

ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆತಂದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಘೋಷಿಸಿದ್ದಾರೆ.



ಮುಂಬೈ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆತಂದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಘೋಷಿಸಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ನಾನು ಹೋರಾಟ ನಡೆಸುತ್ತಿದ್ದೇನೆ. ಆದರೆ ರೈತರ ವಿಷಯದಲ್ಲಿ ಕೇಂದ್ರ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಅಣ್ಣಾ ಹಜಾರೆ ಅವರು, ನಾಳೆಯಿಂದ ಕೇಂದ್ರದ ವಿರುದ್ಧ ತಮ್ಮ ಸ್ವಗ್ರಾಮ ರಾಲೆಗಾಂವ್ ಸಿದ್ಧಿಯಲ್ಲಿ ಉಪವಾಸ ಆರಂಭಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ರೈತರ ಬಗ್ಗೆ ಯಾವುದೇ ಸೂಕ್ಷ್ಮತೆಯನ್ನು ಹೊಂದಿಲ್ಲ, ಅದಕ್ಕಾಗಿಯೇ ಜನವರಿ 30 ರಿಂದ ನನ್ನ ಗ್ರಾಮದಲ್ಲಿ ನಾನು ಅನಿರ್ದಿಷ್ಟಾವಧಿ ಉಪವಾಸವನ್ನು ಪ್ರಾರಂಭಿಸುತ್ತಿದ್ದೇನೆ. ಬೆಂಬಲಿಗರು ತಮ್ಮ ತಮ್ಮ ಸ್ಥಳದಲ್ಲಿಯೇ ಸತ್ಯಾಗ್ರಹ ನಡೆಸುವಂತೆ ಅಣ್ಣಾ ಹಜಾರೆ ಅವರು ಕರೆ ನೀಡಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಕಳೆದ ವರ್ಷ ಫೆಬ್ರವರಿಯಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಂದಿನ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು ಸ್ವಾಮಿನಾಥನ್ ಆಯೋಗದ ವರದಿ ಜಾರಿ ಹಾಗೂ ಇತರೆ ಕೃಷಿ ಸಂಬಂಧಿತ ಬೇಡಿಕೆಗಳ ಪರಿಶೀಲನೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಲಿಖಿತ ಭರವಸೆ ನೀಡಿದ್ದರು. ನಂತರ ಫೆಬ್ರವರಿ 5, 2019ರಂದು ಅಣ್ಣಾ ಹಜಾರೆ ಅವರು ಉಪವಾಸ ಕೈಬಿಟ್ಟಿದ್ದರು. (kpc)
