

ಚರಕವನ್ನು ನಂಬಿಕೊಂಡಿದ್ದೆವು ತುಂಬಾ. ಭರವಸೆಯಿಂದ. ಹಾಗೆ ನಂಬಿಕೊಳ್ಳಲು ಸಾಕಷ್ಟು ಕಾರಣಗಳಿದ್ದವು. ಆ ಕಾರಣಗಳ ಹಿಂದೆ ಕನಸೇ ಇದ್ದವು. ಆಶಯ ಇದ್ದವು. ಪರ್ಯಾಯದ ಹುಡುಕಾಟಗಳಿಗೆ ಭರವಸೆ ಎಂಬ ದೊಡ್ಡ ಆಶಾಭಾವನೆ ಇತ್ತು. ಹಾಗೆ ನಂಬಲು ನಮಗೆ ದೇಶದೊಡಲ ಚಳುವಳಿಯಾಗಿ ಸ್ವಾಭಿಮಾನ ತುಂಬಿದ ‘ಚರಕ’ ಎಂಬ ಹೆಸರು ಎಷ್ಟು ಕಾರಣ ಆಗಿತ್ತೋ ಅದರ ಜತೆಗೆ ಇದ್ದ ನೀವು ಅಷ್ಟೇ ಕಾರಣ ಆಗಿದ್ದಿರಿ. ನಿಮ್ಮ ಧಿರಿಸು, ಮಾತು, ಗಡ್ಡ ಜತೆಗೆ ನೀವು ಚರಕ ಕಟ್ಟಿ ಹುಟ್ಟು ಹಾಕಿದ ಆಶಯ, ನಿಮ್ಮ ಒಮ್ಮೆಗೆ ನೋಡಿದರೆ ಚರಕ ಎನ್ನುವ ಹೆಸರಿಗೆ ಅನ್ವಯವಾಗುವ ಸಂತನ ದರ್ಶನ ನೀಡಿದ ಅನುಭವ. ಇದೇ ಕಾರಣಕ್ಕೆ ಹೆಗ್ಗೋಡಿನ ಚರಕ ಎಂದರೆ ಅದು ನೀವೇ. ತಾರ್ಕಿಕ ಜಿಜ್ಞಾಸೆ ನಡುವೆಯೂ ಇದು ಸತ್ಯ. ಈಗ 20 ವರ್ಷದ ಹಿಂದೆ ಮೊದಲ ಬಾರಿ ಹೆಗ್ಗೋಡು ನೀನಾಸಂ ಶಿಬಿರಕ್ಕೆ ಬಂದಾಗ ನಾಟಕ ಹೊರತಾಗಿ ಅಲ್ಲಿನ ಇಂಗ್ಲಿಷ್ ಭಾಷಣ, ಗಹನವಾದ ಕನ್ನಡದ ಚರ್ಚೆಗಳು ಕೂಡ ಆ ಹೊತ್ತಿನಲ್ಲಿ ನಮಗೇ ಮೆದುಳಿಗೆ ಇಳಿಯದೆ ಇದ್ದಾಗ ನಾವು ಚರಕ ಕಡೆಗೆ ಹೆಜ್ಜೆ ಹಾಕಿದ್ದೆವು. ಗಾಂಧಿ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಬಗ್ಗೆ ಅಲ್ಪ ಸ್ವಲ್ಪ ಓದಿಕೊಂಡಿದ್ದ ನಮಗೆ “ಚರಕ” ಆಪ್ತ ಅನ್ನಿಸಿತ್ತು.
