ದತ್ತ ಪೀಠದಲ್ಲಿ ವೈಜ್ಞಾನಿಕ ಮನೋಭಾವ
ವಿಜ್ಞಾನದ ರಾಜಧಾನಿʼ ಎಂದೇ ಕರೆಸಿಕೊಂಡ ಬೆಂಗಳೂರಿನಲ್ಲಿ ಇಂದಿನ ʼರಾಷ್ಟ್ರೀಯ ವಿಜ್ಞಾನ ದಿನʼವನ್ನು ಎಷ್ಟು ಸಂಸ್ಥೆಗಳು ಆಚರಿಸಿದವು? ನಾನು ನೋಡಿದ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಒಂದೇ ಒಂದು ಕಾರ್ಯಕ್ರಮದ ಸೂಚನೆಯೂ ಇರಲಿಲ್ಲ.
ಆದರೆ ಸ್ವಯಂಪ್ರೇರಿತರಾಗಿ ವಿಜ್ಞಾನವನ್ನು ಜನಪ್ರಿಯ ಮಾಡಲು ಶ್ರಮಿಸುತ್ತಿರುವ “ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿʼಯ ಉತ್ಸಾಹಿಗಳು ಒಂದು ಫಂಕ್ಶನ್ ಮಾಡಿದರು.
ಕೋವಿಡ್ ಹಾವಳಿಯ ಮಧ್ಯೆಯೂ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದ್ದ ಇವರು ಗೆದ್ದವರಿಗೆ ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಈ ದಿನ ಹಮ್ಮಿಕೊಂಡಿದ್ದರು.
ನಾನು ಉದ್ಘಾಟಕನಾಗಿದ್ದೆ. ಡಾ. ಸಿ.ಆರ್. ಚಂದ್ರಶೇಖರ್ ಅಧ್ಯಕ್ಷರು ಮತ್ತು ವೈಎಸ್‌ವಿ ದತ್ತ ಮುಖ್ಯ ಅತಿಥಿಯಾಗಿದ್ದರು (ಚಿತ್ರದಲ್ಲಿದ್ದಂತೆ, ಅದೇ ಕ್ರಮದಲ್ಲಿ).
ಸ್ವಾರಸ್ಯದ ಸಂಗತಿ ಏನೆಂದರೆ ನನಗೆ ಮತ್ತು ಡಾ. ಸಿಆರ್‌ಸಿಯವರಿಗೆ ವಿಜ್ಞಾನ ಸಂವಹನದ ಸರ್ವೋನ್ನತ ಪ್ರಶಸ್ತಿ-ಪದಕಗಳನ್ನು ನಿನ್ನೆಯಷ್ಟೇ ಘೋಷಣೆ ಮಾಡಲಾಗಿತ್ತು. ಇದರ ಬಗ್ಗೆ ಕಾರ್ಯಕ್ರಮ ಸಂಯೋಜನೆ ಮಾಡಿದ E. ಬಸವರಾಜುಗೆ ಸುಳಿವೂ ಇರಲಿಲ್ಲ.
ಅದು ಹೇಗೂ ಇರಲಿ; ನಮ್ಮ ಜೊತೆಗೆ ಮಾಜಿ ಶಾಸಕ ದತ್ತಣ್ಣನನ್ನು ಯಾಕೆ ಕರೆದರು ಅಂತ ನನಗೆ ತುಸು ಅಚ್ಚರಿಯಾಗಿತ್ತು.
ಸಾಮಾನ್ಯವಾಗಿ ರಾಜಕಾರಣಿಗಳು ವೇದಿಕೆ ಏರುವ ಕಾರ್ಯಕ್ರಮಗಳಿಗೆ ನಾನು ಹೋಗುವುದಿಲ್ಲ. ಆದರೆ ದತ್ತಣ್ಣನ ವಿಷಯ ಬೇರೆ. 30 ವರ್ಷಗಳ ಹಿಂದೆ ಅವರು ಬೆಂಗಳೂರಿನಲ್ಲಿ ಕಾಲೂರಲು ಯತ್ನಿಸುತ್ತ, ಯಾರ್ಯಾರನ್ನೋ ಕಾಡಿ ಬೇಡಿ ಸರಕಾರಿ ಇಲಾಖೆಗಳಿಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸುತ್ತಿದ್ದಾಗ ನನ್ನಿಂದ ಅವರು ಸ್ಕ್ರಿಪ್ಟ್ ಬರೆಸಿಕೊಂಡಿದ್ದೂ ಉಂಟು. ಅವರ ಹಳೇ ಲಡಕಾಸು ಅಂಬಾಸಡರ್ ಕಾರಿನಲ್ಲಿ ನಾವಿಬ್ಬರೂ ಸುತ್ತಿದ್ದೂ ಉಂಟು. ಅವರು ಕಾರು ಓಡಿಸುವ ಅಬ್ಬರಕ್ಕೆ ದಿಗಿಲುಬಿದ್ದು ಕೂತ ಸೀಟನ್ನು ಗಟ್ಟಿಯಾಗಿ ಹಿಡಿಯಲು ಹೋಗಿ (ಆಗಲೇ ಸಾಕಷ್ಟು ಚಿಂದಿಯಾಗಿದ್ದ) ಅವರ ಕಾರಿನ ಸೀಟಿನ ಒಂದು ಸ್ಪಾಂಜ್ ಪೀಸು ನನ್ನ ಕೈಗೂ ಬಂದಿದ್ದು ಇನ್ನೂ ನೆನಪಿದೆ.
