ನಾಡಿನ ಖ್ಯಾತ ಹಿರಿಯ ಉದ್ಯಮಿ, ಶಿಕ್ಷಣ ತಜ್ಞ, ಸಮಾಜ ಸೇವಕ, ಆರ್ ಎನ್ ಎಸ್ ಗ್ರೂಪ್ ಸಂಸ್ಥಾಪಕ ಡಾ. ಆರ್ ಎನ್ ಶೆಟ್ಟಿ ಗುರುವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಬೆಂಗಳೂರು: ನಾಡಿನ ಖ್ಯಾತ ಹಿರಿಯ ಉದ್ಯಮಿ, ಶಿಕ್ಷಣ ತಜ್ಞ, ಸಮಾಜ ಸೇವಕ, ಆರ್ ಎನ್ ಎಸ್ ಗ್ರೂಪ್ ಸಂಸ್ಥಾಪಕ ಡಾ. ಆರ್ ಎನ್ ಶೆಟ್ಟಿ ಗುರುವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಆರ್. ಎನ್. ಶೆಟ್ಟಿ ಎಂದೇ ಜನಪ್ರಿಯರಾಗಿದ್ದ ಡಾ. ರಾಮ ನಾಗಪ್ಪ ಶೆಟ್ಟಿ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ್ದರು. ಮುರುಡೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತಾಧಿಕಾರಿಯಾಗಿ ಈ ಮುರುಡೇಶ್ವರವನ್ನು ಪ್ರಮುಖ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಅವರದು. ಮುರುಡೇಶ್ವರದ ಸಮುದ್ರ ತೀರದಲ್ಲಿ 123 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಿದ್ದರು.
ಆರ್ ಎನ್ ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಕೃಷಿಕ ಮನೆತನದಲ್ಲಿ ಜನಿಸಿದ ಆರ್.ಎನ್. ಶೆಟ್ಟಿ ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೋಟೆಲ್ ಉದ್ಯಮ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು ಎಂದು ಮುಖ್ಯಮಂತ್ರಿ ಕಚೇರಿ ಟ್ವಿಟ್ಟರ್ ಖಾತೆಯಲ್ಲಿ ಸ್ಮರಿಸಿಕೊಂಡಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಸಹ ಔಪಚಾರಿಕವಾಗಿ ಮುಗಿಸದ ಆರ್ ಎನ್ ಶೆಟ್ಟಿಯವರು ಉದ್ಯಮ, ಶಿಕ್ಷಣ, ಸಮಾಜಸೇವೆ ಕ್ಷೇತ್ರಗಳಲ್ಲಿ ಮಾಡಿದ ಕೆಲಸ, ಸಾಧನೆ ಅಪಾರ. ಆರ್ ಎನ್ ಶೆಟ್ಟಿ ಸಾಮ್ರಾಜ್ಯ ಎಂದೇ ಜನಪ್ರಿಯವಾಗುವ ರೀತಿಯಲ್ಲಿ ಅವರು ಅನೇಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದರು. (kpc)