

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಹಣ ಸಂಗ್ರಹ ಮಾಡುತ್ತಿರುವವರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ….
ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ತಕ್ಕ ಫಲ ಸಿಗಲಿದೆ: ಎಚ್.ಡಿ. ಕುಮಾರಸ್ವಾಮಿ
“ರಾಮನ ಹೆಸರಿನ ಮೇಲೆ ನಡೆಯುತ್ತಿರುವ ರಾಜಕೀಯ, ಹಣದ ಕೊಳ್ಳೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಸ್ತುತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ.

ಬೆಂಗಳೂರು: “ರಾಮನ ಹೆಸರಿನ ಮೇಲೆ ನಡೆಯುತ್ತಿರುವ ರಾಜಕೀಯ, ಹಣದ ಕೊಳ್ಳೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಸ್ತುತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ. ಇವರಿಗೆ ನೆನಪಿರಲಿ, ದೇವರಿಗಾಗಿ ನಾವು ಮಾಡಿದಷ್ಟು ಪ್ರಾರ್ಥನೆ, ಪೂಜೆಗಳ ಮುಂದೆ, ಈ ನಕಲಿಗಳು ಮಾಡಿದ ‘ಅಧಿಕಾರ ರಾಮ ಜಪ’ ಕಾಲು ಭಾಗಕ್ಕೂ ಸಾಲದು” ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ನೀಡಿದವರ ಮನೆಗೆ ಗುರುತು ಹಾಕುವ ಸಾಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಇಂದು ಸರಣಿ ಟ್ವೀಟ್ ಮಾಡಿ ಎದುರಾಳಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.
“ಇಚ್ಛೆಗಳನ್ನಿಟ್ಟುಕೊಂಡು ದೇವರನ್ನು ಆರಾಧಿಸುವುದೇ ತಪ್ಪು. ಅಂಥದ್ದರಲ್ಲಿ ದೇವರನ್ನು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ, ಹಣಕ್ಕಾಗಿ ಬಳಸಿಕೊಳ್ಳುವುದು ಧಾರ್ಮಿಕ ಭ್ರಷ್ಟಾಚಾರ. ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ಮುಂದೆ ತಕ್ಕ ಫಲ ಸಿಗಲಿಕ್ಕಿದೆ.ಈಗ ಅರಚುವವರೆಲ್ಲರೂ ಅದಕ್ಕಾಗಿ ಕಾಯಲಿ.ಅದರ ಫಲವನ್ನೂ ಉಣ್ಣಲಿ.” ಎಂದು ಅವರು ಹೇಳಿದ್ದಾರೆ.
“ಆಗಾಗ್ಗೆ ಈ ಮಾತು ಹೇಳುತ್ತಿರುತ್ತೇನೆ. ನಮ್ಮ ನಡುವಿನ ನಿಷ್ಕಪಟ, ಕಳಂಕವಿಲ್ಲದ ಜಾತ್ಯತೀತವಾದಿ ದೇವೇಗೌಡರು. ತಮ್ಮ ಧರ್ಮದ ಬಗ್ಗೆ ಆಳವಾದ ನಂಬಿಕೆ ಇದ್ದೂ, ಪರಧರ್ಮದ ಬಗ್ಗೆ ಅಪಾರ ಗೌರವ ಉಳ್ಳವರವರು. ಅವರಷ್ಟು ದೈವತ್ವ ನಂಬಿದವರು, ದೇಗುಲ ನೋಡಿದವರು ಇನ್ನೊಬ್ಬರಿಲ್ಲ. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು.
“ಪ್ರಧಾನಿ ಸ್ಥಾನ ಕೊಟ್ಟಿದ್ದೂ ದೇವರೇ, ಆ ಸ್ಥಾನದಲ್ಲಿ ಮುಂದುವರಿಯುವ ಅಥವಾ ಸ್ಥಾನ ತೊರೆಯುವ ಅವಕಾಶಗಳಿದ್ದರೂ ಸ್ಥಾನ ತೊರೆಯಬೇಕೆಂಬ ನಿರ್ಣಯ ಕೊಟ್ಟಿದ್ದೂ ದೇವರೇ,” ಇದು ಶೃಂಗೇರಿ ಜಗದ್ಗುರುಗಳ ಎದುರು ದೇವೇಗೌಡರು ಪ್ರಮಾಣಿಕವಾಗಿ, ಬಹಿರಂಗವಾಗಿ ಹೇಳಿದ್ದ ಮಾತು. ಇದು ನಮ್ಮ ದೈವ ಬದ್ಧತೆಗೆ ಸಾಕ್ಷಿ. ಇದು ನಮಗಿರುವ ದೈವ ಕೃಪೆಗೂ ಸಾಕ್ಷಿ!