ಆಮೇಲೆ ಅವರು ರಾಜಕಾರಣಿಯಾಗಿ, ಎಮ್ಮೆಲ್ಲೆಯಾಗಿ ಸದನದಲ್ಲಿ ತಮ್ಮ ಅಸ್ಖಲಿತ ಮಾತುಗಳಿಂದಾಗಿ ಆಳುವ ಪಕ್ಷದ ವಾದಗಳನ್ನು ಚಿಂದಿ ಮಾಡುತ್ತಿದ್ದುದು; ಶಾಸಕರಾದ ನಂತರವೂ ಕಡೂರಿನ ಹಳ್ಳಿಗಳಲ್ಲಿ ಹರಕು ಚಾಪೆಯ ಮೇಲೆ ಕೂತು ಜನರ ಸಂಕಷ್ಟಗಳಿಗೆ ಕಿವಿಗೊಡುತ್ತಿದ್ದುದು; ಕೋವಿಡ್ ಕಾಲದಲ್ಲಿ ಅಪ್ಪಟ ಮೇಷ್ಟ್ರಾಗಿ ಚಿಂದಿ ಬಟ್ಟೆಯಲ್ಲಿ ಹಲಗೆಯನ್ನು ಒರೆಸುತ್ತ, ಹೈಸ್ಕೂಲ್ ಮಕ್ಕಳಿಗೆ ಚಂದದ ಗಣಿತ ಪಾಠ ಮಾಡುತ್ತಿದ್ದುದು ಎಲ್ಲ ಗೊತ್ತಿತ್ತು. ಅಪರೂಪದ ʼಜನಪರ ರಾಜಕಾರಣಿʼ ಎಂಬ ಮನ್ನಣೆಯನ್ನೂ ಪಡೆದವರು ಅವರು.
ಆದರೂ ವಿಜ್ಞಾನ ದಿನದಂದು ಅವರನ್ನು ಕರೆಸಿದ್ದು ಯಾಕೆ?
ಯಾಕೆಂದು ಅವರು ಮಾತನ್ನು ಆರಂಭಿಸಿದಾಗಲೇ ನನಗೆ ಗೊತ್ತಾಯಿತು.
ಮೂಢನಂಬಿಕೆ ನಿಷೇಧದ ಕಾನೂನು ಬರಲೇಬೇಕೆಂದು ತಾನು ಸದನದಲ್ಲಿ ಜೋರುದನಿಯಲ್ಲಿ ಒತ್ತಾಯಿಸುವಾಗ ಏನೆಲ್ಲ ಫಜೀತಿಗಳಾದವು ಎಂಬುದನ್ನು ತುಂಬ ಸ್ವಾರಸ್ಯವಾಗಿ YSV ಇಂದು ವಿವರಿಸಿದರು.
ತನ್ನ ಜೆಡಿಎಸ್ ಪಕ್ಷದ ಮುಖ್ಯಸ್ಥರಲ್ಲಿ ಒಬ್ಬರಾಗಿದ್ದ ರೇವಣ್ಣ ಸದಾ ಕಾಲ ಕೈಯಲ್ಲಿ ಲಿಂಬೆ ಹಣ್ಣು ಹಿಡಿದುಕೊಂಡು ಓಡಾಡುವವರು. ಇನ್ನೊಂದು ಕಡೆ ಜ್ಯೋತಿಷಿಗಳನ್ನು ಸುತ್ತ ಕೂರಿಸಿಕೊಂಡೇ ದಿನದ ಕೆಲಸಗಳನ್ನು ಆರಂಭಿಸುವ ದೇವೇಗೌಡರು. (ಮಗದೊಂದು ಕಡೆ, ಕುಕ್ಕೆ ಸುಬ್ರಹ್ಮಣ್ಯ ದೇವರಿಗೆಂದು 240 ಕಿಲೊ ತೂಕದ ಬಂಗಾರದ ರಥವನ್ನು ಮಾಡಿಸಿಕೊಡಲು ಸರಕಾರದ ಹಣವನ್ನು ವೆಚ್ಚ ಮಾಡಲು ಹೊರಟ ಎಚ್ ಡಿ. ಕುಮಾರಸ್ವಾಮಿ*).
