ಬೆಂಗಳೂರು: ತೀವ್ರ ಕುತೂಹಲ ಕೆರೆಳಿಸಿದ್ದ ಮತ್ತು ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ನ ಟೀಸರ್ ಬಿಡುಗಡೆಯಾಗಿದ್ದು, ಈ ಟೀಸರ್ ನಲ್ಲಿ ಯಶ್ ಸಿಗರೇಟ್ ದೃಶ್ಯ ನಕಲು ಎಂಬ ವಾದ ಕೇಳಿಬರುತ್ತಿದೆ.
ಹೌದು.. ಕೆಜಿಎಫ್ ಚಾಪ್ಟರ್ 2 ಟೀಸರ್ ಭಾರಿ ಸದ್ದು ಮಾಡುತ್ತಿದ್ದು, ಕನ್ನಡದಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಟೀಸರ್ ಗೆ ವ್ಯಾಪಕ ಪ್ರತಿಕ್ರಿಯೆ ಮತ್ತು ಪ್ರಶಂಸೆ ವ್ಯಕ್ತವಾಗುತ್ತಿದೆ. ಅಂತೆಯೇ ಚಿತ್ರ ಟೀಸರ್ ಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳು ಕೂಡ ಕೇಳಿಬರುತ್ತಿದ್ದು, ಟೀಸರ್ ನ ಅಂತಿಮ ಭಾಗದಲ್ಲಿ ಬರುವ ಯಶ್ ಸಿಗರೇಟ್ ದೃಶ್ಯ ವಿಡಿಯೋವೊಂದರ ನಕಲು ಎನ್ನಲಾಗುತ್ತಿದೆ.
ಈ ಪ್ರಶ್ನೆಯನ್ನು ಸ್ವತಃ ಯಶ್ ಅಭಿಮಾನಿಯೊಬ್ಬರು ಎತ್ತಿದ್ದು, ಈ ಹಿಂದೆ ಕನ್ನಡ ಭಾಷೆ ಎಂಬುದು ಒಂದಿದೆ ಎಂಬುದು ತಿಳಿಯದ ಯೂಟ್ಯೂಬರ್ ಒಬ್ಬರು ಕೆಜಿಎಫ್ ಚಿತ್ರದ ಟ್ರೈಲರ್ ನೋಡಿ ಸ್ಯಾಂಡಲ್ ವುಡ್ ಸಿನಿಮಾ ಮೇಕಿಂಗ್ ಗೆ ಫಿದಾ ಆಗಿದ್ದರು. ಇದೀಗ ಅದೇ ಯೂಟ್ಯೂಬರ್ ಚಿತ್ರದ ಈ ದೃಶ್ಯದ ಕುರಿತು ಪ್ರಶ್ನೆ ಎತ್ತಿದ್ದಾರೆ.
ಈ ಹಿಂದೆ ಕೆಜಿಎಫ್ ಮೊದಲ ಭಾಗ ನೋಡಿ ಫಿದಾ ಆಗಿದ್ದ ಯೂಟ್ಯೂಬರ್ ಜಾಬಿ ಕೊಯ್ ಮತ್ತು ಆಚರಾ ಕಿರ್ಕ್ ಜೋಡಿ ಕೆಜಿಎಫ್ ಚಾಪ್ಟರ್ 2 ಟೀಸರ್ ರೀವ್ಯೂ ಮಾಡಿದ್ದು, ಈ ಟೀಸರ್ ಗೂ ಇಬ್ಬರು ಫುಲ್ ಫಿದಾ ಆಗಿದ್ದಾರೆ. ಪ್ರತಿಯೊಂದು ದೃಶ್ಯವೂ ಮೇಕಿಂಗ್ ನ ಕಷ್ಟವನ್ನು ಮತ್ತು ಚಿತ್ರತಂಡದ ಶ್ರಮವನ್ನು ತೋರಿಸುತ್ತದೆ ಎಂದು ಹೇಳಿರುವ ಜಾಬಿ ಕೊಯ್, ಟೀಸರ್ ಅಂತಿಮ ಭಾಗದಲ್ಲಿ ಬರುವ ಯಶ್ ಸಿಗರೇಟ್ ದೃಶ್ಯಕ್ಕೆ ಫುಲ್ ಫಿದಾ ಆಗಿದ್ದಾರೆ. ಅಲ್ಲದೆ ಈಡೀ ಟೀಸರ್ ಒಂದು ಭಾಗವಾದರೆ ಈ ದೃಶ್ಯವೇ ಮತ್ತೊಂದು ಭಾಗ ಎಂದು ಬಣ್ಣಿಸಿದ್ದು, ಈ ದೃಶ್ಯವನ್ನು ತಾವೆಲ್ಲೋ ಬೇರೆ ಕಡೆ ನೋಡಿದ ಹಾಗಿದೆ ಎಂದು ಹೇಳಿದ್ದಾರೆ.
