wonder girl geetanajali- ಗೀತಾಂಜಲಿ ಎಂಬ ಬೆಳಕಿನ ಬಾಲೆ

ಈ ವಂಡರ್‌ ಗರ್ಲ್‌ ಬಗ್ಗೆ ಇಂದಿನ ʼಪ್ರಜಾವಾಣಿʼಯಲ್ಲಿ ಪ್ರಕಟವಾದ ನನ್ನ ಅಂಕಣ ಬರಹ ಇದು:15ರ ಹುಡುಗಿ ಗೀತಾಂಜಲಿ ಈ ವಾರ ಅಮೆರಿಕದ “ಟೈಮ್‌” ಪತ್ರಿಕೆಯ ಮುಖಪುಟಕ್ಕೆ ಬಂದು ಸುದ್ದಿಲೋಕದಲ್ಲಿ ಸಂಚಲನ ಮೂಡಿಸಿದ್ದಾಳೆ. ಅವಳನ್ನು “ವರ್ಷದ ಮಗು” ಎಂತಲೂ “ವಿಜ್ಞಾನಿ” “ಸಂಶೋಧಕಿ” ಎಂತಲೂ ಹೆಸರಿಸಿದ್ದರಿಂದ ಎಲ್ಲ ಪ್ರಮುಖ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಕೋರೈಸಿದ್ದಾಳೆ.”ಟೈಮ್ʼ ವಾರಪತ್ರಿಕೆಯ ವರ್ಷದ ವ್ಯಕ್ತಿ ಆಗುವುದೆಂದರೆ ಅದೊಂದು ಜಾಗತಿಕ ಕಳಶ ಎಂದೇ ಬಿಂಬಿತವಾಗಿದೆ. ನೊಬೆಲ್/ಆಸ್ಕರ್ ಗೌರವವೇ ಸಿಕ್ಕಂತೆ ಆ ವ್ಯಕ್ತಿಯ ಬಗ್ಗೆ ಎಲ್ಲ ಮಾಧ್ಯಮಗಳೂ ವೃತ್ತಿಮಾತ್ಸರ್ಯವನ್ನು ಬದಿಗಿಟ್ಟು ಚರ್ಚಿಸುತ್ತವೆ. ಕಳೆದ 93 ವರ್ಷಗಳಿಂದ ಈ ಪತ್ರಿಕೆ ಅಂಥ ಖ್ಯಾತಿಯನ್ನು ಉಳಿಸಿಕೊಂಡು ಬಂದಿದೆ. ಹೆಚ್ಚಿನದಾಗಿ, ಜಾಗತಿಕ ಖ್ಯಾತಿ ಪಡೆದವರೇ ವರ್ಷದ ಕೊನೆಯಲ್ಲಿ ಆ ಪುಟಕ್ಕೆ ಬರುತ್ತಾರೆ. ಕಳೆದ ವರ್ಷ ಸ್ವೀಡನ್ನಿನ 17ರ ಹುಡುಗಿ ಗ್ರೇತಾ ಥನ್‌ಬರ್ಗ್‌ ಹೀಗೇ ವರ್ಷದ ವ್ಯಕ್ತಿಯಾಗಿದ್ದಳು. ಅವಳನ್ನು “ಯುವಶಕ್ತಿಯ ಪ್ರತೀಕ” ಎಂದು ಬಣ್ಣಿಸಲಾಗಿತ್ತು. ಅಷ್ಟೇನೂ ಪ್ರಸಿದ್ಧಿಗೆ ಬಾರದಿದ್ದವರೂ ಅಪರೂಪಕ್ಕೆ “ಟೈಮ್‌” ಮುಖಪುಟಕ್ಕೆ ಬಂದು ಜಗತ್ತಿನ ಗಮನ ಸೆಳೆಯುವುದಿದೆ. 1930ರಲ್ಲಿ ಮೋಹನ್‌ ದಾಸ್‌ ಗಾಂಧಿ ಆ ಖ್ಯಾತಿ ಬಂದಿತ್ತು. ಅವರು ಕೈಗೊಂಡಿದ್ದ ಉಪ್ಪಿನ ಸತ್ಯಾಗ್ರಹ ಅವರನ್ನು ಟೈಮ್ ಮುಖಪುಟಕ್ಕೆ ಕರೆತಂದಿತ್ತು (ಮಹಾತ್ಮಾ ಗಾಂಧಿ ಆಮೇಲೂ ಮೂರು ಬಾರಿ ಟೈಮ್ ಮುಖಪುಟಕ್ಕೆ ಬಂದಿದ್ದಾರೆ).

