
ದಿಶಾ ಕೇಸ್…! ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ ! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು !—-ದಿಶಾ ಯಾರೊಂದಿಗೋ ಸಂಪರ್ಕದಲ್ಲಿದ್ದರು ಎಂಬ ಕಾರಣಕ್ಕಾಗಿ ಅಪರಾಧಿ ಹೇಗಾಗುತ್ತಾರೆ ? ನಾನು ದೇವಸ್ಥಾನಕ್ಕೆ ದಾನ ಕೊಡಿ ಎಂದು ದರೋಡೆಕೋರನನ್ನು ಸಂಪರ್ಕಿಸುತ್ತೇನೆ. ಆಗ ನಾನು ದರೋಡೆಯ ಭಾಗವಾಗುತ್ತೇನೆಯೇ ?” ಎಂದು ನ್ಯಾಯಾಧೀಶರು ದಿಶಾ ಜಾಮೀನು ಅರ್ಜಿ ವಿಚಾರಣೆಯ ವೇಳೆ ಸರ್ಕಾರವನ್ನು ಪ್ರಶ್ನಿಸಿದರು.
ನಾನು ಪರಿಸರ, ರೈತ ಕಾರ್ಯಕರ್ತೆಯೇ ಹೊರತು ದೇಶದ ವಿರುದ್ದ ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತಲಿಲ್ಲ. ಟೂಲ್ ಕಿಟ್ ಎಂಬುದು ಕೇವಲ ಕಾರ್ಯಕ್ರಮದ ರೂಪುರೇಷೆಯ ದಾಖಲೆಗಳಷ್ಟೆ ಎಂದು ಪೊಲೀಸ್ ಬಂಧನದಲ್ಲಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯ ವೇಳೆ ಟೂಲ್ ಕಿಟ್ ಬಗ್ಗೆ ನ್ಯಾಯಾಲಯಕ್ಕೆ ಸ್ಪಷ್ಟ ಮಾಹಿತಿ ನೀಡಿರುವ ದಿಶಾ ರವಿ, ರೈತರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮ ಆಯೋಜಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತು. ದೇಶ ಮತ್ತು ಸೈನ್ಯಕ್ಕೂ ಟೂಲ್ ಕಿಟ್ ಗೈ ಸಂಬಂಧವಿಲ್ಲ. ನಮಗೂ ಖಲಿಸ್ತಾನ್ ಬೆಂಬ ಲಿತ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಗೂ ಸಂಬಂಧ ಇಲ್ಲ ಎಂದು ದಿಶಾ ಪರ ವಕೀಲರು ವಾದ ಮಂಡಿಸಿದ್ದಾರೆ. ಭಾರತದ ರೈತ ಹೋರಾಟವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ 21 ವರ್ಷದ ಯುವ ಹೋರಾಟಗಾರ್ತಿ ದಿಶಾರನ್ನು ದೆಹಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇಂದು ಜಾಮೀನು ಅರ್ಜಿ ವಿಚಾರಣೆ ವೇಳೆ ಖಲಿಸ್ತಾನ್ ಆರೋಪ, ದೇಶದ್ರೋಹ ಆರೋಪಕ್ಕೆ ಪೂರಕವಾಗಿ ಪ್ರಾಥಮಿಕ ಸಾಕ್ಷ್ಯ ನೀಡಲು ಪೊಲೀಸರು ವಿಫಲರಾದರು.
“ನಾನು ಕರ್ನಾಟಕ ಮೂಲದ 21 ವರ್ಷ ವಯಸ್ಸಿನ ಹೋರಾಟಗಾರ್ತಿ. ಖಲಿಸ್ತಾನ್ ಚಳವಳಿಯೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ದೆಹಲಿ ಪೊಲೀಸರು ಆರೋಪಿಸಿದಂತೆ ನಿಷೇಧಿತ ಸಂಸ್ಥೆಯಾಗಿರುವ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಜೊತೆ ನಾನು ಮಾಡಿರುವ ಒಂದೇ ಒಂದು ಸಂಪರ್ಕ ಅಥವಾ ಸಂಭಾಷಣೆ ಇಲ್ಲ. ಅಂತಹ ದಾಖಲೆಗಳನ್ನು ಪೊಲೀಸರು ನ್ಯಾಯಾಲಯಕ್ಕೂ ಒದಗಿಸಿಲ್ಲ” ಎಂದು ದಿಶಾ ಪರ ವಕೀಲರು ನ್ಯಾಯಮೂರ್ತಿ ಧರ್ಮೇಂದ್ರ ರಾಣಾ ಅವರಿಗೆ ಮನವಿ ಮಾಡಿದರು.
