

ಕೃಷಿ ಕಾನೂನುಗಳ ತಿದ್ದುಪಡಿ, ಪೆಟ್ರೋಲ್,ಡಿಸೈಲ್ ಸೇರಿದಂತೆ ಅವಶ್ಯವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕನ್ನು ದುರ್ಬರ ಮಾಡಿರುವ ಶ್ರೀಮಂತರ ಪಕ್ಷ ಬಿ.ಜೆ.ಪಿ. ಮತ್ತು ಪ್ರಧಾನಿ ಮೋದಿ ವಿರುದ್ಧ ದೇಶದಾದ್ಯಂತ ಜನಾಂದೋಲನ ಮಾಡಬೇಕಾದ ಅನಿವಾರ್ಯತೆ ಇದ್ದು ಈ ಜನಾಂದೋಲನಕ್ಕೆ ಕಾಂಗ್ರೆಸ್ ನೇತೃತ್ವ ವಹಿಸಲಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಭೀಮಣ್ಣ ನಾಯ್ಕ ಮಳಲಗಾಂವ್ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಕಾಂಗ್ರೆಸ್ ಸಂಘಟಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ದೇಶದ ಬಡವರಿಗಾಗಿ ಭೂಸುಧಾರಣೆ ಕಾನೂನು, ಜನಸಾಮಾನ್ಯರು ಬಡವರಿಗಾಗಿ ಅನೇಕ ಕಾಯಿದೆ ಕಾನೂನುಗಳನ್ನು ಜಾರಿ ಮಾಡಿ ದೇಶಕ್ಕಾಗಿ ಶ್ರಮಿಸಿದ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ಮೋದಿ ಬಡವರ ಪರವಾಗಿದ್ದ ಕಾಯಿದೆ ಕಾನೂನುಗಳನ್ನು ತಿರುಚಿ ಕೆಲವರಿಗೆ ಅನುಕೂಲ ಮಾಡುವ ಕೆಲಸ ಮಾಡುತಿದ್ದಾರೆ. ಇಂಥ ಜನವಿರೋಧಿ ಪ್ರಧಾನಿ ಮತ್ತವರ ಸರ್ಕಾರದ ಜನದ್ರೋಹಿ ಆಡಳಿತದ ವಿರುದ್ಧ ಕಾಂಗ್ರೆಸ್ ಜನಾಂದೋಲನ ಮಾಡಲಿದೆ ಎಂದರು.
ಪ್ರತಿಭಟನೆಯ ಅಂಗವಾಗಿ ನಡೆದ ಪಾದಯಾತ್ರೆ ನಗರದ ಹೊಸೂರು ಸಾಗರ ವೃತ್ತದಿಂದ ಪ್ರಾರಂಭವಾಗಿ ತಹಸಿಲ್ಧಾರ ಕಛೇರಿಯ ಎದುರು ಸಮಾವೇಶಗೊಳ್ಳುವ ಮೊದಲು ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿತು.
ತಹಸಿಲ್ಧಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾ ಕಾರರು ದೇಶದಲ್ಲಿ ಬೆಲೆಏರಿಕೆ ನಿಯಂತ್ರಿಸುವುದು ಮತ್ತು ಕೃಷಿ ಕಾನೂನುಗಳ ಹೊಸತಿದ್ದುಪಡಿ ರದ್ದುಪಡಿಸುವಂತೆ ಸರ್ಕಾರಕ್ಕೆ ನಿರ್ಧೇಶನ ಮಾಡಲು ಆಗ್ರಹಿಸಿದರು. ಈ ಸಮಯದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಹಿಂದುಳಿದ ಘಟಕದ ಉಪಾಧ್ಯಕ್ಷ ವಿ.ಎನ್. ನಾಯ್ಕ ಬೇಡ್ಕಣಿ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಳಲವಳ್ಳಿ ಹಳ್ಳಿಯಿಂದ ದೆಲ್ಲಿ ಯವರೆಗೆ ಬಿ.ಜೆ.ಪಿ. ಆಡಳಿತ ಪಕ್ಷಪಾತ, ಜನವಿರೋಧಿ ನೀತಿಗಳಿಂದ ಕೂಡಿದ್ದು ಈ ಜನದ್ರೋಹಿ ಆಡಳಿತವನ್ನು ಹಿಮ್ಮೆಟ್ಟಿಸಿ ಜನಪರ ವ್ಯಕ್ತಿ-ಸರ್ಕಾರಗಳನ್ನು ತರಲು ಜನಹೋರಾಟ ಅನಿವಾರ್ಯ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳಿಯ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳೊಂದಿಗೆ ನೂರಾರು ಜನರು ಭಾಗವಹಿಸಿದ್ದರು.




