

ನಮಗೂ ಸಭಾಪತಿ ಸ್ಥಾನ ಕೊಡಬೇಕು, ನಾವೇನೂ ಸನ್ಯಾಸಿಗಳಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ.

ಬೆಂಗಳೂರು: ನಮಗೂ ಸಭಾಪತಿ ಸ್ಥಾನ ಕೊಡಬೇಕು, ನಾವೇನೂ ಸನ್ಯಾಸಿಗಳಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ, ವಿಧಾನಪರಿಷತ್ ನಲ್ಲಿ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ನಮ್ಮ ಬೆಂಬಲವೂ ಇದೆ. ನಾವು ಸಹಿ ಹಾಕಿ ಇಟ್ಟುಕೊಂಡಿದ್ದೇವೆ, ವರಿಷ್ಠರು ಹೇಳಿದ ತಕ್ಷಣ ವಿಧಾನಪರಿಷತ್ ಕಾರ್ಯದರ್ಶಿಗೆ ಪತ್ರ ಕೊಡುತ್ತೇವೆ. ಹೊರಟ್ಟಿ ಅವರು ಸಭಾಪತಿ ಆಗಬೇಕು ಎಂದು ಎಚ್.ಡಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ಪಷ್ಟತೆ ಇದೆ ಎಂದರು.
ಸಭಾಪತಿ ಸ್ಥಾನ ಜೆಡಿಎಸ್ ಗೆ ಸಿಗಲಿದೆ. ಈಗಾಗಲೇ ಹೆಚ್.ಡಿ ದೇವೇಗೌಡರು ನನ್ನನ್ನು ಸಭಾಪತಿ ಮಾಡಲು ತೀರ್ಮಾನ ಮಾಡಿದ್ದಾರೆ. ಈ ವಿಚಾರ ನನ್ನ ಬಳಿ ಚರ್ಚೆ ಮಾಡಿದ ನಂತರ ತೀರ್ಮಾನ ಆಗಬೇಕಿದೆ ಎಂದರು.
ಬಿಜೆಪಿಯಲ್ಲೂ ಸಭಾಪತಿ ಸ್ಥಾನಕ್ಕೆ ಆಕಾಂಕ್ಷಿಗಳಿರಬಹುದು. ನಾವೇನು ರಾಜಕೀಯ ಸನ್ಯಾಸಿಗಳಲ್ಲ. ಸಭಾಪತಿ ವಿಚಾರವನ್ನು ದೇವೇಗೌಡರು, ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ಜೆಡಿಎಸ್ 13 ಸದಸ್ಯರಿದ್ದಾರೆ. ನಾವೂ ನೋಡಿ ಬೆಂಬಲ ನೀಡಬೇಕಲ್ಲ ಎಂದರು.
ಜನತಾ ಪರಿವಾರ ಒಗ್ಗೂಡಿಸಲು ಮುಂದಾಗಿದ್ದೇವೆ. ಮಧು ಬಂಗಾರಪ್ಪ ಅವರನ್ನು ಮನವೊಲಿಸುತ್ತೇವೆ. ಅದೇ ರೀತಿ ಜಿ.ಟಿ ದೇವೇಗೌಡರನ್ನೂ ಬೇಟಿ ಮಾಡುತ್ತೇವೆ. ಗುಬ್ಬಿ ಶ್ರೀನಿವಾಸ್ ಸೇರಿ ಯಾರು ಯಾರು ಅಸಮಾಧಾನ ಹೊಂದಿರುವವರು ಇದ್ದಾರೋ ಅವರೆಲ್ಲರನ್ನೂ ಮನವೊಲಿಕೆ ಮಾಡುತ್ತೇವೆ ಎಂದರು.
ನಮ್ಮಲ್ಲಿ ಪರಸ್ಪರ ಸಂಪರ್ಕದ ಸಮಸ್ಯೆ ಆಗಿದೆ. ಯಾರು ಏನೇ ಹೇಳಿದರೂ ಅದನ್ನು ನಂಬಿ ಬಿಡುತ್ತಾರೆ. ಬಿಹಾರ ಮಾದರಿಯಲ್ಲಿ ಜನತಾ ಪರಿವಾರ ಒಗ್ಗೂಡಿಸುತ್ತೇವೆ. ಜನತಾ ಪರಿವಾರದಿಂದ ಬೇರೆ ಪಕ್ಷಗಳಿಗೆ ಹೋದವರು ಸೋಲು ಕಂಡಿದ್ದಾರೆ. ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಮಾಡಲು ದೇವೇಗೌಡರು ತೀರ್ಮಾನಿಸುತ್ತಾರೆ. 2023ಕ್ಕೆ ಜನತಾ ಪರಿವಾರದ ಸರ್ಕಾರ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಕರ್ನಾಟಕ ಸೇರಿ ಎಲ್ಲಾ ಕಡೆ ಪ್ರಾದೇಶಿಕ ಪಕ್ಷಗಳ ಯುಗ ಪ್ರಾರಂಭವಾಗಿದೆ. ಎಲ್ಲರನ್ನೂ ಪಕ್ಷದಲ್ಲಿ ಉಳಿಸಿಕೊಳ್ಳುವ ತೀರ್ಮಾನ ಮಾಡುತ್ತಿದೆ ಎಂದು ಹೇಳಿದರು.
ಪಕ್ಷದ ಹಿರಿಯ ಮುಖಂಡ ಕೋನರೆಡ್ಡಿ ಮಾತನಾಡಿ, ಜೆಡಿಎಸ್ ನಿಂದ ಹೊರ ಹೋದವರು ಬಹಳ ಜನ ಇದ್ದಾರೆ. ಮತ್ತೆ ಎಲ್ಲರನ್ನೂ ಕರೆಯೋ ಪ್ರಯತ್ನ ಮಾಡುತ್ತೇವೆ. ಪಕ್ಷ ಬಿಟ್ಟು ಹೋಗಬೇಡಿ ಎಂದು ಮನವೊಲಿಸುತ್ತೇವೆ. ಜೆಡಿಎಸ್ ಬಿಟ್ಟು ಹೋದವರಿಗೆ ಬೇರೆ ಪಕ್ಷಗಳು ಹೊಂದುವುದಿಲ್ಲ ಎಂದು ತಿಳಿಸಿದರು. (kpc)
