
ರಾಜ್ಯದಲ್ಲಿ ಸೋಮವಾರದಿಂದ ವಿಧಾನಮಂಡಲದ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಈ ಬಾರಿಯ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ವಿವಾದಿತ ಮಸೂದೆಗಳನ್ನು ಮಂಡನೆ ಮಾಡುವ ಸಾಧ್ಯತೆಗಳಿದ್ದು, ಇದೇ ವೇಳೆ ಸರ್ಕಾರದ ಹಲವು ವೈಫಲ್ಯಗಳನ್ನು ಸಭೆಯಲ್ಲಿ ಎತ್ತಿ ಹಿಡಿಯಲು ವಿರೋಧ ಪಕ್ಷಗಳು ಸಜ್ಜಾಗಿವೆ.

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ವಿಧಾನಮಂಡಲದ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಈ ಬಾರಿಯ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ವಿವಾದಿತ ಮಸೂದೆಗಳನ್ನು ಮಂಡನೆ ಮಾಡುವ ಸಾಧ್ಯತೆಗಳಿದ್ದು, ಇದೇ ವೇಳೆ ಸರ್ಕಾರದ ಹಲವು ವೈಫಲ್ಯಗಳನ್ನು ಸಭೆಯಲ್ಲಿ ಎತ್ತಿ ಹಿಡಿಯಲು ವಿರೋಧ ಪಕ್ಷಗಳು ಸಜ್ಜಾಗಿವೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಮಂಗಳವಾರ ಭಾರತ್ ಬಂದ್’ಗೆ ಕರೆ ನೀಡಿರುವಾಗಲೇ ರಾಜ್ಯ ಸರ್ಕಾರವು ಎಪಿಎಂಸಿ ತಿದ್ದುಪಡಿ ವಿಧೇಯಕ, ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ವಿಧೇಯಕಗಳನ್ನು ವಿಧಾನಪರಿಷತ್’ನಲ್ಲಿ ಮರುಮಂಡನೆ ಮಾಡಿ ಅಂಗೀಕಾರ ಪಡೆಯಲು ಮುಂದಾಗಿದೆ. ಜೊತೆಗೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಹಾಗೂ ಗೋಹತ್ಯ ನಿಷೇಧ ಸೇರಿದಂತೆ ಮಹತ್ವದ ಮಸೂದೆಗಳನ್ನು ಮಂಡಿಸಲು ಸಜ್ಜಾಗಿದ್ದು, ಇಂದು ನಡೆಯುವ ಅಧಿವೇಶನ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಗೋಹತ್ಯೆ ನಿಷೇಧ ಮಸೂದೆ ಮಂಡನೆ, ವಿಧಾನಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ, ಒಂದು ದೇಶ, ಒಂದು ಚುನಾವಣೆ ಚರ್ಚೆ, ಎಲ್ಲಕ್ಕಿಂತಲೂ ಮಿಗಿಲಾಗಿ ವಿಧಾನಪರಿಷತ್ ನಲ್ಲಿ ಸೋಲಾಗಿದ್ದ ಕರ್ನಾಟಕ ಭೂ ಸುಧಾರಣೆ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ವಿರುದ್ಧ ಹೋರಾಡುವ ಜೊತೆಗೆ ನೆರೆ ನಿರ್ವಹಣೆ ವೈಫಲ್ಯ, ರಾಜ್ಯದ ಆರ್ಥಿಕ ಸ್ಥಿತಿಗತಿ ಸೇರಿ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್ ಕೂಡ ಸಿದ್ಧತೆ ನಡೆಸಿದೆ.
ಈ ನಡುವೆ ಸದನದಲ್ಲಿ ರೈತರಿಗೆ ಸಂಬಂಧಿಸಿದ ವಿಚಾರಗಳು ಹಾಗೂ ಪ್ರವಾಹಪೀಡಿತರ ವಿಚಾರಗಳನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಹರಿಹಾಯಲು ಜೆಡಿಎಸ್ ಕೂಡ ಸಜ್ಜುಕೊಂಡಿದೆ.
ಏಳು ದಿನಗಳ ಕಾಲ ನಡೆಯಲಿರುವ ಅಧಿವೇಶನ ಡಿ. 15ಕ್ಕೆ ಮುಕ್ತಾಯವಾಗಲಿದೆ. ಈ ಬಾರಿಯ ಚಳಿಗಾಲದ ಅಧಿವೇಶನ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಕಾರಣವಾಗಲಿದೆ. (kpc)
