ಅಪ್ಪಯ್ಯ….ಭಾಗ- 14-ನಾಗರಬನದ ಸುತ್ತ……..
ದೇವರ ವಿಚಾರದಲ್ಲಿ ಅಪ್ಪಯ್ಯ ಮಹಾನ್ ಆಸ್ತಿಕ. ಸಣ್ಣವ ಇರುವಾಗಲಿಂದಲೂ ನಾನು ಅಪ್ಪಯ್ಯನ ಶುಕ್ಲಾ ಬರದರಂ ವಿಷ್ಣುಮ್ ಶಶಿವರಣಂ ಮಂತ್ರವನ್ನ ಕೇಳುತ್ತಾ ಬೆಳೆದವನು. ಸಂಜೆ 7 ಗಂಟೆ ಸುಮಾರಿಗೆ ದೇವರ ದೀಪ ಹಚ್ಚಿ ಗೋಡೆಗೆ ಅಂಟಿಸಿರುವ ದೇವರಫೋಟೋಗಳಿಗೆ ಅವರು ಧ್ಯಾನಸ್ಥರಾಗಿ ಮಂತ್ರ ಹೇಳುತ್ತಾ ಕೈ ಗಂಟೆ ಹೊಡೆಯುತ್ತಾ ಪೂಜೆ ಮಾಡುತ್ತಾ ಇರುವ ಅಪ್ಪಯ್ಯನನ್ನು ನೋಡುವುದೇ ಚಂದ. ಇಂದಿಗೂ ಅದೇ ಪೂಜೆ ಮಾಡುತ್ತಾ ಇರುವ ಅಪ್ಪನ ಪೂಜೆಯ ಫೋಟೋಗಳಲ್ಲಿ ಗಣಪತಿ, ಲಕ್ಸ್ಮಿ, ಸರಸ್ವತಿ ಜತೆಗೆ ಶ್ರೀಧರಸ್ವಾಮಿಗಳು ಲಗಾಯಿತಿನಿಂದ ಇದ್ದರೆ ಈಚೆ ದಶಕದಲ್ಲಿ ನಾರಾಯಣಗುರುಗಳ ಫೋಟೋ ಸೇರಿದೆ.ಅಪ್ಪಯ್ಯ ದೇವರ ವಿಚಾರದಲ್ಲಿ ದೊಡ್ಡ ಅಸ್ತಿಕ ಆಗಿದ್ದರೂ ನಮ್ಮ ಮನೆಯಲ್ಲಿ ಹೋಮ ಹವನ ಸತ್ಯನಾರಾಯಣಕಥೆ ಇಂತಹ ಆಚರಣೆ ಸಣ್ಣವಾಗಿನಿಂದ ನಡೆದದ್ದು ಬಹಳ ಕಡಿಮೆ. ನಾನು ಎಂಟನೇ ತರಗತಿ ಇರುವಾಗ ಒಮ್ಮೆ ಅಪ್ಪಯ್ಯ ಅಣಲೆಕಾಯಿ ಹೆಕ್ಕಲು ಹೋದಾಗ ಜೇನುಹುಳು ದಾಳಿಗೆ ಒಳಗಾಗಿ ಹಾಸಿಗೆ ಹಿಡಿದಿದ್ದರು. ಆಗಲೇ ದೀಪಾವಳಿ ವರ್ಷದ ಹಣ್ಣು ಕೊಡುವ ದಿನ ಬಂದಿತ್ತು. ಅಪ್ಪಯ್ಯ ಚೇತರಿಕೆ ಕಾಣಲಿಲ್ಲ. ಆಗ ಬುದ್ದಿಜೀವಿ ಒಬ್ಬ ಬಂದು ನಿಮ್ಮ ಭೂತಪ್ಪನಿಗೆ ಭಟ್ಟರಿಂದ ಪೂಜೆ ಮಾಡಿಸು ಎಂದು ಸಲಹೆ ಕೊಟ್ಟ. ಇಷ್ಟು ವರ್ಷ ಅಪ್ಪಯ್ಯ ನೇ ಪೂಜೆ ಮಾಡಿಕೊಂಡು ಬಂದಿದ್ದ ಭೂತಪ್ಪ ಅದು. ನಮ್ಮ ಜಮೀನಿಗೆ ಹೊಂದಿಕೊಂಡಂತೆ ಇದೆ.ಅಪ್ಪಯ್ಯ ಹಬ್ಬದ ದಿನ ನನ್ನ ಕರೆದುಕೊಂಡು ಹೋಗಿ ಭೂತಪ್ಪ ಬನದಲ್ಲಿ ಅವರೇ ಮೊದಲು ಕೋರಿಕೆ ಮಾಡಿಕೊಂಡು ” ಮಗನ ಪೂಜೆ ನೀ ಸ್ವೀಕರಿಸಬೇಕು” ಎಂದು ಭೂತಪ್ಪನಿಗೆ ಹೇಳಿ ನನ್ನಿಂದ ಪೂಜೆ ಮಾಡಿಸಿದರು. ನನ್ನ ಪಾಲಿನ ಮೊದಲ ಪೂಜೆ ಅದು. ಅಪ್ಪಯ್ಯ ಹೇಳಿಕೊಟ್ಟರು ನಾನು ಪಾಲಿಸಿದೆ.
ನಮ್ಮ ಭೂತಪ್ಪಗೆ ನಾವೇ ಪೂಜೆ ಮಾಡೋಣ ಅಂದರು ದೃಢವಾಗಿ.ಅದರೆ ಮಾರನೇಯ ವರ್ಷ jcb ಜಾಗ ಸಮತಟ್ಟು ಮಾಡುವಾಗ 7 ನಾಗರಕಲ್ಲುಗಳು ಸಿಕ್ಕಿದವು. ಅಪ್ಪಯ್ಯ ಆಗ ಕಲ್ಲುಗಳು ಒಂದೂ ಕೂಡ ಭಿನ್ನ ಆಗಿಲ್ಲ ಎಂದು ಖುಷಿಪಟ್ಟರು. ಕುಂದಾಪುರ ಮೂಲದ ಕುಟುಂಬವಾದ್ದರಿಂದ ಅಲ್ಲಿನ ಕಳ್ಳು ಬಳ್ಳಿಗೆ ಕರೆ ಮಾಡಿ ಸಾಗರದಿಂದ ಅಗಡಿ ಮಠದ ದೊಡ್ಡ ಭಟ್ಟರನ್ನ ಕರೆಸಿ ಪ್ರತಿಷ್ಠೆಯ ಕಾರ್ಯ ನಡೆಯಿತು. ಪ್ರತಿಷ್ಠೆ ಮಾಡಲು ಬೇಕಾದ ಒಂದು ಸಣ್ಣ ಗೋಪುರ ರೀತಿಯ ಕಟ್ಟಡ ನಿರ್ಮಿಸಲಾಯಿತು. ಅಗಡಿ ಮಠದ ದೊಡ್ಡ ಭಟ್ಟರು ಅತ್ಯಂತ ಸರಳವಾಗಿ ಆ ಕಾರ್ಯ ಮಾಡಿ ಮುಗಿಸಿ ಅತಿ ಕಡಿಮೆ ಹಣ ಪಡೆದರು. ಸಹಜವಾಗಿ ನೂರಾರು ಜನರಿಗೆ ಊಟ ಹಾಕಿಸಿ ಕಾರ್ಯಕ್ರಮ ಮುಗಿಯಿತು.
ಮಾರನೇ ವರ್ಷ ಕುಂದಾಪುರದಿಂದ ನಮ್ಮ ಚಿಕ್ಕಪ್ಪ ನಾಗರ ಪಾದ್ರಿಯವರನ್ನ ಕರೆ ತಂದರು. ವಾರ್ಷಿಕ ಪೂಜೆ ನೆರವೇರಿಸಿದರು. ನಾಗ ಆಳ್ವಿಕೆ ಆದಾಗ ಎಲ್ಲವೂ ಸರಿ ಆಗಿದೆ ತೃಪ್ತಿ ಎಂದಿತ್ತು ದೈವ.ನಾನು ಪದವಿ ಮುಗಿಸುವ ಹೊತ್ತಿಗೆ ಕುಂದಾಪುರದ ನಮ್ಮ ಚಿಕ್ಕಪ್ಪನಿಗೆ ಕಿವಿ ಕೇಳಿಸುತ್ತಾ ಇಲ್ಲ ಎಂದು ಅಲ್ಲಿಂದ ಮತ್ತೆ ನಾಗ ಪಾದ್ರಿ ಕರೆಸಿ ಅಲ್ಲಿಂದಲೇ ಪುರೋಹಿತ ತಂಡ ಬಂದು ಮಂಡಲ ಹಾಕಿ ಆಳ್ವಿಕೆ ಆಯಿತು. ಆಗ ಬಂದ ಕುರುಹಿನ ಪ್ರಕಾರ ಈ ಹಿಂದೆ ಅಗಡಿ ದೊಡ್ಡ ಭಟ್ಟರು ಮಾಡಿದ ಪ್ರತಿಷ್ಠಾಪನೆ ವಿಧಿವತ್ತಾಗಿಲ್ಲ ಎಂದು ಬಂತು. ಕಾರಣ ನಾಗರಕಲ್ಲು ಪ್ರತಿಷ್ಠಾಪನೆ ದಿನ ವಾದ್ಯ ಮೂಲಕ ಕೆರೆಯಿಂದ ಕಲ್ಲು ತರಲಿಲ್ಲ. ಈ ಕಾರಣವೇ ಚಿಕ್ಕಪ್ಪಗೆ ಕಿವಿ ಸಮಸ್ಯೆ ಆಗಿದೆ ಎಂದು ಆಳ್ವಿಕೆ ಇದ್ದ ನಾಗರ ಪಾದ್ರಿ ನುಡಿದರು.ಅದೇ ದಿನ ಹಿಂದೆ ಅಗಡಿ ಭಟ್ಟರು ಪ್ರತಿಷ್ಠೆ ಮಾಡಿದ ನಾಗರಕಲ್ಲು ಕಿತ್ತು ಕೆರೆಯಲ್ಲಿ ಜಲಕ್ಕೆ ಹಾಕಲಾಯಿತು. 48 ದಿನ ನಂತರ ಕುಂದಾಪುರದಿಂದ ದೇವಾಡಿಗರನ್ನ ಕರೆಸಿ ವಾದ್ಯದ ಮೂಲಕ ಕಲ್ಲುಗಳನ್ನು ತಂದು ಪ್ರತಿಷ್ಠಾಪನೆ ಮಾಡಿಸಿದೆವು. ಅವತ್ತು ನಾಗರ ಆಳಿಸಿದಾಗ ಎಲ್ಲವೂ ಸರಿ ಆಗಿದೆ ಎಂದು ವಾಗ್ದಾನವಾಯಿತು. ಇದಾದ ನಂತರ ನಮ್ಮ ಇನ್ನೊಬ್ಬರು ಚಿಕ್ಕಪ್ಪನ ಮೇಲೆ ಮನೆ ದೇವರು ಆಳ್ವಿಕೆ ಆಗಿ ಅದು ಕೂಡ ಸರಿ ಇದೆ ಎಂದು ಹಿಂಗಾರ ಹುಸಿ ಲೆಕ್ಕದಲ್ಲಿ ತೀರ್ಪು ನೀಡಿತು.ನಾನು ಎಂ ಎ ಮುಗಿಸಿ ಊರಿಗೆ ಬಂದ ನಂತರ ಮತ್ತೆ ಪ್ರಶ್ನೆ ಎದುರಾಯ್ತು.
ನಮ್ಮ ಅಮ್ಮನ ಕಾಲಿನಲ್ಲಿ ಬಿಳಿ ಮಚ್ಚೆಗಳು ಮೊದಲೇ ಇದ್ದವು ಅವು ಹೆಚ್ಚಾಗುತ್ತಾ ಬಂದವು. ಕೊನೆಗೂ ನಾಗರ ಪಾದ್ರಿ ಆಳಿಸಿ ಕೇಳಲಾಯಿತು. ಆಗ ಮತ್ತೆ ಪಾದ್ರಿಯವರು “ನನ್ನ ಕಾಲು ಬಂಧಿಸಿದ ನಿನ್ನ ಕಾಲಿನಲ್ಲಿ ಕುರುಹು ಇದೆ ನೋಡಾ” ಅಂದದ್ದು ಬಹಳ ಯಕ್ಷಪ್ರಶ್ನೆ ಆಯ್ತು. ಆಗ ವಿಷಯ ತಿಳಿದಾಗ ನಾಗರಕಲ್ಲನ್ನು ಪ್ರತಿಷ್ಠಾಪನೆ ಮಾಡುವಾಗ ಸಿಮೆಂಟ್ ಬಳಸಿದ ಕಾರಣ ಕಾಲು ಬಂಧನ ಆಗಿದೆ ಅಮ್ಮನ ಕಾಲಿನಲ್ಲಿ ಬಿಳಿ ಮಚ್ಚೆ ಹೆಚ್ಚಿದೆ ಎಂಬುದಾಗಿತ್ತು.ಕಟ್ಟ ಕಡೆಯ ಬಾರಿಗೆ ನಾಗರಕಲ್ಲಿನ ಬುಡದ ಸಿಮೆಂಟ್ ಒಡೆಸಿ ಪುನಃ ಶುದ್ದ ಪೂಜೆ ಮಾಡಿಸಿದೆವು. ಅಪ್ಪಯ್ಯ ಆ ಹೊತ್ತಿಗೆ ತುಂಬಾ ಬಸವಳಿದಿದ್ದರು. ಕೆಲ ದಿನದ ನಂತರ ಅಪ್ಪಯ್ಯ ನಾನು ವಿಚಾರ ಮುಖಾಮುಖಿ ಆದೆವು. ಸುಮಾರು 15 ವರ್ಷದ ಹಿಂದಿನ ಮಾತಿದು.
ಅವತ್ತು ಸಂಜೆ ಅಪ್ಪಯ್ಯ ನ ಎದುರು ನಾನು ಜೋರಾಗಿ ವಿಷಯ ಮಂಡಿಸಿದೆ. 25 ವರ್ಷಗಳ ನಾಗರಬನದಲ್ಲಿ ನಡೆದಿರುವ ಒಟ್ಟು ಪ್ರತಿಷ್ಠಾಪನೆಗಳು, ಪ್ರತಿ ಮರುಸ್ಥಾಪನೆಗೆ ನೀಡಿದ ಕಾರಣ, ಅಮ್ಮನ ಕಾಲಿನ ಮಚ್ಚೆ ಹೆಚ್ಚಲು ಇರುವ ವೈದ್ಯಕೀಯ ಮತ್ತು ವಯೋಸಹಜ ಕಾರಣಗಳು. ಎರಡು ವರ್ಷಕ್ಕೆ ಒಮ್ಮೆ ವಿನಿಯೋಗ ಆಗುತ್ತಾ ಇರುವ ಬಂಡವಾಳ. ಮುಕ್ತಾಯವಿಲ್ಲದ ಮನಸಿನ ಪ್ರಶ್ನೆಗಳ ಬಗ್ಗೆ ನಾನೇ ಹೆಚ್ಚು ಮಾತಾಡಿದೆ. ಅಪ್ಪಯ್ಯ ಸುಮ್ಮನೆ ಕೇಳಿಸಿಕೊಂಡರು. ನೀನು ಹೇಳುವುದು ಸರಿ ಇದೆ ಅಂದರು. ಅವತ್ತು ನಾನು ಅಪ್ಪಯ್ಯ ಕುಳಿತು ಒಂದು ನಿರ್ಧಾರಕೆ ಬಂದೆವು. ಅಪ್ಪಯ್ಯ ಅದನ್ನು ಜಾರಿಗೆ ತಂದಿದ್ದಾರೆ
.*ಪ್ರತಿದಿನ ಅಪ್ಪಯ್ಯ ನಾಗರಬನಕ್ಕೆ ಬೆಳಿಗ್ಗೆ ಸಂಜೆ ದೀಪ ಮತ್ತು ಊದುಬತ್ತಿ ಹಚ್ಚಿ ಕೈ ಮುಗಿಯುವುದು.
* ಹಬ್ಬದ ದಿನ ಮಾತ್ರ ನಮ್ಮ ಬಡ ಸರಳ ಪುರೋಹಿತರಾದ ಸುಬ್ಬಬಟ್ಟರಿಂದ ಪೂಜೆ.
* ಆತ್ಮ ತೃಪ್ತಿಯಿಂದ ಪೂಜೆ ಮಾಡಿದ ಮೇಲೆ ಸರಿ ಇದಿಯಾ ಎಂದು ಮತ್ಯಾರನ್ನೂ ಕೇಳುವಂತಿಲ್ಲ. ಮುಖ್ಯವಾಗಿ ಪಾದ್ರಿ ಯಾ ನಿಮಿತ್ತ ಹೇಳುವರ ಬಳಿ.ಕಳೆದ ಹದಿನೈದು ವರ್ಷಗಳಿಂದ ಇದು ಜಾರಿ ಇದೆ. ಅಪ್ಪಯ್ಯ ಆಸ್ತಿಕರಾಗಿ ನಿಜ ಭಕ್ತಿಯಲ್ಲಿ ನಡೆದಿದ್ದಾರೆ. ಈ ನಡುವೆ ಕೃಷಿ ಕಡೆ ನಾವು ಹೆಚ್ಚು ಗಮನಕೊಟ್ಟ ಕಾರಣ ತೋಟ ಹಸಿರಾಗಿದೆ. ಅಮ್ಮನ ಕಾಲಿನ ಬಿಳಿ ಮಚ್ಚೆಗೂ ಅವಳ ಆರೋಗ್ಯಕ್ಕೂ ಸಂಬಂಧ ಇಲ್ಲ ಎಂಬುದು ಅರ್ಥವಾಗಿದೆ.
ಭಕ್ತಿ ಎಂದರೆ ಹೋಮ ಹವನ ಪಾದ್ರಿ ಆಳ್ವಿಕೆ ಮಾತ್ರ ಅಲ್ಲ ಅದರಾಚೆ ಅರಿವಿನ ವಿಸ್ತಾರವಾದ ಬಯಲು ಆಗಿರಬಹುದು ಎಂದು ಅಪ್ಪಯ್ಯ ಅವತ್ತು ಹಠಕ್ಕೆ ಬೀಳದೇ ಅರ್ಥ ಮಾಡಿಕೊಂಡರು. ಇಲ್ಲದೆ ಇದ್ದಿದ್ದರೆ ಇಷ್ಟೊತ್ತಿಗೆ ಅದೆಷ್ಟು ಆಳ್ವಿಕೆ, ಪ್ರತಿಷ್ಠಾಪನೆ, ಮರುಸ್ಥಾಪನೆ, ಮಂಡಲ, ಹೋಮ ಆಗುತ್ತಾ ಇತ್ತೋ…? ವಾಗ್ವಾದ ಜಗಳಗಳು ಕೂಡ…!
-ಸತ್ಯನಾರಾಯಣ.ಜಿ. ಟಿ ಕರೂರು.