

ರೂಪಾಂತರಿ ಕೊರೋನಾ ವೈರಸ್ ಆತಂಕ; ರಾಜ್ಯದಲ್ಲಿ ಇಂದಿನಿಂದ 9 ದಿನ ರಾತ್ರಿ ಕರ್ಫ್ಯೂ ಜಾರಿ: ಸಿಎಂ ಯಡಿಯೂರಪ್ಪ
ಬ್ರಿಟನ್ ನಲ್ಲಿ ಕೊರೋನಾದ ಹೊಸ ಅಲೆ ಕಾಣಿಸಿಕೊಂಡು ತಲ್ಲಣ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದಲೇ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಹೇರುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಬೆಂಗಳೂರು: ಬ್ರಿಟನ್ ನಲ್ಲಿ ಕೊರೋನಾದ ಹೊಸ ಅಲೆ ಕಾಣಿಸಿಕೊಂಡು ತಲ್ಲಣ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದಲೇ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಹೇರುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸೋಂಕು ಹೆಚ್ಚಾಗುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಕ್ರಮಗಳನ್ನು ಅಳವಡಿಸುವ ಸಂಬಂಧ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ತೀರ್ಮಾನ ಪ್ರಕಟಿಸಿದ್ದಾರೆ.
ಸೋಂಕು ನಿಯಂತ್ರಣಕ್ಕೆ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಇಂದಿನಿಂದ 9 ದಿನಗಳ ಕಾಲ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಜನ ಹೆಚ್ಚಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ ಎಂದರು.
ಕೋವಿಡ್ -19 ತಡೆ ನಿಟ್ಟಿನಲ್ಲಿ ಸಾರ್ವಜನಿಕರು ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.
ವಿದೇಶದಿಂದ ಆಗಮಿಸುವ ಪ್ರತಿಯೊಬ್ಬರಿಗೂ ಕೋವಿಡ್ ಸೋಂಕು ಪರೀಕ್ಷೆ ಕಡ್ಡಾಯವಾಗಿದ್ದು, ಎಲ್ಲೆ ಪ್ರಯಾಣಿಸಲಿ, ಈ ಕುರಿತ ಪ್ರಮಾಣ ಪತ್ರವನ್ನು ಹೊಂದುವುದು ಅಗತ್ಯವಾಗಿದೆ. ರಾಜ್ಯಕ್ಕೆ ಆಗಮಿಸುವ 72 ಗಂಟೆಗಳಿಗೆ ಮುನ್ನ ಆರ್.ಟಿ,ಪಿ.ಸಿ.ಆರ್ ಪರೀಕ್ಷೆ ಮಾಡಿಸಬೇಕು ಎಂದರು.
ಹೊರದೇಶದಿಂದ ಬರುವ ಪ್ರಯಾಣಿಕರಿಗಾಗಿ ವಿಮಾನ ನಿಲ್ದಾಣದಲ್ಲಿಯೂ ಸೋಂಕು ಪತ್ತೆಗೆ ಪರೀಕ್ಷಾ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಅಗತ್ಯ ಸೇವೆಗಳು ಹೊರತುಪಡಿಸಿ, ಇತರೆ ವ್ಯಾಪಾರ-ವಹಿವಾಟುಗಳನ್ನು ಬಂದ್ ಮಾಡಬೇಕು. ಜನವರಿ 2 ರ ಬೆಳಗ್ಗೆ 6 ಗಂಟೆ ವರೆಗೆ ಈ ನಿಷೇಧಾಜ್ಞೆ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ. ಆ ಮೂಲಕ ಹೊಸ ಕೊರೋನಾ ರೂಪಾಂತರದ ಅಲೆಯ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಆ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಇಂದು ಸಂಜೆ 5 ಗಂಟೆಯೊಳಗೆ ನೈಟ್ಕರ್ಫ್ಯೂ ಸಂಬಂಧಿತ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ. (kpc)