“ಭಾರತದ ಯೋಗವನ್ನು ಕೂಡಾ ದಿಶಾ ಗುರಿಯಾಗಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ನಾನು ಕುಂಗ್ ಫೂಗೆ ಆದ್ಯತೆ ನೀಡಿದರೆ, ನಾನು ಚೀನಾದೊಂದಿಗೆ ಸೇರಿ ಭಾರತದ ವಿರುದ್ದ ಪಿತೂರಿ ನಡೆಸುತ್ತಿದ್ದೇನೆ ಎಂದು ಅರ್ಥವೇ? ಅದು ದೇಶದ್ರೋಹವೇ?” ದಿಶಾ ರವಿ ಅವರ ವಕೀಲಸಿದ್ಧಾರ್ಥ್ ಅಗರ್ವಾಲ್ ಕೇಳಿದರು.
ಜನವರಿ 26 ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಶಾ ರವಿ ಝೂಮ್ ಕಾಲ್ ಮೂಲಕ ಮಾತನಾಡಿದ್ದಾರಾ ? ಎಂದು ನ್ಯಾಯಾಧೀಶರು ಕೇಳಿದರು. “ಹಿಂಸಾಚಾರ ಅಥವಾ ಹಿಂಸಾಚಾರದ ಪ್ರಚೋದನೆ ಇದ್ದರೆ ಅದು ಅಪರಾಧ. ಆದರೆ ದಿಶಾ ವಿರುದ್ಧದ ಆರೋಪವೇನು? ದಿಶಾ ಜೂಮ್ ಕಾಲ್ ನ ಭಾಗವಾಗಿದ್ದರೇ ? ಜೂಮ್ ಕಾಲ್ ನಲ್ಲಿ ದಿಶಾ ಮಾತನಾಡಿದ್ದರೆ?” ಎಂದು ದಿಶಾ ವಕೀಲರು ಪ್ರಶ್ನಿಸಿದರು.
ಖಾಲಿಸ್ತಾನ್ ಗ್ರೂಪ್ ನ ಎಂಒ ದಲೀವಾಲ್ ಜೊತೆ ಝೂಮ್ ಕಾಲ್ ನಲ್ಲಿ ದಿಶಾ ಮಾತಾಡಿದ್ದಾರೆ ಎಂದು ಹೇಳುತ್ತೀರಿ. ಕೆಟ್ಟ ವ್ಯಕ್ತಿಯ ಜೊತೆ ಮಾತಾಡುವುದು ಅಪರಾಧ ಹೇಗಾಗುತ್ತದೆ ? ಎಂದು ನ್ಯಾಯಾಧೀಶರು ಸರ್ಕಾರದ ವಕೀಲರನ್ನು ಪ್ರಶ್ನಿಸಿದರು. “ಎಂಒ ದಲೀವಾಲ್ ಯಾರು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಿದ್ದರೂ ದಿಶಾ ಅವನ ಜೊತೆ ಯಾಕೆ ಮಾತನಾಡಬೇಕಿತ್ತು ?” ಎಂದು ಪೊಲೀಸ್ ಪರ ವಕೀಲರು ಮರಳಿ ಪ್ರಶ್ನಿಸಿದರು. “ಹಾಗೇನೂ ಇಲ್ಲ. ಎಂಒ ದಲೀವಾಲ್ ಯಾರು ಎಂಬುದು ನನಗೆ ಈತನಕ ನಿಜಕ್ಕೂ ಗೊತ್ತಿಲ್ಲ” ಎಂದು ನ್ಯಾಯಾಧೀಶರು ಹೇಳಿದರು. ಜನವರಿ 26 ರ ಹಿಂಸಾಚಾರಕ್ಕೂ ದಿಶಾಗೂ ಇರುವ ಸಂಪರ್ಕ, ಸಂಬಂಧಗಳ ಚಿಕ್ಕ ಸಾಕ್ಷ್ಯ ಕೊಡಿ ಎಂದಿ ಸಂಪರ್ಕಿಸಲು ನ್ಯಾಯಾಧೀಶರು ಕೇಳಿದರು. ಇದಕ್ಕೆ ಪೊಲೀಸರು ಪ್ರತಿಕ್ರಿಯಿಸಿ, “ಪಿತೂರಿಯಲ್ಲಿ, ಎಲ್ಲರೂ ಒಂದೇ ಪಾತ್ರವನ್ನು ಹೊಂದಿರುವುದಿಲ್ಲ. ಯಾರಾದರೂ ದಿಶಾ ಟೂಲ್ ಕಿಟ್ ನಿಂದ ಪ್ರಭಾವಿತರಾಗಿರಬಹುದು ಮತ್ತು ಹಿಂಸಾಚಾರದಲ್ಲಿ ಪಾಲ್ಗೊಂಡಿರಬಹುದು” ಎಂದಷ್ಟೆ ಉತ್ತರಿಸಿದರು.
