
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕೂರ್ಮಗಡ ನರಸಿಂಹ ದೇವರ ಜಾತ್ರಾ ಮಹೋತ್ಸವವು ಜನವರಿ 28 ರಂದು ನಡೆಯಲಿದೆ. ಈ ಬಾರಿ ಕೋವಿಡ್ ಕಾರಣದಿಂದ ಸರಳವಾಗಿ, ಸರ್ಕಾರದ ನಿಯಮಾವಳಿ ಪ್ರಕಾರ ಈ ಜಾತ್ರೆ ನೆರವೇರಲಿದೆ.ಸಮುದ್ರ ಮಧ್ಯವಿರುವ ನಡುಗಡ್ಡೆಗೆ ತೆರಳಲು 18 ಟ್ರಾಲ್ ದೋಣಿಗಳು ಹಾಗೂ 9 ಪರ್ಸಿಯನ್ ದೋಣಿಗಳ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಷರತ್ತು ಬದ್ಧವಾಗಿ ಎಲ್ಲರಿಗೂ ಅನುಮತಿ ನೀಡಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ದೋಣಿಗಳು ಮರು ಪ್ರಯಾಣ ಮಾಡಬೇಕಿದೆ.ಕೂರ್ಮಗಡ ಜಾತ್ರೆಯು ಕಾರವಾರ ಸುತ್ತಮುತ್ತಲಿನ ಮೀನುಗಾರರಿಗೆ ವಿಶೇಷವಾಗಿದೆ. ಸಮುದ್ರದ ಮಧ್ಯೆ ಇರುವ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಧ್ಯಾಹ್ನ ವಾಪಸಾಗುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ. ಹಾಗಾಗಿ, ಬೈತಖೋಲ್ ಬಂದರಿನಿಂದ ತೆರಳುವ ದೋಣಿಗಳಿಗೆ ಬುಧವಾರವೇ ತಳಿರು ತೋರಣಗಳಿಂದ ಅಲಂಕರಿಸಿ ಸಿದ್ಧತೆ ಮಾಡಿಕೊಂಡರು.
ಕೂರ್ಮಗಡ ನರಸಿಂಹ ಜಾತ್ರೆಯೆಂದರೆ… ಕಾರವಾರ ಮತ್ತು ಹೊರಗಿನ ಜನರ ಆಕರ್ಷಣೆಯ ಕೇಂದ್ರ. ಕಾರವಾರದಿಂದ20 ಕಿ.ಮೀ. ದೂರದ ಈ ಕೂರ್ಮಗಡದಲ್ಲಿ ನರಸಿಂಹ ದೇವರ ವಾಸಸ್ಥಾನ ಎನ್ನುವ ನಂಬಿಕೆ ಈ ಜನರದ್ದು. ಕಾರವಾರದ ಕೋಡಬಾಗಿನ ಮೇತ್ರಿ ಕುಟುಂಬ ಹಾಗೂ ಅಲ್ಲಿಯ ಮೀನುಗಾರರು ಮತ್ತು ಕೊಮಾರಪಂಥ ಸಮೂದಾಯ ಈ ನರಸಿಂಹ ದೇವರನ್ನು ತಮ್ಮ ಕುಟುಂಬದ ದೇವರೆಂದು ಆರಾಧಿಸುತ್ತಾರೆ. ದೇವರ ವಸ್ತು- ಬಂಗಾರ ಇತ್ಯಾದಿ ಇಲ್ಲಿಯ ದೇವಸ್ಥಾನ ಮತ್ತು ಕುಳಾಯಿಗಳ ಮನೆಯಲ್ಲಿರುತ್ತದೆ. ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಕುರ್ಮಗಡದಲ್ಲಿ ದೇವರ ಆರಾಧನೆ-ಪೂಜೆ ನಡೆಸಿ ಹಿಂದಿರುಗುವ ಕುಳಾಯಿಗಳು ದೇವರ ಪಲ್ಲಕ್ಕಿ ಒಯ್ದು ಸಾಯಂಕಾಲ ಮರಳಿ ತರುತ್ತಾರೆ. ನಂತರ ಕೋಡಿಬಾಗ ಸಾಯಿಕಟ್ಟಾದ ನರಸಿಂಹ ದೇವಸ್ಥಾನದಲ್ಲಿ ಸಂಜೆಯ ಜಾತ್ರೆ ನಡೆಸುತ್ತಾರೆ. ಪ್ರತಿವರ್ಷ ಜಲಸಾಹಸ, ಟ್ರ್ಯಾಕಿಂಗ್ ಜೊತೆಗೆ ದ್ವೀಪದಲ್ಲಿ ಪಿಕ್ ನಿಕ್ ಮಾದರಿಯ ಜಾತ್ರೆ ನಡೆಸುವ ಸ್ಥಳಿಯರೊಂದಿಗೆ ಪ್ರವಾಸಿಗಳು ಕೂಡಾ ಈ ಜಾತ್ರೆಯಲ್ಲಿ ದೋಣಿ-ಬೋಟುಗಳ ವಿಹಾರ ಮಾಡುತ್ತಾರೆ. ಬಹಳ ಹಿಂದಿನಿಂದ ವಿಶಿಷ್ಟ ಆಚರಣೆಯಾಗಿ ಬಂದ ಈ ಕೂರ್ಮಗಡ ಜಾತ್ರೆ ಕಳೆದ ವರ್ಷದ ಅವಗಡ ದಿಂದ ಜನರಲ್ಲಿ ಭಯ-ಭೀತಿಯನ್ನೂ ಹುಟ್ಟಿಸುವಂತಾಗಿದೆ. ಜಾತ್ರೆಯ ಅಂಗವಾಗಿ ನಡೆಯುತಿದ್ದ ಬಹಳಷ್ಟು ಆಚರಣೆಗಳು ಕರೋನಾ ಮತ್ತು ಜಿಲ್ಲಾಡಳಿತದ ಬಿಗುಕ್ರಮದಿಂದ ಸರಳವಾಗಿ, ಜಾಗೃತೆಯಿಂದ ನಡೆಯುವಂತಾಗಿದೆ.
