ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಶಿವಮೊಗ್ಗ: ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಮೃತಪಟ್ಟ ಯುವತಿಯನ್ನು ಕಾಲೇಜಿನಲ್ಲಿ ಅಂತಿಮ ವರ್ಷದ ಮೆಡಿಕಲ್ ಓದುತ್ತಿದ್ದ ಲಲಿತಾ (23) ಎಂದು ಗುರುತಿಸಲಾಗಿದೆ.
ಈಕೆ ಭದ್ರಾವತಿಯ ವೆಂಕಟೇಶ್ ಎನ್ನುವವರ ಪುತ್ರಿಯಾಗಿದ್ದು ಕಾಲೇಜಿನ ಹಾಸ್ಟೆಲ್ ರೂಮ್ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಲಲಿತಾ ನಿನ್ನೆ ರಾತ್ರಿ ಎರಡು ಗಂಟೆವರೆಗೂ ಕೊಠಡಿಯಲ್ಲಿ ಓದಿಕೊಳ್ಳುತ್ತಿದ್ದಳು, ಆದರೆ ಇಂದು ಮುಂಜಾನೆ ಆಕೆ ಕೊಠಡಿಯಿಂದ ಬಾರದ್ದನ್ನು ಕಂಡ ಆಕೆಯ ಸಹಪಾಠಿಗಳು ಅನುಮಾನಗೊಂಡು ಬಾಗಿಲು ಬಡಿದಿದ್ದಾರೆ, ಆದರೆ ಬಾಗಿಲು ತೆರೆಯದೆ ಹೋದಾಗ ಹಾಸ್ಟೆಲ್ ವಾರ್ಡನ್ ಗೆ ವಿಚಾರ ತಿಳಿಸಿದ್ದಾರೆ.ಬಾಗಿಲು ಒಡೆದಾಗ ಲಲಿತಾ ಸಾವಿಗೀಡಾದ ವಿಷಯ ತಿಳಿದಿದೆ.
ಇದೊಂದು ಆತ್ಮಹತ್ಯೆ ಪ್ರಕರಣ ಎಂದು ದಾಖಲಾಗಿದ್ದರೂ ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ,ಸ್ಥಳಕ್ಕೆ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ಹಾಗೂ ಸಿಮ್ಸ್ ಮೆಡಿಕಲ್ ಕಾಲೇಜಿನ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಲಲಿತಾ ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ದೊಡ್ಡ ಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (kpc)