

ಯಡಿಯೂರಪ್ಪನವರೇ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಿ.
“ಹದಿನೈದು ವರ್ಷಗಳಷ್ಟು ಹಿಂದಿನ ಭ್ರಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪನವರ ವಿರುದ್ಧ ಲೋಕಾಯುಕ್ತ ತನಿಖೆಗೆ ಅನುಮತಿ ನೀಡಿರುವ ರಾಜ್ಯ ಉಚ್ಚ ನ್ಯಾಯಾಲಯದ ಇಂದಿನ ಆದೇಶದ ಹಿನ್ನೆಲೆಯಲ್ಲಿ ಬಂಧನಕ್ಕೂ ಒಳಗಾಗುವ ಸಾಧ್ಯತೆ ಇರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಕೂಡಲೇ ರಾಜೀನಾಮೆ ನೀಡಬೇಕೆಂದು “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷ ಆಗ್ರಹಿಸುತ್ತದೆ.

2006ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಅಪಾರ ಭ್ರಷ್ಟಾಚಾರದಲ್ಲಿ ತೊಡಗಿ ಎಗ್ಗಿಲ್ಲದೆ ಸರ್ಕಾರಿ ಜಾಗಗಳನ್ನು–ಪ್ರಮುಖವಾಗಿ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಅಂದಿನ ದಿನಗಳಲ್ಲೇ ನೂರಾರು ಕೋಟಿ ರೂಪಾಯಿಗಳ ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು–ಖಾಸಗಿಯವರಿಗೆ ಅಕ್ರಮವಾಗಿ ಮತ್ತು ಭ್ರಷ್ಟಾಚಾರವೆಸಗಿ ಡಿನೋಟಿಫೈ ಮಾಡಿದ್ದರು. ಅದರ ಬಗ್ಗೆ ವಾಸುದೇವ ರೆಡ್ಡಿಯೆಂಬುವ ಬೆಳ್ಳಂದೂರಿನ ಗ್ರಾಮಸ್ಥರು 2015ರಲ್ಲಿ ಭ್ರಷ್ಟಾಚಾರ ನಿಗ್ರಹಕ್ಕಾಗಿ ನೇಮಿಸಲಾಗಿದ್ದ ವಿಶೇಷ ನ್ಯಾಯಾಲಯದ ಮುಂದೆ ದೂರು ದಾಖಲಿಸಿದ್ದರು. ಅದರಲ್ಲಿ ಯಡಿಯೂರಪ್ಪನವರ ವಿರುದ್ದ ಭ್ರಷ್ಟಾಚಾರದ ತನಿಖೆಯನ್ನು ಕೈಗೊಳ್ಳುವಂತೆ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಆ ಪ್ರಕರಣವನ್ನು ರದ್ದುಗೊಳಿಸಲು ಕೋರಿ ತದನಂತರದಲ್ಲಿ ಯಡಿಯೂರಪ್ಪನವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿರುವ ಜಾನ್ ಮೈಕೆಲ್ ಡಿಕೂನ್ಹರವರು ಇಂದಿನ ತಮ್ಮ ಆದೇಶದಲ್ಲಿ ಯಡಿಯೂರಪ್ಪನವರ ಮನವಿಯನ್ನು ತಿರಸ್ಕರಿಸಿದ್ದು, ಲೋಕಾಯುಕ್ತ ಪೊಲೀಸ್ ತನಿಖೆಗೆ ಅನುಮತಿ ನೀಡಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯ 13(1)(d) ಅಡಿಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಈ ಮೊಕದ್ದಮೆಯು ದಾಖಲಾಗಿರುವ ಕಾರಣ ತನಿಖಾ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಆರೋಪಿತರನ್ನು ಬಂಧಿಸಿ ವಿಚಾರಣೆ ಮಾಡಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವುದರಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದು ಅನುಚಿತವಾಗುತ್ತದೆ. ಹಾಗಾಗಿ ತಮ್ಮ ಹುದ್ದೆಯ ಗೌರವವನ್ನು ಕಾಪಾಡುವ ಮತ್ತು ನಿಷ್ಪಕ್ಷಪಾತ ತನಿಖೆ ಆಗಲು ಸಹಕರಿಸುವ ದೃಷ್ಟಿಯಿಂದ ಮಾನ್ಯ ಯಡಿಯೂರಪ್ಪನವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು “ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷ ಆಗ್ರಹಿಸುತ್ತದೆ.”
ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
22-12-2020.