ಅಲ್ಲಿರುವ ಹೆಣ್ಣು ಮಕ್ಕಳ ಚುರುಕು ಕೆಲಸ, ಓಡಾಟ, ನೂಲಿನ ಹಾದಿಯ ಆ ನಗು ನಮ್ಮ ಅಕ್ಕನದೋ, ತಂಗಿಯದೋ ಅನ್ನಿಸಿ ಅವರ ಮುಖದ ಬೆವರುಗಳು ಅಮ್ಮನನ್ನು ನೆನೆಸುತ್ತಾ ಇತ್ತು. ಇದರ ಜತೆ ನೀವು ಬರೆದ ‘ಯಂತ್ರ ಕಳಚೋಣ ಬನ್ನಿ” ಓದಿದ ನಂತರ ಗ್ರಾಮೀಣ ಪರ್ಯಾಯ ಆರ್ಥಿಕತೆ ಚರಕದ ಜತೆ ಸೇರಿಕೊಂಡಿತ್ತು. ಚರಕ ಕೇವಲ ಆರ್ಥಿಕ ವಹಿವಾಟಿನ ಸಂಸ್ಥೆ ಅಲ್ಲ ಬದಲಾಗಿ ಸಂವಿಧಾನದ ಆಶಯ ಜಾರಿಗೆ ತರುವ ಆ ಮೂಲಕ ಮಹಿಳಾ ಸ್ವಾವಲಂಬನೆಗೆ ಭಿನ್ನ ಹಾದಿಯಲ್ಲಿ ಮುನ್ನೆಡೆಸುವ ಪ್ರಗತಿ ಮಾರ್ಗ ಎಂದೇ ಭಾವಿಸಿದ್ದೆ. ಈಚೆಯ ತನಕವೂ ನನಗೆ ಹಾಗೆ ಭಾಸವಾಗಿತ್ತು.ಕಳೆದ ವರ್ಷ ನಿಮ್ಮ ” ಶ್ರಮಜೀವಿಗಳ ಆಶ್ರಮ” ಭೇಟಿ ನೀಡಿದ್ದೆ. ಅಲ್ಲಿನ ಕೊಠಡಿಗಳು ಅಥಿತಿಗೃಹ ಎಂದೇ ನನಗೆ ಪರಿಚಯಿಸಿದ್ದರು. ಆದರೆ ಈಚೆಗೆ ” ಪ್ರತಿದ್ವನಿ ” ಮಾಧ್ಯಮದಲ್ಲಿ ರಾಜ್ಯದ ಪ್ರಮುಖ ಪತ್ರಕರ್ತರು, ಮುಖ್ಯವಾಗಿ ವಿಶ್ವಾಸಾರ್ಹ ವರದಿಗಳ ಮೂಲಕ ಸತ್ಯಶೋಧನೆ ಮಾಡುವ ಶಶಿಸಂಪಳ್ಳಿ ತನಿಖಾ ಲೇಖನ ಓದಿದೆ. ನಾನು ಭಾವಿಸಿದ ಚರಕಕ್ಕೂ ವಾಸ್ತವ ಚರಕಕ್ಕೂ ಬಹಳ ದೊಡ್ಡ ಕಂದರ ಅನ್ನಿಸಿತು. ಪ್ರಶ್ನೆಗಳು ಉಳಿದಿವೆ.
ನಂಬಿಕೆ-01- ‘ಚರಕ’ ಸ್ವಾವಲಂಬಿ ಮಹಿಳಾ ಸಂಸ್ಥೆ, ಅದರ ಉದ್ದೇಶ ಮಹಿಳಾ ಆರ್ಥಿಕ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ. ಅದು ಮುಕ್ತ ಮಾರುಕಟ್ಟೆಯ ಅಗತ್ಯತೆ ತಕ್ಕಂತೆ ದೇಶಿ ಮೌಲ್ಯ ಉಳಿಸಿಕೊಂಡು ಪರಿವರ್ತನೆ ಜತೆ ಸಾಗುತ್ತಿದೆ.
* ಇದು ಅರ್ಧ ಸತ್ಯ. ಏಕೆಂದರೆ ಮಹಿಳೆಯರು ಪಾಲ್ಗೊಂಡ ಸಂಸ್ಥೆ. ಆದರೆ ಮಹಿಳಾ ಕಾರ್ಮಿಕರು ಸಂಸ್ಥೆ ಯ ನೀತಿ ನಿರ್ದೇಶನ ಮಾಡುವ ಯಾವ ಅಧಿಕಾರ ಹೊಂದಿಲ್ಲ. ನಿರ್ಬಂಧಿತ ಮಾಧರಿ ಇದೆ. ಉತ್ಪಾದನೆ ಸ್ಥಳ ಕೂಡ ವ್ಯಕ್ತಿ ಸಹಜ ಸ್ವಾತಂತ್ರ ಅನುಭವಿಸಲು ಕಣ್ಗಾವಲು ಇದೆ.
