
Ranganatha Kantanakunte ..ಬರೆಯುತ್ತಾರೆ.

ಪ್ರೊ. ಕೆ.ಎಸ್. ಭಗವಾನ್ ಅವರ ವಿಚಾರ ಮಂಡನೆಯ ವಿಧಾನ ಕುರಿತು ನಮ್ಮಲ್ಲಿ ಅನೇಕರಿಗೆ ಭಿನ್ನಾಭಿಪ್ರಾಯವಿದೆ. ಈ ಕಾರಣಕ್ಕಾಗಿಯೇ ಅವರನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ. ಒಮ್ಮೆ ಅವರು ಕಾರ್ಯಕ್ರಮವೊಂದರಲ್ಲಿ ಆಶಯ ನುಡಿಗಳನ್ನು ಆಡುವಾಗ ಅದನ್ನು ಕೇಳಿಸಿಕೊಳ್ಳಲಾಗದೆ ಗೋಷ್ಠಿ ಯಿಂದಲೇ ಎದ್ದು ಓಡಿ ಬಂದಿದ್ದೆ. ಅದೇ ಮೊದಲು ಅದೇ ಕೊನೆ. ಆದರೆ ಅವರು ಅಭಿಪ್ರಾಯ ಮಂಡಿಸುವ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ಯಾರೂ ಕಸಿಯಲಾಗದು. ಯಾವುದೇ ವಿಚಾರಗಳನ್ನು ಮತ್ತೆ ಮತ್ತೆ ಚರ್ಚೆಗೆ ಗುರಿ ಪಡಿಸದೇ ಇದ್ದರೆ ಯಾವುದೇ ವಿಚಾರಗಳು ಬೆಳೆಯುವುದಿಲ್ಲ.
ಇಡೀ ಭಾರತೀಯ ತತ್ವಶಾಸ್ತ್ರ ಬೆಳೆದಿರುವುದೇ ಇಂತಹ ಪರಸ್ಪರ ಚರ್ಚೆ ವಾಗ್ವಾದಗಳಿಂದಲೇ ಆಗಿದೆ. ಎಷ್ಟೋ ಸಂದರ್ಭದಲ್ಲಿ ಅತ್ಯಂತ ತೀವ್ರವಾದ ಚರ್ಚೆಗಳು ನಡೆದಿವೆ. ವಚನಗಳಲ್ಲಿಯೇ ವೈದಿಕ ಸಾಹಿತ್ಯದ ವಿರುದ್ಧ, ಗೋವಿಂದನ ವಿರುದ್ಧ ಖಡ್ಗ ಜಳಪಿಸಿರುವುದನ್ನು ನೋಡಬಹುದು. ಆ ಪರಂಪರೆ ಇಂದಿಗೂ ಮುಂದುವರಿದಿದೆ. ಇದೇ ಪುರೋಹಿತಶಾಹಿಗಳನ್ನು ಕಣ್ಣು ಕುಕ್ಕುತ್ತಿರುವುದು.ಈ ಹಿನ್ನೆಲೆಯಲ್ಲಿ ನೋಡಿದರೆ ಭಗವಾನ್ ಅವರು ಈಗಾಗಲೇ ವೈದಿಕ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಸಂಗತಿಗಳನ್ನು ಹೆಕ್ಕಿ ತಂದು ಓದುಗರ ಮುಂದಿಡುತ್ತಿದ್ದಾರೆ. ಅವು ಹೊಸ ವಿಚಾರಗಳೇನೂ ಅಲ್ಲ. ಅದಕ್ಕಿಂತ ಹೆಚ್ಚು ತೀಕ್ಶ್ಣವಾಗಿ ಕುವೆಂಪು ಮತ್ತು ಅಂಬೇಡ್ಕರ್ ಅವರು ವೈದಿಕಶಾಹಿಯನ್ನು ಪ್ರಶ್ನಿಸಿದ್ದಾರೆ. ಹಾಗಾಗಿ ಭಗವಾನ್ ಅವರು ಮಂಡಿಸುವ ವಿಚಾರವನ್ನು ಬೇಕಿದ್ದವರು ಒಪ್ಪಬಹುದು; ಉಳಿದವರು ಉದಾಸೀನ ಮಾಡಬಹುದು. ಅದನ್ನು ಬಿಟ್ಟು ಅವರನ್ನು ಗುರಿಯಾಗಿಸಿ ದಾಳಿ ಮಾಡುವುದು ಕ್ರೂರ ಮತ್ತು ಅಮಾನವೀಯ ನಡೆ.
