

ಸಿದ್ಧಾಪುರದ ಸ್ಥಳಿಯರ ವಿರೋಧದಿಂದ ಕಳೆದ ವರ್ಷ ಸಿದ್ಧಾಪುರ ಠಾಣೆಯಿಂದ ವರ್ಗಾವಣೆಯಾಗಿದ್ದ psi ನಿತ್ಯಾನಂದ ಗೌಡ ಮರಳಿ ಸಿದ್ಧಾಪುರಕ್ಕೆ ಬರುತಿದ್ದಾರೆ ಎನ್ನುವ ಗಾಳಿ ಸುದ್ದಿ ಹರಡುತ್ತಿದೆ. ಊಹಾಪೋಹಗಳನ್ನೇ ಸುದ್ದಿಮಾಡಿದ್ದ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳ ಸುಳ್ಳುಸುದ್ದಿ ಸದ್ದು ಮಾಡುತ್ತಿರುವಂತೆ ದಿಢೀರನೆ ಎಚ್ಚರವಾದಂತೆ ಕ್ರೀಯಾಶೀಲವಾದ ಕೆಲವು ಸಂಘಟನೆಗಳು ಮತ್ತೆ ಸಿದ್ಧಾಪುರಕ್ಕೆ ನಿತ್ಯಾನಂದಗೌಡ ಬೇಡ ಎನ್ನುವ ಸುದ್ದಿಗೋಷ್ಠಿಗೆ ಸಿದ್ಧವಾಗಿರುವ ಬಗ್ಗೆ ಸಮಾಜಮುಖಿಗೆ ಮಾಹಿತಿ ದೊರೆತಿದೆ.
ಈ ಹಿಂದೆ ನಿತ್ಯಾನಂದ ಗೌಡ ಸಿದ್ಧಾಪುರದಲ್ಲಿ ಕೆಲಸ ಮಾಡುತಿದ್ದಾಗ ಪ್ರಾರಂಭದಲ್ಲಿ ದೊಡ್ಡ ಹವಾ ಎಬ್ಬಿಸಿ ನಂತರ ಗುರುತರ ಆರೋಪಗಳಿಗೆ ತುತ್ತಾಗಿದ್ದರು. ಆನಂತರ ತಾಲೂಕಿನ ನಾನಾ ಸಂಘಟನೆಗಳ ಸಹಯೋಗದಲ್ಲಿ ನಿತ್ಯಾನಂದ ಗೌಡ ವಿರುದ್ಧ ಬೃಹತ್ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯ ಪ್ರಮುಖ ಸಂಘಟನೆಯಲ್ಲಿ ಅಂದಿನ ಶಾಸಕ, ಇಂದಿನ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಆಪ್ತರಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಿಂದಿನ ಕಾಗೇರಿ ಆಪ್ತರು ಈಗ ವಿರೋಧಿಗಳಾಗಿ ಬದಲಾಗಿದ್ದಾರೆ. ವಿಧಾನಸಭಾ ಅಧ್ಯಕ್ಷರ ಈ ಹಾಲಿವಿರೋಧಿಗಳ ನಿಯಂತ್ರಣದ ಭಾಗವಾಗಿ ಅವರ ವಿರೋಧಿ ನಿತ್ಯಾನಂದ ಗೌಡರನ್ನು ಮತ್ತೆ ಸಿದ್ಧಾಪುರಕ್ಕೆ ಅತಿಆಸಕ್ತಿಯಿಂದ ಕರೆತರಲಾಗುತ್ತಿದೆ ಎನ್ನುವ ಸುದ್ದಿ ಹರಿಬಿಟ್ಟಿರುವ ಕೆಲವರು ಸಿದ್ಧಾಪುರದಲ್ಲಿ ಸ್ಥಳಿಯ ಶಾಸಕರ ಹಠಾವೋ ಅಂಗವಾಗಿ ನಿತ್ಯಾನಂದ ಮರುಪ್ರವೇಶಕ್ಕೆ ಅಂಗಳ ಸಿದ್ಧವಾಗಿದ್ದಾರೆ ಎನ್ನುತಿದ್ದಾರೆ.
ವಾಸ್ತವದಲ್ಲಿ ನಿತ್ಯಾನಂದ ಗೌಡ ಮತ್ತೆ ಸಿದ್ಧಾಪುರಕ್ಕೆ ಬರುತಿದ್ದಾರೆ ಎನ್ನಲಾಗುವ ಗಾಳಿಸುದ್ದಿಗಳಿಗೆ ಯಾವ ಆಧಾರಗಳೂಇಲ್ಲ, ಇಂಥ ಗಾಳಿಸುದ್ದಿಗಳ ಪ್ರಸಾರ, ಪ್ರಚಾರದ ಹಿಂದೆ ಮತ್ತೇನೋ ಲೆಕ್ಕಾಚಾರ ಕೆಲಸ ಮಾಡುತ್ತಿರುವ ಬಗ್ಗೆ ಗುಮಾನಿಗಳಿವೆ ಎನ್ನುವುದು ಪೊಲೀಸ್ ಇಲಾಖೆಯ ಅಂದಾಜು. ಆದರೆ ಬಿ.ಜೆ.ಪಿ. ಸರ್ಕಾರದ ಜಾತೀಯತೆ, ಗುಂಪುಗಾರಿಕೆ, ಧನದಾಹದ ಪರಿಣಾಮವಾಗಿ ಅನಾವಶ್ಯಕ ನ್ಯೂಸ್ ಸೆನ್ಸ್ ಸೃಷ್ಟಿಸಲಾಗುತ್ತಿದೆ ಎನ್ನಲಾಗುತ್ತಿದೆ.