ನಂಬಿಕೆ-02’ಚರಕ’ ಆರ್ಥಿಕ ಸ್ವಾತಂತ್ರ್ಯ ಹೊಂದಿದೆ. ಅಂದರೆ ಸಾಮುದಾಯಿಕ ಉತ್ಪಾದನಾ ಪದ್ದತಿ ಮಾದರಿ ಅನುಸರಿಸುತ್ತಾ ಇದೆ. ಮಧ್ಯವರ್ತಿಗಳ ಹಂಗಿಲ್ಲದೆ ವ್ಯವಹಾರ ಮಾಡುತ್ತಾ ಇದೆ. * ಈ ವ್ಯವಸ್ಥೆ ಚರಕ ಅನುಸರಿಸುತ್ತಾ ಇಲ್ಲ. ಇಲ್ಲಿನ ಮಹಿಳೆಯರು ಉತ್ಪಾದನೆ ಬಟ್ಟೆಗಳು ಮತ್ತು ಮಾರುಕಟ್ಟೆ ನಡುವೆ ಗೋಡೆಗಳು ಇವೆ. ಚರಕ ತಯಾರಿಸುವ ಬಟ್ಟೆಯನ್ನು ಕವಿ ಕಾವ್ಯ ಟ್ರಸ್ಟ್ ಖರೀದಿ ಮೊದಲು ಮಾಡುತ್ತದೆ. ನಂತರ ಇದೇ ಸರಕನ್ನು ‘ದೇಶಿ’ ಸಂಸ್ಥೆ ಖರೀದಿ ಮಾಡುತ್ತದೆ. ದೇಶಿ ಸಂಸ್ಥೆಯಿಂದ ಬೆಂಗಳೂರಿನ ಮಾರುಕಟ್ಟೆ ಗೆ ಪುನಃ “ಸಮುದಾಯ” ಮತ್ತು ದೇಶಿ ಅಂಗಡಿಯಲ್ಲಿ ಮಾರುತ್ತಾರೆ. ಈ 3 ಸಂಸ್ಥೆಗಳು ಪ್ರಸನ್ನರವರ ನಿಯಂತ್ರಣದಲ್ಲಿ ಇವೆ.
ನಂಬಿಕೆ: 03 ‘ಚರಕ’ ದುಡಿಯುವ ಮಹಿಳೆಯರ ಮಾರುಕಟ್ಟೆ ಪ್ರಜ್ಞೆ ಹಚ್ಚಿಸಿದೆ. ಇದೇ ಕಾರಣಕ್ಕೆ ಮಾರುಕಟ್ಟೆ ಬೇಕು ಬೇಡ ಅರಿತು ಹೊಸತನಕ್ಕೆ ಒಡ್ಡಿಕೊಂಡಿದೆ. * ಇದು ತಪ್ಪು ಗ್ರಹಿಕೆ. ಚರಕ ಆಡಳಿತವೇ ಮಹಿಳಾ ಸ್ವಾಮ್ಯ ಇಲ್ಲದೆ ಇರುವಾಗ. ಚರಕ ಉತ್ಪಾನ್ನಗಳನ್ನ ಪ್ರಸನ್ನ ನೇತೃತ್ವದ ಅವರದೇ 3 ಸಂಸ್ಥೆಗಳು ಖರೀದಿಸಿ ಮಾರುಕಟ್ಟೆ ನೀಡುತ್ತವೆ. ಈ ಕಾರಣ ಚರಕ ಉತ್ಪನ್ನ ಬೆಲೆ ನಿಗದಿ ಉತ್ಪಾದಕರು ಮಾಡುವುದಿಲ್ಲ. ಅದನ್ನು ಪರೋಕ್ಷವಾಗಿ ಪ್ರಸನ್ನರವರು ನಿರ್ಧರಿಸುತ್ತಾರೆ. ಗ್ರಾಹಕರ ಬೇಕು ಬೇಡ ಗಳ ಬಗ್ಗೆ ಚರಕ ದುಡಿಯುವ ಮಹಿಳೆಯರಿಗೆ ಗೊತ್ತಿಲ್ಲ. ಅದು ಅವರ ಅರಿವಿನ ಆಚೆ ಇದೆ. ಸ್ವಾವಲಂಬನೆ ಎನ್ನುವುದು ದೂರದಲ್ಲಿ ಇದೆ.
