

ಬೆಂಗಳೂರು: ಸಚಿವರಿಗೆ ಖಾತೆ ಹಂಚಿಕೆ, ಖಾತೆಗಳ ಬದಲಾವಣೆ ಮಾಡಿದ ಬೆನ್ನಲ್ಲೇ ವಲಸಿಗ ಸಚಿವರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಬಂಡಾಯ ಏಳುವ ಮುನ್ಸೂಚನೆ ನೀಡಿದ್ದಾರೆ.
ಸಚಿವ ಡಾ. ಕೆ. ಸುಧಾಕರ್ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ ವಲಸಿಗ ಸಚಿವರು, ಮುಖ್ಯಮಂತ್ರಿ ಧೋರಣೆಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ತಾವು ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರೂ ಸಹ ತಮ್ಮ ಖಾತೆ ಬದಲಾವಣೆ ಮಾಡಲಾಗಿದೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಖಾತೆ ಖ್ಯಾತೆ ಇಡೀ ದಿನ ವ್ಯಾಪಕ ರಾಜಕೀಯ ಚಟುವಟಿಕೆಗೆ ಕಾರಣವಾಗಿತ್ತು. ಬಳಿಕ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ನಂತರ ಖ್ಯಾತೆ ತೆಗೆದ ಸಚಿವರು ಸುಮ್ಮನಾದರು. ಆದರೆ ಸಚಿವರಾದ ಎಂ.ಟಿ.ಬಿ.ನಾಗರಾಜ್, ಕೆ. ಗೋಪಾಲಯ್ಯ ಮತ್ತು ಡಾ.ಕೆ. ಸುಧಾಕರ್ ಸಚಿವ ಸಂಪುಟ ಸಭೆಯಿಂದ ದೂರ ಉಳಿದಿದ್ದರು. ಎಂ.ಟಿ.ಬಿ. ನಾಗರಾಜ್ ತಮ್ಮ ಖಾತೆ ಬದಲಾವಣೆ ಮಾಡದಿದ್ದರೆ ಅಧಿಕಾರ ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.
ಬೆಳಗ್ಗೆಯಿಂದಲೇ ಸದಾಶಿವನಗರದಲ್ಲಿವ ಸುಧಾಕರ್ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ಖಾತೆಗಳ ಬದಲಾವಣೆಯಾಗುತ್ತಿದ್ದಂತೆ ಅಸಮಾಧಾನಗೊಂಡ ಗೋಪಾಲಯ್ಯ ಮತ್ತು ನಾರಾಯಣಗೌಡ ಸುಧಾಕರ್ ನಿವಾಸಕ್ಕೆ ಆಗಮಿಸಿದರು. ಎಂಟಿಬಿ ನಾಗರಾಜ್ ಕೂಡ ಅಬಕಾರಿ ಖಾತೆ ನೀಡಿರುವುದಕ್ಕೆ ಅಸಮಧಾನ ಗೊಂಡಿದ್ದು ಸುಧಾಕರ್ ನಿವಾಸದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಗೋಪಾಲಯ್ಯ ತೀವ್ರ ಅಸಮಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಕೊರೊನಾ ವೇಳೆ ಉತ್ತವಾಗಿ ಕೆಲಸ ಮಾಡಿದ್ದೇನೆ ಈ ಬಗ್ಗೆ ಕೇಂದ್ರದ ನಾಯಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಆದರೂ ಯಾಕೆ ಖಾತೆ ಬದಲಾವಣೆ ಮಾಡಿದರು ಎಂದು ಕಿಡಿಕಾರಿದ್ದಾರೆ.ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಪಡೆದು ತೋಟಗಾರಿಕೆ ಮತ್ತು ಸಕ್ಕರೆ ಖಾತೆ ನೀಡಿರುವುದಕ್ಕೆ ಅವರು ತೀವ್ರ ಅಸಮಧಾನಗೊಂಡಿದ್ದಾರೆ.
ಇನ್ನು ನಾರಾಯಣಗೌಡ ಕೂಡ ಅಸಮಧಾನ ಹೊರಹಾಕಿದ್ದಾರೆ. ಉತ್ತಮ ರೀತಿಯಲ್ಲಿ ಇಲಾಖೆ ನಿರ್ವಹಣೆ ಮಾಡಿದರೂ ಖಾತೆ ಬದಲಿಸಿದ್ದಾರೆ. ತೋಟಗಾರಿಕೆ ವಾಪಸ್ ಪಡೆದು ಕ್ರೀಡೆ ,ಹಜ್ಜ್ ಮತ್ತು ವಕ್ಫ್ ಖಾತೆ ನೀಡಿದ್ದಾರೆ ಇಂದು ಖಾತೆ ವಾಪಸ್ ಪಡೆದವರು ನಾಳೆ ಸಚಿವ ಸ್ಥಾನ ಪಡೆಯಲ್ಲ ಎನ್ನುವುದಕ್ಕೆ ಏನು ಸಾಕ್ಷಿ ಎಂದು ಸಭೆಯಲ್ಲಿ ಕಿಡಿಕಾರಿದ್ದಾರೆ.