“ದೇವರ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ನನ್ನನ್ನು ಹಾಗೂ ನನ್ನ ಕುಟುಂಬವನ್ನು ಟೀಕೆ ಮಾಡುವವರು, ಬಾಯಿಗೆ ಬಂದಂತೆ ಮಾತನಾಡುವವರು ಒಂದಲ್ಲ ಹತ್ತು ಬಾರಿ ಯೋಚನೆ ಮಾಡುವುದು ಒಳಿತು. ಯಾಕೆಂದರೆ, ನಾನಾಗಲಿ, ನನ್ನ ಕುಟುಂಬವಾಗಲಿ ಈಗ ದೇಶದಲ್ಲಿ ಕೆಲವರಿಂದ ನಡೆಯುತ್ತಿರುವ ಧಾರ್ಮಿಕ ಭ್ರಷ್ಟಾಚಾರದಂಥ ಕೃತ್ಯ ಮಾಡಿಲ್ಲ!
“ಒಬ್ಬರು ಹೇಳಿದ್ದಾರೆ… ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ಕುಮಾರಸ್ವಾಮಿ ದೇಣಿಗೆ ನೀಡಲಿ ಎಂದು. ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ. ನಮ್ಮೆಲ್ಲರ ಭಕ್ತಿ, ಭಾವನೆಗಳನ್ನು ಹಣವಾಗಿ, ಅಧಿಕಾರವಾಗಿ ಪರಿವರ್ತಿಸುವ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ.
“ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಗುರುತಿಸಿರುವ ಧಾರ್ಮಿಕ ಮುಖಂಡರೊಬ್ಬರು ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮನ ಭಕ್ತಿಯು ಹಣ,ಅಧಿಕಾರ,ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆದಿದ್ದರೆ,ಅದು ಅವರ ಜವಾಬ್ದಾರಿಯ ಸಮರ್ಥ ನಿರ್ವಹಣೆ ಆಗಿರುತ್ತಿತ್ತು.ಅದು ಬಿಟ್ಟು ರಾಜಕೀಯದ ಹೇಳಿಕೆ ನೀಡುವುದು ಧಾರ್ಮಿಕ ನಾಯಕರಿಗೆ ಶೋಭೆಯಲ್ಲ
“ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾಶಿರ್ವಾದದಿಂದ 2 ಬಾರಿ ಸಿಎಂ ಆದ ನಾನು ಇನ್ನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ.
“ಇತಿಹಾಸ ಹೇಳುತ್ತಾ ನಿಂತಿರುವ ಪುರಾತನ ದೇಗುಲಗಳ ಹಿಂದೆ ಜನರನ್ನು ವಿಭಜಿಸಿದ ಕತೆಗಳಿಲ್ಲ. ಆ ದೇಗುಲಗಳ ನಿರ್ಮಾಣಕ್ಕಾಗಿ ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿದ ಉಲ್ಲೇಖವಿಲ್ಲ. ದೇವರನ್ನು ರಾಜಕೀಯಕ್ಕಾಗಿ ಉಪಯೋಗಿಸಿಕೊಂಡ ಉಲ್ಲೇಖವಿರುವ ಒಂದೇ ಒಂದು ಶಾಸನ ನಮಗೆ ಸಿಕ್ಕಿಲ್ಲ. ಈಗ ಇಂಥ ಕೃತ್ಯ ಮಾಡುತ್ತಿರುವವರು ದಯವಿಟ್ಟು ನಿಲ್ಲಿಸಿ.
“ಈ ವಿಚಾರವಾಗಿ ಮಕ್ಕಳು-ಮರಿಗಳಿಗೆ, ಅಪ್ಪನ ಅಧಿಕಾರದ ಹಿಂದೆ ಅಡಗಿ ದುಡ್ಡು ಕೊಳ್ಳೆ ಹೊಡೆಯುತ್ತಿರುವ ಸ್ವಘೋಷಿತ ನವ ಇಲಿಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಇಷ್ಟು ಹೇಳಿಯೂ ಅರ್ಥವಾಗದವರಿಗೆ ಹೇಳುವುದು ಇಷ್ಟೆ-ರಾಮಮಂದಿರ ಹಿಂದೂಗಳ ಭಕ್ತಿ,ಭಾವನೆಗಳ ಮೂರ್ತ ರೂಪ ಅದು ಆಗಬೇಕು. ಆದರೆ ಅದೇ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧವಿದೆ” ಹೀಗೆಂದು ಕುಮಾರಸ್ವಾಮಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಹಣ ಸಂಗ್ರಹ ಮಾಡುತ್ತಿರುವವರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು, ಬೀದಿಯಲ್ಲಿ ಹೋಗುವ ಪುಂಡು ಪೋಕರಿಗಳೆಲ್ಲಾ ಹಣ ಮಸೂಲಿಗೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹದಲ್ಲಿ ಪಾರದರ್ಶಕತೆ ವಿಧಾನ ಅನುಸರಿಸುತ್ತಿಲ್ಲ. ಮಂದಿರ ನಿರ್ಮಿಸಲು ನಾನು ಹಣ ಕೊಡುವುದಿಲ್ಲ ಎಂದು ಹೇಳಿಲ್ಲ. ಸೂಕ್ತ ಮತ್ತು ಅರ್ಹ ವ್ಯಕ್ತಿಗಳು ಬಂದು ಹಣ ಕೇಳಿದರೆ ಒಂದಲ್ಲ, ಎರಡು ಬಾರಿ ದೇಣಿಗೆ ಕೊಡುತ್ತೇನೆ. ಆದರೆ ಎಲ್ಲೆಂದರಲ್ಲಿ ವಸೂಲಿ ಮಾಡುವುದು ನಿಲ್ಲಬೇಕು ಎಂದು ಒತ್ತಾಯಿಸಿದರು.

https://imasdk.googleapis.com/js/core/bridge3.441.0_debug_en.html#goog_473320159
ಆದರೆ ನಾನಾಗಲಿ ನನ್ನ ಕುಟುಂಬವಾಗಲೀ ಧರ್ಮವನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಧರ್ಮವನ್ನು ಬಳಸಿ ರಾಜಕಾರಣವನ್ನೂ ಮಾಡುತ್ತಿಲ್ಲ. ಮಾಡುವುದೂ ಇಲ್ಲ. ದೇಣಿಗೆ ಹೆಸರಲ್ಲಿ ಹಣ ದುರ್ಬಳಕೆಯಾಗುತ್ತಿದೆ. ಇದರ ಲೆಕ್ಕ ಇಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಅವರ ಹೇಳಿಕೆಗೆ ವಿಶ್ವಹಿಂದು ಪರಿಷತ್, ಸಂಘಪರಿವಾರ ಸೇರಿದಂತೆ ಬಿಜೆಪಿಯ ಕೆಲ ನಾಯಕರು ಆಕ್ರೋಶವ್ಯಕ್ತಪಡಿಸಿದ್ದು, ಕುಮಾರಸ್ವಾಮಿ ಪ್ರಚಾರಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದರು.
ಇಂದು ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ, ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ನಿರಾಕರಿಸಿದ್ದಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ. ನನಗೇ ಬೆದರಿಕೆ ಹಾಕುತ್ತಿದ್ದಾರೆ ಎಂದ ಮೇಲೆ ಇನ್ನು ಸಾಮಾನ್ಯರ ಜನರ ಪಾಡೇನು? ಎಂದು ಪ್ರಶ್ನಿಸಿದರು.
ದೇಶದಲ್ಲಿ ಮುಕ್ತವಾಗಿ ಮಾತನಾಡುವ ಹಕ್ಕು, ನೆಮ್ಮದಿಯನ್ನು ಬಿಜೆಪಿ ಸರ್ಕಾರ ಕಸಿದುಕೊಂಡು ದೇಶವನ್ನು ಶಿಲಾಯುಗಕ್ಕೆ ಕೊಂಡೊಯ್ಯುತ್ತಿದೆ. ನನ್ನ ಹೇಳಿಕೆ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಕೊಟ್ಟ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದರು.