ನಂಬಿಕೆ: 04″ಚರಕ” ದುಡಿಯುವ ಮಹಿಳೆಯರು ಸರ್ಕಾರದ ಇಲಾಖೆಯಿಂದ ವಸತಿ ಮನೆ ತೆಗೆದುಕೊಂಡಿದ್ದಾರೆ. ಆ ಮೂಲಕ ಅವರಿಗೆ ದಕ್ಕಲೇ ಬೇಕಾದ ನ್ಯಾಯವನ್ನು ಪ್ರಸನ್ನರವರು ನೀಡಿದ್ದಾರೆ. * ಮನೆ ಕಡತದಲ್ಲಿ ಫಲಾನುಭವಿಗಳಿಗೆ ತಲುಪಿದೆ. ಆದರೆ ವಾಸ್ತವದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪ್ರಸನ್ನರವರ ಕನಸಿನ ಶ್ರಮಜೀವಿ ಆಶ್ರಮ ಕಟ್ಟಿದ್ದಾರೆ. ಇದು ನಾನು ನಂಬಿಕೊಂಡಿದ್ದ ನಂಬಿಕೆ ಮತ್ತು * ಚಿಹ್ನೆಯಲ್ಲಿರುವುದು ಶಶಿ ಸಂಪಳ್ಳಿ ಪ್ರತಿದ್ವನಿ ಮೂಲಕ ನಡೆಸಿರುವ ಸತ್ಯ ಶೋಧನೆ. ಶಶಿ ವರದಿ ಎಷ್ಟು ನಿಖರವಾಗಿ ಇದೆ ಎಂದರೆ ತುಂಬಾ ಜಿಡುಕಾಗಿರುವ ಚರಕದ ನೂಲಿನ ಸಿಕ್ಕುಗಳನ್ನು ಬಿಡಿಸಿ ಎದುರು ಇಟ್ಟಿದ್ದಾರೆ. ಅದರಲ್ಲೂ ವಸತಿಯೋಜನೆಯಲ್ಲಿ ಮನೆ ಅಕ್ರಮ ವಿಚಾರದ ಎರಡನೇ ವರದಿಯಲ್ಲಿ ಸರ್ಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಡ ನೇಕಾರರ ಹೆಸರಿನಲ್ಲಿ ಹೇಗೆ ಅಕ್ರಮ ಎಸಗಲಾಗಿದೆ ಎಂದು ಧಾಖಲಾತಿ ಸಮೇತ ನೀಡಿದ್ದಾರೆ.

ಪ್ರಸನ್ನ ಸರ್…. ಏನಿದು…? ನೀವು ಚರಕ ದಿವಾಳಿ ಆಗಿದೆ ಎಂದು ಘೋಷಣೆ ಮಾಡಿದಾಗ ನಾವು ಅಲ್ಲಿನ ದುಡಿಯುವ ಮಹಿಳೆಯರನ್ನ ನೆನೆಸಿ ಮರುಗಿದ್ದೇವೆ. ಲಾಕ್ ಡೌನ್ ಸಮಯದಲ್ಲೂ ನೌಕರರಿಗೆ ಸಂಬಳ ಕೊಟ್ಟಿದೆ ಎಂಬ ಹೇಳಿಕೆ ನೋಡಿ ಹೆಮ್ಮೆ ಪಟ್ಟಿದ್ದೇವೆ. ಸರ್ಕಾರ ಬಟ್ಟೆ ಖರೀದಿ ಮಾಡಿಲ್ಲ ಎಂಬ ವಿಚಾರದಲ್ಲಿ ನಾವು ಚರಕ ಜತೆ ಇದ್ದೆವು. ಇರುತ್ತೇವೆ. ಸರ್ಕಾರವನ್ನ ನಾವು ಒತ್ತಾಯಿಸುತ್ತೇವೆ.ಆದರೆ ಪ್ರಸನ್ನರವರೆ ಚರಕ ಆಡಳಿತ ಊಳಿಗಮಾನ್ಯ ವ್ಯವಸ್ಥೆ ಪ್ರತಿರೂಪವಿರಿಸುವ ವ್ಯವಸ್ಥೆ ನಿರ್ಮಿಸಲು ಕಾರಣ ಆದರೂ ಏನು..?