ಎಂಟಿಬಿ ನಾಗರಾಜ್ ಕೂಡ ಅಬಕಾರಿ ಖಾತೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ವಸತಿ ಸಚಿವ ಸ್ಥಾನವನ್ನು ತೊರೆದು ರಾಜೀನಾಮೆ ಕೊಟ್ಟು ಬಂದಿದ್ದೇನೆ, ಸಚಿವ ಸ್ಥಾನಕ್ಕಾಗಿ ವರ್ಷ ಕಾದಿದ್ದೇನೆ ಈಗ ಅವಕಾಶ ಸಿಕ್ಕಿದೆ ಆದರೆ ಜನರ ಪರ ಕೆಲಸ ಮಾಡಲು ಸಾಧ್ಯವಾಗದ ಖಾತೆ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸುಧಾಕರ್ ಕೂಡ ಬೇಸರಗೊಂಡಿದ್ದಾರೆ, ವೈದ್ಯಕೀಯ ಶಿಕ್ಷಣ ಖಾತೆಯನ್ನು ಉತ್ತಮವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ, ಹೆಚ್ಚುವರಿಯಾಗಿ ಆರೋಗ್ಯ ಖಾತೆಯನ್ನೂ ನಿರ್ವಹಿಸಿದ್ದೇನೆ ಆದರೂ ಆರೋಗ್ಯ ಬಿಟ್ಟು ಕೊಟ್ಟು ವೈದ್ಯಕೀಯ ಖಾತೆ ವಾಪಸ್ ಪಡೆದಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಮೇಟಿಗಿಲ್ಲ ಎಂಟ್ರಿ:.
ಇನ್ನು ಖಾಸಗಿ ಕೆಲಸದ ನಿಮಿತ್ತ ಇಂದು ಭೇಟಿಗೆ ಸುಧಾಕರ್ ಮಾಜಿ ಸಚಿವ ಮೇಟಿಗೆ ಸಮಯಾವಕಾಶ ನೀಡಿದ್ದರು ಆದರೆ ರಾಜಕೀಯ ಬೆಳವಣಿಗೆ ವಲಸಿಗ ಸಚಿವರ ಜೊತೆ ಸಭೆ ಹಿನ್ನಲೆಯಲ್ಲಿ ಮೇಟಿಯನ್ನು ಭೇಟಿಯಾಗಲಿಲ್ಲ,ಕೆಲಕಾಲ ಬಾಗಿಲ ಹೊರಗಡೆಯೇ ಇದ್ದು,ಇಂದು ಭೇಟಿ ಮಾಡಲ್ಲ ಎಂದು ಸಿಬ್ಬಂದಿ ಹೇಳಿದ ನಂತರ ನಿರಾಸೆಯಿಂದ ವಾಪಸ್ಸಾದರು. ಹಿರಿಯ ನಾಯಕರಾಗಿದ್ದು ಮಾಜಿ ಸಚಿವರೊಬ್ಬರನ್ನು ಮನೆ ಬಾಗಿಲ ಹೊರಗೆ ನಿಲ್ಲಿಸಿ ಮಾತನಾಡದೇ ಕಳಿಸಿದ್ದು ಕೂಡ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಸಭೆಯ ನಂತರ ಸಚಿವರಾದ ಎಂ.ಟಿ.ಬಿ. ನಾಗರಾಜ್, ಕೆ.ಗೋಪಾಲಯ್ಯ ಮತ್ತಿತರರು ತಮಗೆ ಅಸಮಾಧಾನ ಆಗಿದ್ದು ಸಹಜ. ಮುಖ್ಯಮಂತ್ರಿ ಅವರ ಮೇಲೆ ನಂಬಿಕೆ ಇದೆ. ಏನೇ ಸಮಸ್ಯೆ ಇದ್ದರೂ ಪಕ್ಷದ ವಲಯದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹ ಈ ಕುರಿತು ಮಾತನಾಡಿ, ಖಾತೆಗಳ ಬಗ್ಗೆ ಅಸಮಾಧಾನ ಇದ್ದರೆ ಬಗೆಹರಿಸುತ್ತೇವೆ. ಸ್ವಲ್ಪ ದಿನ ಇದೇ ಖಾತೆಗಳಲ್ಲಿ ಮುಂದುವರೆಯಲಿ, ನಂತರ ಬೇಕಿದ್ದರೆ ಬದಲಾವಣೆ ಮಾಡೋಣ ಎಂದು ಹೇಳಿದರು. (kpc)