ನಮ್ಮ ಗೀತಾಂಜಲಿ ರಾವ್ ವಿಶೇಷ ಏನೆಂದರೆ ಅವಳಿಗಾಗಿಯೇ ಎಂಬಂತೆ ಈ ವರ್ಷ ಟೈಮ್ ಪತ್ರಿಕೆ “ವರ್ಷದ ಮಗು” (ಕಿಡ್ ಆಫ್ ದಿ ಯಿಯರ್) ಎಂಬ ಹೊಸದೊಂದು ಶೀರ್ಷಿಕೆಯನ್ನು ಸೃಷ್ಟಿಸಿದೆ. ಅವಳು ತನ್ನ ಒಂದಲ್ಲ ಒಂದು ಹೊಸ ಸಂಶೋಧನೆಯಿಂದಾಗಿ ಅಮೆರಿಕದ ವಿಜ್ಞಾನಿಗಳ ಹಾಗೂ ಮಾಧ್ಯಮಗಳ ಗಮನವನ್ನು ಸೆಳೆಯುತ್ತಿದ್ದಾಳೆ. ಈಗಾಗಲೇ ಅವಳ ಆರು ಸಂಶೋಧನೆಗಳು ಹೆಸರು ಮಾಡಿವೆ.ಐದು ವರ್ಷಗಳ ಹಿಂದೆ ಅವಳು 10ನೇ ಜನ್ಮದಿನಕ್ಕಾಗಿ ತನಗೆ “ಕಾರ್ಬನ್‌ ನ್ಯಾನೊ ಟ್ಯೂಬ್ʼ ಉಡುಗೊರೆ ಬೇಕು” ಎಂದು ಅಮ್ಮ ಭಾರತಿ ರಾವ್ ಮತ್ತು ಅಪ್ಪ ರಾಮರಾವ್ ಅವರನ್ನು ಕೇಳಿದ್ದಳಂತೆ. ಇವಳೇನು ಕೇಳುತ್ತಿದ್ದಾಳೆ ಅಂತ ಅವರಿಬ್ಬರೂ ಬೆಪ್ಪು! ಹೇಗೋ ಪರದಾಡಿ ತರಿಸಿದರು ಅನ್ನಿ. ಈ ಹುಡುಗಿ ಅದರಿಂದ ವಿಜ್ಞಾನಿಗಳೂ ಬೆರಗಾಗುವಂಥ ಚಿಕ್ಕ ಉಪಕರಣವನ್ನು ತಯಾರಿಸಿದಳು. ಅದಕ್ಕೆ ಜೋಡಿಸಿದ ಕಡ್ಡಿಯನ್ನು ನೀರಲ್ಲಿ ಅದ್ದಿದರೆ ಕೆಲವೇ ಕ್ಷಣಗಳಲ್ಲಿ ಆ ನೀರಿನಲ್ಲಿ ಸೀಸದ ವಿಷ ಎಷ್ಟಿದೆ ಎಂಬುದನ್ನು ಅಳೆದು, ಬ್ಲೂಟೂಥ್ ಮೂಲಕ ಮೊಬೈಲ್ನಲ್ಲಿ ತೋರಿಸುತ್ತದೆ. ಅಮೆರಿಕದ ಹಲವು ಊರುಗಳ ನೀರಲ್ಲಿ ಸೀಸದ ಪ್ರಮಾಣ ತುಸು ಜಾಸ್ತಿ ಇರುತ್ತದೆ. ದೀರ್ಘ ಕಾಲ ಅದೇ ನೀರನ್ನು ಬಳಸುತ್ತಿದ್ದರೆ ರಕ್ತದಲ್ಲಿ ಸೀಸ ಶೇಖರವಾಗುತ್ತ ಬುದ್ಧಿ ತುಸು ಮಂಕಾಗುತ್ತದೆ. ಹಿಂದೆ ರೋಮ್ ರಾಜಮನೆತನದವರು ಸೀಸಲೋಹದಿಂದ ತಯಾರಿಸಿದ ಪಾತ್ರೆಯಲ್ಲೇ ಪೇಯ/ಪಾಯಸ ಸೇವಿಸುತ್ತಿದ್ದುದಕ್ಕೇ ಆ ಸಾಮ್ರಾಜ್ಯ ಎಕ್ಕುಟ್ಟಿ ಹೋಯಿತೆಂದು ಹೇಳಲಾಗುತ್ತಿದೆ. ನಮ್ಮಲ್ಲಿ ಗಣೇಶ ಮೂರ್ತಿಗೆ ಬಳಿಯುವ ಬಣ್ಣದಲ್ಲೂ ಸೀಸಪಾಷಾಣ ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಗೊತ್ತಲ್ಲ? ಮೊನ್ನೆಯಷ್ಟೇ ಆಂಧ್ರ ಪ್ರದೇಶದ ಏಲೂರಿನ 560 ಜನರು ಏಕ್‌ದಂ ಕಾಯಿಲೆ ಬಿದ್ದಿದ್ದಕ್ಕೆ ಕಾರಣ ಹುಡುಕಿದಾಗ ಅವರ ರಕ್ತದಲ್ಲಿ ಸೀಸ ಮತ್ತು ನಿಕ್ಕೆಲ್ ಪಾಷಾಣ ಅತಿಯಾಗಿ ಇದ್ದುದೇ ಕಾರಣ ಎಂದು ದಿಲ್ಲಿಯ AIIMS ತಜ್ಞರು ಹೇಳಿದ್ದಾರೆ. ಅಮೆರಿಕದ ಕೊಲರಾಡೊ ಪ್ರಾಂತದಲ್ಲಿ ವಾಸಿಸುತ್ತಿರುವ ಗೀತಾಂಜಲಿಯ ಅಪ್ಪ-ಅಮ್ಮ ಆಗಾಗ ತಮ್ಮ ನಲ್ಲಿಯ ನೀರನ್ನು ಪರೀಕ್ಷೆಗೆ ಕಳಿಸುತ್ತ, ಅದರ ಫಲಿತಾಂಶ ಯದ್ವಾತದ್ವಾ ಬರುತ್ತಿರುವುದಕ್ಕೆ ತಂತಮ್ಮಲ್ಲೇ ಚರ್ಚಿಸುವುದನ್ನು ಈ ಹುಡುಗಿ ಗಮನಿಸುತ್ತಿದ್ದಳು. ಇವಳು ತಯಾರಿಸಿದ ʼಟೆಥಿಸ್ʼ ಸೀಸಪರೀಕ್ಷಾ ಸಾಧನಕ್ಕೆ 25ಸಾವಿರ ಡಾಲರ್ ಬಹುಮಾನ ಬಂತು. ಅಮೆರಿಕದ ಥ್ರೀಎಮ್ ಕಂಪನಿಯ ಇವಳ ಬೆಂಬಲಕ್ಕೆ ನಿಂತಿತು. ಒಂದರ ಮೇಲೊಂದು ಪುರಸ್ಕಾರ ಬರತೊಡಗಿದವು. ಗೀತಾಂಜಲಿಯ ಸಂಶೋಧನೆಗಳು ಯಾವುದೇ ಒಂದು ವಿಜ್ಞಾನ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅದು ಕೆಮಿಸ್ಟ್ರಿ, ಐಸಿಟಿ, ಪರಿಸರವಿಜ್ಞಾನ, ನ್ಯಾನೊಸೈನ್ಸ್, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಎಲ್ಲವುಗಳ ಸಂಗಮದಂತೆ, ವಿಜ್ಞಾನದ ನಾಳಿನ ನೀಲನಕ್ಷೆಯಂತೆ ಕಾಣುತ್ತವೆ. ನೋವುಶಮನದ ಮಾತ್ರೆಗಳನ್ನು ಚಟವಾಗದಂತೆ ತಡೆಯಲು ಇವಳು ಶೋಧಿಸಿದ ʼಎಪಿಯೋನ್ʼ ಸಾಧನ ವೈದ್ಯರಿಗೆ ನೆರವಾಗುತ್ತದೆ. ಮೊಬೈಲ್ ನಲ್ಲಿ ಹುಡುಗಿಯರನ್ನು ಚುಡಾಯಿಸುವ, ಟ್ರೋಲ್ ಮಾಡುವ ಕೇಡಿಗಳನ್ನು ಪತ್ತೆ ಹಚ್ಚಲೆಂದೇ ಇವಳು ರೂಪಿಸಿದ “ಸೈಬರ್ ಬುಲ್ಲಿ” app ಯುವತಿಯರಿಗೆ ನೆರವಾಗುತ್ತಿದೆ.ಇವಳ ಚುರುಕಿನ, ಸ್ಫುಟವಾದ ಮಾತುಗಳನ್ನು, ವಾಗ್ಝರಿಯನ್ನು ಕೇಳುವುದೇ ಚಂದ. ಪ್ರತಿಷ್ಠಿತ ಟೆಡ್ ವೇದಿಕೆಯಲ್ಲಿ ಇವಳ ಮೂರು ಉಪನ್ಯಾಸಗಳು ಆಗಲೇ ಸಾಕಷ್ಟು ಜನಪ್ರಿಯವಾಗಿವೆ. 2018ರ ಆಗಸ್ಟ್‌ ತಿಂಗಳಲ್ಲಿ ಈ ಪುಟ್ಟಿ ಚೆನ್ನೈಯಲ್ಲಿ ಕೊಟ್ಟ ಟೆಡ್ ಭಾಷಣದಲ್ಲಿ ಕಂಡುಬರುವ ಪ್ರೌಢಿಮೆ, ಲೋಕಜ್ಞಾನ, ಸಾಮಾನ್ಯ ಭಾರತೀಯರ ಬಗೆಗಿನ ಕಳಕಳಿ, ಆತ್ಮವಿಶ್ವಾಸ ಅನುಪಮವಾದುದು. ನೋಡಲೇಬೇಕಾದ ಆ ಉಪನ್ಯಾಸದ ಲಿಂಕ್‌ ಇದು:https://www.youtube.com/watch?v=GBEPYDLD3vgಇವಳೊಂದಿಗೆ ಮಾತುಕತೆ ನಡೆಸಿದ ಪ್ರತಿಷ್ಠಿತ ಸಂಸ್ಥೆಗಳು, ವ್ಯಕ್ತಿಗಳು ನಿಬ್ಬೆರಗಾಗಿದ್ದಿದೆ. 2017ರ ಅಂಥದ್ದೊಂದು ವಿಡಿಯೊ ಇಲ್ಲಿದೆ. https://www.youtube.com/watch?v=n3cW3jvZ8ksಟೈಮ್ ಪತ್ರಿಕೆ ಖ್ಯಾತ ಹಾಲಿವುಡ್ ನಟಿ ಏಂಜಲೀನಾ ಜೋಲಿಯ ಮೂಲಕ ಇವಳ ಸಂದರ್ಶನ ಮಾಡಿಸಿದೆ. ಭಾರತೀಯರ ಅಂತಸ್ಸತ್ವ ವಿವಿಧ ದೇಶಗಳಲ್ಲಿ ಹೇಗೆ ಪ್ರಜ್ವಲವಾಗಿ ಬೆಳಗುತ್ತದೆ ಎಂಬುದಕ್ಕೆ ದಿನದಿನವೂ ಉದಾಹರಣೆಗಳ ಪಟ್ಟಿ ಬೆಳೆಯುತ್ತಿದೆ. ಅಮೆರಿಕದ ಎಳೆಯರ ಪ್ರತಿಭೆಯನ್ನು ಅಳೆಯಹೊರಟ ಥ್ರೀಎಮ್ ಸ್ಪರ್ಧೆಯಲ್ಲಿ ಕೊನೆಯ ಸುತ್ತಿಗೆ ಬಂದ ಹತ್ತು ಮಕ್ಕಳಲ್ಲಿ ಐವರು ಭಾರತೀಯ ಮೂಲದವರೇ ಆಗಿದ್ದರು!ಅವರ ಪೈಕಿ ಗೀತಾಂಜಲಿ ಏಕೆ ವಿಶೇಷ ಎಂದರೆ, ವಿಜ್ಞಾನದ ಅನೇಕ ಶಾಖೆಗಳನ್ನು ಸಮಗ್ರವಾಗಿ ನೋಡುವ ಪ್ರತಿಭೆ ಹಾಗೂ ವಯಸ್ಸಿಗೆ ಮೀರಿದ ಸಾಮಾಜಿಕ ಕಳಕಳಿ. ಅದಕ್ಕೇ ಇರಬೇಕು, ಇವಳನ್ನು ನಾಳಿನ ಜಗತ್ತಿನ ಭರವಸೆಯ ಕಿರಣ ಎಂಬಂತೆ ನ್ಯೂಯಾರ್ಕಿನ ವಾರಪತ್ರಿಕೆ ಬಿಂಬಿಸಿದೆ.

ಇವಳ ಸಂಶೋಧನೆಗಳಿಗೆ ಹೆಚ್ಚಿನ ನೆರವು ನೀಡಲು ಭಾರತದ ಅನೇಕ ವಿಜ್ಞಾನ ಸಂಸ್ಥೆಗಳು ಮುಂದೆ ಬಂದವು. “ಅವೆಲ್ಲ ನನಗ್ಯಾಕೆ ಬೇಕು? ಅಲ್ಲೇ ಅದೆಷ್ಟು ಎಳೆ ಪ್ರತಿಭೆಗಳಿವೆ ಅವರನ್ನು ಪತ್ತೆ ಹಚ್ಚಿ ಪ್ರೋತ್ಸಾಹಿಸಬೇಕಲ್ಲವಾ? ನಾನು ಸಾಧಿಸಬಲ್ಲೆ ಎಂದರೆ ಯಾರು ಬೇಕಾದರೂ ಸಾಧಿಸಬಹುದು” ಎನ್ನುತ್ತಾಳೆ ಗೀತಾಂಜಲಿ. “ಭಾರತದಲ್ಲಿ ನಿನ್ನ ಆದರ್ಶ ವ್ಯಕ್ತಿ ಯಾರಮ್ಮಾ?” ಕೇಳಿದರೆ, “ಅನೇಕರಿದ್ದಾರೆ; ಅದರಲ್ಲೂ ಇಂದಿರಾ ಗಾಂಧಿಯವರ ಜನ್ಮ ದಿನವೇ ನನ್ನದೂ” ಎನ್ನುತ್ತಾಳೆ. ಫೋಬ್ಸ್ ಪತ್ರಿಕೆಯ ಪ್ರಕಾರ, ಇವಳು ವಿವಿಧ ದೇಶಗಳ 30 ಸಾವಿರ ಮಕ್ಕಳಿಗೆ ವಿಜ್ಞಾನದ ಮಾರ್ಗದರ್ಶನ ನೀಡುತ್ತಿದ್ದಾಳೆ. ಭಾರತದಲ್ಲೂ ಎಳೆ ಪ್ರತಿಭೆಗಳನ್ನು ಹುಡುಕಲು ಏನೆಲ್ಲ ಯೋಜನೆಗಳು, appಗಳು ಜಾರಿಗೆ ಬಂದಿವೆ. ಸಂಶೋಧನ ಬುದ್ಧಿಗೆ ಸಾಣೆ ಹಿಡಿಯಲು ಅಟಲ್ ಟಿಂಕರಿಂಗ್ ಲ್ಯಾಬ್ ಗಳಿವೆ. ಕರ್ನಾಟಕದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇದೀಗಷ್ಟೇ ಯುವಜನರಲ್ಲಿ ವಿಜ್ಞಾನ ಸಂಶೋಧನಾ ಆಸಕ್ತಿ ಮತ್ತು ಸಂವಹನ ಸಾಮರ್ಥ್ಯವನ್ನು ಗುರುತಿಸಲೆಂದು ಹೊಸ ಸ್ಪರ್ಧೆಗಳನ್ನು ಏರ್ಪಡಿಸಿದೆ. ವಿಜ್ಞಾನ ವಿಷಯ ಕುರಿತು ಕ್ಯಾಮರಾ ಎದುರು ಚುರುಕಾಗಿ ಮಾತಾಡಬಲ್ಲ ಯುವಪ್ರತಿಭೆಗಳಿಗೂ ಇದೇ ಮೊದಲ ಬಾರಿಗೆ ೫೦ ಸಾವಿರ ರೂಪಾಯಿಗಳ ಬಹುಮಾನ ಘೋಷಣೆಯಾಗಿದೆ (ಹೆಚ್ಚಿನ ಮಾಹಿತಿಗೆ kstacademy.in ಜಾಲತಾಣವನ್ನು ನೋಡಬಹುದು). ವಿಜ್ಞಾನದ ಪ್ರತಿಭೆಗೆ ನೀರೆರೆಯುವ ಕೆಲಸವಂತೂ ಆರಂಭವಾಗಿದೆ. ಮೊಳಕೆ ಚಿಗುರುತ್ತಲೂ ಇರಬಹುದು. ಅಷ್ಟಾದರೆ ಸಾಲದು; ಚಿಗುರಿಗೆ ಪೋಷಕಾಂಶ ಸಲೀಸಾಗಿ ಸಿಗುತ್ತಿರಲೆಂದೂ ಅಂಥ ಪ್ರತಿಭೆಯನ್ನು ಬೇರೆಯವರು ಹೈಜಾಕ್ ಮಾಡದಿರಲೆಂದೂ ಆಶಿಸಬೇಕಷ್ಟೆ. (ಗ್ರಾಫಿಕ್‌ ಕೃಪೆ: ಪ್ರಜಾವಾಣಿ)* [ಪೂರಕ ಮಾಹಿತಿ: ಗೀತಾಂಜಲಿ ತನ್ನ ವಯಸ್ಸಿನ ಇತರೆಲ್ಲ ಮಕ್ಕಳಂತೆ ಸಹಜ ಚಟುವಟಿಕೆಗಳಲ್ಲೂ ಚುರುಕಾಗಿದ್ದಾಳೆ. ಕ್ರೀಡೆಗಳಲ್ಲಿ ಫೆನ್ಸಿಂಗ್ ಅವಳಿಗೆ ಜಾಸ್ತಿ ಇಷ್ಟ. “ತುಂಬಾ ತಲೆದಿಂಬುಗಳನ್ನು ತೂತು ಮಾಡಿದ್ದೇನೆ” ಎಂದು ಒಂದು ಕಡೆ ಹೇಳಿಕೊಂಡಿದ್ದಾಳೆ.

