

2 ಎ ಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟ ಪ್ರಾರಂಭವಾಗಿದೆ. ಹಿಂದುಳಿದವರು,ಪರಿಶಿಷ್ಟರು ಸೇರಿದ ತಳವರ್ಗಗಳಿಗೆ 1970 ರ ದಶಕದಲ್ಲಿ ಮೀಸಲಾತಿಯನ್ನು ನಿಗದಿಮಾಡಲಾಯಿತು. ಈ ಮೀಸಲಾತಿ ನಿಗದಿ ಮೊದಲು ರಾಜ್ಯದಲ್ಲಿ ಕೆಲವು ಆಯೋಗಗಳಾಗಿ ನೀಡಿದ ವರದಿಗಳನ್ನು ತಿರಸ್ಕರಿಸಿದ್ದ ಚರಿತ್ರೆಯ ಹಿನ್ನೆಲೆಯಲ್ಲಿ ರಾಜ್ಯ ದೇಶದಲ್ಲಿ ಮೀಸಲಾತಿಯ ವಿರೋಧಿ ಮನೋಭಾವವನ್ನು ಗುರುತಿಸಬಹುದಾಗಿದೆ.
ಈಗಲೂ ಕೂಡಾ ಪ್ರಭುತ್ವದ ಪರಿವಾರದ ಪ್ರಚೋದನೆಯಿಂದ ಎಲ್ಲರೂ ಮೀಸಲಾತಿ ಕೇಳಿ ನಂತರ ಮೀಸಲಾತಿಯ ಮಹತ್ವವನ್ನು ತಗ್ಗಿಸುವ ಹಿನ್ನೆಲೆಯಲ್ಲಿ ವ್ಯವಸ್ಥಿತ ತಂತ್ರ ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಪ್ರವಾಹಕ್ಕೆ ಎದುರಾಗಿ ನಿಂತು 2ಎ ಮೀಸಲಾತಿಯನ್ನು ಈಗಿನ ಸ್ಥಿತಿಯಲ್ಲೇ ಮುಂದುವರಿಸಬೇಕೆಂದು ಜನಹೋರಾಟವೊಂದು ನಡೆಯುತ್ತಿದೆ. ಈ ಹೋರಾಟಕ್ಕಾಗಿ ಸಂಘಟಿತವಾಗಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಿತರಕ್ಷಣಾ ಸಂಘ ಇದೇ ತಿಂಗಳ 14 ರಂದು ಬೆಂಗಳೂರು ಗಾಂಧಿಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದೆ. ಇಂದು ಕೂಡಾ ಬೆಂಗಳೂರು ಮೌರ್ಯ ವೃತ್ತದಲ್ಲಿ ಈ ಸಂಘದ ನೇತೃತ್ವದಲ್ಲಿ ಸಭೆ ನಡೆದಿದೆ.
ಈ 2ಎ ಯಥಾಸ್ಥಿತಿ ಮುಂದುವರಿಕೆ ಬೇಡಿಕೆ ಉತ್ತರ ಕನ್ನಡ ಜಿಲ್ಲೆಯಿಂದ ಸಂಘಟನೆಯ ರೂಪ ಪಡೆದಿದ್ದು ಮೊಟ್ಟ ಮೊದಲು ಬೃಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಭಟ್ಕಳದಲ್ಲಿ ಬೃಹತ್ ಸಮಾವೇಶ ನಡೆದಿತ್ತು. ನಂತರ ಅಂಕೋಲಾ ಮೂಲದ ಕುಮಟಾ ನಿವಾಸಿ ಮಂಜುನಾಥ ನಾಯ್ಕ ನೇತೃತ್ವದಲ್ಲಿ ಕರ್ನಾಟಕ ರಾಜ್ಯಹಿಂದುಳೀದ ವರ್ಗಗಳ ಹಿತರಕ್ಷಣಾ ಸಂಘ ಪ್ರಾರಂಭವಾಗಿದೆ. ಈ ಸಂಘದ ನೇತೃತ್ವದಲ್ಲಿ ಈಗ ಸಮಾವೇಶ ಹಕ್ಕೊತ್ತಾಯಗಳು ನಡೆಯುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಸೇರಿದಂತೆ ಅನೇಕರು ಈ ಹೋರಾಟದ ಪರವಾಗಿದ್ದಾರೆ. ಪಂಚಮಸಾಲಿಗಳಿಗೆ ಮೀಸಲಾತಿ, ಮೇಲ್ವರ್ಗದ ಬಡವರಿಗೆ ಮೀಸಲಾತಿ ಹಿನ್ನೆಲೆಯಲ್ಲಿ ಈ 2ಎ ಯಥಾಸ್ಥಿತಿ ಹೋರಾಟ ಮಹತ್ವ ಪಡೆದುಕೊಂಡಿದೆ.