ಇನ್ನು ಜಾಬಿ ಕೊಯ್ ಎತ್ತಿದ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳುವ ಕೆಲಸ ಮಾಡಿದ್ದು, 2 ವರ್ಷದ ಹಿಂದೆ ಅಂದರೆ 2018ರಲ್ಲಿ Mike Papa Kilo ಎಂಬ ಯೂಟ್ಯೂಬ್ ಖಾತೆಯಲ್ಲಿ ಗನ್ ಪ್ರಿಯ ಅಮೆರಿಕನ್ನರು AR15 ರೈಫಲ್ ರಿವ್ಯೂ ವೇಳೆ ಗುಂಡುಗಳನ್ನು ಹಾರಿಸುತ್ತಾರೆ. ಈ ವೇಳೆ ಗುಂಡಿನ ರಭಸದಿಂದಾಗಿ ರೈಫಲ್ ತುದಿಭಾಗದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ವೇಳೆ ಶೂಟರ್ ತನ್ನ ಜೇಬಿನಿಂದ ಸಿಗಾರ್ ತೆಗೆದು ಅದನ್ನು ಆ ಗನ್ ನ ಬೆಂಕಿಯಿಂದ ಹೊತ್ತಿಸಿಕೊಳ್ಳುತ್ತಾನೆ.
ಆದರೆ ಈ ದೃಶ್ಯಕ್ಕೂ ಕೆಜಿಎಫ್ 2 ಟೀಸರ್ ನ ದೃಶ್ಯಕ್ಕೂ ಯಾವುದೇ ಸಂಬಂಧವಿಲ್ಲ. ಇಂತಹ ನೂರಾರು ವಿಡಿಯೋಗಳು ಯೂಟ್ಯೂಬ್ ನಲ್ಲಿ ಹರಿದಾಡುತ್ತಿರುತ್ತವೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಕಾಪಿ ಎನ್ನುವುದು ಸರಿಯಲ್ಲ. ನಿರ್ದೇಶಕರ ಕಲ್ಪನೆಯಲ್ಲಿ ಅರಳಿದ ದೃಶ್ಯಗಳು ಸಾಮಾನ್ಯ ಜನರ ಜೀವನದಲ್ಲಿ ನಡೆಯಬಾರದು ಎಂದೇನು ಇಲ್ಲವಲ್ಲ.
ಅಂತೆಯೇ ಚಿತ್ರರಂಗದಲ್ಲಿ ಈ ನಕಲು ಎಂಬ ಪದ ವಾಡಿಕೆಯಾಗಿದೆ. ಯಾವುದೇ ದೊಡ್ಡ ಚಿತ್ರ ತೆರೆಕಂಡಾಗಲೂ ಆ ಚಿತ್ರದ ದೃಶ್ಯಗಳ ಕುರಿತು ಪ್ರಶ್ನೆ ಎದ್ದಿದ್ದವು. ಬಾಹುಬಲಿ, ಸಾಹೋ. ಧೂಮ್, ದಬಂಗ್, ಓಂ ಶಾಂತಿ ಓಂ, ಅಥಡು, ಇದ್ದರಮ್ಮಾಯಲ್ತೋ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಆದರೂ ಕನ್ನಡ ಚಿತ್ರವೊಂದರ ಟೀಸರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದರೆ ನಿಜಕ್ಕೂ ಖುಷಿ ಪಡಬೇಕಾದದ್ದೇ… (kpc)