ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಗುರುವಾರ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ.
ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಗುರುವಾರ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ. ಹೀಗಾಗಿ ಗುರುವಾರ ರಾಜ್ಯದಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿ ವಿವಿಧ ವಿಭಾಗಗಳ ಸಾರಿಗೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಈ ಸಾರಿಗೆ ನೌಕರರ ಜಾಥಾ ನಾಳೆ ಬೆಳಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾಗಲಿದೆ. ಅಲ್ಲಿಂದ ವಿಧಾನಸೌಧಧವರೆಗೆ ಸಾರಿಗೆ ನೌಕರರು ಜಾಥಾ ಹೊರಡಲಿದ್ದಾರೆ. ಸಾರಿಗೆ ನೌಕರರ ನಡಿಗೆ- ಸರ್ಕಾರಿ ನೌಕರರಾಗುವ ಕಡೆಗೆ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಲಿದ್ದಾರೆ. ಈ ಕಾಲ್ನಡಿಗೆ ಜಾಥಾದಲ್ಲಿ ಸಾರಿಗೆ ನೌಕರರು ಅವರ ಹೆಂಡತಿ ಮಕ್ಕಳೊಂದಿಗೆ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಕೆಎಸ್ ಆರ್ ಟಿಸಿ, ಬಿಎಂಟಿಸಿ ಹಾಗೂ ಎನ್ ಇಕೆಆರ್ ಟಿಸಿ ಸೇರಿ ರಾಜ್ಯದಲ್ಲಿ ಸುಮಾರು ಒಂದು ಲಕ್ಷದ ನಲವತ್ತು ಸಾವಿರ ಸಾರಿಗೆ ನೌಕರರು ಇದ್ದಾರೆ. ಈ ಜಾಥಾದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಂಜಾವಧೂತ ಸ್ವಾಮೀಜಿ ಹಾಗೂ ಚಂದ್ರಶೇಖರ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಇಂದು ವಿಧಾನಸಭೆಯಲ್ಲಿ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ರಾಜ್ಯ ಸರ್ಕಾರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದರಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಲಕ್ಷ್ಮಣ ಸವದಿ
ಸಾರಿಗೆ ನೌಕರರ ನವೆಂಬರ್ ವರೆಗಿನ ಎಲ್ಲಾ ವೇತನ ಬಿಡುಗಡೆ ಮಾಡಲಾಗಿದೆ. ಸಾರಿಗೆ ಇಲಾಖೆಯ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಈಗ ಇಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಬಿ. ಹರ್ಷವರ್ಧನ್, ಕಳೆದ 3-4 ತಿಂಗಳಿಂದ ಸಾರಿಗೆ ನೌಕರರಿಗೆ ವೇತನ ನೀಡಿಲ್ಲ ಎಂಬ ಆರೋಪವಿದೆ, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಸಾರಿಗೆ ಇಲಾಖೆಯ 1.30 ಲಕ್ಷ ನೌಕರರ ನವೆಂಬರ್ ವರೆಗಿನ ವೇತನವನ್ನು ನೀಡಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ 4 ನಿಗಮಗಳು ಸಂಕಷ್ಟದಲ್ಲಿದ್ದಾಗ ನೌಕರರ ವೇತನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆವು, ಅದರಂತೆ ಮುಖ್ಯಮಂತ್ರಿ ಹಣಕಾಸು ಸೌಲಭ್ಯ ಒದಗಿಸಿಕೊಟ್ಟಿದ್ದಾರೆ.
ಅದರಂತೆ ಹಣಕಾಸು ಇಲಾಖೆ 7 ತಿಂಗಳ ಸಂಬಳವನ್ನು ನೀಡಿದೆ. 2 ತಿಂಗಳ ವೇತನ ಶೇಕಡಾ 100ರಷ್ಟು, 4 ತಿಂಗಳ ವೇತನ 25-75ರ ಅನುಪಾತದಲ್ಲಿ, ಮತ್ತೆ ಎರಡು ತಿಂಗಳ ವೇತನ 50-50 ಅನುಪಾತದಲ್ಲಿ ಸರ್ಕಾರ ಕೊಟ್ಟಿದೆ. ನವೆಂಬರ್ ವರೆಗೆ ಎಲ್ಲರ ವೇತನ ನೀಡಲಾಗಿದೆ, ಡಿಸೆಂಬರ್ ತಿಂಗಳ ವೇತನ 8-10 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಯಾರಿಗೂ ವೇತನ ಬಾಕಿ ಇಲ್ಲ” ಎಂದು ಸ್ಪಷ್ಟಪಡಿಸಿದರು.
1.25 ಲಕ್ಷ ನೌಕರರನ್ನು ಸರ್ಕಾರಿ ನೌಕರಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ನಾಳೆ ಅವರು ಧರಣಿ ನಡೆಸುತ್ತಿದ್ದಾರೆ, ಅವರನ್ನು ಕರೆದು ಮಾತುಕತೆ ಮಾಡಿ ಎಂದು ಸದಸ್ಯ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, “ಈ ಹಿಂದೆ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದಾಗ, ಸ್ವತಃ ತಾವು ಅಲ್ಲಿಗೆ ಭೇಟಿ ನೀಡಿ ಮನವಿ ಸ್ವೀಕರಿಸಿದ್ದ, ಕೋವಿಡ್ ಹಿನ್ನೆಲೆಯಲ್ಲಿ ಹಣಕಾಸು ಸಮಸ್ಯೆ ಇರುವುದರಿಂದ ಈಗ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಿರ್ಣಯ ಮಾಡುತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಿದರೆ, ಉಳಿದ ನಿಗಮಗಳಲ್ಲಿ ಅನೇಕ ಮಂದಿ ಇದೇ ಬೇಡಿಕೆ ಇಡಬಹುದು. ಆದ್ದರಿಂದ ಸದ್ಯಕ್ಕೆ ಸರ್ಕಾರದ ಮುಂದೆ ಅವರನ್ನು ಸರ್ಕಾರಿ ನೌಕರರಾಗಿ ಮಾಡುವ ಪ್ರಸ್ತಾಪ ಇಲ್ಲ” ಎಂದು ಸ್ಪಷ್ಟಪಡಿಸಿದರು.
(kpc)