೇಂದ್ರ ಶಾಸ್ತ್ರಿ, ರಮಾನಂದ ಹೆಗಡೆ, ಜೆ.ಡಿ.ಎಸ್. ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷ ತಿಮ್ಮಪ್ಪ ಎಂ.ಕೆ. ಪ್ರಮುಖರು. ಇವರಲ್ಲಿ ಬಹುತೇಕರು ದೇಶಪಾಂಡೆ ಬಣದ ಷಣ್ಮುಖ ಗೌಡರ್ ಶಿಷ್ಯರು.
ಬಿ.ಜೆ.ಪಿ. ಸಹಕಾರಿ ಕ್ಷೇತ್ರ, ಗ್ರಾ.ಪಂ. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಹೊಸ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳುತ್ತಿದೆ. ವಾಸ್ತವದಲ್ಲಿ ಬಿ.ಜೆ.ಪಿ. ಯಲ್ಲಿ ಎರಡ್ಮೂರು ಬಣಗಳಿದ್ದಾವಾದರೂ ಆ ಪಕ್ಷದ ಪ್ರಮುಖರು ಪಕ್ಷಕ್ಕೆ ಹೊಸಬರನ್ನು ಆಹ್ವಾನಿಸುತಿದ್ದಾರೆ. ಕಾಂಗ್ರೆಸ್ ನಲ್ಲಿ ಎರಡ್ಮೂರು ಬಣಗಳಿರುವುದು, ಹಣವಂತರು ಅನ್ಯ ಕ್ಷೇತ್ರ- ಊರುಗಳಿಂದ ವಲಸೆ ಬಂದು ಅಭ್ಯರ್ಥಿಗಳಾಗುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಒಡೆದ ಮನೆಯಂತಾಗಿದೆ.
ಶಿರಸಿ ಕ್ಷೇತ್ರ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯ-ದೇಶಗಳಲ್ಲಿ ಜನಸಾಮಾನ್ಯರು, ಬಹುಸಂಖ್ಯಾತ ಬಡವರ್ಗ ಕಾಂಗ್ರೆಸ್ ಪರವಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಮೃಧು ಹಿಂದುಂತ್ವವಾದಿಗಳು, ಅವಕಾಶವಾದಿಗಳು ಪಕ್ಷದಲ್ಲಿದ್ದು ಹಾನಿ ಮಾಡುತಿದ್ದಾರೆ ಎನ್ನಲಾಗುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಅವರ ಶಿಷ್ಯ ವರ್ಗ ಕಾಂಗ್ರೆಸ್ ನಲ್ಲಿದ್ದು ಅನ್ಯ ಪಕ್ಷಗಳಿಗೆ ಸಹಕರಿಸುತಿದ್ದಾರೆ ಎನ್ನುವ ಆರೋಪಗಳೂ ಆಗಾಗ ಕೇಳಿ ಬರುತ್ತಿವೆ. ಇಂದಿನ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ, ಸಂಸದ ಅನಂತ ಕುಮಾರ್ ಹೆಗಡೆ ಹೇಳಿರುವ ಮಾತು ‘ಈವರೆಗೆ ಮನಸು, ಹೃದಯದಲ್ಲಿ ಬಿ .ಜೆ.ಪಿ. ಪರವಾಗಿದ್ದವರು ಈಗ ಅಧೀಕೃತ ಬಿ.ಜೆ.ಪಿ. ಸೇರ್ಪಡೆಯಾಗಿದ್ದಾರೆ.’ ಏನೇನೋ ಅರ್ಥಗಳಿಗೆ ಕಾರಣವಾಗಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರೀಯಿಸಿರುವ ಕೆಲವು ಕಾಂಗ್ರೆಸ್ ಮುಖಂಡರು ಪಕ್ಷದಲ್ಲಿದ್ದು ಹಾನಿ ಮಾಡುವುದಕ್ಕಿಂತ ಹೀಗೆ ಹೊರನಡೆದು ತಮ್ಮ ದಾರಿ ನೋಡಿಕೊಂಡರೆ ಕಾಂಗ್ರೆಸ್ ಗೇ ಅನುಕೂಲ ಎಂದಿದ್ದಾರೆ.