ಅಡುಗೆಮನೆಯಲ್ಲಿ ಬೇಕಿಂಗ್ ಅಂದರೆ (ನಾನಾ ಬ್ರೆಡ್ ಮತ್ತು ಕೇಕ್ ಬೇಯಿಸುವುದು) ಅವಳಿಗೆ ಇಷ್ಟ. ಊರು ಸುತ್ತುವುದು ಇಷ್ಟ. ಬರವಣಿಗೆ ತುಂಬ ಇಷ್ಟ: ತನ್ನ ತಮ್ಮನ ತುಂಟಾಟ ಕುರಿತು “ಬೇಬಿ ಬ್ರದರ್ ವಂಡರ್ಸ್” ಎಂಬ ಪುಸ್ತಕ ಬರೆದಿದ್ದಾಳೆ. ಇವರ ಅಪ್ಪ-ಅಮ್ಮ ಎಲ್ಲಿಯವರು ಎಂಬುದಕ್ಕೆ ಎಲ್ಲೂ ನಿಖರ ಮಾಹಿತಿ ಸಿಕ್ಕಿಲ್ಲ (ಗೊತ್ತಿದ್ದವರು ತಿಳಿಸಿ ಪ್ಲೀಸ್). ಅವರು ಮಂಗಳೂರಿನವರು ಎಂದು ಆ ಊರಿನ ವೆಬ್ಸೈಟ್ ಒಂದರಲ್ಲಿ ಹೇಳಲಾಗಿದೆ ಹೊರತೂ ಅದಕ್ಕಿಂತ ಹೆಚ್ಚಿನ ಮಾಹಿತಿಯೇನೂ ಇಲ್ಲ. ಅಮ್ಮ ಭಾರತಿ ರಾವ್ E-470 ಹೆಸರಿನ ಪಬ್ಲಿಕ್ ಹೈವೇ consultant ಆಗಿದ್ದಾರೆಂಬುದು ಖಚಿತವಾಗಿದೆ. ಏಕೆಂದರೆ ಗೀತಾಂಜಲಿಗೆ ಟೈಮ್ ಮ್ಯಾಗಝಿನ್ ಮುಖಪುಟ ಪುರಸ್ಕಾರ ಸಿಕ್ಕಿತೆಂದು ಆ ಹೈವೇ ಕಂಪನಿಯ ಫೇಸ್ಬುಕ್ ಪುಟದಲ್ಲಿ ಅಭಿನಂದನೆ ಸಲ್ಲಿಸಲಾಗಿದೆ.]*ಆಸ್ಕರ್‌ ವಿಜೇತ ಹಾಲಿವುಡ್‌ ನಟಿ ಏಂಜಲಿನಾ ಜೋಲಿ ವೈದ್ಯಕೀಯ ವಿಜ್ಞಾನದ ಒಂದು ವಿಶಿಷ್ಟ ದಾಖಲೆಗೆ ತನ್ನನ್ನು ಒಡ್ಡಿಕೊಂಡಿದ್ದಾರೆ. ಭವಿಷ್ಯದಲ್ಲಿ ಈಕೆಗೆ ಸ್ತನಕ್ಯಾನ್ಸರ್‌ ಬರುವ ಸಾಧ್ಯತೆ ಶೇ. 87ರಷ್ಟು ಇದೆಯೆಂದು ಡಾಕ್ಟರ್‌ ಹೇಳಿದ್ದರಿಂದ ಅಂಥ ಕಂಟಕ ಬರುವ ಮೊದಲೇ ಆಕೆ ತನ್ನ ಎರಡೂ ಸ್ತನಗಳನ್ನು ತೆಗೆಸಿಕೊಂಡಿದ್ದೂ ಅಲ್ಲದೆ, ತಾನು ಆ ಶಸ್ತ್ರಕ್ರಿಯೆ ಮಾಡಿಸಿಕೊಂಡಿದ್ದೇನೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು ಕೂಡ. ಅದರ ಹಿಂದಿನ ವಿಜ್ಞಾನದ ಬಗ್ಗೆ “ಜೋಲಿಕೆ ಪೀಛೆ ಕ್ಯಾ ಹೈ?” ಎಂಬ ಶಿರೋನಾಮೆಯಲ್ಲಿ ನನ್ನದೊಂದು ವಿಜ್ಞಾನ ಅಂಕಣ ಆರು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. -ನಾಗೇಶ್ ಹೆಗಡೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *