
ರಾಮ,ಕೃಷ್ಣರ ಬಗ್ಗೆ ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿದರೆ ಸುಮ್ಮನಿರುತ್ತೀರಿ, ಅದೇ ಭಗವಾನ್ ಮಾತನಾಡಿದರೆ ಮಸಿ ಬಳಿಯುತ್ತೀರಿ. ಇಂತಹ ಧೋರಣೆ ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಕಿಡಿಕಾರಿದರು.

ಬೆಂಗಳೂರು: ರಾಮ,ಕೃಷ್ಣರ ಬಗ್ಗೆ ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿದರೆ ಸುಮ್ಮನಿರುತ್ತೀರಿ, ಅದೇ ಭಗವಾನ್ ಮಾತನಾಡಿದರೆ ಮಸಿ ಬಳಿಯುತ್ತೀರಿ. ಇಂತಹ ಧೋರಣೆ ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಕಿಡಿಕಾರಿದರು.
ಮೇಲ್ಮನೆಯಲ್ಲಿ ಮಾತನಾಡಿದ ಹರಿಪ್ರಸಾದ್, ಸಾಹಿತಿ ಎಸ್.ಎಲ್ ಭೈರಪ್ಪ ರಾಮ ದೇವರಲ್ಲ, ಕೇವಲ ರಾಜ ಎಂದು ಹೇಳಿದ್ದಾರೆ. ರಾಮ,ಕೃಷ್ಣರ ಬಗ್ಗೆ ಮಾತಾಡುತ್ತಾರೆ. ದ್ರೌಪದಿ ಬಗ್ಗೆ ಬರೆಯುತ್ತಾರೆ. ಅವರು ನಿಮ್ಮವರು ಎಂದು ಸುಮ್ಮನಿರುತ್ತಾರೆ.
ಅದೇ ಭಗವಾನ್ ಹೇಳಿದರೆ ಮಸಿ ಬಳಿಯುತ್ತಾರೆ. ಇಂತಹ ದ್ವಂದ್ವ ನೀತಿ ಏಕೆ? ಸಂಘ ಪರಿವಾರದವರು ಮಾತನಾಡಿದರೆ ಸುಮ್ಮನಿದ್ದು ಬೇರೆಯವರು ಮಾತನಾಡಿದರೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ನಾಟಕ ಮಾಡಲು 1 ಕೋಟಿ ರೂ. ಕೊಡಲಾಗುತ್ತಿದೆ.
ನಿಮ್ಮ ಸಾಹಿತಿಗೆ ನೀವೇ ಪ್ರಶಸ್ತಿ ಕೊಡಿಸಿ ನಾಟಕ್ಕೂ ಹಣ ಕೊಟ್ಟಿದ್ದೀರಿ ಎಂದಾಗ ಇದಕ್ಕೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿ, ಭೈರಪ್ಪ ಅವರ ನಾಟಕ ಸರಿಯಿಲ್ಲ ಎನ್ನುವ ಹಕ್ಕು ನಿಮಗಿಲ್ಲ. ಭೈರಪ್ಪ ಜನ ಮಾನ್ಯರ ಬಗ್ಗೆ ಬರೆದಿದ್ದಾರೆ. ಅವರ ಕಾದಂಬರಿ, ಬರಹಕ್ಕೆ ಪ್ರಶಸ್ತಿ ಸಿಕ್ಕಿದೆ. ಅವರ ಒಂದು ಶಬ್ದ ಹಿಡಿದು ಈ ರೀತಿ ಹೇಳಿದರೆ ಸರಿಯಲ್ಲ ಎಂದು ಟೀಕಿಸಿದರು.
ಈ ವೇಳೆ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ರಚಿತ ಮಲೆಗಳಲ್ಲಿ ಮದುಮಗಳು ನಾಟಕಕ್ಕೆ ಯಾವ ಸರ್ಕಾರವೂ ನೆರವಿಗೆ ಬರಲಿಲ್ಲ. ಈಗ ಪರ್ವಕ್ಕೆ ಸಹಕಾರ ಏಕೆ? ಈ ತಾರತಮ್ಯ ಸರಿಯಲ್ಲ, ಎಷ್ಟೆಲ್ಲಾ ಬರಹಗಾರರು, ಕಾದಂಬರಿಕಾರರಿದ್ದಾರೆ. ಆದರೆ ಅದೆಲ್ಲಾ ಬಿಟ್ಟು ಭೈರಪ್ಪ ಅವರ ನಾಟಕಕ್ಕೆ ಮಾತ್ರ ಅನುದಾನ ಕೊಟ್ಟಿರುವುದು ನಾಗರಿಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಬಿಜೆಪಿಗರು ಸಾಹಿತಿಗಳಲ್ಲೇ ಏಕೆ ತಾರತಮ್ಯ ಮಾಡುತ್ತೀರಿ. ಬೈರಪ್ಪ ಕಾದಂಬರಿಯನ್ನು ನಾಟಕ ಮಾಡಲು 1 ಕೋಟಿ ಕೊಟ್ಟಿದ್ದಾರೆ. ಇಂತಹ ತಾರತಮ್ಯ ನಿಲ್ಲಬೇಕು ಎಂದರು. (kpc)
