ನಾನು ,
ನಿನ್ನ ಬಾಯಿಯ ರುಚಿಗಾಗಿ,
ಧ್ವನಿಯ ಧೈರ್ಯಕ್ಕಾಗಿ, ಹೆರಳಿನ ಸಾಂತ್ವನಕ್ಕಾಗಿ
ಹಾತೊರೆಯುತ್ತಿದ್ದೇನೆ ಒಂದೇಸವನೆ.
ಒಂದು ಮಾತೂ ಆಡದೇ, ಅಪಾರ ಹಸಿವಿನೊಂದಿಗೆ
ಸುತ್ತುತ್ತಿದ್ದೇನೆ ನೀನು ಓಡಾಡಿದ ಬೀದಿಗಳನ್ನ.
ತಣಿಸುತ್ತಿಲ್ಲ ಈಗ ರೊಟ್ಟಿ ನನ್ನ ಹಸಿವನ್ನು,
ಮತ್ತೆ ಮತ್ತೆ ತಲ್ಲಣಕ್ಕೆ ನೂಕುತ್ತಿದೆ ಮುಂಜಾವು.
ಅಲೆದಾಡುತ್ತಿದ್ದೇನೆ ಇಡೀ ದಿನ
ನಿನ್ನ ಬಳಕುವ ಮಾಂತ್ರಿಕ ಹೆಜ್ಜೆಗಳ
ಸುಳಿವು ಹುಡುಕುತ್ತ.
ನಿನ್ನ ತೆಳ್ಳೆನೆ ಹಾರ್ದಿಕ ನಗೆ,
ಸೊಕ್ಕಿನ ಗೋಧಿ ಬಣ್ಣದ ನೀಳ ತೋಳುಗಳು,
ಅಚ್ಚುಕಟ್ಟಾದ, ನಾಜೂಕು ಬೆರಳಿನ ಉಗುರುಗಳು
ಹಿಂಡುತ್ತಿವೆ ನನ್ನ ಪ್ರಾಣ .
ನೆಂದ ಬಾದಾಮಿಯ ಒಮ್ಮೆಲೇ ಮುಕ್ಕುವಂತೆ
ನಿನ್ನ ಚಂದ ಮಾಟವನ್ನು ಇಡಿಯಾಗಿ
ನುಂಗಿಬಿಡಬೇಕು ನಾನು.
ನಿನ್ನ ಮೈಯೊಳಗಿನ
ಮಿಂಚಿನ ಬೆಳಕು ಬೇಕು ನನ್ನ ಹಸಿವಿಗೆ,
ನಿನ್ನ ಧೀಮಾಕಿನ ಚೆಹರೆಯ
ಸಾರ್ವಭೌಮ ಮೂಗನ್ನ ಕಚ್ಚಬೇಕು ನಾನು,
ನಿನ್ನ ಕಣ್ರೆಪ್ಪೆಗಳ ಕ್ಷಣಿಕ ಉಪ್ಪಿನ ನೆರಳನ್ನು
ನೆಕ್ಕಬೇಕು ನಾನು.
ಧಾವಿಸುತ್ತಿದ್ದೇನೆ ಈ ಹಸಿವೆಯಲ್ಲಿಯೇ,
ಉಸಿರಾಡುತ್ತ ದೀರ್ಘವಾಗಿ ಮುಸ್ಸಂಜೆಯನ್ನು,
ನಿನ್ನ ಹುಡುಕುತ್ತ,
ನಿನ್ನ ಬಿಸಿಯೆದೆಯ ಬಯಸುತ್ತ
ಕಾಡುಬೆಕ್ಕಿನ ಹಾಗೆ
Quitratue ನ ಬರಡು ನೆಲದಲ್ಲಿ.
ನೆರೂಡ
- Quitratue : ಚಿಲಿ ದೇಶದ ಪುಟ್ಟ ಹಳ್ಳಿ