ಅಧಿಕೃತ ಗೌಪ್ಯ ಮಾಹಿತಿಯನ್ನು ಪತ್ರಕರ್ತರಿಗೆ ನೀಡುವುದು ಕ್ರಿಮಿನಲ್ ಕೃತ್ಯವಾಗಿದ್ದು, ಮಾಹಿತಿ ಕೊಡುವವರು ಮತ್ತು ಮಾಹಿತಿ ಪಡೆದವರನ್ನು ಜೈಲಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ನವದೆಹಲಿ: ಅಧಿಕೃತ ಗೌಪ್ಯ ಮಾಹಿತಿಯನ್ನು ಪತ್ರಕರ್ತರಿಗೆ ನೀಡುವುದು ಕ್ರಿಮಿನಲ್ ಕೃತ್ಯವಾಗಿದ್ದು, ಮಾಹಿತಿ ಕೊಡುವವರು ಮತ್ತು ಮಾಹಿತಿ ಪಡೆದವರನ್ನು ಜೈಲಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಸೋರಿಕೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ, ರಕ್ಷಣಾ ಮಂತ್ರಿ, ಗೃಹ ಸಚಿವರು, ವಾಯುಪಡೆ ಮುಖ್ಯಸ್ಥರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಮಾತ್ರ ಗೌಪ್ಯತೆಯ ಅಧಿಕಾರ ಹೊಂದಿರುತ್ತಾರೆ ಎಂದು ತಿಳಿಸಿದರು. ಬಾಲ್ ಕೋಟ್ ವೈಮಾನಿಕ ದಾಳಿಗೂ ಮುಂಚಿತವಾಗಿ ಅರ್ನಾಬ್ ಗೋಸ್ವಾಮಿಗೆ ಮಾಹಿತಿ ಸೋರಿಕೆಯಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ನಾಲ್ಕೈದು ಮಂದಿಯಲ್ಲಿ ಮಾತ್ರ ಗೌಪ್ಯತೆ ಮಾಹಿತಿ ಇರುತ್ತದೆ. ಪ್ರಧಾನಿ, ಗೃಹ, ರಕ್ಷಣಾ ಸಚಿವರು, ಏರ್ ಚೀಫ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರ ಪೈಕಿ ಯಾರೊ ಒಬ್ಬರು ಅರ್ನಾಬ್ ಗೋಸ್ವಾಮಿಗೆ ಮಾಹಿತಿ ನೀಡಿದ್ದಾರೆ. ಇದು ಕ್ರಿಮಿನಲ್ ಕೃತ್ಯ. ಇದನ್ನು ಯಾರು ಮಾಡಿದರು ಎಂಬುದನ್ನು ಕಂಡುಹಿಡಿಯುತ್ತೇವೆ. ಮಾಹಿತಿ ನೀಡಿದವರು ಮತ್ತು ಮಾಹಿತಿ ಪಡೆದವರು ಇಬ್ಬರನ್ನು ಜೈಲಿಗೆ ಕಳುಹಿಸಬೇಕು ಎಂದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿರುವ ಸಾಧ್ಯತೆಯಿಂದ ಈ ಪ್ರಕ್ರಿಯೆ ಆರಂಭವಾಗಲ್ಲ ಎಂದು ಅವರು ಆರೋಪಿಸಿದರು.
ಬಾಲ್ ಕೋಟ್ ವಾಯುದಾಳಿ ಹಿಂದೆ ಯಾವುದೇ ದೇಶಪ್ರೇಮವಿಲ್ಲ, ಆದರೆ, ಇದನ್ನು ರಾಜಕೀಯ ಲಾಭಕ್ಕಾಗಿ ಮಾಡಲಾಗಿದೆ. ಒಂದು ವೇಳೆ ಅರ್ನಾಬ್ ಗೋಸ್ವಾಮಿ ಗೌಪ್ಯ ಮಾಹಿತಿಯನ್ನು ತಿಳಿಯುವಂತಾದರೆ, ಪಾಕಿಸ್ತಾನದವರು ಕೂಡಾ ತಿಳಿದಿರುತ್ತಾರೆ ಅನಿಸುತ್ತಿದೆ. ಇದು ಕ್ರಿಮಿನಲ್ ಕೃತ್ಯವಾಗಿದ್ದು, ವಿಚಾರಣೆಯನ್ನು ಆರಂಭಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು. (kpc)