

ಭಾರತ ಸಮಾಜವಾದಿ ನೆಲೆಗಟ್ಟಿನಲ್ಲಿ ಕಟ್ಟಿದಂತ ದೇಶ. ಇದಕ್ಕೆ ಸಾಕಷ್ಟು ತ್ಯಾಗ ಬಲಿದಾನಗಳು ಆಗಿದೆ. ಇಂತಹ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹಾರಾಟ ಮಾಡುವ ಮೋದಿಯದು ಹುಚ್ಚುತನದ ಪರಮಾವಧಿ ಎಂದು ಕಾಗೋಡು ತಿಮ್ಮಪ್ಪ ಕಿಡಿಕಾರಿದರು.
ಸಾಗರದ ನೌಕರರ ಭವನದಲ್ಲಿ ನಡೆದ ರೈತ ಮಹಾಪಂಚಾಯತ್ ಶಿವಮೊಗ್ಗದ ಪೂರ್ವಾಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು. ಸ್ವಾತಂತ್ರ್ಯ ಹೋರಾಟದ ರೀತಿಯಲ್ಲಿ ಹೋರಾಟ ಅಗತ್ಯವಿದೆ ಎಂದರು.
ರಾಜ್ಯ ರೈತ ಸಂಘದ ಕಾರ್ಯದರ್ಶಿ ಎಚ್.ಆರ್. ಬಸವಾರಜಪ್ಪ ಮಾತನಾಡಿ ಗಾಂಧಿ ಅಂಬೇಡ್ಕರ್ ಹಾಕಿಕೊಟ್ಟ ಶಾಂತಿ ಮಾರ್ಗದಲ್ಲಿ ಹೋರಾಟ ಮಾಡಿದವರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ವಿದ್ಯಾರ್ಥಿ ಯುವಜನ ಮತ್ತು ಸಾಮಾನ್ಯ ಜನರ ರಕ್ತದ ಮೇಲೆ ಬಿಜೆಪಿ ಅಧಿಕಾರ ಮಾಡುತ್ತಿದೆ.ದಾಸ್ತಾನು ಮಿತಿಯನ್ನು ತೆಗೆದು ಜನರನ್ನು ಬೀದಿಗೆ ತಳ್ಳುತ್ತಿದೆ.ಇದು ಕೇವಲ ಮೂರು ರೈತರ ಕರಾಳ ಕಾನೂನಿನ ವಿರುದ್ಧ ಮಾತ್ರ ಹೋರಾಟವಲ್ಲ. ಸಂವಿಧಾನ ಬುಡಮೇಲು ಮಾಡಲು ಹೊರಟವರ ವಿರುದ್ದ ಹೋರಾಟ ಆಗಬೇಕಿದೆ ಎಂದು ಕರೆಕೊಟ್ಟರು.
ಇನ್ನೊರ್ವ ರೈತ ನಾಯಕ ಕೆಟಿ ಗಂಗಾಧರ ಮಾತನಾಡಿ ಭೂಮಿ,ಕೃಷಿ ಜ್ಞಾನ, ಕೃಷಿ ಉತ್ಪನ್ನಗಳು,, ಉತ್ಪಾದನೆ, ದಾಸ್ತಾನು,ವಿತರಣೆಯನ್ನು ಬಂಡವಾಳಿಗರಿಗೆ ಕೊಡುವ ಉದ್ದೇಶದಿಂದ ಈ ಕಾನೂನು ಜಾರಿ ಮಾಡಲಾಗಿದೆ. ಇಂತಹ ರೈತ ವಿರೋಧಿ ಕಾನೂನಿನ ಅಡ್ಡ ಪರಿಣಾಮಗಳ ಬಗ್ಗೆ ಜನರು ಪ್ರತಿರೋಧ ಮಾಡಬಾರದು ಎನ್ನುವ ಉದ್ದೇಶದಿಂದ ಜಾತಿ ಧರ್ಮದ ಜನರನ್ನು ಎತ್ತಿಕಟ್ಟಲಾಗುತ್ತಿದೆ. ಆಂದೋಲನ ಅನ್ನೋದು ಸಂಸತ್ತಿನ ಶುದ್ದಿಕರಣದ ಭಾಗ. ಜನ ಹೋರಾಟಗಳು ಮುಕ್ತ ವಿಶ್ವ ವಿದ್ಯಾನಿಲಯಗಳು ಎಂದರು.
ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ . ಅಶೋಕ್ ಮಾತನಾಡಿ ಭಾರತದಲ್ಲಿ ಪ್ಯಾಸಿಸ್ಟರ ಸುನಾಮಿ ಆಡಳಿತವಿದೆ. ಇದನ್ನು ಹಿಮ್ಮೆ ಟ್ಟಿಸಬೇಕಾದರೆ ವಿವಿಧ ಹೋರಾಟದ ಧಾರೆಗಳು ಒಟ್ಟಾಗಿ ದೊಡ್ಡ ಸುನಾಮಿಯಾಗಿ ನುಗ್ಗಬೇಕು ಎಂದರು. ಭಾರತದಲ್ಲಿ ಫ್ಯಾಸಿಸ್ಟ್ ಮತ್ತು ಸರ್ವಾಧಿಕಾರದ ಧೋರಣೆಯನ್ನು ನಾವು ಖಂಡಿಸಬೇಕಿದೆ. ಇಡೀ ಪ್ರಪಂಚದಲ್ಲಿ ಕ್ರಾಂತಿ ನಡೆದದ್ದು ರಷ್ಯಾ ಮತ್ತು ಚೀನಾದಲ್ಲಿ ಆದರೆ ಇದೇ ಮೊದಲ ಬಾರಿ ಭಾರತದ ದೆಹಲಿಯಲ್ಲಿ ಇಂತಹ ಹೋರಾಟ ನಡೆಯುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ರೈತ ಚಳುವಳಿ ದೇಶವನ್ನು ಉಳಿಸುವ ಚಳುವಳಿಯಾಗಿದೆ. ಈ ಕಾರಣದಿಂದ ಉತ್ತರದ ಹೋರಾಟ ದಕ್ಷಿಣಕ್ಕೆ ಬರುತ್ತಿದೆ ಇದಕ್ಕೆ ನಾವುಗಳು ಒಂದಾಗಬೇಕು. ಇದೇ ಮಾರ್ಚ್ 20ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆಯಲಿರುವ ರೈತರ ಮಹಾ ಪಂಚಾಯತ್’ನಲ್ಲಿ ಸುಮಾರು ಐವತ್ತು ಸಾವಿರ ಜನತೆ ಸೇರಿಸಿ ನಮ್ಮ ವಿರೋಧವನ್ನು ತೋರಿಸಬೇಕು. ಈಗಲೇ ನಡುಗಿರುವ ಸರಕಾರ ರೈತ ವಿರೋಧಿ ಕಾಯಿದೆಗಳನ್ನು ಹಿಂಪಡೆಯುವವರೆಗೂ ನಾವುಗಳು ವಿರಮಿಸಬಾರದು ಎಂದರು.
ಪ್ರಗತಿಪರ ಚಿಂತಕ ಮತ್ತು ಪತ್ರಕರ್ತ ಹೆಚ್.ಬಿ. ರಾಘವೇಂದ್ರ ಹೋರಾಟದ ಬಗ್ಗೆ ನಾನು ದೆಹಲಿಗೆ ಭೇಟಿ ನೀಡಿ ಅಲ್ಲಿ ವ್ಯವಸ್ಥೆ ವಸ್ತು ಸ್ಥಿತಿಯನ್ನು ನೋಡಿದ್ದೇನೆ. ಈ ಹೋರಾಟ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಆಗಬೇಕಿದೆ ಎಂದು ಹೇಳಿದರು.
ಪಂಜಾಬಿನ ರೈತರು ತಮ್ಮ ಬಿಡುಗಡೆಗಾಗಿ ಮಾತ್ರ ಹೋರಾಟ ಮಾಡುತ್ತಿಲ್ಲ ಇಡೀ ಭಾರತ ರೈತರ ಬಿಡುಗಡೆಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದರು.
ಮಾಜಿ ಜಿಪಂ ಸದಸ್ಯ ಹೊನಗೋಡು ರತ್ನಾಕರ್ ಮಾತನಾಡಿ ಇಂತಹ ಸರ್ಕಾರವನ್ನು ಕಿತ್ತು ಹಾಕದಿದ್ದರೆ ಭಾರತದ ಬಡವರಿಗೆ,ಸಣ್ಣ ಉದ್ದಿಮೆದಾರರಿಗೆ,ಸಣ್ಣ ಹಿಡುವಳಿದಾರರಿಗೆ ಉಳಿಗಾಲವಿಲ್ಲ ಎಂದರು.
ಇನ್ನೊರ್ವ ಮಾಜಿ ಜಿ.ಪಂ. ಸದಸ್ಯ ರವಿ ಕುಗ್ವೆ ಮಾತನಾಡಿ ರೈತರ ಹೋರಾಟ ನಮಗೆ ಹೊಸ ಬದುಕು ಕೊಡುತ್ತಿದೆ. ನಾವು ಈ ಹೋರಾಟವನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಪರಮೇಶ್ವರ್ ದೂಗೂರ್ ಮಾತನಾಡಿ ರೈತರು ಬೆಳೆಯುವ ಗೊಡಂಬಿ ದ್ರಾಕ್ಷಿ ಉತ್ತತ್ತಿ ತಿನ್ನುವ ಸ್ವಾಮಿಗಳು ಬೀದಿ ಬಂದು ರೈತ ಹೋರಾಟಕ್ಕೆ ಬೆಂಬಲಿಸಬೇಕು ಎಂದರು.
ಸಭೆಯಲ್ಲಿ ಎಪಿಎಂಸಿ ಸದಸ್ಯ ಭರ್ಮಪ್ಪಅಂದಾಸುರ, ಕಾಂಗ್ರೆಸ್ ಮುಖಂಡ ಬಿ.ಆರ್. ಜಯಂತ್, ಕಬಸೆ ಅಶೋಕ ಮೂರ್ತಿ, ಬಸವರಾಜಪ್ಪ ಗೌಡ, ಗುರುಮೂರ್ತಿ, ಚಂದ್ರಶೇಖರ್ ಸಿರಿವಂತೆ, ಸುಧಾಕರ ಕುಗ್ವೆ, ಆರೋಡಿ ಲಿಂಗರಾಜ್, ಅ.ರಾ. ಶ್ರೀನಿವಾಸ, ಚಂದ್ರಶೇಖರ್ ಗೂರಲಕೆರೆ ಎಲ್ ಕೆ ಪುರ್ಣಿಮಾ ನವಿಲೆಮನೆ ಇನ್ನಿತರರು ಹಾಜರಿದ್ದು ಪ್ರಮುಖರು ಈ ಹೋರಾಟದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
(ಉಮೇಶ್ ಮೊಗವೀರ ,ಸುದ್ದಿ ಸಾಗರ)



