

ಸಾಕಿಯ ನಿರುತ್ತರ…..
ಕವಿತೆಯ ಬೆನ್ನು ಬಿದ್ದಿರುವೆ. ಬೆಳಿಗ್ಗೆಯೇ ಹೊಸ ಕವನಸಂಕಲನ ಸಿಕ್ಕಿತು. ಗುಕ್ಕನೆ ಓದಿದೆ.. ಓದಿಸಿಕೊಂಡು ಹೋಯ್ತು. ಕೆಲ ಸಾಲುಗಳು ಕಾಡುತ್ತಾ ಹೇಳಿದವು. ಹೇಳುತ್ತಾ ಕಾಡಿದವು.
ಸಾಕಿ
ಪ್ರೀತಿಯೆಂದರೆ
ಗುಟ್ಟಾಗಿ ಗುಣಗುವುದಲ್ಲ
ಸುಟ್ಟ ರೊಟ್ಟಿಯಂತಾಗುವುದು
ಎನ್ನುತ್ತ ಕವಿ ಕೆ. ಬಿ. ವೀರಲಿಂಗನ ಗೌಡ್ರ ತಮ್ಮ ಎದೆಯ ಭಾವವನ್ನ ಸಾಕಿ ಜತೆಗೆ ಹಂಚಿದ್ದಾರೆ. ಮೂಲತಃ ಬಾದಾಮಿ ತಾಲೂಕಿನವರಾದ ಗೌಡ್ರರವರು ಮಲೆನಾಡಿನ ಶಿರಸಿ-ಸಿದ್ದಾಪುರದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆಯಲ್ಲಿ ಇದ್ದಾರೆ. ಅಕ್ಷರ ಆಲಯದಲ್ಲಿ ಇರುವ ಮೇಸ್ಟ್ರು ಅರಿವಿನ ದಾರಿಯ ಪಯಣವನ್ನ ಕವಿತೆ ಆಗಿಸಿದ್ದಾರೆ. ತಮ್ಮ ತವಕ ತಲ್ಲಣಗಳನ್ನು ಸಣ್ಣ ಸಣ್ಣ ಸಾಲುಗಳಲಿ ಹಿಡಿದಿಡುವ ಅವರ ಕುಶಲತೆ, ಭಾಷೆ, ಕವಿತೆ ದ್ವನಿಸುವ ಧಾಟಿ, ಅದಕ್ಕೆ ಇರುವ ಸಮತೆಯ ಆಶಾವಾದದ ದಿಕ್ಕು ಗಟ್ಟಿ ಆಗಿಸಿದೆ. ಕೋರಿಕೆಗಳು ಎನ್ನುವ ತಲೆಬರಹದ ಕವಿತೆಯಲ್ಲಿ
ಸಾಕಿ
ಶವಪೆಟ್ಟಿಗೆಗಳು
ಮತಪೆಟ್ಟಿಗೆಗಳಾಗದಿರಲಿ
ಸಾಕಿ
ಸೈನಿಕರು ಗಡಿಯಲ್ಲಿರಲಿ
ಚುನಾವಣೆ ಸರಕಾಗದಿರಲಿ
ಸಾಕಿ
ಪಾರಿವಾಳಗಳೆಂದೂ
ಸರಳುಗಳ ಹಿಂದೆ ನಿಲ್ಲದಿರಲಿ
ಎಂಬ ಸಾಲುಗಳಲ್ಲಿ ಒಳಿತಿನ ಆಶಾವಾದ ಅಡಗಿದೆ.
ಸಾಕಿ
ಸತ್ಯ ಗೊತ್ತಿದ್ದೂ
ಮಿಥ್ಯವನ್ನೇ ಅಪ್ಪಿಕೊಂಡರೆ
ಅಪ್ಪನ ನಡೆಯನ್ನೂ ಒಪ್ಪಲಾರೆ
ಸಾಕಿ
ಅವ್ವ ಅಪ್ಪನ ಪರ ನಿಂತರೆ
ಅಕ್ಕ ಅಲ್ಲಮರ ಬಯಲಲಿ
ಬಯಲಾಗಿ ಲಯವಾಗಿಬಿಡುವೆ
ಎನ್ನುವ ಕವಿಯ ನಿಲುವುಗಳಲ್ಲಿ ಸ್ಪಷ್ಟತೆ ಇದೆ.
ಸಾಕಿ
ಚಾಡಿ
ಸಾಕ್ಷಿಕರಿಸಿದಾಗಲೇ
ಸತ್ಯ ಲೋಕವಿರೋಧಿಯಾಗಿದೆ
ಸಾಕಿ
ಬಯಲಲ್ಲಿ
ತೂಗುವ ತಕ್ಕಡಿಯೊಂದಿದೆ
ಅಲ್ಲಿ ಒಲವಿಗಷ್ಟೇ ಗೆಲುವು ಸಿಗಲಿದೆ
ಹೀಗೆ ಕುಮಾರಗೌಡ ವೀರಲಿಂಗನಗೌಡ್ರ ತಮ್ಮ ಕವಿತೆಗಳ ಮೂಲಕ ಒಳಿತಿನ ತಾತ್ವಿಕತೆ ಕಟ್ಟಿಕೊಡುತ್ತ ಹೋಗುತ್ತಾರೆ.ಮೇಲ್ನೋಟಕ್ಕೆ ಸರಳ ಎನ್ನಿಸುವ ಕವಿತೆಗಳು ಆಳವನ್ನು ತಟ್ಟುತ್ತವೆ. ಕಾಡುತ್ತವೆ. ಆಪ್ತಆಗುತ್ತವೆ.
ಗೌಡರು ನನ್ನ fb ಗೆಳೆಯರು. ನಾವಿನ್ನೂ ಭೇಟಿ ಆಗಿಲ್ಲ. ಕವಿತೆ ನಮ್ಮನ್ನು ಬೆಸೆದಿದೆ. ನಿರುತ್ತರ ಬೇಕು ಅಂದಾಗ ಪ್ರೀತಿಯಿಂದ ಕಳಿಸಿಕೊಟ್ಟಿದ್ದಾರೆ. ಪ್ರೀತಿಯನ್ನು ಪ್ರೀತಿಯಿಂದ ಮಾತ್ರ ಭರಿಸಬಹುದು. ಪ್ರೀತಿಯ ಮೇಸ್ಟ್ರು ,’ನಿರುತ್ತರ’ ಉತ್ತರವೂ ಹೌದು ಓದುಗನ ಒಳಗೆ ಎಂಬ ಮಾತನ್ನು ಧಾಖಲಿಸಿ ಅವರಿಗೆ ಶುಭ ಕೋರುವೆ.
ಸಾಕಿ
ಕವಿತೆಗಳೇ ಹೀಗೆ
ನಸುನಗುವ ಹಸುಗೂಸಂತೆ
ಚಿವುಟಬೇಕೆನ್ನುವ ಕೆನ್ನೆಯಂತೆ
ಸಾಕಿ
ಕವಿತೆಗಳೇ ಹೀಗೆ
ಮೆತ್ತಿದ ಮಣ್ಣಿನಂತೆ
ಬತ್ತಿದ ಕಣ್ಣೀರಂತೆ
ಸಾಕಿ
ಕವಿತೆಗಳೇ ಹೀಗೆ
ಮಾಯದ ಗಾಯದಂತೆ
ಗಾಯಗೊಳಿಸಿದವನ ಎದೆಗೊದ್ದಂತೆ….
ಧನ್ಯವಾದಗಳು ಸರ್…
– ಜಿ. ಟಿ ಸತ್ಯನಾರಾಯಣ ಕರೂರು. https://m.youtube.com/watch?v=FhQhEvEAFyo


