ಹಕ್ಕುಚ್ಯುತಿ ಬಗ್ಗೆ ಪ್ರಸ್ತಾಪಿಸಲು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಅವಕಾಶ ನೀಡದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆ ವಿರೋಧಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಸೋಮವಾರ ಧರಣಿ ನಡೆಸಿದರು.
ಬೆಂಗಳೂರು: ಹಕ್ಕುಚ್ಯುತಿ ಬಗ್ಗೆ ಪ್ರಸ್ತಾಪಿಸಲು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಅವಕಾಶ ನೀಡದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆ ವಿರೋಧಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಸೋಮವಾರ ಧರಣಿ ನಡೆಸಿದರು.
ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಬೇಕು ಎಂದು ಶರತ್ ಬಚ್ಚೇಗೌಡ ಮನವಿ ಮಾಡಿದರು. ಆಗ ಕಾಗೇರಿ, ಕಲಾಪ ಸಲಹಾ ಸಮಿತಿ ನಡೆಯುತ್ತಿದ್ದ ವೇಳೆಯಲ್ಲಿ ಶರತ್ ಅವರು ಹಕ್ಕು ಚ್ಯುತಿ ಕುರಿತು ಪತ್ರವೊಂದನ್ನು ನೀಡಿದ್ದಾರೆ. ಅದನ್ನು ನಾನು ಪರಿಶೀಲಿಸಿಲ್ಲ. ಪೂರಕ ಮಾಹಿತಿ ಪಡೆದ ನಂತರ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.
ಆದರೆ, ಇದಕ್ಕೊಪ್ಪದ ಶರತ್, ನನ್ನ ಹಕ್ಕುಚ್ಯುತಿಯಾಗಿದ್ದು, ವಿಷಯ ಪ್ರಸ್ತಾವಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಧ್ವನಿಗೂಡಿಸಿದರು. ಚರ್ಚೆ ನಂತರ ನಡೆಸಬಹುದು, ಆದರೆ, ಪ್ರಸ್ತಾಪಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಹಕ್ಕುಚ್ಯುತಿಯಾಗಿದೆ ಎಂದು ಸದಸ್ಯರು ನೋಟಿಸ್ ನೀಡಿದ ಬಳಿಕ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂಬುದು ಕಲಾಪದ ನಿಯಮ ಎಂದರು.
ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಯಾವಾಗ ಚರ್ಚೆಗೆ ಅವಕಾಶ ನೀಡಬೇಕು ಎಂಬುದನ್ನು ಸಭಾಧ್ಯಕ್ಷರು ನಿರ್ಣಯಿಸುತ್ತಾರೆ ಎಂದರು.
ಆದರೆ, ಕಾಗೇರಿ ಮಾತ್ರ ಪತ್ರ ನೋಡಿದ ಬಳಿಕ ಅವಕಾಶ ನೀಡುವುದಾಗಿ ಪುನರುಚ್ಚರಿಸಿದರು. ಅದಕ್ಕೆ ಕಾಂಗ್ರೆಸ್ ಸದಸ್ಯರು ಒಪ್ಪಲಿಲ್ಲ. ಶರತ್ ಬಚ್ಚೇಗೌಡ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಧರಣಿ ನಡೆಸಿದರು. ಈ ಧರಣಿ, ಗದ್ದಲದ ನಡುವೆಯೂ ಸಭಾಧ್ಯಕ್ಷರು ಮೂರು ವಿಧೇಯಕಗಳನ್ನು ಮಂಡನೆಯನ್ನು ಅನುಮೋದಿಸಿದರು.
ನಂತರ, ಧರಣಿ ನಿರತರನ್ನು ಉದ್ದೇಶಿಸಿ, ನೀವೆಲ್ಲ ಈ ರೀತಿಯಾಗಿ ಒತ್ತಡ ಹೇರುವುದು ಸರಿಯಲ್ಲ’ ಎಂದು ಸಭಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಪತ್ರ ನೋಡಿ ಇವತ್ತೇ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಆಗ ಸಿದ್ದರಾಮಯ್ಯ, ಧರಣಿ ಕೈಬಿಡಲು ಸದಸ್ಯರಿಗೆ ಸೂಚಿಸಿದರು.
ನಂತರ ಸ್ಪೀಕರ್, ಡಿ.ಕೆ.ಶಿವಕುಮಾರ್ ಅವರೇ, ಯಾವ ಸಂದೇಶ ನೀಡಬೇಕು ಎಂದು ಭಾವಿಸಿದ್ದೀರೋ ಅದನ್ನು ತಲುಪಿಸಿದ್ದೀರಿ ಎಂದರು. ಅದಕ್ಕೆ ಕಾಂಗ್ರೆಸ್ ಸದಸ್ಯರು ನಗೆಚಟಾಕಿ ಹಾರಿಸಿದರು. (kpc)