“ಇಂಥ ನಾಯಕತ್ವವಿರುವ ಪಕ್ಷದ ಪರವಾಗಿ ನಾನು ಮೂಢನಂಬಿಕೆ ನಿಷೇಧ ಜಾರಿಗೆ ಬರಲೇಬೇಕೆಂದು ಒತ್ತಾಯಿಸಲು ನಿಂತಿದ್ದೆ. ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ ತಾಳಿರಬೇಕೆಂದು ಸಂವಿಧಾನದಲ್ಲೇ ಹೇಳಲಾಗಿದೆ (ಹಾಗೆ ಸಂವಿಧಾನದಲ್ಲೇ ಅಳವಡಿಸಿಕೊಂಡ ಏಕೈಕ ರಾಷ್ಟ್ರ ನಮ್ಮದು). ಮೂಢನಂಬಿಕೆಗೆ ಜೋತು ಬೀಳುವುದೆಂದರೆ ಸಂವಿಧಾನಕ್ಕೆ, ರಾಷ್ಟಕ್ಕೆ ಅಪಚಾರ ಮಾಡಿದಂತೆ… ಇತ್ಯಾದಿ ಜೋರು ದನಿಯಲ್ಲಿ ನಾನು ವಾದ ಮಾಡಿದೆ.
“ನನ್ನ ಮಾತನ್ನು ಮಧ್ಯೆ ತುಂಡರಿಸಿ ಕಾಗೋಡು ತಿಮ್ಮಪ್ಪನವರು ಒಂದು ಪ್ರಶ್ನೆ ಹಾಕಿದರು: ʼರೀ ದತ್ತಾ! ಹೀಗೆಲ್ಲ ಮಾತಾಡಲು ನೀವು ಪದ್ಮನಾಭ ನಗರದ ಹೈಕಮಾಂಡಿನ ಅನುಮತಿ ಪಡೆದೇ ಬಂದಿದೀರೇನ್ರೀ?ʼ ಎಂದು ಕೇಳಿದರು. ಸದನದಲ್ಲಿ ನಗೆಯ ಅಲೆ ಉಕ್ಕಿತು”…
-ಹೀಗೆ ಮಾತಾಡುತ್ತ YSV ದತ್ತ ನಮ್ಮ ಈಗಿನ ಪ್ರಧಾನಿಯವರತ್ತ ಕೂಡ ಮಾತಿನ ಚಾಟಿ ಬೀಸಿದರು.
“ವಿಜ್ಞಾನ ತಂತ್ರಜ್ಞಾನದ ಪರಾಕಾಷ್ಠೆ ಎನ್ನಬಹುದಾದ (ಗುಜರಾತಿನ) ಕಕ್ರಪಾರಾ ನ್ಯೂಕ್ಲಿಯರ್ ಪವರ್ ಸ್ಟೇಶನ್ನಿಗೆ ಒಮ್ಮೆಯೂ ಹೋಗದ ಮೋದಿಯವರು ರಾಮ ಮಂದಿರದ ಶಿಲಾನ್ಯಾಸದ ಹೋಮ ಕುಂಡದ ಎದುರು ಕೂತು ಭಾರೀ ಪ್ರಚಾರ ಗಿಟ್ಟಿಸುತ್ತಾರೆ. ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಅವೈಜ್ಞಾನಿಕ ವಿಚಾರ ಮಾತಾಡುತ್ತಾರೆ.
“ನಮ್ಮ ದೇಶದಲ್ಲಿ ರಾಜಕಾರಣಿಗಳೇ ವಿಜ್ಞಾನದ ಮಹಾಶತ್ರುಗಳಾಗಿದ್ದಾರೆ” ಎಂದು ಹೇಳಿ ವೈಎಸ್‌ವಿ ದತ್ತ ತಮ್ಮ ಮಾತನ್ನು ಮುಗಿಸಿದರು.
ನೇರ, ನಿಷ್ಠುರ ಮತ್ತು ಸತ್ಯಭರಿತ ಮಾತುಗಳ ಮೂಲಕ ವೈಜ್ಞಾನಿಕ ಮನೋಭಾವವನ್ನು ಬಿಂಬಿಸಲಬಲ್ಲ ರಾಜಕಾರಣಿಯನ್ನು ಹೇಗೆ ರಾಜಕಾರಣಿಗಳೇ ಮುಗಿಸಲು ಹವಣಿಸುತ್ತಾರೆ ಎಂಬುದರ ಪ್ರತ್ಯಕ್ಷ ಉದಾಹರಣೆಯಾಗಿ ಅವರು ಮಿಂಚಿದರು.
*ಈ 240 ಕಿಲೊ ಚಿನ್ನದ ರಥದ ಉದಾಹರಣೆ ನನ್ನದು. ಆ ಮಾತನ್ನಾಗಲೀ ಕುಮಾರಸ್ವಾಮಿಯವರ ಹೆಸರನ್ನಾಗಲೀ YSV ದತ್ತ ಪ್ರಸ್ತಾಪಿಸಲಿಲ್ಲ. ಏಕೆಂದರೆ ಈ ಮಸೂದೆ ಚರ್ಚೆಗೆ ಬಂದಾಗ ಕುಮಾರಸ್ವಾಮಿ ವಿರೋಧ ಪಕ್ಷದಲ್ಲಿದ್ದರು. ರಥ ಅವರ ರಡಾರ್‌ನಲ್ಲಿ ಆಗಿನ್ನೂ ಮೂಡಿರಲಿಕ್ಕಿಲ್ಲ.