

ಈ ರಾತ್ರಿ
ಸರಿರಾತ್ರಿ; ಸುಮ್ಮನಿಲ್ಲ ಯಾವುದೂ
ಅವಿರತ ಅವರಿವರ ಸದ್ದುಗದ್ದಲವೂ
ಸುಳ್ಳೇಕೆ ಹೇಳಲಿ
ನೀರವವೆಂಬುದು ಈ ಜಗತ್ತಿನಲ್ಲಿ ಸುಳ್ಳು
ಸಣ್ಣಗೆ ಕಂಪಿಸಿದಂತಿದೆ ಆಕಾಶ
ನಕ್ಷತ್ರಗಳ ತಳಮಳ ತಾಕಿ
ತಣ್ಣಗೆ ತುಯ್ದಾಡುತ್ತ ದೀಪ ಅಲ್ಲೊಂದು ಇಲ್ಲೊಂದು
ಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ
ಅಲ್ಲಲ್ಲಿ ಅದೆಂಥದೋ ಅಬ್ಬರ
ಬೊಬ್ಬೆಯಿಡುತ್ತಿವೆ ನಾಯಿಗಳು
ಕೇಳಿಸುತ್ತಿದೆ ಯಾರೋ ಚೀರಿದಂತೆ
ಬೊಗಳುವ ನಾಯಿ ಕಚ್ಚದೆಂಬುದು ಮಿಥ್ಯವೆ?
ಎಣಿಸಬೇಕೆನ್ನಿಸುತ್ತಿದೆ ಫಳಫಳ ನಕ್ಷತ್ರಗಳ
ಒಳಗಿನ ಸುಳ್ಳುಗಳ ಉರಿವ ಉಲ್ಕೆಗಳ ಬೆತ್ತಲ
ಎಣಿಸಗೊಡದೆ ತಡೆಯುವುದು
ಸೋಗುಗಳ ಮಾಟ ಮೈಯಾಗಿ ಆಡುವ ಆಟ
ಬೆಳಗಾಗುವುದರ ಸುಳಿವೇ ಇಲ್ಲ
ನೋವನ್ನೇ ಒಡೆದಿಡುತ್ತಿರುವ ಈ ರಾತ್ರಿ
ಬಹುಶಃ ಕೊನೆಯಾಗುವುದೇ ಇಲ್ಲ
-ವೆಂಕಟರಮಣ ಗೌಡ.
