

ಸಿದ್ಧಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ವಾತಂತ್ರ್ಯ ಸ್ಮಾರಕ ಭವನವನ್ನು ಈಗಿನ ಸಮಾಜಮಂದಿರ ಜಾಗದಲ್ಲೇ ನಿರ್ಮಿಸಬೇಕೆಂದು ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ಈ ಬಗ್ಗೆ ಇಂದು ಹಾರ್ಸಿಕಟ್ಟಾ ಗ್ರಾಮ ಪಂಚಾಯತ್ ನೇರಲಮನೆಯಲ್ಲಿ ಕರೆದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅನಂತ ಸುಬ್ರಾಯ ಹೆಗಡೆ ಮತ್ತವರ ಸಹೋದರರು ಈ ಒತ್ತಾಯ ಮಾಡಿದರು.
ತಮ್ಮ ಕೆಳಗಿನಮನೆ ಕುಟುಂಬ ಸೇರಿದಂತೆ ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ ಮಾಡಿವೆ. ಅವರ ನೆನಪು, ಅವರ ಭಾವಚಿತ್ರ ಅನಾವರಣಕ್ಕೆ ಅವಶ್ಯವಿರುವ ಸ್ವಾತಂತ್ರ್ಯ ಸ್ಮಾರಕ ಭವನ ಈಗಾಗಲೇ ಉದ್ದೇಶಿಸಿದಂತೆ ನಗರದ ಬಾಲಿಕೊಪ್ಪ ಗ್ರಾಮದ ಸಮಾಜಮಂದಿರ ಪ್ರದೇಶದಲ್ಲೇ ನಿರ್ಮಾಣವಾಗಬೇಕು ಎಂದರು.
ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಸ್ಮಾರಕ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪ್ರದರ್ಶಿಸಿದ ಅವರು ತಾಲೂಕಿನ ಏಕೈಕ ಜೀವಂತ ಸ್ವಾತಂತ್ರ್ಯ ಹೋರಾಟಗಾರ ಬಂಗಾರಪ್ಪ ನಾಯ್ಕ ಮನಮನೆ ಶಂಕುಸ್ಥಾಪನೆ ನೆರವೇರಿಸಿದ ಸಮಾಜಮಂದಿರ ಪ್ರದೇಶದಲ್ಲಿ ಸ್ವಾತಂತ್ರ್ಯ ಸ್ಮಾರಕ ಭವನ ನಿರ್ಮಾಣವಾಗಬೇಕು, ಈ ಬಗ್ಗೆ ಸ್ವಂತ: ಅವರೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಿದ್ದಾರೆ ಎಂದರು. ಮಾಧ್ಯಮಗೋಷ್ಠಿಯಲ್ಲಿಸುಮಿತ್ರಾ ಹೆಗಡೆ, ಗಣಪತಿ ಹೆಗಡೆ, ನಾರಾಯಣ ಹೆಗಡೆ ಉಮಾ ಹೆಗಡೆ, ಶೋಭಾ ಹೆಗಡೆ ಸೇರಿದಂತೆ ಕೆಲವರಿದ್ದರು.