ಇದು ಖಂಡನಾರ್ಹ. ಆದರೆ ಇವರ ಮೇಲಿನ ದಾಳಿಯನ್ನು ಕೆಲವು ವಾಹಿನಿಗಳು ‘ಹಿಂದೂ ವಿರೋಧಿಗೆ ಮಂಗಳಾರತಿ’ ಎಂದು ಸಂಭ್ರಮಿಸುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ದಾಳಿಯನ್ನು ವೈಭವೀಕರಿಸಿರುವ ವಿಕೃತ ಸುದ್ದಿಗಳು ಹರಿದಾಡುತ್ತಿವೆ. ಇದು ನಿಜಕ್ಕೂ ದುರಂತ ಸಂಗತಿ. ಅಂದರೆ ಇದು ವಿಚಾರವಾದದ ವಿರುದ್ದ ಸಂಘಟಿತ ದಾಳಿಯನ್ನು ನಡೆಸುವುದರ ಭಾಗವಾಗಿ ಈ ದಾಳಿ ನಡೆದಿರುವುದು ಸ್ಪಷ್ಟ ವಾಗುತ್ತದೆ. ಭಗವಾನ್ ಅವರು ಇಲ್ಲಿ ಕೇವಲ ನೆಪ ಅಷ್ಟೆ. ಅವರನ್ನು ನೆಪವಾಗಿಸಿಕೊಂಡು ಇಡೀ ಕನ್ನಡದ ವೈಚಾರಿಕ ಪರಂಪರೆಯ ಮೇಲೆ ದಾಳಿ ಮಾಡಲಾಗುತ್ತಿದೆ. ಅಪಪ್ರಚಾರದ ಮೂಲಕ ಕನ್ನಡದ ಆರೋಗ್ಯಕರ ವಿಚಾರ ಪರಂಪರೆಯ ಮೇಲೆ ಜನರನ್ನು ಎತ್ತಿಕಟ್ಟಲಾಗುತ್ತಿದೆ. ಹಾಗೆ ಎತ್ತಿಕಟ್ಟಿರುವುದರ ಭಾಗವಾಗಿಯೇ ಈ ದಾಳಿ ನಡೆದಿದೆ. ಪುರೋಹಿತಶಾಹಿಗಳ ವಿಕೃತ ರಾಜಕಾರಣಕ್ಕೆ ಆಯಾ ಕ್ಶೇತ್ರಕ್ಕೆ ಒಬ್ಬೊಬ್ಬ ಶತ್ರುಗಳನ್ನು ಸೃಸ್ಟಿ ಸಿಕೊಂಡಂತೆ ಕನ್ನಡದ ವೈಚಾರಿಕತೆಯ ಮೇಲಿನ ವಿಕೃತ ದಾಳಿಗಳಿಗೆ ಭಗವಾನ್ ಅವರನ್ನು ನೆಪ ಮಾಡಿಕೊಳ್ಳಲಾಗಿದೆಯಷ್ಟೆ. ಹಾಗಾಗಿ ಅವರು ಇಡೀ ವಚನಕಾರರು, ಕುವೆಂಪು ಮತ್ತು ಇತರ ವಿಚಾರಪರಂಪರೆಯ ಪ್ರತಿನಿಧಿಯಾಗಿ ದಾಳಿಗೆ ಒಳಗಾಗಿದ್ದಾರೆ. ಇದನ್ನು ಕನ್ನಡದ ಬರೆಹಗಾರ ಸಮುದಾಯ ಒಕ್ಕೊರಲಿನಿಂದ ಹಿಮ್ಮೆಟ್ಟಿಸಬೇಕಾಗಿದೆ. ಇಲ್ಲದೆಹೋದರೆ ಈ ನೆಲದ ದಮನಿತ ಸಮುದಾಯಗಳನ್ನು ಮತ್ತೊಂದು ಸಹಸ್ರಮಾನಗಳ ಕಾಲ ಹಿಂದಕ್ಕೆ ತುಳಿದುಬಿಡುತ್ತಾರೆ.
ಪುರೋಹಿತಶಾಹಿಗೆ ಮೌಢ್ಯವೇ ನಿಯಂತ್ರಣದ ಸಾಧನ. ದಮನಿತ ಸಮುದಾಯಗಳಿಗೆ ವೈಚಾರಿಕತೆಯೇ ಬಿಡುಗಡೆಯ ದಾರಿದೀಪ. ದಾರಿದೀಪಗಳನ್ನು ಉಳಿಸಿಕೊಳ್ಳಲು ಎಲ್ಲರೂ ಈ ದಾಳಿಯನ್ನು ವಿರೋಧಿಸಬೇಕಿದೆ.
-ರಂಗನಾಥ ಕಂಟನಕುಂಟೆ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
