
ಸೊರಬದ ಮಾಜಿ ಶಾಸಕ ಎಸ್.ಮಧುಬಂಗಾರಪ್ಪ ಅವರ ಭಾವ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ.

ಬೆಂಗಳೂರು: ಸೊರಬದ ಮಾಜಿ ಶಾಸಕ ಎಸ್.ಮಧುಬಂಗಾರಪ್ಪ ಕಾಂಗ್ರೆಸ್ ಸೇರುವುದು ಅಧಿಕೃತವಾಗುತ್ತಿದ್ದಂತೆಯೇ ಮುಂದುವರೆದ ಬೆಳವಣಿಗೆ ಎಂಬಂತೆ ಅವರ ಭಾವ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.
ಹೌದು, ಮಧುಬಂಗಾರಪ್ಪ ಕಳೆದ ಮೂರು ದಿನಗಳ ಹಿಂದೆ ಡಿಕೆಶಿಯನ್ನು ಭೇಟಿ ಮಾಡಿ ಸಹೋದರಿ ಗೀತಾ ಶಿವರಾಜ್ ಕುಮಾರ್ ಸಹ ತಮ್ಮೊಂದಿಗೆ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದ್ದರು. ಮಧು ಭೇಟಿ ಬೆನ್ನಲ್ಲೇ ಸೋಮವಾರ ಡಿಕೆಶಿಯನ್ನು ಗೀತಾ ಅವರ ಪತಿ ನಟ ಶಿವರಾಜ್ ಕುಮಾರ್ ಭೇಟಿ ಮಾಡಿ ಪತ್ನಿಯ ಕಾಂಗ್ರೆಸ್ ಭೇಟಿ ಕುರಿತು ಚರ್ಚಿಸಿದರು. ಆದರೆ ಈ ಭೇಟಿಯನ್ನು ಸೌಹಾರ್ದಯುತ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರಿಗೆ ರಾಜಕೀಯ ಎನ್ನುವುದು ಹೊಸತೇನಲ್ಲ. 2014 ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿ.ಎಸ್.ಯಡಿಯೂರಪ್ಪ ಎದುರು ಪರಾಜಯಗೊಂಡಿದ್ದರು. ಬಂಗಾರಪ್ಪರ ಮೂವರು ಪುತ್ರಿಯರ ಪೈಕಿ ರಾಜಕೀಯ ಆಸಕ್ತಿ ಇರುವುದು ಗೀತಾಗೆ ಮಾತ್ರ ಎನ್ನಬೇಕು. ಗೀತಾ ಶಿವರಾಜ್ ಕುಮಾರ್ ಗೆ ಸೊರಬದ ಹಾಲಿ ಶಾಸಕ ಇನ್ನೋರ್ವ ಸಹೋದರ ಕುಮಾರ್ ಎಸ್.ಬಂಗಾರಪ್ಪಗಿಂತ ಮಧುಬಂಗಾರಪ್ಪ ಜೊತೆಯಲ್ಲಿಯೇ ಹೆಚ್ಚಿನ ಒಡನಾಟ ಹಾಗೂ ಬಾಂಧವ್ಯವಿದೆ. ಈ ಎಲ್ಲಾ ಕಾರಣಗಳಿಂದ ಹಿಂದಿನಂತೆ ಚುನಾವಣೆ ಸಂದರ್ಭದಲ್ಲಿ ಒಂದೇ ಬಾರಿಗೆ ರಾಜಕೀಯ ಅಖಾಡಕ್ಕೆ ಧುಮುಕುವುದಕ್ಕಿಂತ ಕಾಂಗ್ರೆಸ್ ನಿಂದ ಸದಸ್ಯತ್ವ ಪಡೆದು ಒಂದಿಷ್ಟು ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಇನ್ನಷ್ಟು ಪಕ್ವತೆ ಪಡೆಯಲು ಇದೀಗ ಗೀತಾ ಮುಂದಾಗಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರಲು ಅಧಿಕೃತ ಒಪ್ಪಿಗೆಯೂ ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಸಿಕ್ಕಿದ್ದು, ಈ ಬಗ್ಗೆ ಮಧು ಈಗಾಗಲೇ ಕೈ ನಾಯಕರ ಜೊತೆ ಚರ್ಚೆಯೂ ನಡೆಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಸೊರಬದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶವೊಂದನ್ನು ಆಯೋಜಿಸುವ ಮೂಲಕ ಅಧಿಕೃತವಾಗಿ ಮಧು ಹಾಗೂ ಗೀತಾರನ್ನು ಬರಮಾಡಿಕೊಳ್ಳಲಿದೆ. ಅದಕ್ಕೂ ಮುನ್ನ ಒಂದಿಷ್ಟು ರಾಜಕೀಯ ಲಾಭ ನಷ್ಟಗಳ ಕುರಿತು ಚರ್ಚಿಸಲು ಡಿಕೆಶಿಯನ್ನು ಶಿವರಾಜ್ ಕುಮಾರ್ ಭೇಟಿಯಾಗಿದ್ದು, ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರಿದರೆ ರಾಜ್ ಕುಮಾರ್ ಕುಟುಂಬದ ಬೆಂಬಲ ಸಹಜವಾಗಿಯೇ ಕೈನತ್ತ ವಾಲಲಿದೆ.ಇದು ರಾಜ್ ಬಳಗದ ಅಭಿಮಾನಿಗಳನ್ನು ಆಕರ್ಷಿಸಲಿದೆ ಎನ್ನಲಾಗಿದೆ. (kpc)