ಒಂದು ಉತ್ಪಾದನೆ ಸಂಸ್ಥೆ ತನ್ನ ಸರಕಿನ ಬೆಲೆ ನಿರ್ಧಾರ ಮಾಡಲು ಮತ್ತು ತನ್ನ ಅಧಿಕೃತ ಉತ್ಪಾದನಾ ಮಾರ್ಕ್ ಹಾಕಲು ಅವಕಾಶ ಇಲ್ಲ ಅಂದರೆ ಸ್ವಾವಲಂಬನೆ ಸಾಧ್ಯವಾಗುವುದು ಹೇಗೆ..?ಕನಿಷ್ಟವೇತನ ಸೇರಿ ಲಾಭಾಂಶ ಹಂಚಿಕೆ ರೀತಿಯ ಕಾರ್ಮಿಕರ ಹಕ್ಕುಗಳನ್ನು ಅವರಿಗೆ ನೀಡದೇ, ಸಾಮುದಾಯಿಕ ಚರಕ ಆಗಿಸದೇ ಇರಲು ಕಾರಣವನ್ನು ಏನೆಂದು ಕರೆಯುವುದು..?
ಆಶ್ರಮ ಕಟ್ಟಿ. ಬೇಡ ಅಂದವರು ಯಾರು. ಆದರೆ ದುಡಿಯುವ ಮಹಿಳೆಯರ ನ್ಯಾಯಬದ್ಧ ಹಕ್ಕುಗಳನ್ನು ಧಮನ ಮಾಡಿ, ಅವರ ಅವಕಾಶ ಬಳಸಿಕೊಂಡು, ಭೂಮಿ ಹಕ್ಕನ್ನು ಅವರಿಗೆ ಕೊಟ್ಟಂತೆ ಮಾಡಿ ನಿಮ್ಮ ಬಳಿಯೇ ಉಳಿಸಿಕೊಂಡು ಏಕ. ಕಾಲದಲ್ಲಿ ನಿಮ್ಮ ನಂಬಿದ ಚರಕದ ದುಡಿಯುವ ಕುಟುಂಬಗಳಿಗೂ ವಂಚಿಸಿ, ನೆಲದ ಕಾನೂನುಗಳನ್ನು ಗಾಳಿಗೆ ತೂರಿ ಆಶ್ರಮ ಕಟ್ಟುವ ಅಗತ್ಯ ಇತ್ತಾ..?
ನೀವು ಹೀಗೇಕೆ ಸರ್…? ಹೀಗೇಕೆ ಮಾಡಿದಿರಿ ನೀವು..? ನನಗೆ ಜಿಜ್ಞಾಸೆ. ಪ್ರತಿದ್ವನಿ ವರದಿ ಸುಳ್ಳು ಎನ್ನಲಾಗದು. ಅದು ನಿಜವೇ ಆಗಿದ್ದರೆ ಒಬ್ಬ ಕಾರ್ಪೊರೇಟ್ ಉದ್ಯಮಿಯ ಚಾಲಾಕಿ ನಡಿಗೆ ವ್ಯವಹಾರ ಜಾಣ್ಮೆಯಲ್ಲಿ ಇದೆ. ವ್ಯವಹಾರಿಕ ಏಕ ಕೇಂದ್ರೀಕರಣ ಸರ್ವಾಧಿಕಾರವನ್ನ ತೋರಿಸುತ್ತಾ ಇದೆ. ಹಿಂದೆಲ್ಲಾ ಗೌಡಾಳಿಕೆ ಇದ್ದ ಕಾಲದಲ್ಲಿ ಯಾರದೋ ಜಮೀನು, ಮತ್ಯಾರದೋ ಮನೆ, ಒಡೆಯರ ಒಡೆತನ ಎಂದು ಕೇಳಿದ್ದೆವು. ಬಡ ನೇಕಾರರ ಹೆಸರಿನಲ್ಲಿ ಮನೆ ಪಡೆದು ಆಶ್ರಮ ಕಟ್ಟಿ ಅದಕ್ಕೆ ಶ್ರಮ ಜೀವಿ ಆಶ್ರಮ ಎಂದರೆ…? ಹೇಳಿ ಸರ್… ಏಕೆ ಹೀಗೆ ಮಾಡಿದಿರಿ…?
ಕ್ಷಮಿಸಿ… ಇದು ನನ್ನ ಪ್ರಶ್ನೆ ಮಾತ್ರ ಅಲ್ಲ, ನಮ್ಮ ಪ್ರಶ್ನೆ
-.ಜಿ. ಟಿ ಸತ್ಯನಾರಾಯಣ ಕರೂರು.