“ಈ ರೀತಿಯ ಉತ್ತರ ನ್ಯಾಯಾಲಯಕ್ಕೆ ತೃಪ್ತಿ ತಂದಿಲ್ಲ. ಟೂಲ್ ಕಿಟ್ ಗೂ ಗಲಭೆಗೂ ನೇರ ಸಂಬಂಧವನ್ನು ತೋರಿಸಿ” ಎಂದು ನ್ಯಾಯಾಧೀಶರು ಪೊಲೀಸರ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜುರವರನ್ನು ಕೇಳಿದರು. ದಿಶಾ ಟೂಲ್ ಕಿಟ್ ಗೂ ದೆಹಲಿ ಗಲಭೆಗೂ ನೇರ ಸಂಪರ್ಕ ಇದೆಯೋ ಅಥವಾ ನಾವು ಊಹೆಗಳನ್ನು ಮಾಡಿಕೊಳ್ಳಬೇಕೋ ಎಂದು ನ್ಯಾಯಾಧೀಶರು ಹೆಚ್ಚುವರಿ ಸಾಲಿಸಿಟರ್ ಜನರಲ್ ರನ್ನು ಪ್ರಶ್ನಿಸಿದರು. ದಿಶಾ ರವಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ವಾದಿಸಿತು. ಯಾವ ಸಾಕ್ಷ್ಯ ಎಂಬುದನ್ನು ಹೇಳಿ ಎಂದಾಗ “ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಸಾಂಧರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ದಿಶಾಳ ಪಿತೂರಿಯನ್ನು ನೋಡಬೇಕು” ಎಂದು ಪೊಲೀಸ್ ಪರ ವಕೀಲರು ಹೇಳಿದರು.
“ಹಾಗಾದರೆ ನೀವು ನೇರ ಸಾಕ್ಷ್ಯ ನೀಡುವುದಿಲ್ಲ. ದಿಶಾಗೂ ಈ ಗಲಭೆಗೂ ನೇರ ಸಂಪರ್ಕ ಇಲ್ಲ ಎಂದು ಭಾವಿಸಲೇ ? ಎಂದು ನ್ಯಾಯಾಲಯ ಪ್ರಶ್ನಿಸಿತು.ಪೊಲೀಸ್ ಪರ ವಕೀಲರು ಇನ್ನೂ ಉತ್ತರವನ್ನು ನೀಡಲು ಸಾಧ್ಯವಾಗದಿದ್ದಾಗ, “ನಾನು ನನ್ನ ಆತ್ಮಸಾಕ್ಷಿಯನ್ನು ತೃಪ್ತಿಪಡಿಸದಿದ್ದರೆ, ನಾನು ಆದೇಶ ನೀಡಲಾಗುವುದಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.” ಜನವರಿ 26 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 140 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೂ ಜನ ಬಂಧಿತರಲ್ಲಿ ಒಬ್ಬ ಯಾರಾದರೂ ದಿಶಾ ಜೊತೆ ಸಂಪರ್ಕ ಹೊಂದಿದ್ದರೆ ? ಪೊಲೀಸರು ಅದಕ್ಕೇನಾದರೂ ಸಾಕ್ಷ್ಯ ನೀಡುತ್ತಾರೆಯೇ ? ಗಲಭೆಯಲ್ಲಿ ಬಂಧಿತ ಯಾವ ಆರೋಪಿ ಜೊತೆಯೂ ದಿಶಾ ಸಂಪರ್ಕದಲ್ಲಿ ಇಲ್ಲ” ಎಂದು ದಿಶಾ ಪರ ವಕೀಲರು ವಾದ ಮಂಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, “ಟೂಲ್ ಕಿಟ್ ಎಂದರೇನು? ಬೆಂಗಳೂರಿನ ಈ ಹುಡುಗಿಗೆ ಜಾಮೀನು ನೀಡುವುದನ್ನು ತಡೆಯುವ ಕಾನೂನು ಯಾವುದು? ದಿಶಾ ರವಿ ವಿರುದ್ಧದ ಸ್ಪಷ್ಟವಾದ ಆರೋಪಗಳು ಯಾವುವು? ಅವಳ ವಿರುದ್ಧದ ಸಾಕ್ಷ್ಯಗಳು ಯಾವುವು?” ಎಂಬ ಮೂರು ಪ್ರಶ್ನೆಗಳನ್ನು ಮುಂದಿಟ್ಟಿತು.”ಪ್ರತ್ಯೇಕತಾವಾದಿ ಸಂಘಟನೆಗಳು ರೈತರ ಪ್ರತಿಭಟನೆಯ ಲಾಭವನ್ನು ಪಡೆಯಲು ಬಯಸಿದ್ದರು. ಅವರಿಗೆ ಭಾರತೀಯ ಮುಖ ಬೇಕಿತ್ತು. ಅವರು ದಿಶಾ ರವಿ ಸೇರಿದಂತೆ ಕೆಲವೇ ಜನರೊಂದಿಗೆ ಸಂಪರ್ಕ ಹೊಂದಿದ್ದರು. ಈ ಟೂಲ್ಕಿಟ್ ತಯಾರಿಸುವ ಸಂಪೂರ್ಣ ಉದ್ದೇಶ ಆರೋಪಿಗಳ ನಡುವಿನ ಪಿತೂರಿಯಾಗಿದೆ” ಎಂದು ಪೊಲೀಸರು ವಾದಿಸಿದರು.
“ಯಾರೊ ಯಾರನ್ನೋ ಸಂಪರ್ಕಿಸಿದರು ಎಂದರೆ ಅಪರಾಧ ಹೇಗಾಗುತ್ತೆ. ನಾನು ದೇವಸ್ಥಾನಕ್ಕೆ ದಾನ ಕೊಡಿ ಎಂದು ದರೋಡೆಕೋರನನ್ನು ಸಂಪರ್ಕಿಸುತ್ತೇನೆ. ಆಗ ನಾನು ದರೋಡೆಯ ಭಾಗವಾಗುತ್ತೇನೆಯೇ ?” ಎಂದು ನ್ಯಾಯಾಧೀಶರು ಸರ್ಕಾರವನ್ನು ಪ್ರಶ್ನಿಸಿದರು.ದಿಶಾ ಟೂಲ್ಕಿಟ್ ತಯಾರಿಸಲಿಲ್ಲ. ದಿಶಾ ರೈತರನ್ನು ಬೆಂಬಲಿಸಲು ಬಯಸಿದ್ದರು. ಫೆಬ್ರವರಿ 3 ರಂದು ದಿಶಾ ಎರಡು ಸಾಲುಗಳನ್ನು ಎಡಿಟ್ ಮಾಡಿದ್ದಾರೆ. ದಿಶಾ ಟೂಲ್ ಕಿಟ್ ಅನ್ನು ಕೇವಲ ರೈತರಿಗಾಗಿ ಬಳಸಿ, ರೈತರಿಗಾಗಿ ಎಡಿಟ್ ಮಾಡಿದ್ದಾರೆ ಎಂದು ದಿಶಾ ಪರ ವಕೀಲರು ಹೇಳಿದರು. ಮಂಗಳವಾರಕ್ಕೆ ಮುಂದಿನ ಕಲಾಪವನ್ನು ಮುಂದೂಡಿರುವ ನ್ಯಾಯಾಲಯವು, ಈ ಪ್ರಕರಣಲ್ಲಿ ಮಾಧ್ಯಮಗಳು ಸಂವೇದನಾಶೀಲತೆಯಿಂದ ವರ್ತಿಸಬೇಕು ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿತು.
– ನವೀನ್ ಸೂರಿಂಜೆಮಾಹಿತಿ – ಎನ್ ಡಿಟಿವಿ ಮತ್ತು ಬಾರ್ ಅ್ಯಂಡ್ ಬೆಂಚ್ ನಿಂದ