ದೇಣಿಗೆ ಕೊಟ್ಟವರ ಮನೆಗಳಿಗೆ ಸ್ಟಿಕ್ಕರ್ ಹಾಕುವುದಾಗಿ ಒಪ್ಪಿಕೊಂಡಿದ್ದಾರೆ. ಶ್ರೀರಾಮಮಂದಿರಕ್ಕೆ ಪಾರದರ್ಶಕವಾಗಿ ಹಣ ಸಂಗ್ರಹ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರವೇನಿಲ್ಲ. ರಾಮನ ಹೆಸರನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಂಡು ಪುಂಡಪೋಕರಿಗಳು ಹಣ ಸಂಗ್ರಹ ಮಾಡುತ್ತಿದ್ದಾರೆ. ವಿಶ್ವಹಿಂದು ಪರಿಷತ್ ಇದಕ್ಕೆ ಅವಕಾಶ ಕೊಟ್ಟಿದೆ. ನೆರೆ ಪ್ರವಾಹದ ವೇಳೆಯೂ ಕೆಲವರು ಹಣ ಸಂಗ್ರಹಿಸಿ ಸಂತ್ರಸ್ಥರಿಗಾಗಿ ಹಣ ವಿನಿಯೋಗಿಸದೆ ದುರ್ಬಳಕೆ ಮಾಡಿಕೊಂಡರು. ಅದೇ ರೀತಿ ಈಗಲೂ ಆದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ದೇವೇಗೌಡರು ಕುಟುಂಬ ರಾಜಕಾರಣ ಮಾಡಿದ್ದಾರೆಯೇ ಹೊರತು ಚಿಲ್ಲರೆ ರಾಜಕಾರಣ ಮಾಡಿದವರಲ್ಲ. ಇಂತಹ ಸಂದರ್ಭದಲ್ಲಿ ಯಾರೂ ಧಾರ್ಮಿಕ ರಾಜಕಾರಣ ಮಾಡಬಾರದು ಎಂದರು.
ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಮಲ್ಲೇಶ್ವರಂನಲ್ಲಿ ಜಾಕ್ ಎತ್ತಿ ಕೋಟ್ಯಾಂತರ ರೂ. ಹೊಡೆದವರು ಯಾರು?. ಮೊದಲು ಅದನ್ನು ಒಪ್ಪಿಕೊಳ್ಳಬೇಕು.
ನಾಜಿ ಸಂಸ್ಕೃತಿ ಬಗ್ಗೆ ನಾನು ಮಾತನಾಡಿಲ್ಲ. ಆರ್ ಎಸ್ ಎಸ್, ನಾಜಿ ಬಗ್ಗೆ ಇತಿಹಾಸತಜ್ಞರು ಉಲ್ಲೇಖಿಸಿರುವುದನ್ನು ನಾನು ವಿವರಿಸಿದ್ದೇನೆ. ದೇಶಕ್ಕೆ ಆರ್.ಎಸ್.ಎಸ್.ನ ಕೊಡುಗೆಯೇನು? ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು.
ಬಡವರು ಗ್ಯಾಸ್ ಖರೀದಿಸುತ್ತಿಲ್ಲ. ಕೋವಿಡ್ ನಿಂದ ಜನ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ನಾನು ಲಘುವಾಗಿ ಮಾತನಾಡುವವನಲ್ಲ. ಸಮಸ್ಯೆ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆಯೇ ಹೊರತು ರಾಮನ ವಿರುದ್ಧವಾಗಿ ಮಾತನಾಡಿಲ್ಲ. ಧರ್ಮದ ಹೆಸರಿನಲ್ಲಿ ಲೂಟಿ ಸಲ್ಲದು ಎಂದರು.
ಸಾಮಾಜಿಕ ಕಾರ್ಯಕರ್ತೆ, ಬೆಂಗಳೂರಿನ ದಿಶಾ ರವಿ ಬಂಧನ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಹಲವು ಸಮಸ್ಯೆಗಳ ಬಗ್ಗೆ ಆ ಹೆಣ್ಣುಮಗಳು ಹೋರಾಟ ಮಾಡಿದ್ದಾಳೆ. ಅಂತಹ ಹೆಣ್ಣುಮಗಳು ದೇಶದ ಭದ್ರತೆಗೆ ಧಕ್ಕೆ ತರಲು ಸಾಧ್ಯವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಆ ಹೆಣ್ಣುಮಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಯಾರಾದರೂ ಕೇಂದ್ರದ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ. ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದಿದ್ದರು. ಆದರೆ ಬಿಜೆಪಿ ನಾಯಕರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕೊಲ್ಲುತ್ತಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದರ ವಿರುದ್ಧ ದೇಶದ ಜನರೇ ಹೋರಾಟ ಆರಂಭಿಸಬೇಕು. ಪ್ರತಿಯೊಬ್ಬ ನಾಗರಿಕ ಈ ಬಗ್ಗೆ ಚಿಂತನೆ ಮಾಡಬೇಕು. ಪೆಟ್ರೋಲ್, ಡಿಸೇಲ್ ಬೆಲೆ ಏರುತ್ತಲೇ ಇದೆ. ಈ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಜನರ ಅರಿವಿಗೇ ಇದು ಬರಬೇಕು. ಇವರ ಆಟಗಳಿಗೆಲ್ಲವೂ ಅಂತಿಮ ದಿನಗಳು ಬರುತ್ತವೆ ಎಂದು ಭವಿಷ್ಯ ನುಡಿದರು. (kpc)

