


ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರದಲ್ಲಿನ ಹಸನ್ ಫರೀದ್ ಸಾಬ್ ಎಂಬ ಯುವಕ ಕುವೈತ್ ನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಸಾವಿನ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು ಎಂದು ಮೃತನ ಕುಟುಂಬಸ್ಥರು ಹಾಗೂ ಶಿವಮೊಗ್ಗ ಶಾಂತಿ ಸಂಘಟನೆ ಒತ್ತಾಯಿಸಿದೆ.
ರಕ್ತದ ಮಡವಿನಲ್ಲಿ ಮೃತದೇಹ ಪತ್ತೆಯಾಗಿದೆ. ಆದರೆ, ಆತನೇ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುವೈತ್ ಪೊಲೀಸರು ಹೇಳುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ 20 ತಿಂಗಳುಗಳಿಂದ ಕುವೈತ್ ನಲ್ಲಿ ಆಹಾರ ಡೆಲಿವರಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಫರೀದ್ ಗೆ ಕಳೆದ ಡಿಸೆಂಬರ್ 27 ರಂದು ಕುಟುಂಬ ಸದಸ್ಯರು ಆತನ ಮೊಬೈಲ್ ಗೆ ಕರೆ ಮಾಡಿ ಮಾತನಾಡಲು ಯತ್ನಿಸಿದ್ದಾರೆ. ಆಗ ಆತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಹೇಳಿದ್ದಾಗಿ ಫರೀದ್ ಸಂಬಂಧಿ ಶಕೀಲ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದರು.
ಕೂಡಲೇ ಕುವೈತ್ ನಲ್ಲಿ ಇರುವ ಪರಿಚಯಿಸ್ಥರಿಗೆ ಫೋನ್ ಮಾಡಿ, ಮಾಹಿತಿ ನೀಡಿದ್ದೇವೆ. ಅವರು ಕೊಠಡಿಗೆ ಭೇಟಿ ನೀಡಿದ್ದಾಗ ಫರೀದ್ ರಕ್ತದ ಮಡುವಿನಲ್ಲಿದ್ದ ಮೃತದೇಹ ಕಂಡುಬಂದಿದೆ. ಫರೀದ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನ ಕೊಲೆಯಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿರುವುದಾಗಿ ಅಹ್ಮದ್ ತಿಳಿಸಿದರು.
ದೂರನ್ನು ಕೇಂದ್ರಕ್ಕೆ ವರ್ಗಾಯಿಸುವಂತೆ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಎಸ್ ಪಿಗೆ ಮನವಿ ಮಾಡಲಾಗಿತ್ತು. ಫರೀಧ್ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂಬ ಮನವಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದಾಗ್ಯೂ, ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕುಟುಂಬಸ್ಥರು ನೀಡಿರುವ ಮನವಿ ಪತ್ರವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಲಾಗಿದೆ. ಈ ಸಂಬಂಧ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಹೇಳಿದ್ದಾರೆ. (kpc)
